ಪುರಾಣಗಳಲ್ಲಿ ತಿಳಿಸಿರುವ ಛೋಟಾ ಚಾರ್ ಧಾಮ್ ಕ್ಷೇತ್ರಗಳು

ಸನಾತನ ಧರ್ಮದಲ್ಲಿ ಮೋಕ್ಷದಾಯಕ ಕ್ಷೇತ್ರಗಳಲ್ಲಿ ಚಾರ್ ಧಾಮ್ ಕೂಡ ಒಂದು
4 ಪುಣ್ಯಕ್ಷೇತ್ರಗಳ ಯಾತ್ರೆಯನ್ನು ಚಾರ್ ಧಾಮ ಯಾತ್ರೆ ಎಂದೂ ಕರೆಯುತ್ತಾರೆ , ಇದು ಪೂಜ್ಯ ಮತ್ತು ಪುರಾತನ ತೀರ್ಥಯಾತ್ರೆಗಳಲ್ಲಿ ಒಂದು. ಇದು ಉತ್ತರಾಖಂಡದ ಹಿಮಾಲಯದ ತಪಲಿನಲ್ಲಿ ನೆಲೆಗೊಂಡಿರುವ ನಾಲ್ಕು ಪವಿತ್ರ ಪುಣ್ಯಕ್ಷೇತ್ರ ಈ ದೇವಾಲಯಗಳು ಯಮುನೋತ್ರಿ , ಗಂಗೋತ್ರಿ , ಕೇದಾರನಾಥ ಮತ್ತು ಬದರಿನಾಥ್ , ಈ ನಾಲ್ಕು ಪುಣ್ಯಕ್ಷೇತ್ರಗಳನ್ನೇ ವೇದಗಳಲ್ಲಿ ಹಾಗೂ ಪುರಾಣಗಳಲ್ಲಿ ಚಾರ್ ಧಮ್ ಎಂದು ಕರೆಯುತ್ತಾರೆ.
ಈ ಚಾರ್ ಧಾಮ್ ಯಾತ್ರೆ ಮಾಡುವುದರಿಂದ ಈ ಜನ್ಮದಲ್ಲಿ ಹಾಗೂ ಹಿಂದಿನ ಜನ್ಮದಲ್ಲಿ ಮಾಡಿದ ಎಲ್ಲಾ ಪಾಪಗಳು ನಾಶವಾಗುತ್ತದೆ. ಆತ್ಮ ಸಾಕ್ಷಾತ್ಕಾರ ಆಗುತ್ತದೆ. ಆಧ್ಯಾತ್ಮದ ಅನುಭವವಾಗುತ್ತದೆ ಜನನ ಮರಣ ಚಕ್ರದಿಂದ ಮುಕ್ತಿ ದೊರೆಯುತ್ತದೆ ಹಾಗೂ ಅಂತಿಮವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ.


ಯಮುನೋತ್ರಿಯ
ಯಮುನೋತ್ರಿಯ ಎತ್ತರವು ಸಮುದ್ರ ಮಟ್ಟದಿಂದ 3235 ಮೀ. ಈ ಸ್ಥಳದಲ್ಲಿಯೇ ತಾಯಿ ಯಮುನಾ ದೇವಾಲಯ ಇರುವುದು.
ಅಸಿತ್ ಮುನಿಗಳು ಈ ಸ್ಥಳದಲ್ಲಿ ತಪಸ್ಸನ್ನು ಮಾಡಿದ್ದರು ಎಂದು ಪುರಾಣಗಳಲ್ಲಿ ಗ್ರಂಥಗಳಲ್ಲಿ ತಿಳಿಸಲಾಗಿದೆ. 
 ಬ್ರಹ್ಮಾಂಡ ಪುರಾಣದಲ್ಲಿ, ಯಮುನೋತ್ರಿಯನ್ನು ಪವಿತ್ರ ಸ್ಥಳವೆಂದು ವಿವರಿಸಲಾಗಿದೆ. ಇದರೊಂದಿಗೆ ಯಮುನಾ ನದಿಯ ಬಗ್ಗೆ ವಿವರವಾಗಿ ಹೇಳಲಾಗಿದೆ.
ಮಹಾಭಾರತದ ಕಾಲದಲ್ಲಿ ಪಾಂಡವರು ಯಮುನೋತ್ರಿಯಿಂದ ಚಾರ್ ಧಾಮ್ ಯಾತ್ರೆಯನ್ನು ಆರಂಭಿಸಿದರು. ಇದರ ನಂತರ ಅವರು ಕ್ರಮವಾಗಿ ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥಗಳಿಗೆ ಪ್ರಯಾಣಿಸಿದರು. ಅಂದಿನಿಂದ ಚಾರ್ ಧಾಮ್ ಯಾತ್ರೆಯನ್ನು ಯಮುನೋತ್ರಿಯಿಂದ ಪ್ರಾರಂಭಿಸಲಾಗುತ್ತದೆ.

ಯಮುನೋತ್ರಿ ಅಂಗಳದಲ್ಲಿ ಕಂಬವನ್ನು ಸ್ಥಾಪಿಸಲಾಗಿದೆ. ಈ ಬೃಹತ್ ಸ್ತಂಭವನ್ನು ದಿವ್ಯಶಿಲಾ ಎಂದು ಕರೆಯಲಾಗುತ್ತದೆ. ಈ ದೇವಾಲಯದ ಅಂಗಳದಲ್ಲಿ ಕಾಲ್ನಡಿಗೆಯ ಮೂಲಕವೇ ತಲುಪಬೇಕು.

 ಯಮುನೋತ್ರಿಯಿಂದ ದೇವಾಲಯದ ಅಂತರವು 14 ಕಿ.ಮೀ. ಅದೇ ಸಮಯದಲ್ಲಿ, ಈಗ ಭಕ್ತರು ವಾಹನದ ಮೂಲಕ ಜಾಂಕಿ ಚಟ್ಟಿಗೆ ಮೂಲಕವೂ ತಲುಪಬಹುದು.

 ಋಷಿಕೇಶದಿಂದ ಯಮುನೋತ್ರಿ ದೂರ 200 ಕಿ.ಮೀ. ಮಾತಾ ಯಮುನಾ ದೇವಾಲಯವನ್ನು ತೆಹ್ರಿ ಗರ್ವಾಲ್‌ನ ಮಹಾರಾಜ ಪ್ರತಾಪ್ ಷಾ ನಿರ್ಮಿಸಿದರು.

 ಆಧ್ಯಾತ್ಮ ಸಾಧಕರಿಗೆ ಯಮುನೋತ್ರಿ ಪವಿತ್ರ ಸ್ಥಳವಾಗಿದ್ದರೆ, ಚಾರಣಿಗರಿಗೆ ರೋಮಾಂಚಕಾರಿ ಅನುಭವ ನೀಡುವ ಸ್ಥಳವಾಗಿದೆ. ಯಮುನೋತ್ರಿ ತಲುಪುವ ಮಾರ್ಗ ಸುಲಭವಲ್ಲ. ಈ ಹಿನ್ನಲೆ ವರ್ಷದಲ್ಲಿ ಎರಡು ಅವಧಿಗೆ ಮಾತ್ರ ಈ ಸ್ಥಳ ಯಾತ್ರಿಕರಿಗೆ ಮುಕ್ತವಾಗಿರುತ್ತದೆ.



ಗಂಗೋತ್ರಿ
ಉತ್ತರಾಖಂಡ ರಾಜ್ಯದ ಉತ್ತರಕಾಶಿ ಎಂಬ ಜಿಲ್ಲೆಯಲ್ಲಿ ನೆಲೆಸಿರುವ ಗಂಗೋತ್ರಿ ಕ್ಷೇತ್ರವು ಸನಾತನ ಹಿಂದೂ ಧರ್ಮದಲ್ಲಿ ಮಹತ್ವ ಪಡೆದಿರುವ ಸ್ಥಳವಾಗಿದೆ. "ಗಂಗಾ ಸ್ನಾನಂ ತುಂಗಾ ಪಾನಂ" ಎಂದು ಹೇಳುವಂತೆ ಮಿಂದಾಗ ಸರ್ವ ಪಾಪಗಳನ್ನು ನಾಶ ಮಾಡುವ ಗಂಗಾ ಮಹಾನದಿಯ ಉಗಮ ಸ್ಥಳ ಹೊಂದಿರುವ ಪವಿತ್ರ ಕ್ಷೇತ್ರವಾಗಿದೆ ಗಂಗೋತ್ರಿ.

ಗಂಗಾ ದೇವಿಗೆ ಮುಡಿಪಾದ ಅತಿ ಪ್ರಸಿದ್ಧ ದೇವಾಲಯವಿರುವ ಗಂಗೋತ್ರಿ, ಹಿಂದೂಗಳ ಪಾಲಿಗೆ ಪವಿತ್ರವಾಗಿರುವ ನಾಲ್ಕು ಯಾತ್ರಾ ಧಾಮಗಳ ಪೈಕಿ ಒಂದಾಗಿದೆ. ಸಮುದ್ರ ಮಟ್ಟದಿಂದ 3048 ಮೀ ಗಳಷ್ಟು ಎತ್ತರದಲ್ಲಿರುವ ಈ ಕ್ಷೇತ್ರವು ಭಾಗೀರಥಿ ನದಿಯ ದಂಡೆಯ ಮೇಲೆ ನೆಲೆಸಿದ್ದು ಗಂಗೆಯ ಉಗಮ ಸ್ಥಾನವಾಗಿದೆ.

ಭಾಗೀರಥಿ ನದಿಯ ಉಗಮ ಸ್ಥಾನವಾದ ಗೌಮುಖ (ಗೋಮುಖ) ಹಿಮನದಿಯು ಗಂಗೋತ್ರಿಯಿಂದ ಕೇವಲ 18 ಕಿ.ಮೀ ದೂರದಲ್ಲಿದ್ದು, ನಡಿಗೆಯಿಂದ ಮಾತ್ರವೆ ಇಲ್ಲಿ ತಲುಪಬಹುದಾಗಿದೆ.

ಪ್ರಸ್ತುತ, ಗಂಗೋತ್ರಿಯಲ್ಲಿರುವ ಗಂಗೆಯ ಅತಿ ಪ್ರಸಿದ್ಧವಾದ ದೇವಾಲಯವನ್ನು ಮೂಲವಾಗಿ 18 ನೇಯ ಶತಮಾನದಲ್ಲಿ ಗೋರ್ಖಾ ಜನರಲ್ ಆಗಿದ್ದ ಅಮರ ಸಿಂಗ್ ಥಾಪಾ ಎಂಬುವವರು ಕಟ್ಟಿಸಿದ್ದಾರೆ.

ಗಂಗೋತ್ರಿಯ ಪರಿಸರವು ಸಾಕಷ್ಟು ತಂಪುಮಯವಾಗಿದ್ದು, ಮನಮೋಹಕವಾದ ವಾತಾವರಣದ ನೋಟವನ್ನು ಕಲ್ಪಿಸುತ್ತದೆ. ಅಲ್ಲದೆ ಭಾಗೀರಥಿ ನದಿಯ ರಭಸವಾದ ಹರಿವು ಮೈಮನಗಳಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾಗೀರಥಿ ಹಾಗೂ ಗಂಗೆಯು ಒಂದೆ ನದಿಯಾಗಿದೆ. ಗೌಮುಖದಲ್ಲಿ ಉದ್ಭವಗೊಳ್ಳುವ ನದಿಯು ಭಾಗೀರಥಿ ಎಂಬ ಹೆಸರನ್ನು ಹೊಂದಿದ್ದು, ದೇವಪ್ರಯಾಗ್ ನಂತರದಿಂದ ಗಂಗೆಯಾಗಿ ಹರಿಯುತ್ತಾಳೆ.

ಸಾಮಾನ್ಯವಾಗಿ ಗಂಗೋತ್ರಿಯು ಮೇ ತಿಂಗಳಿನಿಂದ ದೀಪಾವಳಿ ಹಬ್ಬದ ಸಂದರ್ಭದವರೆಗೆ ದರುಶನಾರ್ಥ ಮುಕ್ತವಾಗಿರುತ್ತದೆ. ನಂತರದಲ್ಲಿ ಈ ಪ್ರದೇಶದಲ್ಲಿ ಅತಿಯಾದ ಹಿಮಪಾತವಾಗುವುದರಿಂದ ಇದು ಮುಚ್ಚಲ್ಪಡುತ್ತದೆ.

ಭಾಗೀರಥಿ ನದಿಯ ಉಗಮ ಸ್ಥಾನವಾದ ಗೌಮುಖ ಹಿಮನದಿ ಗಂಗೋತ್ರಿಯಿಂದ 18 ಕಿ.ಮೀ ದೂರದಲ್ಲಿದೆ. ಗೋವು (ಆಕಳು) ಹಾಗೂ ಮುಖ ಎಂಬ್ ಪದಗಳ ಜೋಡಣೆಯಿಂದ ಇದಕ್ಕೆ ಗೋಮುಖ/ಗೌಮುಖ ಎಂಬ ಹೆಸರು ಬಂದಿದೆ. ಈ ಹಿಮನದಿಯನ್ನು ಅತಿ ಸೂಕ್ಷ್ಮವಾಗಿ ಗಮನಿಸಿದಾಗ ಇದು ಆಕಳು ಮುಖದ ಆಕಾರದಲ್ಲಿರುವುದು ಕಂಡುಬರುತ್ತದೆ. ಅಂತೆಯೆ ಇದಕ್ಕೆ ಈ ಹೆಸರು ಬಂದಿದೆ.

ಗಂಗೋತ್ರಿಯಿಂದ ಗೌಮುಖದವರೆಗೆ ಯಾತ್ರೆ ಮಾಡಬೇಕಾಗಿದ್ದು, ಅತಿ ರೋಮಾಂಚಕರ ಎನ್ನಬಹುದಾದ ಅನುಭೂತಿ ಈ ಯಾತ್ರೆಯಲ್ಲಿ ಕಲ್ಪಿಸುತ್ತದೆ. ಆದರೆ ಗಮನದಲ್ಲಿರಲಿ ಈ ಯಾತ್ರೆ ಕಲ್ಲು ಬಂಡೆಗಳ ಮೂಲಕ ಸಾಗಿ ಹೋಗುತ್ತದೆ ಅಲ್ಲದೆ ವಾತಾವರಣವೂ ತಂಪುಮಯವಾಗಿರುತ್ತದೆ. ಅಲ್ಲಲ್ಲಿ ನೀರಿನ ಹರಿವುಗಳಿದ್ದು ಚಿಕ್ಕ ಪುಟ್ಟ ಕಟ್ಟಿಗೆಯ ಸೇತುವೆಗಳ ಮೂಲಕ ಸಾಗಬೇಕಾಗುತ್ತದೆ.

ಯಾತ್ರೆ ಭೋಜಬಾಸಾ ಎಂಬ್ ಸ್ಥಳದ ಮೂಲಕ ಸಾಗುತ್ತದೆ. ಇಲ್ಲಿ ಪ್ರಕೃತಿಯ ಅನಂತ ವೈಭವದ ನೋಟವನ್ನು ಸವಿಯಬಹುದು. ಅಲ್ಲದೆ ಇಲ್ಲಿ ಪ್ರವಾಸಿ ಗೃಹವೂ ಕೂಡ ದೊರೆಯುತ್ತದೆ.

ಗೌಮುಖ ಹಿಮನದಿಯು ಸಮುದ್ರ ಮಟ್ಟದಿಂದ ಸುಮಾರು 3848 ಮೀ ಗಳಷ್ಟು ