ಮಂತ್ರಗಳ ಮಹತ್ವ

ಸನಾತನ ಹಿಂದೂ ಧರ್ಮದಲ್ಲಿ ಮಂತ್ರವನ್ನು ಪಠಿಸುವುದು ಬಹಳ ಮುಖ್ಯ, ಕೇವಲ ಒಂದು ಮಂತ್ರವನ್ನು ಪಠಿಸುವುದರಿಂದ ನಿಮ್ಮ ಜೀವನವನ್ನು ಸುಧಾರಿಸಬಹುದು ಮತ್ತು ನೀವು ಯಾವುದೇ ಮಂತ್ರವನ್ನು  ನಿರಂತರವಾಗಿ  ಪಠಿಸುವುದರಿಂದ  ದೈಹಿಕ ಮಾನಸಿಕ ಸಮಸ್ಯೆಗಳು ದೂರವಾಗುತ್ತದೆ 

ಅನಂತ ಜ್ಞಾನರಾಶಿಯಾದ ವೇದಗಳು ಭಗವಂತನ ನಿ:ಶ್ವಾಸದಿಂದ ಪ್ರಾಪ್ತವಾಗಿವೆ. ಆದ್ದರಿಂದ ಮಂತ್ರಗಳನ್ನು ದೇವತೆಗಳ ಶರೀರವೆಂದು ಹೇಳುವುದು. ಮಂತ್ರಗಳಲ್ಲಿ ಉಕ್ತವಾದ ದೇವತೆಗಳಿಗೂ ಮತ್ತು ಛಂದಸ್ಸುಗಳಿಗೂ ಸಂಬಂಧವಿರುವುದನ್ನು ಋಗ್ವೇದದಲ್ಲಿ ಸ್ಪಷ್ಟಪಡಿಸಿದೆ. 

ಋಗ್ವೇದ 10-130:
"ಅಗ್ನೇ: ಗಾಯತ್ರ್ಯ ಭವತ್ ಸಯುಗ್ವಾ ಉಷ್ನಿಹಯಾ ಸವಿತಾ ಸಂ ಬಭೂವ ಅನುಷ್ಟುಭಾ ಸೋಮ ಉಕ್ಥೈ: ಮಹಸ್ವಾನ್ ಬೃಹಸ್ಪತೇರ್ಬೃಹತೀ ವಾಚಮಾವತ್||4||

ವಿರಾಟ್ ಮಿತ್ರಾವರುಣಯೋರಭಿಶ್ರೀ: ಇಂದ್ರಸ್ಯ ತ್ರಿಷ್ಟುಬಿಹ ಭಾಗೋ ಅಹ್ನ: ವಿಶ್ವಾನ್ ದೇವಾಂಜಗತ್ಯಾ ವಿವೇಶ ತೇನ ಚಾಕ್ಲೃಪ್ರ ಋಷಯೋ ಮನುಷ್ಯಾ:||5||"

ಗಾಯತ್ರಿ = ಅಗ್ನಿಗೆ;
ಬೃಹತೀ = ಬೃಹಸ್ಪತಿಗೆ;
ವಿರಾಟ್ = ಮಿತ್ರಾ, ವರುಣರಿಗೆ;
ತ್ರಿಷ್ಟುಪ್ = ಇಂದ್ರನಿಗೆ;
ಉಷ್ಣಿಕ್ = ಸವಿತೃ;
ಅನುಷ್ಟುಪ್ = ಸೋಮ;
ಜಗತೀ = ವಿಶ್ವೇದೇವತೆಗಳಿಗೆ ಉಪಯೋಗಿಸಲ್ಪಡುತ್ತದೆ. 

ದೇವತೆಗಳೂ ಆಯಾ ಮಂತ್ರಗಳ ಪ್ರತಿಪಾದ್ಯ ವಿಷಯಗಳಾಗಿರುವುದರಿಂದ ಛಂದಸ್ಸಿಗೂ ಅರ್ಥಕ್ಕೂ ಸಂಬಂಧವಿರುವುದು ವೇದ್ಯವಾಗುತ್ತದೆ.
ಆದುದರಿಂದಲೇ ಛಂದೋಬದ್ಧವಾದ ವೇದ ಮಂತ್ರದಿಂದಲೇ ಪೂಜೆ, ಹವ್ಯ, ಕವ್ಯಗಳನ್ನು ಮಾಡಬೇಕು.


