ಕೊಬ್ಬರಿ ಎಣ್ಣೆಯ ಪ್ರಯೋಜನಗಳು. ಹಾಗೂ ಕೆಮಿಕಲ್ ಎಣ್ಣೆಗಳ ದುಷ್ಪರಿಣಾಮಗಳು


ಇವತ್ತಿನ ದಿನಗಳಲ್ಲಿ ನಾವು ಕೆಮಿಕಲ್ ಮಿಶ್ರಿತ ಅಡುಗೆ ಎಣ್ಣೆಗಳನ್ನ ಬಳಸಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ.
ದೇವರು ಕೊಟ್ಟ ಆಯುಷ್ಯವನ್ನು ಕಮ್ಮಿ ಮಾಡಿಕೊಳ್ಳುತ್ತಿದ್ದೇವೆ.
 

ಯಾವ ದೇಶಕ್ಕೂ ಬೇಡವಾದ ಅನಾರೋಗ್ಯಕರ ತಾಳೆ ಎಣ್ಣೆಯನ್ನು ಭಾರತದಲ್ಲಿ ಮಾರಲೆಂದೇ ಕೊಬ್ಬರಿ ಎಣ್ಣೆಯ ಮೇಲೆ ಗೂಬೆ ಕೂರಿಸಲಾಗಿತ್ತು.

ಹೇಳಬೇಕೆಂದರೆ ಬಗೆ ಬಗೆಯ ಜಾಹೀರಾತುಗಳ ಮೂಲಕ ಜನರನ್ನು ಮರಳು ಮಾಡುತ್ತಾ, ತಮ್ಮದು ಉತ್ಕೃಷ್ಟ ದರ್ಜೆಯೆಂದು, ಕೊಲೆಸ್ಟ್ರಾಲ್ ಮುಕ್ತ(ಕೊಬ್ಬು ಕಡಿಮೆ)ವೆಂದೂ, ಡಬಲ್ ಫಿಲ್ಟರ್ಡ್ ರೀಫೈನ್ಡ್ ಎಣ್ಣೆ ಎಂದು ಹೇಳಿಕೊಳ್ಳುತ್ತಿರುವ ಎಣ್ಣೆ ಎಲ್ಲವು ಕಲಬೆರಕೆ ಎಣ್ಣೆಗಳಾಗಿದ್ದು ಇದರಿಂದಾಗಿಯೇ ಇಂದಿನ ಬಹುತೇಕ ಜನರು ಬೊಜ್ಜು, ಕೀಲುನೋವು, ಧಿಡೀರ್ ಹೃದಯಾಘಾತ, ಕ್ಯಾನ್ಸರ್ ಅಧಿಕ ರತ್ಕದೊತ್ತಡ, ಮಧುಮೇಹ ಮುಂತಾದ ಖಾಯಿಲೆಗಳಿಗೆ ತುತ್ತಾಗುತ್ತಿರುವುದಕ್ಕೆ ಮೂಲ ಕಾರಣವಾಗಿದೆ ಎಂದರೆ ಅಚ್ಚರಿಯಾಗ ಬಹುದು.


