ಭಗವದ್ಗೀತೆ ಅಧ್ಯಾಯ-3 ಶ್ಲೋಕ -09-10

ಭಗವದ್ಗೀತೆ ಅಧ್ಯಾಯ-3 ಕರ್ಮ ಯೋಗ ಶ್ಲೋಕ -09
 
ಶ್ಲೋಕ :
ಯಜ್ಞಾರ್ಥಾತ್ ಕರ್ಮಣೋsನ್ಯತ್ರ ಲೋಕೋsಯಂ ಕರ್ಮಬಂಧನಃ ।
ತದರ್ಥಂ ಕರ್ಮ ಕೌಂತೇಯ ಮುಕ್ತಸಂಗಃ ಸಮಾಚರ ॥೯॥
 
ಅರ್ಥ :
ಭಗವಂತನ ಪೂಜಾ ರೂಪವಾದ ಇಂಥ ಕರ್ಮಕ್ಕಿಂತ ಬೇರೆಯಾದ ನಡೆಯಲ್ಲಿ ಮಾತ್ರ ಸಾಧಕ ಕರ್ಮದ ಕಟ್ಟಿಗೆ ಸಿಲುಕುತ್ತಾನೆ. ಓ ಕೌಂತೇಯ, ಫಲದ ನಂಟು ತೊರೆದು, ಭಗವಂತನ ಪೂಜೆಯೆಂದು ಕರ್ಮ ಮಾಡು.
 
ವಿವರ ವಿವರಣೆಗಳು
ಈ ಲೋಕ ಕರ್ಮದ ಬಂಧನಕ್ಕೆ ಒಳಗಾಗಿದೆ. ಆದರೆ ಎಲ್ಲಾ ಕರ್ಮವೂ ಬಂಧಕ ಅಲ್ಲ. ತಿಳಿದು ಮಾಡುವ ಕರ್ಮ ಎಂದೂ ಬಂಧಕವಾಗುವುದಿಲ್ಲ. ನಾವು ಮಾಡುವ ಕರ್ಮವನ್ನು ಭಗವಂತನ ಪ್ರಜ್ಞೆಯಿಂದ ಮಾಡಬೇಕು. ನಾವು ಸೂತ್ರದ ಗೊಬೆಗಳಿದ್ದಂತೆ. ಭಗವಂತ ಸೂತ್ರದಾರ. ಈ ಎಚ್ಚರದಿಂದ ನಾವು ಕರ್ಮ ಮಾಡಿದಾಗ ನಮ್ಮ ಪ್ರತಿಯೊಂದು ಕರ್ಮವೂ ಕೂಡಾ ಯಜ್ಞವಾಗುತ್ತದೆ. ಉದಾಹರಣೆಗೆ ನಾವು ಉಸಿರಾಡುತ್ತೇವೆ. ಹೊರಗಿನಿಂದ ಆಮ್ಲಜನಕವನ್ನು ಹೀರಿ ಕಾರ್ಬನ್ ಡೈ ಆಕ್ಸೈಡನ್ನು ಹೊರ ಹಾಕುತ್ತೇವೆ. ನಮ್ಮೊಳಗಿರುವ ಆ ವಿಶೇಷ ಯಂತ್ರದ ಕಲ್ಪನೆ ಕೂಡಾ ನಮಗಿರುವುದಿಲ್ಲ. ನಮಗೆ ಅರಿವಿಲ್ಲದಂತೆ ಈ ಕ್ರಿಯೆ ನಡೆಯುತ್ತಿರುತ್ತದೆ. ನಾವು ಬಿಟ್ಟ ಗಾಳಿಯನ್ನು ಗಿಡಗಳು ಸೇವಿಸಿ ನಮಗೆ ಬೇಕಾದ ಆಮ್ಲಜನಕವನ್ನು ಕೊಡುತ್ತವೆ. ಇದೆಲ್ಲವೂ ಆ ಭಗವಂತನ ವ್ಯವಸ್ಥೆ. ಈ ಕಾರಣಕ್ಕಾಗಿ ಭಾರತೀಯರು ಅತಿಹೆಚ್ಚು ಆಮ್ಲಜನಕವನ್ನು ಕೊಡುವ ಅಶ್ವತ್ಥವೃಕ್ಷವನ್ನು ಪೂಜಿಸುತ್ತಾರೆ. ಆ ವೃಕ್ಷದಲ್ಲಿ ಭಗವಂತನ ವಿಶೇಷ ವಿಭೂತಿ ಅಡಗಿದೆ. ಈ ರೀತಿ ನಾವು ನಮ್ಮ ಪ್ರತಿಯೊಂದು ಕಾರ್ಯದಲ್ಲೂ ಭಗವಂತನ ಹಿರಿಮೆಯನ್ನು ತಿಳಿದಾಗ, ನಾವು ಮಾಡುವ ಕರ್ಮ-ಕರ್ಮಯೋಗವಾಗುತ್ತದೆ. ಹಾಗು ಅದು ಎಂದೂ ಬಂಧಕವಾಗುವುದಿಲ್ಲ.