ದೇವತೆಗಳು ಮಂತ್ರಸ್ವರೂಪಿಗಳಾದುದರಿಂದ ವಿಹಿತಕರ್ಮಗಳನ್ನು ಮಾಡುವ ಸದಾಚಾರ ಸಂಪನ್ನನಿಗೆ ಮಂತ್ರಸಿದ್ಧಿ ಆಗುತ್ತದೆ. 
ಮಂತ್ರೋಚ್ಛಾರಣ ಮಾಡುವುದರಿಂದ ಮಂಗಲ ವಾತಾವರಣ ನಿರ್ಮಾಣವಾಗುತ್ತದೆ. 


ಸರಿಯಾಗಿ ಉಚ್ಛರಿಸಿದ ಒಂದೇ ಒಂದು ಮಂತ್ರವಾದರೂ ಕಾಮಧೇನುವಿನಂತೆ ಇಷ್ಟಫಲವನ್ನು ಕೊಡುತ್ತದೆಂದು ಹೇಳುತ್ತಾರೆ. 

"ಏಕ: ಶಬ್ಧ: ಸುಷ್ಠು ಪ್ರಯುಕ್ತ: ಸ್ವರ್ಗೇ ಲೋಕೇ ಕಾಮಧುಗ್ಧಮತಿ"

ನಿತ್ಯಾಭ್ಯಾಸವುಳ್ಳವರು ಅಸ್ಖಲಿತವಾದ ಮಂತ್ರೋಚ್ಛಾರ ಮಾಡಿದರೆ, ಆ ಮಂತ್ರಸಿದ್ಧಿಯಿಂದ ಬೇಕಾದ್ದನ್ನು ಪಡೆಬಹುದು. 

ಆವಾಹಿತ ದೇವತೆಯ ಮಂತ್ರೋಚ್ಛಾರದಿಂದ ಆ ದೇವತೆಯ ಸಾನ್ನಿಧ್ಯವುಂಟಾಗುತ್ತದೆ. 

ಮಂತ್ರಶಕ್ತಿಯಿಂದ ಯಾವುದೇ ಕಾರ್ಯವನ್ನಾದರೂ ಕೈಗೂಡಿಸಬಹು

 ಮಂತ್ರ ಪಠಣ ಏಕೆ 

ಪ್ರತಿನಿತ್ಯ ವೇದ ಮಂತ್ರ ಪಠಣದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಇದು ಕೇವಲ ಧಾರ್ಮಿಕ ಅಥವಾ ದೈವಿಕ ಮಹತ್ವವನ್ನು ಮಾತ್ರ ಪಡೆದಿಲ್ಲ. ಬದಲಿಗೆ ಶರೀರದ ತೇಜೋಶಕ್ತಿಯನ್ನು ಹೆಚ್ಚಿಸಲು ಧ್ವನಿ, ಶ್ವಾಸ ಮತ್ತು ಲಯಬದ್ಧತೆಯಿಂದ ಪದಗಳನ್ನು ಸ್ಪಷ್ಟವಾಗಿ ಉಚ್ಛರಿಸುವ ಮೂಲಕ ಸಾಧ್ಯ. ಲವಲವಿಕೆಯ ಜೀವನಶೈಲಿಗೆ 'ಓಂಕಾರ ಮಂತ್ರ ಪಠಿಸಿ'

ಮಂತ್ರಗಳ ಪಠಣದಿಂದ ಮನೋವೃತ್ತಿ ಹಾಗೂ ಶಾರೀರಿಕವಾಗಿ ಎರಡೂ ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಮಂತ್ರಗಳನ್ನು ಹೇಗೆ ಪಠಿಸಬೇಕು ಎಂಬುದನ್ನು ವಿವರಿಸಲಾಗಿದೆ.

ಮಂತ್ರಗಳನ್ನು ಮೂಲತಃ ವೇದಗಳಲ್ಲಿ ಬರೆಯಲಾಗಿದ್ದು ಪ್ರತಿ ಮಂತ್ರವೂ 24 ಉಚ್ಛಾರಗಳನ್ನು ಹೊಂದಿದೆ. ಪ್ರತಿ ಉಚ್ಛಾರವೂ ದೇಹದ ಒಂದಲ್ಲಾ ಒಂದು ರೀತಿಯಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಚೇತೋಹಾರಿಯಾಗಿದೆ, ಮುಂದೆ ಓದಿ...

ಪಠಣದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
ಕೆಲವು ಮಂತ್ರಗಳ ಪಠಣ ಕಷ್ಟಕರವಾಗಿದ್ದು ಇದನ್ನು ಪಠಿಸಲು ನಾಲಿಗೆಗೆ ಹೆಚ್ಚಿನ ಒತ್ತಡ ನೀಡಬೇಕಾಗುತ್ತದೆ. ಇದರೊಂದಿಗೆ ಧ್ವನಿಪೆಟ್ಟಿಗೆ, ತುಟಿಗಳು ಮತ್ತು ಧ್ವನಿ ಹೊರಡಿಸಲು ಅಗತ್ಯವಾದ ಇತರ ಅಂಗಗಳಿಗೂ ಹೆಚ್ಚಿನ ಒತ್ತಡ ಬೀಳುತ್ತದೆ. ಮಂತ್ರಪಠನಣದ ಮೂಲಕ ಉಂಟಾಗುವ ಕಂಪನ ಹೈಪೋಥಲಮಸ್ ಎಂಬ ಗ್ರಂಥಿಯನ್ನು ಪ್ರಚೋದಿಸುತ್ತದೆ.

ಈ ಪ್ರಚೋದನೆಯಿಂದ ಸ್ರವಿಸುವ ಹಾರ್ಮೋನುಗಳು ದೇಹದ ಹಲವು ಕಾರ್ಯಗಳಿಗೆ ಅಗತ್ಯವಾಗಿದ್ದು ರೋಗ ನಿರೋಧಕ ಶಕ್ತಿಯೂ ಇದರಲ್ಲೊಂದಾಗಿದೆ. ಮನಸ್ಸನ್ನು ಸಂತೋಷಕರವಾಗಿರಿಸಲು ಅಗತ್ಯವಿರುವ ಹಾರ್ಮೋನುಗಳೂ ಬಿಡುಗಡೆಯಾಗುತ್ತವೆ. ಆದ್ದರಿಂದ ಮಂತ್ರೋಚ್ಛಾರಣೆಯ ಬಳಿಕ ಒಂದು ರೀತಿಯ ಆಹ್ಲಾದತೆ, ತನ್ಮಯತೆ ಮತ್ತು ಪರವಶತೆಯನ್ನು ಅನುಭವಿಸಬಹುದು. ಮನ ಆನಂದದಿಂದ ಇದ್ದಷ್ಟೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಆರೋಗ್ಯ ಇನ್ನಷ್ಟು ಉತ್ತಮವಾಗುತ್ತದೆ.

ಮನಸ್ಸು ನಿರಾಳವಾಗುತ್ತದೆ

ಮನಸ್ಸು ಉದ್ವೇಗಗೊಂಡಿದ್ದಾಗ ಮನಸ್ಸಿನ ಚಿತ್ತವನ್ನು ಬೇರೆಡೆಗೆ ಹೊರಳಿಸಿ ಎಂದು ಮನಃಶಾಸ್ತ್ರಜ್ಞರು ಸಲಹೆ ನೀಡುತ್ತಾರೆ. ಆದರೆ ಇದು ಹೇಳಿದಷ್ಟು ಸುಲಭವಾಗಿ ಸಾಧಿಸಲು ಸಾಧ್ಯವಿಲ್ಲ. ಆದರೆ ಮಂತ್ರಗಳನ್ನು ಪಠಿಸಿದಾಗ ಕೆಲವು ಹಾರ್ಮೋನುಗಳು ಬಿಡುಗಡೆಯಾಗಿ ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ತನ್ಮೂಲಕ ದೇಹವನ್ನು ಸಡಿಲಗೊಳಿಸಿ ನಿರಾಳತೆ ಸಾಧ್ಯವಾಗುತ್ತದೆ.

