ದಕ್ಷಿಣ ಕನ್ನಡ ಜಿಲ್ಲೆ ಸಾಕಷ್ಟು ಪವಿತ್ರ ಪುಣ್ಯಕ್ಷೇತ್ರಗಳನ್ನು ಹೊಂದಿದೆ.
ಅವುಗಳಲ್ಲಿ ನಂದಿನಿ ನದಿಯ ತಟದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವೂ ಒಂದು. ಈ ದೇಗುಲವು, ನಂದಿನಿ ಎಂಬ ನದಿಯ ಮಧ್ಯದಲ್ಲಿರುವ ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ದಿನ ಸಾವಿರಾರು ಭಕ್ತರು ಇಲ್ಲಿಗೆ ಬಂದು ತಾಯಿ ದುರ್ಗಾ ಪರಮೇಶ್ವರಿಯ ದರ್ಶನ ಭಾಗ್ಯ ಪಡೆದು ಪುನೀತರಾಗುತ್ತಿದ್ದಾರೆ.
ಈ ಕ್ಷೇತ್ರದಲ್ಲಿ ದುರ್ಗಾಪರಮೇಶ್ವರಿ ಬಂದು ನೆಲೆಸಲು ಕಾರಣವೇನು ಎಂಬ ಕುರಿತಾಗಿ ಒಂದು ಪೌರಾಣಿಕ ಕಥೆಯೇ ಇದೆ.
ಶುಂಭ ಮತ್ತು ನಿಶುಂಭರೆಂಬ ಎಂಬ ಇಬ್ಬರು ರಾಕ್ಷಸರನ್ನು ದುರ್ಗಾದೇವಿ ಸಂಹರಿಸಿದ ನಂತರ ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಓಡಿಹೋಗುತ್ತಾನೆ. ಆನಂತರ ಅವನೇ ರಾಕ್ಷಸರಿಗೆ ನಾಯಕನಾಗಿ ಋಷಿ, ಮುನಿಗಳ ತಪ್ಪಸ್ಸಿಗೆ ಭಂಗ ತರಲು ಪ್ರಾರಂಭಿಸಿದನು ಲೋಕಕಂಠಕನಾಗಿ ಮೆರೆಯುತ್ತಾನೆ. ಅವನ ಕಾಟದಿಂದ ಲೋಕಕಲ್ಯಾಣಕ್ಕಾಗಿ ಋಷಿಮುನಿಗಳು ಮಾಡುತ್ತಿರುವ ಯಾಗ ಯಜ್ಞಗಳಿಗೆ ಭಂಗವಾಗಿತ್ತಂತೆ.
ಈ ಕಾರಣದಿಂದಾಗಿ, ದೇವತೆಗಳು ಭೂಮಿಗೆ ಮಳೆ ಸುರಿಸುವುದನ್ನೇ ನಿಲ್ಲಿಸಿಬಿಟ್ಟರಂತೆ. ಇದರಿಂದ
ಭೀಕರ ಬರಗಾಲ ಎದುರಾಗಿ ಲೋಕವೇ ಕಷ್ಟಪಡುವಂತಾಯಿತು. ನದಿ ಬಾವಿಗಳು ಬತ್ತಿ ಹೋದವು ಕಾಡುಗಳು ಒಣಗಿ ಹೋದವು ಆಗ ಜಾಬಾಲಿ ಮಹರ್ಷಿಗಳು ಒಂದು ಯಜ್ಞ ನಡೆಸಲು ತೀರ್ಮಾನಿಸಿ, ಇದಕ್ಕೆ ಸಹಾಯವಾಗುವಂತೆ ಇಂದ್ರನ ಬಳಿ ಹೋಗಿ ಕಾಮಧೇನುವನ್ನು ಕಳುಹಿಸಿಕೊಡಲು