ಗಾಣದಲ್ಲಿ ಒಂದು ಕೆಜಿ ಕಡಲೇ ಕಾಯಿ  ಎಣ್ಣೆ ತಯಾರಿಸಲು ಸುಮಾರು 3 ರಿಂದ 3.5 ಕೆಜಿ ಉತ್ಕೃಷ್ಟ ದರ್ಜೆಯ ಕಡಲೇ ಬೀಜದ ಅವಶ್ಯಕತೆ ಇರುತ್ತದೆ. ಕಡಲೇ ಕಾಯಿಯ ಸದ್ಯದ ಬೆಲೆ ಕೆಜೆ ಒಂದಕ್ಕೆ 100-120 ರೂ ಗಳು ಇದ್ದು 3-3.5 ಕೆಜಿ ಕಡಲೇ ಜೀಜಕ್ಕೇ ಸುಮಾರು 350-440/- ರೂಗಳಾಗುತ್ತದೆ. ಇನ್ನುಗಾಣದ ಬೆಲೆ, ಶುದ್ಧೀಕರಣದ ಬೆಲೆ, ಲಾಭಾಂಶ ಎಲ್ಲವೂ ಸೇರಿಸಿದಲ್ಲಿ ಶುದ್ಧವಾದ ಕಡಲೇಕಾಯಿ ಎಣ್ಣೆ ಕೆಜಿ ಒಂದಕ್ಕೆ 340-450 ಆಗುತ್ತದೆ. ಕೊಬ್ಬರೀ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಸಾಸಿವೆ ಎಣ್ಣೆಗಳ ಉತ್ಪಾದನೆ ಮತ್ತು ಬೆಲೆಯೂ ಇದಕ್ಕಿಂತಲೂ ಭಿನ್ನವಾಗದಿರುವಾಗ, ಈ ಎಲ್ಲಾ ಕಂಪನಿಗಳು ಅದು ಹೇಗೆ 80-120 ರೂಗಳಿಗೆ ಕಡಲೇ ಕಾಯಿ ಎಣ್ಣೆಯನ್ನು ಕೊಡಲು ಸಾಧ್ಯ?

ರಾಸಾಯನಿಕಗಳನ್ನು ಬೆರೆಸಿ ಹಾಲನ್ನು ಕಲಬೆರಕೆ ಮಾಡುವ ದಂಧೆಯಂತೆಯೇ ಇಲ್ಲಿಯೂ ಸಹಾ ಪೇಟ್ರೋಲಿಯಂ ಉತ್ಪನ್ನಗಳ ಸಂಸ್ಕರಣೆ ಮತ್ತು ಶುದ್ಧೀಕರಣ ಮಾಡಿದ ನಂತರ ತ್ರಾಜ್ಯವಾಗಿ ಉಳಿಯುವ ಬಣ್ಣ ಮತ್ತು ವಾಸನೆ ಇರದ ಲಿಕ್ವಿಡ್ ಪ್ಯಾರಾಫಿನ್ ಎಂಬ ಎಣ್ಣೆಯಂತಹ ಜಿಡ್ಡಿನ ಪದಾರ್ಥವನ್ನು ಲೀಟರಿಗೆ 10-20 ರೂಪಾಯಿಗಳಂತೆ ತೈಲ ಕಂಪನಿಗಳಿಂದ ಕೊಂಡುತಂದು ಆ ಜಿಡ್ಡಿಗೆ ಕೃತಕವಾಗಿ ಬಣ್ಣ ಮತ್ತು ಸುವಾಸನೆಯನ್ನು ಬೆರೆಸಿ ಅಲ್ಪ ಸ್ವಲ್ಪ ತಾಳೇ ಎಣ್ಣೆ ಮತ್ತು ಮೂಲ ಕಡಲೇಕಾಯಿ/ಸೂರ್ಯಕಾಂತಿ ಎಣ್ಣೆಯನ್ನು ಬರೆಸಿ, ಅದನ್ನು ಆಕರ್ಷಕವಾಗಿ ಕಾಣುವಂತೆ ಪ್ಯಾಕ್ ಮಾಡಿ ಹೆಸರಾಂತ ನಟ ನಟಿಯರಿಂದಲೋ ಇಲ್ಲವೇ ರೂಪದರ್ಶಿಗಳಿಂದ ಜಾಹೀರಾತು ಮಾಡಿಸಿ ಜನರಿಗೆ ಮರಳು ಮಾಡುವ ಮೂಲಕ ಪ್ರತಿನಿತ್ಯವೂ ವಿಷವನ್ನು ಉಣಿಸುತ್ತಿರುವುದು ಈಗ ಯಾರಿಗೂ ತಿಳಿಯದ ಸಂಗತಿಯೇನಲ್ಲ.
 ನಮ್ಮ ಹಿರಿಯರು ಗಾಣದ ಎಣ್ಣೆ, ಕಡಲೇಕಾಯಿ ಎಣ್ಣೆ ಕೊಬ್ಬರಿ ಎಣ್ಣೆಯನ್ನು ಸಾವಿರಾರು ವರ್ಷಗಳಿಂದಲೂ ಬಳಸುತ್ತಾ ಬಂದಿದ್ದಾರೆ. ಇದುವರೆಗೂ ಕೊಬ್ಬರಿ ಎಣ್ಣೆ ಕಡಲೆಕಾಯಿ ಎಣ್ಣೆ ಯಾರಿಗೂ ಅಪಾಯಕಾರಿಯಾಗಿಲ್ಲ.
ಆಯುರ್ವೇದದಲ್ಲಿ ಕೊಬ್ಬರಿ ಎಣ್ಣೆ ಮಹತ್ವ ತುಂಬಾ ತಿಳಿಸಲಾಗಿದೆ. ಹಾಗೂ ಕಲ್ಪವೃಕ್ಷದ ಪ್ರತಿ ಭಾಗವು ಪ್ರತಿ ವಸ್ತು ಮಾನವನಿಗೆ ಉಪಯೋಗವೆಂದು ಧರ್ಮ ಗ್ರಂಥಗಳಲ್ಲಿ ತಿಳಿಸಲಾಗಿದೆ.
 ಆದ್ದರಿಂದ ಕೊಬ್ಬರಿ ಎಣ್ಣೆಯ ಬಗ್ಗೆ ಇರುವ ಯಾವುದೇ ಅನುಮಾನಗಳನ್ನು ಇದರ ಪ್ರಮುಖ ಪ್ರಯೋಜನಗಳನ್ನು ನೋಡಿದ ಬಳಿಕವಾದರೂ ನಿವಾರಿಸಬಹುದು. ಇಂದಿನ ಲೇಖನದಲ್ಲಿ ಇದರ ಪ್ರಮುಖ ಪ್ರಯೋಜನಗಳನ್ನು ಅರಿಯೋಣ.