ಇಲ್ಲಿ ಬಳಕೆಯಾದ ‘ಯಜ್ಞ’ ಪದದ ಅರ್ಥ ‘ಯಜ-ದೇವ-ಪೂಜಾ’ ಅಂದರೆ ದೇವರ ಪೂಜೆ ಎಂದರ್ಥ. ದೇವರನ್ನು ಕೂಡಾ ಯಜ್ಞ ಎಂದು ಕರೆಯುತ್ತಾರೆ. ಆದ್ದರಿಂದ ಕೇವಲ ಅಗ್ನಿ ಮುಖದಲ್ಲಿ ಮಾಡುವ ಪೂಜೆ ಮಾತ್ರ ಯಜ್ಞವಲ್ಲ. ನಮ್ಮ ಪ್ರತಿಯೊಂದು ಕರ್ಮವನ್ನು ಭಗವದ್ಪ್ರಜ್ಞೆಯಿಂದ ಮಾಡಿದಾಗ ಅದು ಯಜ್ಞವಾಗುತ್ತದೆ. ಇಲ್ಲಿ ನಾವು ಬಿಡಬೇಕಾದದ್ದು ಕರ್ಮವನ್ನಲ್ಲ, ಬದಲಿಗೆ ನಾವು ಕರ್ಮದ ಬಗ್ಗೆ ಇರುವ ನಮ್ಮ ಭಾವನೆಯನ್ನು ಬದಲಿಸಿ ಕೊಳ್ಳಬೇಕು ಅಷ್ಟೆ. ಕರ್ಮ ಎಂದರೆ ‘ಕರ+ಮ’ ಅಂದರೆ ಭಗವಂತನ ರಾಜ್ಯದ ಪ್ರಜೆಗಳಾದ ನಾವು ಆತನಿಗೆ ಸಲ್ಲಿಸುವ ‘ಕರ’ ಅಥವಾ ಕಂದಾಯವೇ ಕರ್ಮ. ಭಗವಂತ ಎಂದೂ ದುಡ್ಡಿನ ಕಂದಾಯವನ್ನು ಪಡೆಯುವುದಿಲ್ಲ. ಆತನ ಕರ ಸಂದಾಯವನ್ನು ನಾವು- ನಮ್ಮನ್ನು ಸಮಾಜ ಕ್ರಿಯೆಯಲ್ಲಿ ತೊಡಗಿಸಿಗೊಂಡು ಸಲ್ಲಿಸಬೇಕು. ಈ ಭಾವನೆ ಬಂದಾಗ ಕರ್ಮ ಬಂಧಕವಾಗದೆ ಮೋಕ್ಷ ಮಾರ್ಗವಾಗುತ್ತದೆ.

ಇಲ್ಲಿ ಕೃಷ್ಣ ಅರ್ಜುನನನ್ನು ‘ಕೌಂತೇಯ’ ಎಂದು ಸಂಬೋಧಿಸಿದ್ದಾನೆ. ಈ ರೀತಿ ಇಲ್ಲಿ ಸಂಬೋಧಿಸಲು ವಿಶೇಷ ಕಾರಣವಿದೆ. ಕುಂತಿ ಅಷ್ಟು ದೊಡ್ಡ ಮನೆತನದಲ್ಲಿ ಹುಟ್ಟಿ ಬೆಳೆದರೂ ಕೂಡಾ, ಆಕೆ ಎಂದೂ ಭೋಗದ ಆಸೆಗೆ ಬಲಿಬಿದ್ದವಳಲ್ಲ. ತನ್ನ ಯೌವನವನ್ನು ಕಾಡಿನಲ್ಲಿ ಕಳೆದ ಆಕೆ, ತನ್ನ ಮಕ್ಕಳು ಧೈರ್ಯಗೆಟ್ಟಾಗ ಧೈರ್ಯ ತುಂಬಿದ ಧೀರ ಮಹಿಳೆ. ಆಕೆ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಆದರೆ ಆಕೆ ಕೃಷ್ಣನಲ್ಲಿ “ನನಗೆ ಕಷ್ಟವನ್ನೇ ಕೊಡು, ಏಕೆಂದರೆ ಆಗ ನಮಗೆ ಸದಾ ನಿನ್ನೊಂದಿಗಿರುವ ಭಾಗ್ಯವಿರುತ್ತದೆ” ಎಂದಾಕೆ! ಕರ್ತವ್ಯ ನಿಷ್ಠೆಯನ್ನು ಜಗತ್ತಿಗೆ ತೋರಿದ ಧೀರ ಮಹಿಳೆ ಆಕೆ. ಇಂಥ ಮಹಾ ಮಹಿಳೆಯ ಮಗನಾದ ನಿನಗೆ ಕರ್ಮ ಯೋಗದ ಬಗ್ಗೆ ತಿಳಿದೇ ಇದೆ ಎನ್ನುವ ಧ್ವನಿಯಲ್ಲಿ ಕೃಷ್ಣ ಅರ್ಜುನನನ್ನು ‘ಕೌಂತೇಯ’ ಎಂದು ಸಂಬೋಧಿಸಿದ್ದಾನೆ.