ಕೇಳಿಕೊಂಡರು. ಆದರೆ ಅಲ್ಲಿ ಕಾಮಧೇನು ಇರಲಿಲ್ಲ. ಬದಲಿಗೆ ಅವಳ ಮಗಳಾದ ನಂದಿನಿಯನ್ನು ಕಳುಹಿಸಿಕೊಟ್ಟಳು ಇಂದ್ರ ಒಪ್ಪಿಕೊಳ್ಳುತ್ತಾನೆ. ಆದರೆ ನಂದಿನಿ, ಋಷಿಗಳ ಜೊತೆಗೆ ಭೂಲೋಕಕ್ಕೆ ಬರಲು ಒಪ್ಪುವುದಿಲ್ಲ. ಇದರಿಂದ ಕುಪಿತರಾದ ಮಹರ್ಷಿಗಳು, ನದಿಯಾಗಿ ಹರಿಯುವಂತೆ ನಂದಿನಿಗೆ ಶಾಪ ನೀಡುತ್ತಾರೆ. ಈ ಶಾಪ ವಿಮೋಚನೆಗಾಗಿ ನಂದಿನಿ ಆದಿಶಕ್ತಿಯನ್ನು ಪ್ರಾರ್ಥಿಸಿದಾಗ, ದುರ್ಗಾದೇವಿ ಪ್ರತ್ಯಕ್ಷಳಾಗಿ, ನೀನು ನದಿಯಾಗಿ ಹರಿಯಲೇಬೇಕು. ನಾನು ನಿನ್ನ ಮಗಳಾಗಿ ಹುಟ್ಟಿ ಬರುತ್ತೇನೆ. ಆಗ ನಿನ್ನ ಶಾಪ ವಿಮೋಚನೆಯಾಗುತ್ತದೆ ಎಂದು ಹೇಳಿ ಕಳುಹಿಸುತ್ತಾಳೆ. ಆಗ ನಂದಿನಿ ಈ ಕ್ಷೇತ್ರದಲ್ಲಿ ನದಿಯಾಗಿ ಹರಿಯುತ್ತಾಳೆ.
ಇತ್ತ ಅರುಣಾಸುರ, ಮನುಷ್ಯರಿಂದಾಗಲಿ, ಪ್ರಾಣಿಗಳಿಂದಾಗಲಿ ಮರಣ ಬಾರದಂತೆ ಬ್ರಹ್ಮನಿಂದ ವರಪಡೆದು ಎಲ್ಲರಿಗೂ ಇನ್ನಷ್ಟು ಹಿಂಸೆ ನೀಡಲು ಪ್ರಾರಂಭಿಸಿದಾಗ ಎಲ್ಲರೂ ಆದಿಶಕ್ತಿಯ ಮೊರೆ ಹೋಗುತ್ತಾರೆ. ಆಗ ಆದಿಶಕ್ತಿಯು ಮೋಹಿನಿಯ ರೂಪ ತಾಳುತ್ತಾಳೆ. ಅರುಣಾಸುರ ಉದ್ಯಾನದಲ್ಲಿ ಸಂಚರಿಸುತ್ತಿದ್ದಾಗ, ಅವಳನ್ನು ಕಂಡು ಮೋಹಗೊಂಡ ಅಸುರ ಮದುವೆಯಾಗಲು ಕೇಳಿಕೊಳ್ಳುತ್ತಾನೆ. ಅವಳು ಏನೊಂದೂ ಉತ್ತರ ಕೊಡದೆ ಒಂದು ಬೃಹತ್ ಬಂಡೆಯಲ್ಲಿ ಕಣ್ಮರೆಯಾಗುತ್ತಾಳೆ. ಅವನು ಸಿಟ್ಟಿನಿಂದ ಬಂಡೆಗೆ ಹೊಡೆದಾಗ, ಅದರಿಂದ ಸಹಸ್ರ ಸಂಖ್ಯೆಯಲ್ಲಿ ದುಂಬಿಗಳು ಹೊರಬರಲಾರಂಭಿಸುತ್ತವೆ. ಅವುಗಳಲ್ಲಿ ಆದಿಶಕ್ತಿಯು ಒಂದು ದೊಡ್ಡ ಭ್ರಮರದ ರೂಪ ತಾಳಿ ಅರುಣಾಸುರನನ್ನು ಕಚ್ಚಿ ಕೊಂದು ಭ್ರಮರಾಂಭಿಕೆ ಎನಿಸಿಕೊಳ್ಳುತ್ತಾಳೆ.
ದುರ್ಗಾ ಪರಮೇಶ್ವರೀ
ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಎಂದು ಪ್ರಖ್ಯಾತಿಯನ್ನು ಪಡೆದಳು. ದೇವತೆಗಳು, ಜಾಬಾಲಿ ಮಹರ್ಷಿಗಳು ದೇವಲೋಕದ ಕಲ್ಪವೃಕ್ಷದಿಂದ ತಂದ ಎಳನೀರಿನಿಂದ ರೌದ್ರ ರೂಪ ದಲ್ಲಿದ್ದ ದೇವಿಗೆ ಅಭಿಷೇಕವನ್ನು ಮಾಡಿ ಶಾಂತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು. ಅದರಂತೆಯೇ ದೇವಿಯು ನಂದಿನಿ ನದಿಯ ಮಧ್ಯದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಎಂಬ ಹೆಸರಿನಿಂದ ಉದ್ಭವಿಸಿದಳು.
ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು. ಪುಷ್ಪಾಲಂಕಾರ ಪೂಜೆ ಎಂದರೆ ದೇವರಿಗೆ ಇಷ್ಟ ಎನ್ನುವುದು ಭಕ್ತರ ನಂಬಿಕೆ. ಮಲ್ಲಿಗೆ ಹೂ ದೇವರಿಗೆ ಪ್ರೀಯವಂತೆ. ಆದರೆ ಸಂಪಿಗೆ ಹೂವನ್ನು ಇಲ್ಲಿ ದೇವರಿಗೆ ಅರ್ಪಿಸಲಾಗುವುದಿಲ್ಲ.
ದೇವಳದಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಈ ಜಾತ್ರೆಯ ಪ್ರಮುಖ ಆಕರ್ಷಣೆ ಎಂದರೆ ಅದು ತೂಟೆದಾರ ಸೇವೆ. ತಾಳೆಯ ಗರಿಯನ್ನು ಸುತ್ತಿ ಅದಕ್ಕೆ ಬೆಂಕಿಯನ್ನು ಹೊತ್ತಿಸಲಾಗುತ್ತದೆ. ಆ ಪಂಜನ್ನು ಭಕ್ತರು ಒಬ್ಬರ ಮೇಲೊಬ್ಬರು ಎಸೆಯುತ್ತಾರೆ. ಕಟೀಲು ಸಮೀಪದ ಎರಡು ಮಾಗಣೆಗಳ ಅತ್ತೂರು ಮತ್ತು ಕೊಡೆತ್ತೂರು ಗ್ರಾಮಗಳ ಜನರು ತೂಟೆದಾರ ಸೇವೆಯಲ್ಲಿ ಭಾಗವಹಿಸುತ್ತಾರೆ.
ಆದರೆ, ಈವರೆಗೆ ಈ ಬೆಂಕಿಯ ಪಂಜಿನ ಹೊಡೆದಾಟದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅವರು ಹಾಕಿಕೊಂಡ ಬಟ್ಟೆಗೂ ಬೆಂಕಿ ತಗುಲಿಲ್ಲ ಎಂಬುದು ಅಚ್ಚರಿಯ ಸಂಗತಿ. ಇದಕ್ಕೆ ದುರ್ಗಾ ಪರಮೇಶ್ವರಿ ದೇವಿಯ ಮಹಿಮೆಯೇ ಕಾರಣ ಎಂಬುದು ಎಲ್ಲರ ನಂಬಿಕೆ. ಈ ಆಟದಲ್ಲಿ ಭಾಗವಹಿಸಲೆಂದೇ ದೂರದ ಊರಿನಲ್ಲಿರುವ ಗ್ರಾಮದ ಜನರು ಬಂದು ಸೇರುತ್ತಾರೆ.
