ಭಗವದ್ಗೀತೆ ಅಧ್ಯಾಯ-2 ಶ್ಲೋಕ -69-70



ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -69
 
ಶ್ಲೋಕ :
ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ।
ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ ॥೬೯॥
 
ಅರ್ಥ:
ಯಾವುದು ಎಲ್ಲಾ ಜೀವಿಗಳಿಗೆ ಕತ್ತಲ ಕಗ್ಗಂಟೋ ಅಂಥಲ್ಲಿ ಇಂದ್ರಿಯಗಳನ್ನು ಗೆದ್ದ ಯೋಗಿ ಎಚ್ಚರವಿರುತ್ತಾನೆ. ಎಲ್ಲಾ ಜೀವಿಗಳು ಏಲ್ಲಿ ಎಚ್ಚರವಿರುವರೋ-ಅದು ಬಲ್ಲ ಚಿಂತಕನಿಗೆ ನಟ್ಟಿರುಳು.
 
ವಿವರ ವಿವರಣೆಗಳು : 
ಸಾಮಾನ್ಯ ಮನುಷ್ಯನಿಗೆ ಯಾವುದು ಹಗಲೋ ಅದು ಸತ್ಯದ ಸಾಕ್ಷಾತ್ಕಾರವಾದವನಿಗೆ ರಾತ್ರಿ. ಜಗತ್ತಿನ ಎಲ್ಲಾ ಜೀವ ಜಾತಕ್ಕೆ ಯಾವುದು ರಾತ್ರಿಯೋ ಅದು ಸಾಧಕನಿಗೆ ಹಗಲು. ಅಂದರೆ ನಿಜವಾದ ಸಾಧಕ ನಮ್ಮ ರಾತ್ರಿಯಲ್ಲಿ ಎಚ್ಚರವಿರುತ್ತಾನೆ, ಹಾಗು ಲೌಕಿಕ ವ್ಯವಹಾರವೆಂಬ ನಮ್ಮ ಹಗಲು ಅವನಿಗೆ ರಾತ್ರಿ. ಲೌಕಿಕ ಪ್ರಪಂಚದಲ್ಲಿ ಅವನಿಗೆ ಪ್ರವೃತ್ತಿಯೇ ಇರುವುದಿಲ್ಲ. ಆತ ನಮಗೆ ಒಬ್ಬ ಮುಗ್ಧನಂತೆ, ಮಗುವಂತೆ ಕಾಣಬಹುದು. ಆತನ ಜ್ಞಾನದ ಬಗ್ಗೆ ಅರಿವಿಲ್ಲದವನಿಗೆ ಆತನೊಬ್ಬ ಹುಚ್ಚನಂತೆ ಕಂಡರೆ ಆಶ್ಚರ್ಯವಿಲ್ಲ! ಏಕೆಂದರೆ ಆತ ಲೌಕಿಕ ಪ್ರಪಂಚದೊಂದಿಗಿದ್ದು, ಅದರೊಂದಿಗೆ ಬೆರೆಯದೆ ತನ್ನ ಅಂತರಂಗದ ಆನಂದವನ್ನು ಸದಾ ಸವಿಯುತ್ತಿರುತ್ತಾನೆ. ಒಬ್ಬ ಜ್ಞಾನಿ ಭಗವಂತನನ್ನು ಕಂಡಾಗ ಆತನಿಗೆ ಉಳಿದಿದ್ದೆಲ್ಲಾ ಕತ್ತಲು. ಅದ್ಭುತವಾದ ಸಂಗತಿಯನ್ನು ಕಂಡ ವಿಸ್ಮಯದಲ್ಲಿ ತದೇಕಚಿತ್ತನಾಗಿ ಅದನ್ನೇ ನೋಡುತ್ತಿರುತ್ತಾನೆ. ಭಗವಂತನನ್ನು ಕಾಣಬೇಕಾದರೆ ನಾವು ಸದಾ ಶಾಸ್ತ್ರದ ಶ್ರವಣ ಮಾಡಬೇಕು. ಕೇವಲ ಶ್ರವಣ ಮಾಡಿದರೆ ಸಾಲದು, ಶ್ರವಣದ ನಂತರ ಮನನ-ನಿದಿಧ್ಯಾಸನ ಅತಿ ಮುಖ್ಯ. ಇದನ್ನೇ “ಆತ್ಮಾ ವಾ ಅರೇ ದ್ರಷ್ಟವ್ಯಃ ಶ್ರೋತವ್ಯಃ ಮಂತವ್ಯಃ ನಿದಿಧ್ಯಾಸಿತವ್ಯಃ ಚ” ಎಂದಿದ್ದಾರೆ. ಮನನ ಶೀಲನಾದವ ‘ಮುನಿ’ ; ಅವನೇ ‘ಪಶ್ಯ’ ಅಂದರೆ ಭಗವಂತನನ್ನು ಕಾಣಬಲ್ಲವ ಅಥವಾ ಕಂಡವ.

ಇಂದಿನ ಸಮಾಜದಲ್ಲಿ ಸತ್ಯದ ಸಾಕ್ಷಾತ್ಕಾರನಾದವನನ್ನು ಗುರುತಿಸುವುದು ಬಹಳ ಕಷ್ಟ. ಸಿದ್ಧ ಪುರುಷರೆಲ್ಲಾ ಸತ್ಯವನ್ನು ಕಂಡವರಲ್ಲ! ಪವಾಡ ಮಾಡುವವರು ಭಗವಂತನನ್ನು ಕಂಡವರು ಎಂದು ಹೇಳಲಾಗುವುದಿಲ್ಲ. ಏಕೆಂದರೆ ನಿಜವಾದ ಸಾಧಕ ಸಾಮಾನ್ಯವಾಗಿ ಪವಾಡ ಮಾಡುವುದಿಲ್ಲ. ತೀರಾ ಅನಿವಾರ್ಯವಾದಾಗ ಮಾತ್ರ ಆತ ಪ್ರಪಂಚದ ಒಳಿತಿಗಾಗಿ ಪವಾಡ ಮಾಡಬಹುದು. ನಿರಂತರ ಸತ್ಯದ ಬಗ್ಗೆ ಅನ್ವೇಷಣೆ ಮಾಡಿ, ಸಿದ್ಧಿ ಗಳಿಸಿದರೆ ಮಾತ್ರ ಸ್ಥಿತಪ್ರಜ್ಞರಾಗಲು ಸಾಧ್ಯ.


_____________________________________________

ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -70
 
ಶ್ಲೋಕ :
ಆಪೂರ್ಯಮಾಣಮಚಲಪ್ರತಿಷ್ಠಂ ಸಮುದ್ರಮಾಪಃ ಪ್ರವಿಶಂತಿ ಯದ್ವತ್ ।
ತದ್ವತ್ ಕಾಮಾ ಯಂ ಪ್ರವಿಶಂತಿ ಸರ್ವೇ ಸ ಶಾಂತಿಮಾಪ್ನೋತಿ ನ ಕಾಮಕಾಮೀ ॥೭೦॥
 
ಅರ್ಥ :
ತುಂಬಿದರೂ ತುಳುಕದೆ ನಿಂತ ಕಡಲನ್ನು ಎಲ್ಲ ನೀರುಗಳು ಬಂದು ಸೇರುವಂತೆ, ಯಾರನ್ನು ಎಲ್ಲ ವಿಷಯಗಳು ತುಂಬಿಯೂ ತುಳುಕದಂತೆ ಬಂದು ಸೇರುವವೋ ಅವನು ಮುಕ್ತಿ ಪಡೆಯುತ್ತಾನೆ. ಹೊರತು ಕೆಟ್ಟ ಬಯಕೆಗಳ ಬೆನ್ನು ಹತ್ತಿದವನಲ್ಲ.
 
ವಿವರ ವಿವರಣೆಗಳು : 
ಭಗವಂತನನ್ನು ಕಂಡವನು, ಸತ್ಯದ ಸಾಕ್ಷಾತ್ಕಾರವಾದವನು. ಭಗವಂತನನ್ನು ಕಾಣುವ ಸರಿ ದಾರಿಯಲ್ಲಿ ನಡೆಯುವವನು ಹೇಗಿರುತ್ತಾನೆ ಎನ್ನುವ ವಿಷಯದ ಮೇಲೆ ಕೃಷ್ಣ ಇಲ್ಲಿ ಇನ್ನಷ್ಟು ವಿವರಣೆಯನ್ನು ಕೊಟ್ಟಿದ್ದಾನೆ: ಆತನ ಮನಸ್ಸು ಸದಾ ಆನಂದವಾಗಿರುತ್ತದೆ. ಅದು ಭಗವಂತನಲ್ಲಿ ನೆಲೆಗೊಂಡಿರುತ್ತದೆ. ಆತ ಕಿರು ತೊರೆಗಳಂತೆ ಇರದೆ ಕಡಲಿನಂತಿರುತ್ತಾನೆ. ಸಮುದ್ರಕ್ಕೆ ಎಲ್ಲಾ ನದಿಗಳು ಬಂದು ಸೇರಿದರೂ ಅದು ಉಕ್ಕೇರುವುದಿಲ್ಲ. ಕಡಲು ಮಳೆ ಬಂದಾಗ ಉಕ್ಕಿ ಹರಿದು- ಬೇಸಿಗೆ ಬಂದಾಗ ಬತ್ತಿ ಹೋಗುವುದಿಲ್ಲ. ಅದೇ ರೀತಿ ಸಾಧಕ ಪ್ರಪಂಚದ ಎಲ್ಲಾ ಭೋಗಗಳು ಅವನನ್ನು ಪ್ರವೇಶಿಸಿದರೂ ಕೂಡಾ, ವಿಚಲಿತನಾಗದೆ ಸುಖ-ದುಃಖವನ್ನು ಮೀರಿ ನಿಲ್ಲುತ್ತಾನೆ. ಆತನ ಮನಸ್ಸು ಸದಾ ಪ್ರಸನ್ನವಾಗಿರುತ್ತದೆ. ಆತ ಭಗವಂತನಲ್ಲಿ ನಿಷ್ಠೆಯನ್ನಿಟ್ಟು ಮೋಕ್ಷವನ್ನು ಪಡೆಯುತ್ತಾನೆ. ಆದರೆ ಬಯಕೆಗಳ ಬೆನ್ನು ಹತ್ತಿದವನು ಅದರಿಂದ ಈಚೆ ಬಾರದೆ ಎಂದೂ ನಿಜವಾದ ಸುಖ ಕಾಣಲಾರ.


ಮುಂದುವರಿಯುವುದು....

Comments