ಅನಾದಿಕಾಲದಿಂದಲೂ ನಮ್ಮ ಸನಾತನ ಧರ್ಮದಲ್ಲಿ ಪೂಜೆಯ ಸಮಯದಲ್ಲಿ ದೇವಾಲಯಗಳಲ್ಲಿ ಘಂಟಾನಾದ ಮೊಳಗಿಸುವ ಪದ್ಧತಿ ಇದೆ. ದೇವರ ದರ್ಶನ ಪಡೆಯುವ ಮೊದಲು ಗರ್ಭಗುಡಿಯ ಮುಂಭಾಗದಲ್ಲಿರುವ ಘಂಟೆಯನ್ನು ಹೊಡೆದು ದೇವರಿಗೆ ಕೈಮುಗಿಯುವುದು ದೇವಾಲಯ ಪ್ರವೇಶಿಸುವ ಭಕ್ತರು ಘಂಟೆ ಬಾರಿಸಿದಾಗ ಲೋಹದಲ್ಲಿ ಉದ್ಭವಿಸುವ ಘಂಟೆಯ ನಾದವು ಅತ್ಯಂತ ಶುಭ ಸೂಚಕ. ಈ ಶಬ್ದವು ನಮ್ಮ ಸೂಪ್ತ ಮನಸ್ಸಿನಲ್ಲಿ ಕೇಂದ್ರೀಕರಿಸುವ ಶಕ್ತಿಯನ್ನು ಜಾಗ್ರತಗೊಳಿಸುತ್ತವೆ. ಜೊತೆಗೆ ನಮ್ಮ ಚಂಚಲ ಹಾಗೂ ಕ್ರಿಯಾಶೀಲ ಮನಸ್ಸನ್ನು ಒಮ್ಮೆ ಕೇಂದ್ರೀಕರಿಸಲು ಸಹಾಯ ಮಾಡುವುದು. ಮುಂಜಾನೆಯ ವೇಳೆ ಘಂಟೆಯ ಶಬ್ದವು ಆಧ್ಯಾತ್ಮಿಕವಾಗಿ ಹೆಚ್ಚಿನ ಶಕ್ತಿಯನ್ನು ನೀಡುವುದು. ಜೊತೆಗೆ ಸಂಜೆಯ ತನಕ ನಮ್ಮಲ್ಲಿ ಉಂಟಾಗುವ ಒತ್ತಡ ಹಾಗೂ ಭಾವನಾತ್ಮಕ ಹಿಡಿತವನ್ನು ಸಾಧಿಸುವ ಶಕ್ತಿಯನ್ನು ಕ್ರಿಯಾಶೀಲಗೊಳಿಸುವುದು ಎಂದು ಹೇಳಲಾಗುವುದು.
ದೇವಾಲಯದ ಆಗಮ ಶಾಸ್ತ್ರದ ಪ್ರಕಾರ , ಗಂಟೆಯನ್ನು 5 ಲೋಹಗಳಿಂದ ಮಾಡಬೇಕು - ತಾಮ್ರ, ಬೆಳ್ಳಿ, ಚಿನ್ನ, ಕಬ್ಬಿಣ ಮತ್ತು ಹಿತ್ತಾಳೆ ಮತ್ತು ಈ ಐದು ಲೋಹಗಳು ಪಂಚಭೂತಗಳಿಗೆ ಸಮ ಎಂದು ಹೇಳುತ್ತಾರೆ.
ವೇದಗಳಲ್ಲಿ ತಿಳಿಸಿರುವಂತೆ ಗಂಟೆಯನ್ನು 8, 16, 24 ಮತ್ತು 32 ಬಾರಿ ಬಾರಿಸಬೇಕು.
ಗಂಟೆಗಳಿಂದ ಹೊರಗೆ ಬರುವ ಶಬ್ದ ಓಂಕಾರ ರೂಪವಾಗಿದೆ
ಓಂಕಾರವು ಇಡೀ ಜಗತ್ತನ್ನ ಆವರಿಸಿಕೊಂಡಿದೆ . ದೇವರ ಸ್ವರವಾಗಿ ಓಂಕಾರವನ್ನು ಹೊರಡಿಸಲಾಗುತ್ತದೆ.