ಕೊಬ್ಬರಿ ಎಣ್ಣೆಯ ಆರೋಗ್ಯಕರ ಉಪಯೋಗಗಳು.


ಅಡುಗೆ ರುಚಿ ಹೆಚ್ಚಿಸುವ, ಕೂದಲನ್ನು ಬಲಿಷ್ಠವಾಗಿ ಮಾಡುವ ಕೊಬ್ಬರಿ ಎಣ್ಣೆಯನ್ನು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತಿದೆ. ಮತ್ತು ಆಯುರ್ವೇದದಲ್ಲಿ ಪ್ರಮುಖ ಸ್ಥಾನ ಕೂಡ ಕೊಬ್ಬರಿ ಎಣ್ಣೆಗೆ ಇದೆ ಈ ಕೊಬ್ಬರಿ ಎಣ್ಣೆಯಲ್ಲಿ ಏನೇನಿವೆ ಆರೋಗ್ಯವನ್ನು ಕಾಪಾಡುವ ಅಂಶಗಳು.

ಸ್ಮರಣ ಶಕ್ತಿ ಹೆಚ್ಚುತ್ತದೆ ಇದರಲ್ಲಿರುವ ಮಧ್ಯಮ

ಸಂಕೋಲೆಯ ಟ್ರೈಗ್ಲಿಸರೈಡುಗಳು (Medium-chain triglycerides (MCT's) ಸ್ಮರಣಶಕ್ತಿಯನ್ನೂ ಹೆಚ್ಚಿಸುತ್ತದೆ. ನಿಯಮಿತವಾಗಿ ಕೊಬ್ಬರಿ ಎಣ್ಣೆಯನ್ನು ಸೇವಿಸುವ ಮೂಲಕ ಮರೆತ ವಿಷಯಗಳನ್ನು ನೆನಪಿಸಿಕೊಳ್ಳುವ ಕ್ಷಮತೆ ಹೆಚ್ಚುತ್ತದೆ. ಏಕೆಂದರೆ ಈ MCTಗಳು ದೇಹದಲ್ಲಿ ಸುಲಭವಾಗಿ ಹೀರಲ್ಪಡುತ್ತವೆ. ಇವು ಮೆದುಳಿಗೂ ಸುಲಭವಾಗಿ ತಲುಪಿ ಮೆದುಳಿನ ಜೀವಕೋಶಗಳಿಗೆ ಹೆಚ್ಚಿನ ಶಕ್ತಿ ದೊರಕುತ್ತದೆ ಹಾಗೂ ತನ್ಮೂಲಕ ಸ್ಮರಣ ಶಕ್ತಿ ಹೆಚ್ಚುತ್ತದೆ.