ಕಟೀಲು ದುರ್ಗಪರಮೇಶ್ವರಿ ದೇವಸ್ಥಾನದ ವಾರ್ಷಿಕ ಹಬ್ಬ ಬ್ರಹ್ಮಕಲಶೋತ್ಸವ. ಈ ಆಚರಣೆಯು ಸಾಮಾನ್ಯವಾಗಿ ಜನವರಿ-ಫೆಬ್ರವರಿ ತಿಂಗಳುಗಳಲ್ಲಿ ಬರುತ್ತದೆ.
ನಾಡಿನ ಹಲವಾರು ಭಾಗಗಳಿಂದ ಭಕ್ತರು ಬಂದು ಇಲ್ಲಿ ಸೇವೆಸಲ್ಲಿಸುತ್ತಾರೆ ಅದರಲ್ಲಿ ಹೂವಿನ ಸೇವೆ ಎಂದರೆ ಪುಷ್ಪಾಲಂಕಾರ ಸೇವೆ. ಇದಕ್ಕೆ ಮುಖ್ಯವಾದ ಕಾರಣ ದುಂಬಿಗೆ ಪ್ರಿಯವಾದ ವಸ್ತು ಎಂದರೆ ಹೂ. ಆದುದರಿಂದ ಈ ದೇವಾಲಯದಲ್ಲಿ ಸಾವಿರಾರು ಹೂವುಗಳಿಂದ ಪೂಜಿಸಲಾಗುತ್ತದೆ. ಅದರಲ್ಲಿ ಮಲ್ಲಿಗೆ ಇಲ್ಲಿ ಪರಿಕಲ್ಪವಾದುದು. ಇದರ ಜೊತೆಗೆ ತಾಯಿಗೆ ಇಷ್ಟವಾದ ಇನ್ನೊಂದು ಹರಕೆ ಏನೆಂದರೆ ಪಟ್ಟೆ ಸೀರೆ ಹರಿಕೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪಟ್ಟೆ ಸೀರೆ ನೀಡುವುದಾಗಿ ಹರಿಕೆ ಹೊತ್ತರೆ ಆ ತಾಯಿ ಅವರ ಆಸೆಯನ್ನು ಇದಿರಿಸುತ್ತಲೇ ಅನ್ನುವುದು ಇಲ್ಲಿನ ಭಕ್ತರ ನಂಬಿಕೆ. ಈ ದೇವಾಲಯದಲ್ಲಿ ನಿತ್ಯವೂ ಬರುವ ಭಕ್ತಾದಿಗಳಿಗೆ ಅನ್ನದಾನ ನಡೆಯುತ್ತದೆ. ಊಟ ಮಾಡುವುದೂ ಕೂಡ ಇಲ್ಲಿ ಹರಕೆ ಉಂಟು. ಬರಿ ನೆಲದಲ್ಲಿ ಎಲೆ ಹಾಕದೆ ಊಟಮಾಡುವುದು ಕ್ರಮವುಂಟು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ದೇವಸ್ಥಾನವು ಅನೇಕ ಬಗೆಯ ಕಲೆಗಳಿಗೆ ಆಶ್ರಯವನ್ನು, ಪ್ರೋತ್ಸಾಹವನ್ನು ನೀಡುತ್ತಿದೆ. ವಿಶೇಷ ದಿನಗಳಂದು ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ.