ಗಂಟೆ ನಾದದ ಶಬ್ದದಿಂದ ಮನೆಗಳಲ್ಲಿ ಆಧ್ಯಾತ್ಮಿಕ ಶಕ್ತಿ ಹಾಗೂ ದೈವಿಕ ಶಕ್ತಿ ಜಾಗೃತವಾಗುತ್ತದೆ. ಯಾವುದೇ ದೃಷ್ಟಿಗಳು ಮನೆಯ ಒಳಗೆ ಪ್ರವೇಶ ಮಾಡುವುದಿಲ್ಲ. ಹಾಗೂ ಪೂಜೆ ಮಾಡುವ ವ್ಯಕ್ತಿಗೆ ಗಂಟೆನಾದದಿಂದ ಮನಸ್ಸು ಶಾಂತವಾಗುತ್ತದೆ ಹಾಗೂ ಪೂಜೆ ಪೂಜೆ ಮಾಡುವ ವ್ಯಕ್ತಿಯು ಏಕಾಗ್ರತೆಯಿಂದ ಪೂಜೆ ಮಾಡುತ್ತಾನೆ.
ಘಂಟೆಯನಾದ ಶುಭಪ್ರದವಾದದ್ದು , ಎಲ್ಲಿ ಘಂಟೆಯನಾದವಿರುತ್ತೊ ಅಲ್ಲಿ ಪ್ರೇತವಾಗಲಿ , ರಾಕ್ಷಸರಾಗಲಿ ವಾಸವಿರಲ್ಲ ಅದಕ್ಕಾಗಿಯೇ ಮನೆಯಲ್ಲಿ ಪ್ರತಿದಿನ ಪೂಜೆ ಮಾಡುವಾಗ ಘಂಟೆಗೆ ಪೂಜೆ ಮಾಡಿ ನಂತರ ಪೂಜೆ ಶುರು ಮಾಡುತ್ತೇವೆ ಶುಭಕಾರ್ಯಗಳಿಗೆ ಘಂಟೆಬಾರಿಸುವ ನಾವು , ಶ್ರಾದ್ಧದ ದಿನ ಘಂಟೆಯನ್ನು ಬಾರಿಸಲ್ಲ ಕಾರಣ ಪಿತೃಗಳು ಒಳಬರಲ್ಲ , ಶ್ರಾದ್ಧ ಮುಗಿದ ಮೇಲೆ ಸಂಜೆ ದೇವರಿಗೆ ಘಂಟೆ ಬಾರಿಸಿ ಮಂಗಳಾರುತಿ ಮಾಡುತ್ತೇವೆ ಅದಕ್ಕಾಗಿಯೇ ಘಂಟಾನಾದಕ್ಕೆ ಬಹಳ ಮಹತ್ವ..
ಶ್ಲೋಕ.
ಆಗಮಾರ್ಥಂತು ದೇವಾನಾಂ ಗಮಾನಾರ್ಥಂತು ರಾಕ್ಷಸಾಂ ಕುರ್ವೇಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ.
ಅರ್ಥ
ದೇವರ ಆಗಮನಕ್ಕಾಗಿ ರಕ್ಕಸರ ನಿರ್ಗಮನಕ್ಕಾಗಿ ದೇವಸ್ಥಾನದ ಲಾಂಛನವಾದ ಘಂಟಾಧ್ವನಿಯನ್ನು ಮಾಡುತ್ತೇನೆ)
ಗಂಟೆಯ ನಾಲಗೆಯಲ್ಲಿ ಸರಸ್ವತಿಯೂ ಮುಖದಲ್ಲಿ ಬ್ರಹ್ಮನೂ ಹೊಟ್ಟೆಯಲ್ಲಿ ರುದ್ರನೂ ದಂಡದಲ್ಲಿ ವಾಸುಕಿಯೂ ತುದಿಯಲ್ಲಿ ಚಕ್ರವೂ ಅಧಿದೇವತೆಗಳಾಗಿ ನೆಲಸಿದ್ದಾರೆ. ಘಂಟಾಸ್ವನವನ್ನು ನಾದಬ್ರಹ್ಮವೆಂದು ಸಂಬೋಧಿಸಲಾಗಿದೆ.
ಇವರನ್ನು ಪೂಜಿಸಿ ಬಳಿಕ ಗಂಟೆಯನ್ನು ಹೊಡೆಯಬೇಕು. ಉಪಯೋಗಿಸುವಾತ ತನ್ನ ನಾಭಿಯ ಕೆಳಗೆ ಬರುವಂತೆ ಗಂಟೆಯನ್ನು ಹಿಡಿದುಕೊಂಡು ಹೊಡೆಯಬಾರದು. ಗಂಟೆಯ ಧ್ವನಿಯಲ್ಲಿ ಒಡಕಾಗಲಿ ಮರ್ಮರ ಘರ್ಘರ ಶಬ್ದಗಳಾಗಲಿ ಇರಬಾರದು.