ಸ್ನಾಯುಗಳನ್ನು ಬೆಳೆಸಲು ನೆರವಾಗುತ್ತದೆ

ಸ್ನಾಯುಗಳನ್ನು ಬೆಳೆಸಲು ನೆರವಾಗುತ್ತದೆ ಇದರಲ್ಲಿರುವ ಮಧ್ಯಮ ಸಂಕೋಲೆಯ ಟ್ರೈಗ್ಲಿಸರೈಡುಗಳು (Medium-chain triglycerides (MCT's) ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಹಾಗೂ ಹೆಚ್ಚಿನ ಕ್ಯಾಲೋರಿಗಳನ್ನು ದಹಿಸಲು ನೆರವಾಗುತ್ತದೆ. ಅಲ್ಲದೇ ಇವು ಸ್ನಾಯುಗಳನ್ನು ಬೆಳೆಸಲೂ ನೆರವಾಗುತ್ತದೆ. ನಿಮ್ಮ ನಿತ್ಯದ ಪ್ರೋಟೀನ್ ಯುಕ್ತ ಪೇಯದಲ್ಲಿ ಸುಮಾರು ಮೂರು ದೊಡ್ಡ ಚಮಚ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಕುಡಿಯುವ ಮೂಲಕ ಸ್ನಾಯುಗಳು ಹುರಿಗಟ್ಟಲು ನೆರವಾಗುತ್ತದೆ.

ಶಕ್ತಿಯನ್ನು ಹೆಚ್ಚಿಸುತ್ತದೆ 

ಶಕ್ತಿಯನ್ನು ಹೆಚ್ಚಿಸುತ್ತದೆ ಕ್ರೀಡಾಪಟುಗಳು, ದೇಹದಾರ್ಢ್ಯ ಪಟುಗಳು ಹಾಗೂ ತೂಕ ಇಳಿಸಲು ಇಚ್ಛಿಸುವ ವ್ಯಕ್ತಿಗಳು ಕೊಬ್ಬರಿ ಎಣ್ಣೆಯನ್ನು ಸೇವಿಸಿದಾಗ ಇದರ ಕೊಬ್ಬಿನ ಪ್ರಮಾಣ ಸುಲಭವಾಗಿ ಶಕ್ತಿಯಾಗಿ ಪರಿವರ್ತಿತವಾಗುತ್ತದೆ ಹಾಗೂ ಕೊಬ್ಬಾಗಿ ದೇಹದಲ್ಲಿ ಸಂಗ್ರಹವಾಗುವುದಿಲ್ಲ. ಇದು ಶಕ್ತಿಯನ್ನು ನೀಡುತ್ತದೆ ಹಾಗೂ ಕ್ರಿಡಾಪಟುಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೂ ಈ ಮೂಲಕ ಉತ್ತಮ ಸಾಧನೆ ಸಾಧಿಸಲು ಸಾಧ್ಯವಾಗುತ್ತದೆ.

