ಸನಾತನ ಹಿಂದೂ ಧರ್ಮದಲ್ಲಿ ಪ್ರತಿಯೊಂದು ವ್ರತ ಆಚರಣೆಗೂ ಒಂದೊಂದು ಮಹತ್ವವಿದೆ ಪ್ರತೀ ತಿಂಗಳಲ್ಲಿ ಎರಡು ಬಾರಿ ಸಂಕಷ್ಟ ಚತುರ್ಥಿ ವ್ರತವನ್ನು ಆಚರಿಸಲಾಗುತ್ತದೆ. ಕೃಷ್ಣ ಪಕ್ಷದ ಚತುರ್ಥಿ ತಿಥಿಯನ್ನು ಸಂಕಷ್ಟ ಚತುರ್ಥಿಯೆಂದು ಮತ್ತು ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿಯೆಂದು ಕರೆಯಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಈ ಬಾರಿ ಸಂಕಷ್ಟ ಚತುರ್ಥಿ 2023 ರ ಡಿಸೆಂಬರ್ 30 ರಂದು
ಅದರಲ್ಲೂ ಮಂಗಳವಾರದಂದು ಇದು ಬಂದರೆ ಅಂಗಾರಿಕ ಚತುರ್ಥಿ ಎನ್ನಲಾಗುತ್ತದೆ. ಸಂಸ್ಕೃತದಲ್ಲಿ ಸಂಕಷ್ಟಿ'ಎಂದರೆ ಎಲ್ಲಾ ಸಮಸ್ಯೆಗಳು ಅಥವಾ ಕಠಿಣ ಸಮಯದಿಂದ ಮುಕ್ತಿ ಪಡೆಯುವುದು. ಈ ದಿನದಂದು ಗಣೇಶನನ್ನು ಪೂಜಿಸಿದರೆ ಆಗ ನಿಮಗೆ ಜೀವನದಲ್ಲೂ ಸುಖ ಹಾಗೂ ಸಮೃದ್ಧಿ ಸಿಗುವುದು. ತಮ್ಮ ಸಮಸ್ಯೆಗಳಿಂದ ಮುಕ್ತಿ ನೀಡಲು ಈ ದಿನದಂದು ಜನರು ಉಪವಾಸ ವ್ರತ ಮಾಡುವರು..
ಸಂಕಷ್ಟದ ಅರ್ಥ:
ಬಿಕ್ಕಟ್ಟನ್ನು ಸೋಲಿಸುವ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಸಂಸ್ಕೃತ ಭಾಷೆಯಲ್ಲಿ ಸಂಕಷ್ಟ ಎಂಬ ಪದದ ಅರ್ಥ ಕಷ್ಟದ ಸಮಯಗಳಿಂದ ಮುಕ್ತಿ ನೀಡುವುದು ಎಂಬುದಾಗಿದೆ. ಯಾವುದೇ ರೀತಿಯ ದುಃಖವಿದ್ದರೆ ಅದನ್ನು ಹೋಗಲಾಡಿಸಲು ಈ ಚತುರ್ಥಿಯಂದು ವಿಧಿವತ್ತಾಗಿ ಉಪವಾಸವಿದ್ದು ಗೌರಿಯ ಪುತ್ರನಾದ ಗಣೇಶನನ್ನು ಪೂಜಿಸಬೇಕು. ಈ ದಿನ ಜನರು ಸೂರ್ಯೋದಯದ ಸಮಯದಿಂದ ಚಂದ್ರನ ಉದಯದವರೆಗೆ ಉಪವಾಸ ಮಾಡುತ್ತಾರೆ.
ಸಂಕಷ್ಟ ಮತ್ತು ವಿನಾಯಕ ಚತುರ್ಥಿಯ ವ್ಯತ್ಯಾಸ:
3ಅಮಾವಾಸ್ಯೆಯ ನಂತರ ಬರುವ ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಮತ್ತು ಕೃಷ್ಣ ಪಕ್ಷದಲ್ಲಿ ಹುಣ್ಣಿಮೆಯ ನಂತರ ಬರುವ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಒಂದು ಚತುರ್ಥಿಯು ಹುಣ್ಣಿಮೆಯ ನಂತರ ಬಂದರೆ, ಇನ್ನೊಂದು ಚತುರ್ಥಿಯು ಅಮಾವಾಸ್ಯೆಯ ನಂತರ ಬರುತ್ತದೆ.