ಗಂಟೆಯಮೇಲೆ ಹನುಮಂತ ಚಕ್ರ ಗರುಡ ವೃಷಭಶೂಲ ಕಮಲ ಇತ್ಯಾದಿ ಚಿಹ್ನೆಗಳಿರುವುದುಂಟು.
ಯಾವೊಂದು ಶುಭಕಾರ್ಯವನ್ನಾಗಲೀ ಘಂಟಾನಾದವಿಲ್ಲದೆ ಪ್ರಾರಂಭಿಸುವಂತಿಲ್ಲ.
ಪದ್ಮಪುರಾಣದಲ್ಲಿ ಸರ್ವವಾದ್ಯಮಯಿ ಘಂಟಾವಾದ್ಯಭಾವೇ ನಿಯೋಜಯೇತ್ ಎಂದು ತಿಳಿಸಿರುವಂತೆ ಗಂಟೆ ಸರ್ವಮಂಗಳ ವಾದ್ಯಗಳ ಪ್ರತೀಕವಾಗಿದೆ. ಸ್ಕಾಂದ ಪುರಾಣದಲ್ಲಿ ಘಂಟಾನಾದೇನ ದೇವೇಶಃ ಪ್ರೀತೋಭವತಿ ಕೇಶವಃ. ಎಂದಿದೆ.
!!ನಾಗಾರಿ ಚಿಹ್ನಿತಾ ಘಂಟಾ ರಥಾಂಗೇನಾ ಸಮನ್ವಿತಾ ವಾದನಾತ್ ಕುರುತೇನಾಶಂ ಜನ್ಮಮೃತ್ಯು ಭಯಾ ನಿ ಚ!!
ಎಂಬ ಆರ್ಯೋಕ್ತಿಯೂ ಇದೆ. ಇದರಂತೆ ಭಗವಂತನ ನಿತ್ಯ ಕಿಂಕರನಾದ ಗರುಡ ಇಲ್ಲವೆ ಚಕ್ರದಿಂದ ಅಂಕಿತವಾದ ಗಂಟೆಯ ನಾದದಿಂದ ಭಗವಂತ ಪ್ರೀತನಾಗುತ್ತಾನಾಗಿ ಜನ್ಮಮೃತ್ಯು ಭಯಗಳು ತಪ್ಪುತ್ತವೆ.
ದೇವೀ ಮಹಾತ್ಮ್ಯದಲ್ಲಿ ಹಿನಸ್ತಿ ದೈತ್ಯತೇಜಾಂಸಿ ಸ್ವನೇನಾಪೂರ್ಯ ಯಾ ಜಗತ್ ಸಾ ಘಂಟಾಪಾತುನೋ ದೇವೀ ಪಾಪೇಭ್ಯೋಃ ಸುತಾನಿವ ಎಂದಿದೆ. ಇದರಂತೆ ಘಂಟಾನಾದದಿಂದ ಮನಸ್ಸಿನಲ್ಲಿರುವ ರಾಕ್ಷಸೀಭಾವನೆಗಳು ದೂರೀಕೃತವಾಗಿ ದೈವೀಭಾವನೆಗಳು ಅವಿರ್ಭವಿಸುತ್ತವೆ.
ಓಂಕಾರನಾದ ಸಹಿತ ಘಂಟಾಧ್ವನಿರೂಪ ವರ್ಣಶಕ್ತಿಯಿಂದ ವರ್ಣಘಟಕಮಂತ್ರಗಳೂ ತನ್ನಿಷ್ಟ ದೇವತೆಗಳು ಎಚ್ಚರಗೊಳ್ಳುವುದರಿಂದ ದೇವಪೂಜಾರಂಭಕಾಲದಲ್ಲಿ ಗಂಟೆಯನ್ನು ಪೂಜಿಸಿ ಬಳಿಕ ಧ್ವನಿ ಮಾಡಬೇಕು. ಈ ಕಾರಣದಿಂದ ಗಂಟೆಯನ್ನು ಮಂತ್ರಮಾತಾ ಎಂದು ಕರೆಯುತ್ತಾರೆ.
ಸಚ್ಚಿದಾನಂದ ಸಾಕ್ಷಾತ್ಕಾರಕ್ಕೆ ಮೂಲವಾದ ನಾದ ತತ್ತ್ವದ ಬಾಹ್ಯಪ್ರಯೋಗವಾಗಿ ಗಂಟೆ ಬಳಕೆಗೆ ಬಂದಿತೆಂದೂ ಕ್ರಮೇಣ ದೇವತಾಲಾಂಛನವೆಂಬ ಗೌರವವನ್ನು ಹೊಂದಿ ಪೂಜಾರ್ಹವಾಯಿತೆಂದೂ ಹೇಳಲಾಗಿದೆ. ಘಂಟನಾದವಿಲ್ಲದ ಪೂಜೆ ಇಲ್ಲ. ಪೂಜಾಕಾಲವನ್ನು ಬಿಟ್ಟು ಇತರ ಕಾಲಗಳಲ್ಲಿ ಘಂಟಾನಾದವಿಲ್ಲ.
ದೇವಾರ್ಚನೆ ಅವಾಹನೆ ಧೂಪ ದೀಪ ಅಘ್ರ್ಯ ನೈವೇದ್ಯ ಜಪ ಸ್ತುತ್ಯವಸಾನ ಪೂರ್ಣಾಹುತಿ ವಿಷ್ವಕ್ಸೇನಾರ್ಚನೆ ಗಣಪತಿ ಪೂಜೆ ಬಲಿಪ್ರದಾನ-ಈ ಕಾಲಗಳಲ್ಲಿ ಘಂಟಾನಾದ ಮಾಡಬೇಕು. ಗಂಟಾನಾದ ಎಚ್ಚರಿಸುವುದು ಮಾತ್ರವಲ್ಲದೆ ಸರ್ವವಿಘ್ನಗಳನ್ನೂ ನಾಶಪಡಿಸಿ ಮಂಗಳವನ್ನುಂಟುಮಾಡುತ್ತದೆ.
ಗಂಟೆಯನ್ನು ಆಗಮೋಕ್ತಪ್ರಕಾರದಲ್ಲಿ ಪ್ರತಿಷ್ಠೆ ಮಾಡಿ ಬಳಿಕ ಉಪಯೋಗಿಸಬೇಕು. ಅಸಂಸ್ಕøತ ಗಂಟೆಯನ್ನು ಬಾರಿಸುವುದರಿಂದ ಪೂಜೆ ನಿಷ್ಫಲವಾಗುತ್ತದೆ. ಗಂಟೆಯನ್ನು ಬಾರಿಸುವುದಕ್ಕೆ ಮೊದಲು
ಶ್ಲೋಕ.ಆಗಮಾರ್ಥಂತು ದೇವಾನಾಂ ಗಮಾನಾರ್ಥಂತು ರಾಕ್ಷಸಾಂ ಕುರ್ವೇಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ.
ಎಂದು ಹೇಳಿ ಬಳಿಕ ಘಂಟಾನಾದ ಮಾಡುವುದು ಇಂದಿಗೂ ರೂಢಿಯಲ್ಲಿದೆ.
ಘಂಟೆಯ ತುದಿಯಲ್ಲಿ ಬ್ರಹ್ಮನೂ, ಘಂಟೆಯಲ್ಲಿರುವ ಕಮಲದ ಮೊಗ್ಗಿನಲ್ಲಿ ರುದ್ರನೂ, ದಂಡದಲ್ಲಿ ವಾಸುಕಿಯೂ, ಸ್ವರದಲ್ಲಿ ಸರಸ್ವತಿಯೂ, ನಾದದಲ್ಲಿ ಪ್ರಜಾಪತಿಯೂ ಅಭಿಮಾನಿದೇವತೆಗಳಾಗಿರುವರು. ಪೂಜಾ ಸಮಯದಲ್ಲಿ ಬ್ರಹ್ಮಣೇ ನಮಃ, ಮಹಾನಾಗಾಯ ನಮಃ, ಸರಸ್ವತ್ಯೈ ನಮಃ ಹಾಗೂ ಪ್ರಜಾಪತಯೇ ನಮಃ ಎಂಬ ಮಂತ್ರಗಳಿಂದ ಪ್ರತ್ಯೇಕವಾಗಿ ಒಂದೊಂದು ಪುಷ್ಪಗಳನ್ನು ಸಮರ್ಪಿಸಬೇಕು ಘಂಟೆಗೆ ಸಮರ್ಪಿಸಬೇಕು.
ಘಂಟಾಗ್ರೇ ಬ್ರಹ್ಮದೈವತ್ಯಂ ಮುಕುಲೇ ರುದ್ರದೈವತಂ |
ಸೂತ್ರಾಣಾಂ ಚ ಮಹಾನಾಗಂ ಸ್ವರಂ ಚೈವ ಸರಸ್ವತೀಂ ||
ನಾದಂ ಪ್ರಜಾಪತಿಂ ವಿದ್ಯಾತ್ ಘಂಟಾನಾಮಧಿದೇವತಾಃ || ಪರಮಪುರುಷ ಸಂಹಿತಾ
ವೈಷ್ಣವ ದೇವಾಲಯಗಳಲ್ಲಿ ಮಹಾನಿವೇದನ ಕಾಲದಲ್ಲಿ ಬಾರಿಸುವುದಕ್ಕಾಗಿಯೇ ಪ್ರತ್ಯೇಕವಾದ ಒಂದು ದೊಡ್ಡ ಗಂಟೆ ಇರುತ್ತದೆ. ಕೆಲವಡೆ ದೇವಮಂದಿರದ ಬಾಗಿಲಿಗೆ ಚಿಕ್ಕ ಚಿಕ್ಕ ಗಂಟೆಗಳನ್ನು ಜೋಡಿಸಿರುವುದುಂಟು. ಕ್ರೈಸ್ತರ ಪ್ರಾರ್ಥನಾ ಮಂದಿರಗಳಲ್ಲಿ ಒಂದು ದೊಡ್ಡ ಗಂಟೆ ಇರುತ್ತದೆ. ಪ್ರಾರ್ಥನೆಗೆ ಮೊದಲು ಎಲ್ಲರೂ ಮಂದಿರಕ್ಕೆ ಬಂದು ಸೇರಲು ಅನುಕೂಲಿಸುವಂತೆ ಈ ಗಂಟೆಯನ್ನು ಬಾರಿಸುತ್ತಾರೆ. ಹಿಂದೂ ದೇವಾಲಯಗಳಲ್ಲೂ ದೇವರ ಮುಂಭಾಗದಲ್ಲಿ ದೊಡ್ಡ ಗಂಟೆಗಳನ್ನು ಕಟ್ಟಿರುತ್ತಾರೆ. ಭಕ್ತರು ದೇವರ ದರ್ಶನಕ್ಕೆ ಹೋದಾಗ ಗಂಟೆ ಬಾರಿಸಿ ಬಳಿಕ ನಮಸ್ಕರಿಸುತ್ತಾರೆ.
ಗಂಟೆಯ ನಾದದ ಹಿಂದಿರುವ ವೈಜ್ಞಾನಿಕ ರಹಸ್ಯ
ಗಂಟೆಯನ್ನು ಸಾಮಾನ್ಯ ಲೋಹದಿಂದ ತಯಾರಿಸುವುದಿಲ್ಲ. ಲೋಹಗಳಾದ ಕಾಡ್ಮಿಮಮ್, ಝಿಂಕ್, ಲೀಡ್, ನಿಕ್ಕಲ್, ಕ್ರೋಮಿಯಮ್ ಹಾಗೂ ಮ್ಯಾಂಗನೀಸ್‌ನ ಮಿಶ್ರಣದಿಂದ ಗಂಟೆಯನ್ನು ತಯಾರಿಸಲಾಗುತ್ತದೆ. ಇದನ್ನು ತಯಾರಿಸಲು ಕಾರಣವೂ ಇದೆ. ಗಂಟೆಯಲ್ಲಿ ಬೆರೆತಿರುವ ಲೋಹವನ್ನು ಮಿಶ್ರ ಮಾಡಿರುವ ವಿಧಾನ ನಿಜಕ್ಕೂ ಅದ್ಭುತವಾಗಿದೆ. ಗಂಟೆಯನ್ನು ಬಡಿದಾಗ, ನಿಮ್ಮ ಮೆದುಳಿನ ಎಡ ಹಾಗೂ ಬಲ ಮಗ್ಗುಲಲ್ಲಿ ಒಂದು ಸ್ವರವನ್ನು ಹೊರಡಿಸುತ್ತದೆ. ಆದ್ದರಿಂದಲೇ ನೀವು ಗಂಟೆಯನ್ನು ಹೊಡೆದ ಕ್ಷಣ ಏಳು ಸೆಕೆಂಡುಗಳಷ್ಟು ಕಾಲ ದೀರ್ಘ ಹಾಗೂ ಮೊನಚಾದ ಧ್ವನಿಯನ್ನು ಉತ್ಪಾದಿಸುತ್ತದೆ. ಇದರ ಪ್ರತಿ ಧ್ವನಿಯು ನಿಮ್ಮ ದೇಹದ ಚಕ್ರಗಳನ್ನು ಹೋಗಿ ತಲುಪುತ್ತದೆ. ಗಂಟೆಯನ್ನು ನೀವು ಬಡಿದಾಗ ನಿಮ್ಮ ಆತ್ಮವನ್ನು ಎಚ್ಚರಿಸಿದ ಅನುಭವ ನಿಮಗುಂಟಾಗುತ್ತದೆ.
Comments