ಭಗವದ್ಗೀತೆ ಅಧ್ಯಾಯ - 3 ಶ್ಲೋಕ-03 - 04

ಭಗವದ್ಗೀತೆ ಅಧ್ಯಾಯ - 3 ಕರ್ಮ ಯೋಗ ಶ್ಲೋಕ-03
 
ಶ್ಲೋಕ :
ಭಗವಾನುವಾಚ ।
ಲೋಕೇsಸ್ಮಿನ್ ದ್ವಿವಿದಾ ನಿಷ್ಠಾ ಪುರಾ ಪ್ರೋಕ್ತಾ ಮಯಾsನಘ ।
ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್ ॥೩॥
 
ಅರ್ಥ :
ಭಗವಾನುವಾಚ-ಭಗವಂತ ನುಡಿದನು:ಓ ಪಾಪದೂರನೆ, ಈ ಲೋಕದಲ್ಲಿ ಎರಡು ಬಗೆಯ ಇರವನ್ನು (ಮುಕ್ತಿಯನ್ನು) ನಾನು ಹಿಂದೆ ಹೇಳಿರುವೆ: ಜ್ಞಾನಮಾರ್ಗಿಗಳಿಗೆ ಜ್ಞಾನ ಪ್ರಧಾನವಾದ ಸಾಧನೆಯಿಂದ; ಕರ್ಮಮಾರ್ಗಿಗಳಿಗೆ ಕರ್ಮಪ್ರಧಾನವಾದ ಸಾಧನೆಯಿಂದ.
 
ವಿವರ ವಿವರಣೆಗಳು : 
ಈ ಹಿಂದೆ ಜ್ಞಾನಮಾರ್ಗ ಮತ್ತು ಕರ್ಮಮಾರ್ಗದ ಬಗ್ಗೆ ಹೇಳಿದ್ದ ಕೃಷ್ಣ, ಯಾವ ನೆಲೆಯಲ್ಲಿ ಯಾವ ಸ್ತರದಲ್ಲಿ ಯಾವುದು ಮುಖ್ಯ ಎನ್ನುವ ವಿಚಾರವನ್ನು ಇಲ್ಲಿ ವಿವರಿಸುತ್ತಾನೆ. ಕರ್ಮಯೋಗದ ಬಗ್ಗೆ ವಿಶೇಷ ವಿವರಣೆ ಇಲ್ಲಿಂದ ಆರಂಭವಾಗುತ್ತದೆ.

ಈ ಶ್ಲೋಕದಲ್ಲಿ ‘ನಿಷ್ಠಾ’ ಎನ್ನುವ ಪದ ಬಳಕೆಯಾಗಿದೆ. ಇಲ್ಲಿ ‘ನಿಷ್ಠಾ’ ಎಂದರೆ ಜೀವನದ ನಡೆ ಅಥವಾ ಕೊನೇಯ ಸ್ಥಿತಿ-ಅದೇ ‘ಮೋಕ್ಷ’. ಕೃಷ್ಣ ಹೇಳುತ್ತಾನೆ: “ಸಾಧಕರಲ್ಲಿ ಎರಡು ವಿಧ -ಸಾಂಖ್ಯರು ಮತ್ತು ಯೋಗಿಗಳು” ಎಂದು. ಇಲ್ಲಿ ಸಾಂಖ್ಯರು ಎಂದರೆ ಜ್ಞಾನಮಾರ್ಗದಲ್ಲಿ ಸಾಧನೆ ಮಾಡುವವರು. ಯೋಗಿಗಳು ಎಂದರೆ ಕರ್ಮಸಾಧನೆಯ ಮೂಲಕ ಸಾಧನೆ ಮಾಡುವವರು.

