ಭಗವದ್ಗೀತೆ ಅಧ್ಯಾಯ-2 ಶ್ಲೋಕ -71

ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -71

 
ಶ್ಲೋಕ :
ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾಂಶ್ಚರತಿ ನಿಸ್ಪೃಹಃ ।
ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿಗಚ್ಛತಿ ॥೭೧॥
 
ಅರ್ಥ :
ಯಾರು ಎಲ್ಲ ವಿಷಯಗಳನ್ನು ಮನಸೋಲದೆ, ಕೆಟ್ಟ ಆಸೆಗೆ ಬಲಿ ಬೀಳದೆ, ನಾನು ನನ್ನದು ಎಂಬ ಹಮ್ಮು ತೊರೆದು ಅನುಭವಿಸುತ್ತಾನೆ-ಅವನು ಮುಕ್ತಿ ಪಡೆಯುತ್ತಾನೆ.
 
ವಿವರ ವಿವರಣೆಗಳು : 
ಯಾರು ಭೋಗದ ಬಯಕೆಯನ್ನು ಬಿಟ್ಟು ಬಂದದ್ದನ್ನು ಸಂತೋಷವಾಗಿ ಅನುಭವಿಸುತ್ತಾರೆ, ಅವನು ನಿಜವಾದ ಸಾಧಕನೆನೆಸುತ್ತಾನೆ. ಸೀಮಿತವಾದ ಆಹಾರ, ನಿದ್ದೆ ಮತ್ತು ಮೈಥುನವನ್ನು ಅಭ್ಯಾಸ ಮಾಡಿಕೊಂಡು, ನಿರ್ಭಯವಾಗಿ ಸಂಪೂರ್ಣ ಭಗವಂತನ ರಕ್ಷಾ ಕವಚದ ಜ್ಞಾನದಲ್ಲಿದ್ದು, ಆಸೆ ಆಕಾಂಕ್ಷೆಗಳಿಗೆ ಬಲಿ ಬೀಳದೆ, ಯಾವುದೇ ಏರು-ಪೇರುಗಳಿಗೆ ವಿಚಲಿತನಾಗದೆ ಬದುಕುತ್ತಾನೆ. ಅವನು ನಿಜವಾದ ‘ಮನುಷ್ಯ’ನೆನಿಸುತ್ತಾನೆ. ಇಂತವನಿಗೆ ನಾನು-ನನ್ನದು ಎನ್ನುವ ಅಹಮ್ ಎಂದೂ ಇರುವುದಿಲ್ಲ ಹಾಗು ಆತ ಮುಕ್ತಿಯನ್ನು ಪಡೆಯುತ್ತಾನೆ.


ಇಲ್ಲಿಗೆ ಭಗವದ್ಗೀತೆ ಎರಡನೇ ಅಧ್ಯಾಯ ಸಾಂಖ್ಯ ಯೋಗ ಮುಕ್ತಾಯವಾಯಿತು.
ಭಗವದ್ಗೀತೆಯ ಪ್ರತಿಯೊಂದು ಅಧ್ಯಾಯವು ಪ್ರತಿ ಒಂದು ಶ್ಲೋಕದಲ್ಲಿಯೂ ಮನುಷ್ಯನ ಎಲ್ಲಾ ಪ್ರಶ್ನೆ ಗೊಂದಲಗಳಿಗೆ ಶ್ರೀ ಕೃಷ್ಣ ಉತ್ತರವನ್ನು ನೀಡಿದ್ದಾನೆ.  ಅರ್ಜುನನಲ್ಲಿ ಉಂಟಾಗಿರುವ ಚಿಂತೆಯ ಕಾರಣವನ್ನರಿತ ಶ್ರೀ ಕೃಷ್ಣ ಪರಮಾತ್ಮನು ಅವನ ಚಿಂತೆಯನ್ನು ದೂರ ಮಾಡಲು, ಅವನಲ್ಲಿ ತಿಳುವಳಿಕೆಯನ್ನು ಮೂಡಿಸುವ ಸಲುವಾಗಿ, ಮನುಷ್ಯನ ದೇಹ ಮತ್ತು ಆತ್ಮ ಇವೆರೆಡರ ನಡುವೆ ಇರುವ ಸಂಬಂಧವೆಂತಹುದು, ಆತ್ಮಕ್ಕೆ ಸಾವಿಲ್ಲದಿರುವ ಹಾಗೂ ಮನುಷ್ಯನ ಮರಣಾನಂತರ ಒಂದು ದೇಹದಿಂದ ಮತ್ತೊಂದು ದೇಹಕ್ಕೆ ಸಾಗುವ ಪ್ರಕ್ರಿಯೆಯನ್ನು, ಬದುಕಿರುವ ಸಂದರ್ಭದಲ್ಲಿಯೇ ಆತ್ಮವನ್ನು ಸಾಕ್ಷಾತ್ಕರಿಸಿಕೊಂಡಲ್ಲಿ ಅಂತಹ ಮನುಷ್ಯನಲ್ಲಿ ಕಾಣಬಹುದಾದ ಲಕ್ಷಣಗಳು ಈ ಎಲ್ಲ ವಿಷಯಗಳ ಕುರಿತು ವಿವರಿಸುವ ಸನ್ನಿವೇಶವನ್ನು ಭಗವದ್ಗೀತೆಯ ಎರಡನೆಯ ಅಧ್ಯಾಯವಾದ ಸಾಂಖ್ಯ ಯೋಗದಲ್ಲಿ ಕೃಷ್ಣ ತಿಳಿಸಿದ್ದಾನೆ.

 

Comments