ಭಗವದ್ಗೀತೆ ಅಧ್ಯಾಯ - 3 ಕರ್ಮ ಯೋಗ ಶ್ಲೋಕ-01
ಎರಡನೆ ಅಧ್ಯಾಯದಲ್ಲಿ ಭಗವಂತನ ಅರಿವು, ಆ ಅರಿವನ್ನು ಪಡೆಯುವ ಉಪಾಯವನ್ನು ಕೃಷ್ಣ ವಿವರಿಸಿದ. ಈ ಉಪದೇಶದಲ್ಲಿ ಒಂದು ಕಡೆ ಜ್ಞಾನ ಎಲ್ಲವುದಕ್ಕಿಂತ ಶ್ರೇಷ್ಠ, ಜ್ಞಾನದ ಮುಂದೆ ಕರ್ಮ ಏನೂ ಅಲ್ಲ ಎನ್ನುತ್ತಾನೆ ಕೃಷ್ಣ. ಇನ್ನೊಂದು ಕಡೆ ಅರ್ಜುನನಲ್ಲಿ ತಾಮಸಿಕವಾದ ಯುದ್ಧವನ್ನು ಮಾಡು ಎನ್ನುತ್ತಾನೆ! ಜ್ಞಾನವೇ ಅತ್ಯಂತ ಶ್ರೇಷ್ಟವಾದರೆ ಏಕೆ ಬೇಕು ಈ ತಾಮಸಿಕವಾದ ರಾಗ-ದ್ವೇಷವಿರುವ ಯುದ್ಧ? ಮೂರನೇ ಅಧ್ಯಾಯ ಅರ್ಜುನನ ಈ ಪ್ರಶ್ನೆಯೊಂದಿಗೆ ಆರಂಭವಾಗುತ್ತದೆ.
ಶ್ಲೋಕ :
ಅರ್ಜುನ ಉವಾಚ ।
ಜ್ಯಾಯಸೀ ಚೇತ್ ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ದನ ।
ತತ್ ಕಿಂ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ ॥೧॥
ಅರ್ಥ :
ಅರ್ಜುನ ಉವಾಚ- ಅರ್ಜುನ ಹೇಳಿದನು:ಓ ಜನಾರ್ದನ, ಕಾಯಕಕ್ಕಿಂತ ಅರಿವೇ ಹಿರಿದು ಎಂದು ನಿನ್ನ ಆಶಯವಾದರೆ, ಮತ್ತೇಕೆ ನನ್ನನ್ನು ಈ ಕೊಲ್ಲುವ ಕಾಯಕದಲ್ಲಿ ತೊಡಗಿಸುತ್ತಿರುವೆ ಕೇಶವ?
ವಿವರ ವಿವರಣೆಗಳು :
ಕೃಷ್ಣ ಜ್ಞಾನ ಮತ್ತು ಕರ್ಮದ ಬಗ್ಗೆ ಕೊಟ್ಟ ವಿವರಣೆಯಿಂದ ಅರ್ಜುನನಿಗೆ ಗೊಂದಲವಾಗುತ್ತದೆ. ತನಗೆ ಯಾವ ಮಾರ್ಗ ಉಚಿತ ಎನ್ನುವ ಪ್ರಶ್ನೆ ಆತನನ್ನು ಕಾಡುತ್ತದೆ. ಕೃಷ್ಣ ಒಮ್ಮೆ ಜ್ಞಾನ ಮಾರ್ಗದಲ್ಲಿ ಸಾಗು-ಅದು ಶ್ರೇಷ್ಠ ಎನ್ನುತ್ತಾನೆ, ಇನ್ನೊಮ್ಮೆ ಯುದ್ಧ ಮಾಡು ಅನ್ನುತ್ತಾನೆ! ತಾನೇಕೆ ಶ್ರೇಷ್ಠವಾದ ಜ್ಞಾನ ಮಾರ್ಗದಲ್ಲಿ ಸಾಗಬಾರದು, ಯುದ್ಧವನ್ನೇಕೆ ಮಾಡಬೇಕು ಎನ್ನುವ ಗೊಂದಲ ಅರ್ಜುನನದು. ಈ ಗೊಂದಲದಲ್ಲಿ ಅರ್ಜುನ ಕೃಷ್ಣನಲ್ಲಿ ಕೇಳುತ್ತಾನೆ: “ಓ ಜನಾರ್ದನ, ಕರ್ಮಕ್ಕಿಂತ ಜ್ಞಾನ ಮಾರ್ಗ ಶ್ರೇಷ್ಠ ಎನ್ನುವುದು ನಿನ್ನ ಅಭಿಮತವಾದರೆ, ನನ್ನ ಹತ್ತಿರ ಕರ್ಮ ಮಾಡು ಎಂದು ಏಕೆ ಹೇಳುತ್ತಿದ್ದೀಯ? ಯುದ್ಧ ಎನ್ನುವುದು ಘೋರ ರಾಗ-ದ್ವೇಷಗಳಿಂದ ತುಂಬಿದ ತಾಮಸಕಾರ್ಯ. ಅದು ಅಧ್ಯಾತ್ಮ ಸಾಧನೆಗೆ ತೀರ ವಿರುದ್ಧವಾದ ಕರ್ಮ. ಹೀಗಿರುವಾಗ ನನ್ನನ್ನೇಕೆ ಈ ಕಾರ್ಯದಲ್ಲಿ ತೊಡಗಿಸುತ್ತಿರುವೆ ಕೇಶವ?” ಎಂದು.
ಈ ಶ್ಲೋಕದಲ್ಲಿ ‘ಜನಾರ್ದನ’ ಮತ್ತು ‘ಕೇಶವ’ ಎನ್ನುವ ಎರಡು ನಾಮ ವಿಶೇಷಣವನ್ನು ಬಳಸಿದ್ದಾರೆ. ಈ ವಿಶೇಷಣದಲ್ಲಿ-ಪ್ರಶ್ನೆ ಮಾಡುತ್ತಿರುವ ಅರ್ಜುನನ ಭಾವ ಅಡಗಿದೆ. ಜನ+ಅರ್ಧನ ಅಂದರೆ ಜನರನ್ನು ನಾಶ ಮಾಡುವವ! ಇಲ್ಲಿ ಜನ ಅಂದರೆ ದುರ್ಜನ. ಜನಾರ್ದನ ಅಂದರೆ ದುರ್ಜನ ನಾಶಕ. “ದುಷ್ಟ ನಿಗ್ರಹಕ್ಕಾಗಿ ಅವತರಿಸಿದ ನೀನು, ನನ್ನಿಂದ ಈ ಕಾರ್ಯವನ್ನು ಮಾಡಿಸುತ್ತಿದ್ದೀಯ. ಆದರೆ ಇಲ್ಲಿ ಸೇರಿರುವರೆಲ್ಲ ದುರ್ಜನರಲ್ಲ. ಹೀಗಿರುವಾಗ ಅವರನ್ನು ಕೊಲ್ಲುವ ಕರ್ಮ ಶ್ರೇಷ್ಠ ಹೇಗಾದೀತು? ಜನನ ಮುಕ್ತಗೊಳಿಸಿ ಮೋಕ್ಷವನ್ನು ಕರುಣಿಸುವ ನೀನು, ನನ್ನಿಂದ ಗುರು ಹಿರಿಯರನ್ನು ಕೊಲ್ಲುವ ಈ ಘೋರ ಕರ್ಮವನ್ನು ಏಕೆ ಮಾಡಿಸುತ್ತಿರುವೆ?”