ಸಂಕಷ್ಟ ಹರ ಚತುರ್ಥಿಯ ಮಹತ್ವ:
ಸಂಕಷ್ಟ ಚತುರ್ಥಿಯ ಆಚರಣೆಗಳಿಗೆ ಸನಾತನ ಧರ್ಮದಲ್ಲಿ ಎರಡು ಪ್ರಮುಖ ಹಿನ್ನೆಲೆಗಳಿವೆ. ಮೊದಲನೆಯದ್ದು ಚತುರ್ಥಿಯ ದಿನದಂದು ಅಂದರೆ ಯಾವ ದಿನ ಸಂಕಷ್ಟ ಚತುರ್ಥಿಯ ಆಚರಣೆ ನಡೆಸಲಾಗುತ್ತದೆಯೋ ಆ ದಿನದಂದು ಗಣೇಶನನ್ನು ಸರ್ವೋಚ್ಛ ದೇವ ಎಂದು ಘೋಷಿಸಲಾಯಿತು ಎಂಬುದು ಒಂದು ನಂಬಿಕೆಯಾದರೆ, ಈ ದಿನದಂದು ಗಣೇಶ ಸ್ವತಃ ಧರೆಗಿಳಿದು ಭಕ್ತರ ಪ್ರಾರ್ಥನೆಗಳನ್ನು ಆಲಿಸುತ್ತಾನೆ, ಆದ್ದರಿಂದ ಚತುರ್ಥಿಯ ದಿನದಂದು ಪ್ರಾರ್ಥಿಸುವವರ ಸಂಕಷ್ಟಗಳು ಸುಲಭವಾಗಿ ಬಗೆಹರಿಯುತ್ತದೆ ಎಂಬುದು ಮತ್ತೊಂದು ನಂಬಿಕೆಯಾಗಿದೆ.
ಆಚರಣೆ ಹೇಗೆ
ಸಾಧ್ಯವಾದಲ್ಲಿ ಉಪವಾಸ ಮಾಡಬಹುದು. ಸಂಜೆಯ ಸಮಯದಲ್ಲಿ ಸ್ನಾನ ಮಾಡಿ ಗಣಪತಿಯ ಪೂಜೆ ಮಾಡಬೇಕು. ಪೂಜೆಯ ನಂತರ ರಾತ್ರಿ ಚಂದ್ರ ದರ್ಶನ ಮಾಡಿ ಅರ್ಘ್ಯವನ್ನು ಕೊಟ್ಟು, ಹೂವು, ಅಕ್ಷತೆಗಳನ್ನು ಸಲ್ಲಿಸಿ ನಮಸ್ಕರಿಸಬೇಕು.
ಪೂಜೆ ಸಮಾಪ್ತಿಯಾದ ನಂತರ ಕೊನೆಗೆ ಗಣಪತಿಗೆ ನೈವೇದ್ಯವನ್ನು ಅರ್ಪಿಸಿ ಭೋಜನ ಮಾಡಬೇಕು. ಈ ರೀತಿ ಸಂಕಷ್ಟ ಚತುರ್ಥಿಯನ್ನು ಆಚರಿಸುವುದರಿಂದ ವಿಘ್ನಗಳು ದೂರವಾಗಿ, ಮನಸ್ಸಿನ ಇಚ್ಛೆಗಳು ಈಡೇರಿ, ಸಂವೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
ಸಂಕಷ್ಟ ಹರ ವ್ರತದ ಪುರಾಣ ಕಥೆ
ಧರ್ಮರಾಯನಿಗೆ ಸೂತ ಮಹರ್ಷಿಗಳು ತಿಳಿಸಿದ ವ್ರತ ದುರ್ಯೋಧನನ ಕುತಂತ್ರಕ್ಕೆ ಬಲಿಯಾಗಿ ತನ್ನ ರಾಜ್ಯ, ಐಶ್ವರ್ಯ ಎಲ್ಲವನ್ನೂ ಕಳೆದುಕೊಂಡು ತನ್ನ ತಮ್ಮಂದಿರೊಂದಿಗೆ ಕಾಡಿನ ಪಾಲಾಗಿ ದುಃಖದಲ್ಲಿ ಇದ್ದ ಧರ್ಮರಾಯನನ್ನು ಸೂತ ಪುರಾಣಿಕ ಮಹರ್ಷಿಗಳು ಸಮಾಧಾನ ಮಾಡಿದರು. ಆಗ ಧರ್ಮರಾಯನು ಸೂತರ ಬಳಿ ತನ್ನ ಕಷ್ಟಗಳೆಲ್ಲಾಲ್ಲ ಪರಿಹಾರವಾಗಿ ರಾಜ್ಯ ತನಗೆ ಮರಳಿ ಸಿಗಲು ಉತ್ತಮ ವ್ರತ ಪೂಜೆ ಒಂದನ್ನು ತಿಳಿಸಲು ಪ್ರಾರ್ಥಿಸಿದ.