ಈ ಶ್ಲೋಕವನ್ನು ಮೇಲ್ನೋಟದಲ್ಲಿ ನೋಡಿದರೆ : “ಜ್ಞಾನದ ಸಾಧಕರು ಜ್ಞಾನ ಮಾರ್ಗದಲ್ಲಿ ಹೋಗಬೇಕು, ಕರ್ಮದ ಮೂಲಕ ಸಾಧನೆ ಮಾಡುವವರು ಕರ್ಮದ ದಾರಿಯಲ್ಲಿ ಹೋಗಬೇಕು” ಎಂದು ಹೇಳಿದಂತೆ ಕಾಣಿಸುತ್ತದೆ. ಇಲ್ಲಿ ಅರ್ಜುನ ಕರ್ಮದ ಮೂಲಕ ಸಾಧನೆ ಮಾಡಬೇಕಾದವ, ಆದ್ದರಿಂದ ಕೃಷ್ಣ ಆತನಲ್ಲಿ ಯುದ್ಧ ಮಾಡು ಎಂದು ಹೇಳಿದ ಎನ್ನುವಂತೆ ಕಾಣುತ್ತದೆ. ಆದರೆ ಅದು ನಿಜವಾದ ಅರ್ಥವಲ್ಲ. ನಿಮಗೆ ತಿಳಿದಂತೆ ಅರ್ಜುನ ಆ ಕಾಲದ ಮಹಾ ಜ್ಞಾನಿಗಳಲ್ಲಿ ಒಬ್ಬ. ಹಾಗಿರುವಾಗ ನಾವು ಈ ರೀತಿ ಮೇಲ್ನೋಟದ ಅರ್ಥವನ್ನು ಈ ಶ್ಲೋಕಕ್ಕೆ ಅರ್ಥೈಸಬಾರದು. ಇಲ್ಲಿ ಆಳವಾದ ಚಿಂತನೆ ಅಗತ್ಯ.

ಶಾಸ್ತ್ರಗಳಲ್ಲಿ ಹೇಳುವಂತೆ ಜ್ಞಾನದಿಂದ ಮಾತ್ರ ಮೋಕ್ಷಕ್ಕೆ ಹೋಗಲು ಸಾಧ್ಯ. ಮೋಕ್ಷಕ್ಕೆ ಬೇರೆ ಮಾರ್ಗವೇ ಇಲ್ಲ. ಅಂದಮೇಲೆ ಮೋಕ್ಷ ಸಾಧನೆಗೆ ಜ್ಞಾನ ಬೇಕೇಬೇಕು. ಕರ್ಮವಿರುವುದು ಜ್ಞಾನಕ್ಕಾಗಿ. ಜ್ಞಾನಕ್ಕೆ ಪೂರಕವಲ್ಲದ ಕರ್ಮ ಕರ್ಮವಲ್ಲ. ಬೆಳಗಿನಿಂದ ಸಂಜೆಯ ತನಕ ಜಪ ಮಣಿ ಹಿಡಿದು ಮಡಿ-ಮಡಿ ಎಂದು ಕುಳಿತರೆ ಅದು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲಾರದು. ನಾವು ಏನೇ ಕರ್ಮ ಮಾಡುವುದಿದ್ದರೂ ಅದನ್ನು ತಿಳಿದು ಮಾಡಬೇಕು. ಮಾಡುವ ಕರ್ಮ ಜ್ಞಾನಕ್ಕೆ ಪೂರಕವಾಗಿರಬೇಕು. ಆದ್ದರಿಂದ ಬರೀ ಜ್ಞಾನಯೋಗವೆಂದಾಗಲಿ, ಬರೀ ಕರ್ಮಯೋಗವೆಂದಾಗಲಿ ಇಲ್ಲ. ಕರ್ಮವಿಲ್ಲದೆ ಜ್ಞಾನವಿಲ್ಲ, ಜ್ಞಾನವಿಲ್ಲದೆ ಕರ್ಮವಿಲ್ಲ. ಛಾ೦ಧೋಕ್ಯ ಉಪನಿಷತ್ತಿನಲ್ಲಿ ಹೇಳುವಂತೆ: “ಯದೇವ ವಿದ್ಯಯಾ ಕರೋತಿ ಶ್ರದ್ಧೆಯ ಉಪನಿಷದಾ, ತದೇವ ವೀರ್ಯವತ್ತರ೦ ಭವತಿ , ವಿಜ್ಞಾನ೦ ಯಜ್ಞಾ೦ ತನುತೇ”. ಅಂದರೆ “ನೀನು ಏನನ್ನೂ ಮಾಡಿದರೂ ತಿಳಿದು ಮಾಡು. ಜ್ಞಾನ ಪೂರ್ವಕವಾಗಿ ಮಾಡಿದ ಕರ್ಮ ಸಫಲ. ಇಲ್ಲದಿದ್ದರೆ ಅದು ವ್ಯರ್ಥ”. ಮಾಡುವ ಕರ್ಮವನ್ನು ಏತಕ್ಕಾಗಿ ಮಾಡುತ್ತಿದ್ದೇವೆ, ಮಾಡುವುದರ ಫಲವೇನು, ಮಾಡುವುದು ಹೇಗೆ-ಎನ್ನುವುದು ಗೊತ್ತಿರಬೇಕು. ಅಜ್ಞಾನದಿಂದ ಮಾಡುವ ಕರ್ಮ ವ್ಯರ್ಥವಾಗುತ್ತದೆ. ಇಲ್ಲಿ ಕೃಷ್ಣ ಹೇಳಿರುವುದು ಒಂದು ಕರ್ಮಪ್ರದವಾದ ಮಾರ್ಗ(ಜನಕಾದಿಗಳಂತೆ) ಹಾಗು ಇನ್ನೊಂದು ಜ್ಞಾನಪ್ರದವಾದ ಮಾರ್ಗ(ಸನಕಾದಿಗಳಂತೆ).