. ಎನ್ನುವುದು ಅರ್ಜುನನ ಪ್ರಶ್ನೆ. ಶ್ಲೋಕದ ಕೊನೆಯಲ್ಲಿ ‘ಕೇಶವ’ ಎನ್ನುವ ನಾಮವಿಶೇಷಣ ಅರ್ಜುನನ ಶರಣಾಗತಿಯನ್ನು ಸೂಚಿಸುತ್ತದೆ. ಕಾ+ಈಶ+ವ-ಕೇಶವ; ಇಲ್ಲಿ ’ಕಾ’ ಎಂದರೆ ಸೃಷ್ಟಿಗೆ ಕಾರಣವಾಗಿರುವ ಚತುರ್ಮುಖ ಬ್ರಹ್ಮ ; ಈಶ ಎಂದರೆ ಸಂಹಾರಕ್ಕೆ ಕಾರಣವಾಗಿರುವ ಶಂಕರ. ಕೇಶವ ಅಂದರೆ ಸೃಷ್ಟಿ-ಸಂಹಾರಕ್ಕೆ ಕಾರಣವಾಗಿರುವ ಬ್ರಹ್ಮಶಕ್ತಿ ಮತ್ತು ಶಿವಶಕ್ತಿಯನ್ನೊಳಗೊಂಡ ಪರಶಕ್ತಿ. “ಸೃಷ್ಠಿ-ಸ್ಥಿತಿ-ಸಂಹಾರ-ಮೊಕ್ಷಗಳಿಗೆ ಕಾರಣನಾದ ನೀನು ನನ್ನನ್ನು ಈ ಗೊಂದಲದಿಂದ ಪಾರು ಮಾಡು” ಎಂದು ಅರ್ಜುನ ಶ್ರೀಕೃಷ್ಣನಲ್ಲಿ ಶರಣಾಗಿ ಬೇಡುತ್ತಾನೆ.
_____________________________________________
ಭಗವದ್ಗೀತೆ ಅಧ್ಯಾಯ - 3 ಕರ್ಮ ಯೋಗ ಶ್ಲೋಕ-02
ಶ್ಲೋಕ :
ವ್ಯಾಮಿಶ್ರೇಣ್ಯೇವ ವಾಕ್ಯೇನ ಬುದ್ಧಿಂ ಮೋಹಯಸೀವ ಮೇ ।
ತದೇಕಂ ವದ ನಿಶ್ಚಿತ್ಯ ಯೇನ ಶ್ರೇಯೋsಹಮಾಪ್ನುಯಾಮ್ ॥೨॥
ಅರ್ಥ :
ಇಬ್ಬಗೆಯ ಮಾತಿನಿಂದ ನನ್ನ ನಿರ್ಧಾರಶಕ್ತಿಯನ್ನು ಗೊಂದಲಕ್ಕೀಡುಮಾಡುವಂತಿದೆ. ಆದ್ದರಿಂದ, ಒಂದನ್ನು ನಿರ್ಧರಿಸಿ ಹೇಳು: ಯಾವುದರಿಂದ ನಾನು ಒಳಿತನ್ನು ಪಡೆದೇನು?
ವಿವರ ವಿವರಣೆಗಳು :
ಇಲ್ಲಿ ‘ವ್ಯಾಮಿಶ್ರೇಣ’ ಎಂದರೆ ಸಂದಿಗ್ದಾರ್ಥ ಈ ರೀತಿ ಇಬ್ಬಗೆಯ ಮಾತಿನಿಂದ ನನಗೆ ಯಾವುದು ಸರಿ-ಯಾವುದು ತಪ್ಪು ಎನ್ನುವ ತೀರ್ಮಾನ ಬರುತ್ತಿಲ್ಲ, ಹಾಗು ಆ ಶಕ್ತಿ ನನ್ನಲ್ಲಿಲ್ಲ. ನಿನ್ನ ಅಭಿಪ್ರಾಯವನ್ನು ನಾನು ಗ್ರಹಿಸಲಾರೆ. ಯಾವ ದಾರಿಯಲ್ಲಿ ನಡೆದರೆ ನಾನು ಶ್ರೇಯಸ್ಸನ್ನು ಪಡೆದೇನು? ನನ್ನ ಬದುಕು ಸಾರ್ಥಕವಾಗುವ ನಿಶ್ಚಿತ ದಾರಿಯನ್ನು ಹೇಳು” ಎಂದು ಕೃಷ್ಣನಲ್ಲಿ ಅರ್ಜುನ ಕೇಳಿಕೊಳ್ಳುತ್ತಾನೆ.
Comments