ಕಟೀಲು ಮೇಳ
ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ನಾಮಾಂಕಿತ ಕಟೀಲು ಮೇಳವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾ ತಂಡ. ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಯಾತ್ರಾ ಸ್ಥಳವಾದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದ ಯಕ್ಷಗಾನ ತಂಡವಿದು. ಕಟೀಲು ಮೇಳವು ಒಟ್ಟು ಆರು ತಂಡಗಳನ್ನು ಹೊಂದಿದ್ದು ಪ್ರಸ್ತುತ ನಾಲ್ಕು ನೂರಕ್ಕೂ ಅಧಿಕ ರಂಗಕರ್ಮಿಗಳು, ಕಲಾವಿದರು ಹಾಗೂ ಇತರ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ.
ಕಟೀಲು ಮೇಳವನ್ನು 19 ನೇ ಶತಮಾನದ ಮಧ್ಯದಲ್ಲಿ ಸ್ಥಾಪಿಸಲಾಯಿತು ಮತ್ತು ಭಕ್ತರ ಬೆಂಬಲದೊಂದಿಗೆ ಇನ್ನೂ ಉತ್ತಮವಾಗಿ ನಡೆಯುತ್ತಿದೆ. ಪ್ರದರ್ಶನಗಳಿಗೆ ಬೇಡಿಕೆ ಹೆಚ್ಚಾದಾಗ, 1980 ರ ದಶಕದಲ್ಲಿ ಎರಡು ತಂಡಗಳನ್ನು ಪ್ರಾರಂಭಿಸಲಾಯಿತು. ಈಗ ಕಟೀಲು ದೇವಸ್ಥಾನವು ತನ್ನ ಹೆಸರಿನಲ್ಲಿ ಐದು ಪೂರ್ಣ ಪ್ರಮಾಣದ ತಂಡಗಳನ್ನು ಹೊಂದಿದೆ! ಆದರೂ ಮುಂದಿನ ಹತ್ತು ವರ್ಷಗಳವರೆಗಿನ ಎಲ್ಲಾ ಪ್ರದರ್ಶನಗಳನ್ನು ಸಂಪೂರ್ಣವಾಗಿ ಬುಕ್ ಮಾಡಲಾಗಿದೆ! ಅದಕ್ಕೆ ಸಿಕ್ಕಿರುವ ಬೆಂಬಲ ಮತ್ತು ಜನಪ್ರಿಯತೆಯೇ ಅಂಥದ್ದು. ಜಿಲ್ಲೆಯ ಎಲ್ಲ ಪ್ರಸಿದ್ಧ ಯಕ್ಷಗಾನ ಕಲಾವಿದರು ಈ ತಂಡದಲ್ಲಿ ಸೇವೆ ಸಲ್ಲಿಸಿದ್ದಾರೆ. ಬಯಲಾಟ ಪ್ರದರ್ಶನದ ಸಮಯದಲ್ಲಿ ಶ್ರೀ ದೇವಿಯು ತನ್ನ ಒಂದು ಭಾಗವನ್ನು ಪ್ರದರ್ಶಿಸುತ್ತಾಳೆ ಎಂದು ಭಕ್ತರು ಆಳವಾಗಿ ನಂಬುತ್ತಾರೆ. ಇಂತಹ ಸೇವೆಗಳನ್ನು ಮಾಡುವುದರಿಂದ ಭಕ್ತರು ತಮ್ಮ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ. ತಂಡದ ಪ್ರಮುಖ ಪ್ರವಾಸ ಕ್ಷೇತ್ರ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆ. ಸಾಮಾನ್ಯವಾಗಿ, ತಂಡವು ತನ್ನ ಸೇವಾ ಆಟದ ಪ್ರವಾಸವನ್ನು ನವೆಂಬರ್ ಮಧ್ಯದಲ್ಲಿ ಪ್ರಾರಂಭಿಸುತ್ತದೆ ಮತ್ತು ಪ್ರತಿ ವರ್ಷ ಮುಂದಿನ ಮೇ 25 ರಂದು ಕೊನೆಗೊಳ್ಳುತ್ತದೆ.
ಮಂಗಳೂರು ನಗರದಿಂದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ 29 ಕಿಲೋಮೀಟರ್ ಆಗುತ್ತದೆ.
Comments