____________________________________________

ಭಗವದ್ಗೀತೆ ಅಧ್ಯಾಯ - 3 ಕರ್ಮ ಯೋಗ ಶ್ಲೋಕ-04

ಶ್ಲೋಕ :
ನ ಕರ್ಮಣಾಮನಾರಂಭಾನ್ನೈಷ್ಕರ್ಮ್ಯಂ ಪುರುಷೋsಶ್ನುತೇ ।
ನಚ ಸಂನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ ॥೪॥
 
ಅರ್ಥ :
ಕರ್ಮಗಳಲ್ಲಿ ತೊಡಗದೆ ಇರುವುದರಿಂದ ಸಾಧಕ ಕರ್ಮಗಳಿಂದ ಬಿಡುಗಡೆ ಹೊಂದುವುದಿಲ್ಲ. ಕರ್ಮ ಫಲವನ್ನು ತೊರೆದ ಮಾತ್ರಕ್ಕೆ ಸಿದ್ಧಿ ಪಡೆಯುವುದಿಲ್ಲ.
 
ವಿವರ ವಿವರಣೆಗಳು : 
ಶಾಸ್ತ್ರಗಳಲ್ಲಿ ಹೇಳುವಂತೆ ‘ಕರ್ಮ ಬಂಧನದ ದಾರಿ ಹಾಗು ಜ್ಞಾನ ಬಿಡುಗಡೆಯ ದಾರಿ’. ಆದರೆ ಕೃಷ್ಣ ಹೇಳಿದ -ಮೋಕ್ಷಕ್ಕೆ ಜ್ಞಾನಪ್ರದವಾದ ಮತ್ತು ಕರ್ಮಪ್ರದವಾದ ಎರಡು ಮಾರ್ಗಗಳಿವೆ ಎಂದು. ಇಲ್ಲಿ ಅದರ ವಿವರಣೆ ಕೊಡುತ್ತಾನೆ ಕೃಷ್ಣ. “ಮೋಕ್ಷ ನಿಷ್ಕರ್ಮದಿಂದ ಪಡೆಯುವಂತದ್ದು-ಕರ್ಮ ಬಂಧಕ” ಅನ್ನುವುದಾದರೆ, ಒಂದು ಶರೀರದಲ್ಲಿ ಜೀವ ಏನೂ ಕರ್ಮ ಮಾಡದೆ ಇರಲು ಸಾಧ್ಯವೇ ಇಲ್ಲ. ದೇಹ ಬಂದ ಮೇಲೆ ಕರ್ಮ ಕ್ರಿಯೆ ನಡೆದೇ ನಡೆಯುತ್ತದೆ. ಕರ್ಮ ಮಾಡುವುದನ್ನು ಬಿಟ್ಟ ತಕ್ಷಣ ಮೋಕ್ಷ ದೊರೆಯದು. ಮೂಲತಃ ಕರ್ಮವನ್ನು ತೊರೆಯುವುದೂ ಸಾಧ್ಯವಿಲ್ಲ. ಜ್ಞಾನಕ್ಕೆ ಪೂರಕವಲ್ಲದ ಯಾಂತ್ರಿಕ ಕರ್ಮ ಬಂಧಕ. ಜ್ಞಾನಕ್ಕೆ ಪೂರಕವಾದ ಕರ್ಮ ಎಂದೂ ಬಂಧಕವಲ್ಲ. ಕರ್ಮದ ಫಲವನ್ನು ಬಯಸದೇ ಇದ್ದ ತಕ್ಷಣ ಯಾವ ಸಿದ್ಧಿಯೂ ಆಗದು. ಕೇವಲ ಕರ್ಮತ್ಯಾಗ ಮಾಡುವುದರಿಂದ ಎಂದೂ ಸಿದ್ಧಿ ಪಡೆಯಲು ಸಾಧ್ಯವಿಲ್ಲ.

Comments