ಆಗ ಪೂಜ್ಯರು ಧರ್ಮರಾಜನಿಗೆ ಸಾಕ್ಷಾತ್ ಪರಶಿವನೇ ಕುಮಾರಸ್ವಾಮಿಗೆ ತಿಳಿಸಿದ ವರಸಿದ್ದಿ ವಿನಾಯಕ ವ್ರತವನ್ನು ಮಾಡಲು ತಿಳಿಸಿದರು. ಅಷ್ಟೇ ಅಲ್ಲ ನಳ ಮಹಾರಾಜನಿಗೆ ದಮಯಂತಿ ಸಿಕ್ಕಿದ್ದು ಹಾಗೂ ಕೃಷ್ಣ ಪರಮಾತ್ಮನಿಗೆ ಶಮಂತಕ ಮಣಿ ಸಹಿತ ಜಾಂಬವತಿ ಲಭಿಸಿದ್ದು ಇದೇ ವ್ರತವನ್ನು ಆಚರಣೆ ಮಾಡಿದ್ದರಿಂದ. ಶ್ರೀರಾಮ, ಭಗೀರಥ ಕೂಡ ಈ ವ್ರತದ ಆಚರಣೆ ಮಾಡಿದ್ದಾರೆ.
ಪೂಜಾ ವಿಧಾನ
ಈ ದಿನ ಬೆಳಿಗ್ಗೆ ಎಳ್ಳನ್ನು ಅರೆದು ನೆಲ್ಲಿಯ ಹಿಟ್ಟಿನೊಂದಿಗೆ ಹಾಲು ಅಥವಾ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿ ಮಂಗಳಸ್ನಾನ ಮಾಡಬೇಕು.
ಸ್ನಾನವಾದ ಮೇಲೆ ಸಂಕಷ್ಟಹರ ಗಣಪತಿ ವ್ರತದ ಸಂಕಲ್ಪ ಮಾಡಬೇಕು. ಈ ದಿನ ಹಗಲು ಪೂರ್ತಿ ಉಪವಾಸ ಇರಬೇಕು. ಅದು ಅಸಾಧ್ಯವಾದರೆ
ಹಾಲು, ಹಣ್ಣು ಸೇವಿಸಬಹುದು.
ಪೂಜೆಯ ಮಾಡುವ ಸ್ಥಳವನ್ನು ಗೋಮಯದಿಂದ ಶುದ್ಧಗೊಳಿಸಿ, ಅಷ್ಟದಳ ಗಣಪತಿಯ ಮಂಡಲವನ್ನು ಬಿಳಿಯ ಮಣ್ಣಿನಿಂದ ಬರೆಯಬೇಕು.
ಅರಿಸಿನ ಕುಂಕುಮಗಳಿಂದ ಮಂಡಲವನ್ನು ಅಲಂಕರಿಸಬೇಕು ಇದರ ಮೇಲೆ ಕಲಶವನ್ನು ಸ್ಥಾಪಿಸುವುದಕ್ಕಾಗಿ ಎರಡು ಅಗ್ರವಿರುವ ಬಾಳೆಯ ಎಲೇ ಮೇಲೆ ಅಕ್ಕಿಯನ್ನು ಹರಡಬೇಕು.
ಅದರ ಮೇಲೆ ಮೃತ್ತಿಕೆ ನಾಣ್ಯ ಮತ್ತು ನೀರು ಹಾಕಿದ ಕಲಶವನ್ನಿಟ್ಟು, ಅದರ ಮೇಲೆ ಮಾವಿನ ಚಿಗುರು ತೆಂಗಿನಕಾಯಿ ನಾಣ್ಯ ಪವಿತ್ರ ಉಪವೀತಗಳನ್ನು ಇಟ್ಟು, ಎದುರಲ್ಲಿ ವೀಳ್ಯದ ಎಲೆ ಅಡಿಕೆ ಬಾಳೆಹಣ್ಣು ಇಡಬೇಕು. ಈ ಕಲಶಕ್ಕೆ ಪೂಜೆ ಮಾಡಿ ಗಣಪತಿಯನ್ನು ಆವಾಹನೆ ಮಾಡಿ, ಷೋಡಶೋಪಚಾರ ಪೂಜೆ ಮಾಡಬೇಕು.