ಬಳಿಕ ತಣ್ಣನೆಯ ಮನಸ್ಸಿನಿಂದ ಸಮಸ್ಯೆಯನ್ನು ಅವಲೋಕಿಸಿ ಉತ್ತಮವಾದ ನಿರ್ಧಾರ ತಳೆಯಲು ಸಾಧ್ಯವಾಗುತ್ತದೆ. ಈ ವಿಧಾನ ಒಂದು ತರಹ ಟ್ರಾಂಕ್ವಿಲೈಸರ್ ನಂತೆ ಕೆಲಸ ಮಾಡುತ್ತದೆ.

ಚಕ್ರಗಳನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ
ನಮ್ಮ ದೇಹದಲ್ಲಿ ಹಲವು ಶಕ್ತಿಕೇಂದ್ರಗಳಿವೆ. ಇವನ್ನು ಚಕ್ರಗಳು ಎಂದು ಕರೆಯಲಾಗುತ್ತದೆ. ದೇಹದ ಸಮರ್ಪಕ ಕಾರ್ಯನಿರ್ವಹಣೆಗಾಗಿ ಈ ಚಕ್ರಗಳಿಂದ ಸೂಕ್ತ ಪ್ರಮಾಣದ ಶಕ್ತಿ ಪ್ರವಹಿಸುತ್ತಾ ಇರಬೇಕು. ಒಂದು ವೇಳೆ ಈ ಶಕ್ತಿಗಳ ಪ್ರಮಾಣದಲ್ಲಿ ಏರುಪೇರಾದರೆ ದೇಹದ ಕಾರ್ಯನಿರ್ವಹಣೆಯೂ ಏರುಪೇರಾಗುತ್ತದೆ.
ಇದರಿಂದ ಮಾನಸಿಕ ಮತ್ತು ದೈಹಿಕ ತೊಂದರೆಗಳು ಎದುರಾಗುತ್ತವೆ. ಮಂತ್ರಪಠಣದಿಂದ ಈ ಚಕ್ರಗಳ ಶಕ್ತಿಗಳು ಮೊದಲಿನ ಸ್ಥಿತಿಗೆ ಬರಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ದೇಹ ಕಾಯಿಲೆಯಿಲ್ಲದ ಉತ್ತಮ ಆರೋಗ್ಯವನ್ನು ಹೊಂದುತ್ತದೆ.

ಏಕಾಗ್ರತೆ ಹೆಚ್ಚಿಸುತ್ತದೆ ಹಾಗೂ ಕಲಿಯುವಿಕೆಯನ್ನು ಸುಲಭವಾಗಿಸುತ್ತದೆ

ಒಂದು ಹೊತ್ತಿನಲ್ಲಿ ಒಂದು ಕೆಲಸವನ್ನು ಮಾತ್ರ ಮಾಡಿ ಎಂದು ಸುಭಾಷಿತವೊಂದು ಹೇಳುತ್ತದೆ. ಒಂದು ಕಾಲದಲ್ಲಿ ಒಂದು ಕೆಲಸದತ್ತ ತಮ್ಮ ಪೂರ್ಣಪ್ರಮಾಣದ ಗಮನವನ್ನು ಹರಿಸುವುದಕ್ಕೇ ಏಕಾಗ್ರತೆ ಎಂದು ಕರೆಯುತ್ತಾರೆ. ಮಂತ್ರಪಠಣದಿಂದ ಏಕಾಗ್ರತೆ ಸಾಧಿಸುವುದು ಸುಲಭವಾಗುತ್ತದೆ.

ಏಕೆಂದರೆ ಮಂತ್ರಪಠಣ ಸಮರ್ಪಕವಾಗಲು ಏಕಾಗ್ರತೆ ಅತ್ಯಗತ್ಯವಾಗಿದ್ದು ಮಂತ್ರಪಠಣ ಸಾಧ್ಯವಾದರೆ ಬೇರೆಲ್ಲಾ ಕೆಲಸಗಳಿಗೂ ಏಕಾಗ್ರತೆ ಸಾಧಿಸುವುದು ಸುಲಭವಾಗುತ್ತದೆ. ಇದರಿಂದಾಗಿ ಹೊಸ ವಿಷಯಗಳನ್ನು ಕಲಿಯುವುದು ಸುಲಭವಾಗುತ್ತದೆ. ಜಾಣ್ಮೆ, ಸ್ಮರಣಶಕ್ತಿ, ಮೇಧಾವಿತನ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ.