ಕೊಬ್ಬರಿ ಎಣ್ಣೆ ದಂತಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಕೊಬ್ಬರಿ ಎಣ್ಣೆ ಉತ್ತಮ ಬ್ಯಾಕ್ಟೀರಿಯಾ ನಿವಾರಕವಾಗಿದೆ. ಅಂದ ಈ ಎಣ್ಣೆಯ ವಾತಾವರಣ ದಲ್ಲಿ ಕೆಲವಾರು ಬಗೆಯ ಬ್ಯಾಕ್ಟೀರಿಯಾಗಳು ಬದುಕಲಾರವು. ಬಾಯಿಯ ವಾಸನೆ, ದಂತಗಳ ಕೊಳೆಯುವಿಕೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳೂ ಕೊಬ್ಬರಿ ಎಣ್ಣೆಯ ವಾತಾವರಣದಲ್ಲಿ ಬದುಕಲಾರವು. ನಮ್ಮ ಹಲ್ಲುಗಳ ನಡುವಣ ಅತಿ ಕಿರಿಯ ಸಂಧುಗಳಲ್ಲಿಯೇ ಈ ಬ್ಯಾಕ್ಟೀರಿ ಯಾಗಳು ಹೆಚ್ಚಾಗಿ ಅಡಗಿ ಕುಳಿತಿರುತ್ತವೆ. ಇದೇ ಹಲ್ಲಿನ ಕೂಳೆ (ಅಂದರೆ ಹಲ್ಲುಗಳ ನಡುವಣ ಮತ್ತು ಹಲ್ಲು-ಒಸಡುಗಳ ನಡುವಣ ಕಿರಿದಾದ ಕುಳಿಗಳಲ್ಲಿ ಸಂಗ್ರಹವಾಗುವ ತಿಳಿ ಹಳದಿ ಬಣ್ಣದ ಹಿಟ್ಟಿನಂತಹ ಭಾಗ) ಬೆಳೆಯಲು ಕಾರಣ. ಹಲ್ಲುಜ್ಜುವಿಕೆ ಮತ್ತು ಮುಕ್ಕಳಿಸುವುದರಿಂದ ಹಲ್ಲುಗಳ ಹೊರಭಾಗದ ಕೂಳೆ ಸಾಕಷ್ಟು ತೊಳೆದು ಹೋದರೂ ಹಲ್ಲುಗಳ ನಡುವಣ ಸಂಧಿಯಲ್ಲಿರುವ ಕೂಳೆ ಮತ್ತು ಬ್ಯಾಕ್ಟೀರಿಯಗಳು ಹಾಗೇ ಉಳಿದುಕೊಳ್ಳುತ್ತವೆ. ಇದನ್ನು ನಿವಾರಿಸಲು ಒಂದು ದೊಡ್ಡ ಚಮಚ ಕೊಬ್ಬರಿ ಎಣ್ಣೆಯನ್ನು ಬಾಯಿಗೆ ಹಾಕಿ ಸುಮಾರು ಹತ್ತು ನಿಮಿಷಗಳವರೆಗೆ ಉಗಿಯದೇ ಸತತವಾಗಿ ಮುಕ್ಕಳಿಸುತ್ತಾ ಇರಬೇಕು. ಈ ಮೂಲಕ ಹಲ್ಲುಗಳ ನಡುವಣ ಭಾಗದ ಸಹಿತ ಎಲ್ಲಾ ಕಡೆಗಳಿಂದ ಬ್ಯಾಕ್ಟೀರಿಯಾಗಳು ಇಲ್ಲವಾಗುತ್ತವೆ. ಒಂದು ಅಧ್ಯಯನದ ಪ್ರಕಾರ ಇದು ಹಲ್ಲುಗಳಿಗೆ ಪ್ರತಿಜೀವಕವೂ ಆಗಿದೆ. ಇನ್ನೊಂದು ಅಧ್ಯಯನದಲ್ಲಿ ನಿತ್ಯವೂ ಕೊಬ್ಬರಿ ಎಣ್ಣೆಯನ್ನು ಬಳಸಿ ಮುಕ್ಕಳಿಸುವ ಮೂಲಕ ಹಲ್ಲಿನ ಕೂಳೆ ಇಲ್ಲವಾಗುತ್ತದೆ ಮತ್ತು ಬಾವು ಎದುರಾಗಿದ್ದರೆ ಇದು ಶೀಘ್ರವೇ ಇಳಿಯುತ್ತದೆ.