ಆವಾಹನೆ, ಆಸನ, ಪಾದ್ಯ, ಅರ್ಘ್ಯ ,ಆಚಮನ, ಮಧುಪರ್ಕ,ಪುನರಾಚಮನ,ಪಂಚಾಮೃತ, ಶುದ್ಧೋದಕ ಸ್ನಾನ, ವಸ್ತ್ರ ಉಪವೀತ, ಆಭರಣ ಗಂಧ, ಅಕ್ಷತೆ, ಹೂ ಮುಂತಾದ ಉಪಚಾರಗಳಾದ ಮೇಲೆ ದೂರ್ವೆಗಳಿಂದ (ಎಂದರೆ ಗರಿಕೆಯಿಂದ) ಅಷ್ಟೋತ್ತರ ಶತ ನಾಮಾವಳಿ ಅಥವಾ ಗಕಾರ ಸಹಸ್ರನಾಮ ಪೂಜೆ ಮಾಡಬೇಕು.
ಬೇಯಿಸಿದ ಆಹಾರ ಸೇವನೆ ಮಾಡಬಾರದು
ಸಂಕಷ್ಟಿದಿನ ಉಪವಾಸ ಮಾಡುವವರು ಯಾವುದೇ ಕಾರಣಕ್ಕೂ ಬೇಯಿಸಿದ ಆಹಾರ ಪದಾರ್ಥಗಳ ಸೇವನೆ ಮಾಡಬಾರದು..ಆರೋಗ್ಯ ಸಮಸ್ಯೆ ಇದ್ದವರು, ಉಪವಾಸದ ವೇಳೆ ಹಾಲು ಅಥವಾ ಎಳನೀರು ಸೇವನೆ ಮಾಡಬಹುದು.. ಸಂಜೆ ಚಂದ್ರನಿಗೆ ಅರ್ಘ್ಯ ಕೊಟ್ಟ ಬಳಿಕ ಉಪವಾಸ ವೃತ ಮುರಿಯುವುದರಿಂದ ಮಾಡಿದ ಪ್ರಾರ್ಥನೆ ಸಫಲವಾಗುತ್ತದೆ
ಗಣೇಶ ಪುರಾಣದ ಪ್ರಕಾರ, ಸಂಕಷ್ಟ ಚತುರ್ಥಿ ಇಂದ ದೊರೆಯುವ ಫಲಗಳು
ಉಪವಾಸ ಇದ್ದ ಕಾರಣ ದೇಹವನ್ನು ಶುದ್ಧಗೊಳಿಸುತ್ತದೆ.
ಆಸೆಗಳನ್ನು ಈಡೇರಿಸುತ್ತದೆ.
ಗಣಪತಿಯು ವಿಘ್ನ ನಿವಾರಕನಾದ್ದರಿಂದ, ಸಂಕಷ್ಟ ಚತುರ್ಥಿಯನ್ನು ಆಚರಿಸುವವರ ಕಷ್ಟಗಳನ್ನು ನಿವಾರಣೆ ಮಾಡುತ್ತಾನೆ.
ಮಕ್ಕಳಿಲ್ಲದವರಿಗೆ ಮಕ್ಕಳನ್ನು ಕರುಣಿಸುತ್ತಾನೆ.
ಕುಜ ದೋಷದಿಂದ ವಿಮುಕ್ತಿಯನ್ನು ಕೊಡಿಸುತ್ತಾನೆ.
ಅಕಾಲ ಮರಣದಿಂದ ವಿಮುಕ್ತಗೊಳಿಸುತ್ತಾನೆ.
ಕಳೆದು ಹೋದ ಪದಾರ್ಥಗಳನ್ನು ಕೊಡಿಸುತ್ತಾನೆ.
ಇನ್ನು ಈ ವ್ರತಾಚರಣೆಯಿಂದ ಧನಾಕಾಂಕ್ಷಿಗೆ ಧನ, ವಿದ್ಯೆ ಬೇಕಾದವರಿಗೆ ಉತ್ತಮ ವಿದ್ಯೆ, ಆರೋಗ್ಯ ಅವಶ್ಯಕತೆ ಇರುವವರಿಗೆ ಉತ್ತಮ ಆರೋಗ್ಯ... ಹೀಗೆ ಭಕ್ತರ ನಾನಾ ವಿಧ ಬೇಡಿಕೆಗಳನ್ನು ಈಡೇರಿಸುವ ಅತ್ಯುತ್ತಮ ವ್ರತ ಇದಾಗಿದೆ
Comments