ಈ ರೀತಿ ಜ್ಞಾನವನ್ನು ಮತ್ತು ಕರ್ಮವನ್ನು ಹೇಗೆ ಸಮನ್ವಯಗೊಳಿಸಿಕೊಂಡು ಬದುಕಬೇಕು ಎನ್ನುವುದನ್ನು ಹೇಳಿದ ಕೃಷ್ಣ, ಮುಂದೆ ಅದು ಸ್ಪಷ್ಟವಾಗಿ ಅರ್ಥವಾಗುವಂತೆ ಒಂದು ಕಥೆಯ ರೂಪದಲ್ಲಿ ವಿವರಣೆಯನ್ನು ಕೊಡುತ್ತಾನೆ. ಆ ವಿವರಣೆಯನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.

___________________________________________

ಭಗವದ್ಗೀತೆ ಅಧ್ಯಾಯ-3 ಕರ್ಮ ಯೋಗ ಶ್ಲೋಕ -10
 
ಶ್ಲೋಕ :
ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋವಾಚ ಪ್ರಜಾಪತಿಃ ।
ಅನೇನ ಪ್ರಸವಿಷ್ಯಧ್ವಮೇಷ ವೋsಸ್ತ್ವಿಷ್ಟಕಾಮಧುಕ್ ॥೧೦॥
 
ಅರ್ಥ :
ಹಿಂದೆ ಪ್ರಜಾಪತಿ ಭಗವಂತನ ಪೂಜಾ ರೂಪವಾದ ಕರ್ಮದ ಜೊತೆಗೆ ಮಾನವರನ್ನು ಹುಟ್ಟಿಸಿ ಹೀಗೆ ಹೇಳಿದನು: ಇದರಿಂದ ಬೆಳವಣಿಗೆ ಹೊಂದಿ, ಇದು ನಿಮ್ಮ ಬಯಕೆಯನ್ನು ಈಡೇರಿಸಲಿ.
 
ವಿವರ ವಿವರಣೆಗಳು : 
ಹಿಂದೆ ಚತುರ್ಮುಖ- ಚಿಂತನ ಶೀಲ ಮಾನವರನ್ನು ಸೃಷ್ಠಿ ಮಾಡಿ, ಅವರಿಗಾಗಿ ಅವರು ಆಚರಿಸಬೇಕಾದ ಯಜ್ಞವನ್ನು ಸೃಷ್ಠಿ ಮಾಡಿದ. ಹಾಗು ಹೇಳಿದ ” ಈ ಪೂಜಾ ವಿಧಾನದಿಂದ ಬೇಕಾದ್ದನ್ನು ಪಡೆಯಿರಿ. ಇದು ನೀವು ಬಯಸಿದ ಅಭೀಷ್ಟವನ್ನು ಕೊಡುವ ಕಾಮದೇನು” ಎಂದು. ಹಿಂದೆ ಹೇಳಿದಂತೆ ‘ಯಜ್ಞ’ ಎಂದರೆ ‘ದೇವರನ್ನು ಉಪಾಸನೆ ಮಾಡುವ ವಿಧಾನ’; ‘ದಾನ’ ಹಾಗು ‘ಸಂಗತೀಕರಣ’ ಕೂಡಾ ಯಜ್ಞ. ಇಲ್ಲಿ ದಾನ ಎನ್ನುವುದಕ್ಕೆ ವಿಶೇಷ ಅರ್ಥವಿದೆ. ತನ್ನಲ್ಲಿ ಬೇಕಾದಷ್ಟು ಇದ್ದು, ತನಗೆ ಬೇಡವಾದದ್ದನ್ನು ಇನ್ನೊಬ್ಬನಿಗೆ ಕೊಡುವುದು ದಾನವಲ್ಲ. ತನ್ನಲ್ಲಿ ಎರಡು ಹೊತ್ತಿನ ಊಟವಿದ್ದು, ಇನ್ನೊಬ್ಬನಲ್ಲಿ ಒಂದು ಹೊತ್ತಿನ ಊಟ ಕೂಡಾ ಇಲ್ಲದಿದ್ದಾಗ, ಅವನಿಗೆ ತನ್ನಲ್ಲಿರುವ ಊಟವನ್ನು ಕೊಟ್ಟು ಹಂಚಿ ತಿನ್ನುವುದು ನಿಜವಾದ ದಾನ. ಇನ್ನೊಬ್ಬರ ಕಷ್ಟದಲ್ಲಿ ಕರಗುವುದು ನಿಜವಾದ ದಾನ. ಇನ್ನು ಸಂಗತೀಕರಣ ಎಂದರೆ ಜ್ಞಾನಾರ್ಜನೆಗಾಗಿ ಒಂದು ಕಡೆ ಕಲೆಯುವುದು. ಪ್ರವಚನ ಒಂದು ಸಂಗತೀಕರಣ.

Comments