ಚರ್ಮದ ಉರಿತ ಮತ್ತು ಎಕ್ಸಿಮಾ ಗುಣಪಡಿಸುತ್ತದೆ

ಸಂಶೋಧನೆಗಳ ಪ್ರಕಾರ, ಕೊಬ್ಬರಿ ಎಣ್ಣೆಯ ಬಳಕೆಯಿಂದ (ತೇವಕಾರಕವಾಗಿ ಹಚ್ಚಿಕೊಳ್ಳುವ ಮತ್ತು ಆಹಾರದ ರೂಪದಲ್ಲಿ ಸೇವನೆಯಿಂದ) ತ್ವಚೆಯ ಸಾಮಾನ್ಯ ತೊಂದರೆಗಳು ಇಲ್ಲವಾಗುತ್ತವೆ. ಎಕ್ಸಿಮಾ ತೊಂದರೆಯಿಂದ ಬಾಧಿಕ ಕೆಲವು ಮಕ್ಕಳ ಮೇಲೆ ನಡಿಸಿದ ಪ್ರಯೋಗದಲ್ಲಿ 47% ಕ್ಕೂ ಹೆಚ್ಚಿನ ಮಕ್ಕಳಿಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡ ಬಳಿಕ ಶೀಘ್ರವೇ ಎಕ್ಸಿಮಾ ಕಾಯಿಲೆಯಿಂದ ಉಪಶಮನ ದೊರಕಿದೆ.

ಮೆದುಳಿನ ಚಟುವಟಿಕೆಯನ್ನು ಉತ್ತಮಗೊಳಿಸುತ್ತದೆ

ಕೊಬ್ಬರಿ ಎಣ್ಣೆಯನ್ನು ಒಗ್ಗರಣೆ ಅಥವಾ ಇನ್ನಾವುದೇ ರೂಪದಲ್ಲಿ ಸೇವಿಸಿದಾಗ ಇದರಲ್ಲಿರುವ ಎಂಸಿಟಿ ತೈಲ (Medium-chain triglyceride (MCT)ವನ್ನು ನಮ್ಮ ಯಕೃತ್ ಕೀಟೋನ್ಸ್ (ketones) ಗಳನ್ನಾಗಿ ಪರಿವರ್ತಿಸುತ್ತದೆ. ಈ ಕೀಟೋನುಗಳು ನಮ್ಮ ಮೆದುಳಿಗೆ ಇಂಧನವಿದ್ದಂತೆ. ಮೆದುಳಿನ ಕ್ಷಮತೆ ಹೆಚ್ಚಿಸಲು ಅಥವಾ ಮೆದುಳಿನ ತೊಂದರೆಗಳನ್ನು ಸರಿಪಡಿಸಲು ಎಂಸಿಟಿ ತೈಲ ಹೆಚ್ಚು ಪ್ರಭಾವ ಶಾಲಿಯಾಗಿದೆ ಎಂಬುದನ್ನು ಕೆಲವಾರು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ. ವಿಶೇಷವಾಗಿ ಅಲ್ಜೀಮರ್ಸ್ ಕಾಯಿಲೆ ಹಾಗೂ ಅಪಸ್ಮಾರ (epilepsy) ರೋಗಗಳ ಚಿಕಿತ್ಸೆಯಲ್ಲಿ ಈ ತೈಲವನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಇನ್ನೂ ಕೆಲವು ಸಂಶೋಧನೆಗಳ ಮೂಲಕ ದೇಹದಲ್ಲಿ ಕೀಟೋನುಗಳನ್ನು ಹೆಚ್ಚಿಸಬೇಕಾದರೆ ಎಂಸಿಟಿ ತೈಲವನ್ನು ಹೆಚ್ಚಿಸಬೇಕು, ಇದನ್ನು ಸಾಧಿಸಲು ಕೊಬ್ಬರಿ ಎಣ್ಣೆಯನ್ನು ಸೇವಿಸಬೇಕು ಎಂದೂ ಸೂಚಿಸಲಾಗಿದೆ.