ಹೃದಯದ ಕ್ಷಮತೆ ಹೆಚ್ಚುತ್ತದೆ

ಮಂತ್ರಪಠಣದ ಮೂಲಕ ವ್ಯಗ್ಯಗೊಂಡಿದ್ದ ಮೆದುಳು ಅತಿ ಕ್ಷಿಪ್ರವಾಗಿ ನಿರಾಳವಾಗುತ್ತದೆ ಹಾಗೂ ಉಸಿರಾಟ ಸಹಾ ಸರಾಗಗೊಳ್ಳುತ್ತದೆ. ವ್ಯಗ್ರಗೊಂಡಿದ್ದ ಸಮಯದಲ್ಲಿ ಮೆದುಳು ಅಪಾರವಾದ ಪ್ರಮಾಣದ ರಕ್ತವನ್ನು ಬೇಡುತ್ತದೆ. ಇದು ಹೃದಯದ ಮೇಲೆ ಹೆಚ್ಚಿನ ಒತ್ತಡ ಹೇರುತ್ತದೆ.

ಕೆಟ್ಟ ಸುದ್ದಿ ಕೇಳಿದ ಸಮಯದಲ್ಲಿ ಹೃದಯಾಘಾತವಾಗಿ ಮರಣಗಳು ಸಂಭವಿಸುವುದೂ ಇದೇ ಕಾರಣಕ್ಕೆ. ಮಂತ್ರಪಠಣದ ಮೂಲಕ ಮೆದುಳನ್ನು ನಿರಾಳಗೊಳಿಸಿ ಹೃದಯದ ಮೇಲೆ ಬೀಳುವ ಒತ್ತಡವನ್ನು ಕಡಿಮೆಯಾಗಿಸಿ ಆಯಸ್ಸು ಹೆಚ್ಚಿಸಬಹುದು.

ಮಾನಸಿಕ ದುಗುಡವನ್ನು ಕಡಿಮೆಯಾಗಿಸುತ್ತದೆ

ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡದ ಕಾರಣದಿಂದಾಗಿ ಎದುರಾಗುವ ಉದ್ವೇಗ, ದುಗುಡಗಳನ್ನೂ ಮಂತ್ರಪಠಣದಿಂದ ಕಡಿಮೆಯಾಗಿಸಿಕೊಳ್ಳಬಹುದು. ನಿಯಮಿತವಾಗಿ ಮಂತ್ರವನ್ನು ಪಠಿಸುತ್ತಾ ಬರುವ ಮೂಲಕ ಒತ್ತಡ ಮೂಲಕ ಮೆದುಳಿಗೆ ಮತ್ತು ದೇಹಕ್ಕೆ ಆಗಿದ್ದ ಘಾಸಿಯನ್ನು ಕಡಿಮೆಗೊಳಿಸಿ ಮೊದಲಿನ ಆರೋಗ್ಯವನ್ನು ಮತ್ತೊಮ್ಮೆ ಪಡೆಯಬಹುದು.

ಖಿನ್ನತೆಯನ್ನು ನಿವಾರಿಸುತ್ತದೆ

ಬದುಕಿನ ಸೋಲು ಅಥವಾ ಈಡೇರದ ಯಾವುದೋ ಬಯಕೆ ಹೆಚ್ಚಿನವರಲ್ಲಿ ಖಿನ್ನತೆಯನ್ನು ಉಂಟುಮಾಡುತ್ತದೆ. ಇದರಿಂದಾಗಿ ಮಾನಸಿಕ ಒತ್ತಡ, ಹಸಿವಾಗದಿರುವುದು, ನಿರುತ್ಸಾಹ ಮೊದಲಾದವು ಕಂಡುಬರುತ್ತದೆ. ಈ ಹೊತ್ತಿನಲ್ಲಿ ಮಂತ್ರ ಪಠಿಸುವ ಮೂಲಕ ಮೆದುಳಿಗೆ ಲಭ್ಯವಾಗುವ ಕಂಪನಗಳು ಸಕಾರಾತ್ಮಕ ಭಾವನೆಯನ್ನು ಬಡಿದೆಬ್ಬಿಸುತ್ತವೆ.

ಸೋಲನ್ನು ಎದುರಿಸುವ, ಇನ್ನಷ್ಟು ಹೆಚ್ಚು ಸಾಮರ್ಥ್ಯ ಪಡೆದುಕೊಳ್ಳುವತ್ತ ಚಿತ್ತ ಹರಿಯುತ್ತದೆ. ಈ ಕಂಪನಗಳಿಂದ ಬಿಡುಗಡೆಯಾಗುವ ಹಾರ್ಮೋನುಗಳ ಪ್ರಭಾವದಿಂದ ಇದು ಸಾಧ್ಯವಾಗುತ್ತದೆ.

ತೇಜಸ್ಸನ್ನು ಹೆಚ್ಚಿಸುತ್ತದೆ

ಮಂತ್ರೋಚ್ಛಾರಣೆಯ ಕಾಲದಲ್ಲಿ ಉಂಟಾಗುವ ಕಂಪನಗಳು ಮುಖದ ಕೆಲವು ಪ್ರಮುಖ ಭಾಗಗಳಲ್ಲಿ ಹೆಚ್ಚಿನ ಪ್ರಚೋದನೆ ಮೂಡಿಸಿ ಈ ಭಾಗಗಳಲ್ಲಿ ರಕ್ತಪರಿಚಲನೆ ಹೆಚ್ಚುವಂತೆ ಮಾಡುತ್ತದೆ. ಪರಿಣಾಮವಾಗಿ ಇಲ್ಲಿನ ವಿಷಕಾರಿ ವಸ್ತುಗಳು ನಿವಾರಣೆಯಾಗುತ್ತದೆ ಮತ್ತು ಆ ಸ್ಥಳದಲ್ಲಿ ಹೊಸ ರಕ್ತ ಮತ್ತು ಶಕ್ತಿ ತುಂಬಿಕೊಳ್ಳುತ್ತದೆ. ಮಂತ್ರೋಚ್ಛಾರಣೆಯ ಸಮಯದಲ್ಲಿ ಲಯಬದ್ದವಾಗಿ ಪಠಿಸಬೇಕಾದ ಅನಿವಾರ್ಯತೆ ಚರ್ಮದ ಜೀವಕೋಶಗಳಿಗೆ ನಿಯಮಿತವಾಗಿ ಆಮ್ಲಜನಕವನ್ನು ಪೂರೈಸುತ್ತದೆ. ತನ್ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ತೇಜಸ್ಸು ಸಹಾ ಹೆಚ್ಚುತ್ತದೆ.

ಅಸ್ತಮಾ ತೊಂದರೆಯನ್ನು ತಕ್ಕಮಟ್ಟಿಗೆ ನಿವಾರಿಸುತ್ತದೆ

ಶ್ವಾಸನಾಳಗಳು ಕಿರಿದಾಗಿದ್ದು ಇದರ ಮೂಲಕ ಎದುರಾಗುವ ಅಸ್ತಮಾ ರೋಗಕ್ಕೂ ಮಂತ್ರಗಳ ಪಠಣ ತಕ್ಕಮಟ್ಟಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಮಂತ್ರೋಚ್ಛಾರಣೆಯ ಸಮಯದಲ್ಲಿ ಶ್ವಾಸಕೋಶದಿಂದ ಹೊರಟ ವಾಯು ಕೊಂಚ ಹೆಚ್ಚಿನ ಒತ್ತಡದಲ್ಲಿ ಶ್ವಾಸನಾಳಗಳ ಮೂಲಕ ಹೊರಹೋಗಬೇಕಾದ ಅನಿವಾರ್ಯತೆ ಇರುವ ಕಾರಣ ಸಂಕುಚಿತಗೊಂಡಿದ್ದ ಶ್ವಾಸನಾಳಗಳು ಒಳಗಿನಿಂದ ಹಿಗ್ಗಲು ಸಾಧ್ಯವಾಗುತ್ತದೆ. ಇದು ತಕ್ಕಮಟ್ಟಿಗೆ ಅಸ್ತಮಾ ರೋಗವನ್ನು ನಿವಾರಿಸಲು ನೆರವಾಗುತ್ತದೆ.


ಸಂಗ್ರಹಿಸಿದ ವಿಷಯ

Comments