ತ್ವಚೆಗೆ ಉತ್ತಮ ತೇವಕಾರಕವಾಗಿದೆ

ನಮ್ಮ ತ್ವಚೆಗೆ ಸತತವಾಗಿ ಆರ್ದ್ರತೆ ದೊರಕುತ್ತಾ ಇರಬೇಕು. ಚರ್ಮದ ಸೂಕ್ಷ್ಮರಂಧ್ರಗಳಿಂದ ಗಾಳಿಯಲ್ಲಿರುವ ತೇವಾಂಶದ ಮೂಲಕ ಈ ಅಂಶವನ್ನು ನಮ್ಮ ತ್ವಚೆ ಹೀರುತ್ತಾ ಇರುತ್ತದೆ. ಆದರೆ ಗಾಳಿ ಶುಷ್ಕವಾದಾಗ (ಅಂದರೆ ಚಳಿಗಾಲದಲ್ಲಿ ನೀರು ಆವಿಯಾಗದೇ ಗಾಳಿಯಲ್ಲಿ ತೇವಾಂಶವೇ ಇಲ್ಲವಾಗುತ್ತದೆ) ಹೀರಿಕೊಳ್ಳಲು ಗಾಳಿಯಲ್ಲಿ ತೇವಾಂಶವೇ ಇಲ್ಲದಿದ್ದರೆ? ಆಗ ತ್ವಚೆ ಆರ್ದ್ರತೆಯ ಕೊರತೆಯಿಂದ ಒಣಗುತ್ತದೆ. ಇದನ್ನೇ ’ಚರ್ಮ ಒಡೆಯುವುದು’ ಎಂದು ಸಾಮಾನ್ಯ ಜನರು ಅರ್ಥೈಸಿಕೊಳ್ಳುತ್ತಾರೆ. ಈ ಸ್ಥಿತಿ ಎದುರಾಗದೇ ಇರಲು ನಿತ್ಯವೂ ಕೊಂಚ ಪ್ರಮಾಣದ ತೇವಕಾರಕ (ಮಾಯಿಶ್ಚರೈಸರ್) ಹಚ್ಚಿಕೊಳ್ಳುತ್ತಾ ಇರಬೇಕು. ನಿಸರ್ಗ ನೀಡಿರುವ ಅತ್ಯುತ್ತಮ ಮಾಯಿಶ್ಚರೈಸರ್ ಎಂದರೆ ಕೊಬ್ಬರಿ ಎಣ್ಣೆ. ವಿಶೇಷವಾಗಿ ಮುಖ, ಕೈ ಮೊಣಕಾಲು, ಮೊಣಕೈಗಳಿಗೆ ಎಣ್ಣೆಯನ್ನು ಕೊಂಚವಾಗಿ ಹಚ್ಚಿ ತೆಳುವಾಗಿ ಸವರಿಕೊಳ್ಳುತ್ತಿ ರಬೇಕು. ಒಂದು ವೇಳೆ ನಿಮ್ಮದು ಎಣ್ಣೆ ಚರ್ಮವಾಗಿದ್ದರೆ ಕೊಬ್ಬರಿ ಎಣ್ಣೆಯ ಹಚ್ಚುವಿಕೆಯಿಂದ ಈ ಎಣ್ಣೆಯ ಅಂಶ ಇನ್ನೂ ಹೆಚ್ಚುವ ಕಾರಣ ಕೊಂಚವೇ ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಬೇಕು. ವಿಶೇಷವಾಗಿ ಹಿಮ್ಮಡಿಗಳಲ್ಲಿ ಬಿರುಕು ಬಂದಿದ್ದರೆ ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ಒಂದು ವೇಳೆ ಈ ಬಿರುಕುಗಳು ತೀರಾ ಆಳದಲ್ಲಿದ್ದು ಒತ್ತಿದಾಗ ಕೊಂಚ ನೋವಾಗು ತ್ತಿದ್ದರೆ ಕೊಬ್ಬರಿ ಎಣ್ಣೆ ಮತ್ತು ಸಮಪ್ರಮಾಣದ ಕರ್ಪೂರವನ್ನು ಪುಡಿಮಾಡಿ ಕರಗಿಸಿದ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಚಿಕ್ಕ ಡಬ್ಬಿಯಲ್ಲಿ ಇಟ್ಟುಕೊಳ್ಳಬೇಕು. ಪ್ರತಿ ರಾತ್ರಿ ಮಲಗುವ ಮುನ್ನ ಇದನ್ನು ಕೊಂಚ ಬಿಸಿ ಮಾಡಿ ಬಿರುಕುಗಳು ಪೂರ್ಣವಾಗಿ ಮುಚ್ಚುವಷ್ಟು ಪ್ರಮಾಣದಲ್ಲಿ ಹಚ್ಚಿಕೊಂಡರೆ ಈ ಬಿರುಕುಗಳು ಶೀಘ್ರವೇ ತುಂಬಿಕೊಳ್ಳತೊಡಗುತ್ತವೆ.


ಕೂದಲು ಉದುರುವುದನ್ನು ತಡೆಯುತ್ತದೆ

ಕೇಶದ ಆರೈಕೆಗೆ ಕೊಬ್ಬರಿ ಎಣ್ಣೆಯಷ್ಟು ಉತ್ತಮ ಎಣ್ಣೆ ಇನ್ನೊಂದಿಲ್ಲ. ಕೇಶತೈಲವಾಗಿ ಇದರ ಬಳಕೆ ಸಾವಿರಾರು ವರ್ಷಗಳಿಂದ ನಮ್ಮ ಭಾರತದಲ್ಲಿ ವ್ಯಾಪಕವಾಗಿದೆ. ಸ್ನಾನದ ಸಮಯದಲ್ಲಿ ಕೂದಲಿಗೆ ಶಾಂಪೂ ಬಳಸುವ ಮುನ್ನ ಒಂದು ಬಾರಿ ಅಥವಾ ಶಾಂಪೂ ಬಳಸಿದ ಬಳಿಕ ಒಂದು ಬಾರಿ ಹಚ್ಚಿಕೊಳ್ಳುವ ಮೂಲಕ ಕೂದಲು ಉದುರುವುದನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಸಂಶೋಧನೆಗಳೇ ಸಾಬೀತುಪಡಿಸಿವೆ. ವಿಶೇಷವಾಗಿ ಘಾಸಿಗೊಂಡ, ಸೀಳಿರುವ, ಸಿಕ್ಕು ಸಿಕ್ಕಾದ ಕೂದಲಿಗೂ ಕೊಬ್ಬರಿ ಎಣ್ಣೆಯನ್ನು ಯಾವುದೇ ಹೆದರಿಕೆಯಿಲ್ಲದೇ ಹಚ್ಚಿಕೊಳ್ಳಬಹುದು. ಇದರಲ್ಲಿರುವ ವಿಶಿಷ್ಟ ಕೊಬ್ಬಿನ ಆಮ್ಲವಾದ ಲಾರಿಕ್ ಆಮ್ಲ ಕೂದಲಿಗೆ ಹೆಚ್ಚಿನ ಪೋಷಣೆ ಒದಗಿಸುತ್ತದೆ ಹಾಗೂ ಕೂದಲು ಸೌಮ್ಯವಾಗಿ, ಸೊಂಪಾಗಿ, ಉದ್ದನೆಯ ಮತ್ತು ಸಿಕ್ಕುಸಿಕ್ಕಿಲ್ಲದಂತೆ ಮಾಡಲು ನೆರವಾಗುತ್ತದೆ.



ದಯವಿಟ್ಟು ಕಲಬೆರಿಕೆ ಎಣ್ಣೆಗಳಿಂದ ದೂರವಿರಿ.

ಆರೋಗ್ಯಕ್ಕೆ ಉತ್ತಮವಾಗಿರುವ ಗಾಣದ ಎಣ್ಣೆ, ಕಡಲೇಕಾಯಿ ಎಣ್ಣೆ ಕೊಬ್ಬರಿ ಎಣ್ಣೆಯನ್ನ ಸೇವಿಸಿ ನಿಮ್ಮ ಆರೋಗ್ಯ ಹಾಗೂ ನಿಮ್ಮ ಕುಟುಂಬದವರ ಆರೋಗ್ಯವನ್ನು ಕಾಪಾಡಿಕೊಳ್ಳಿ.

Comments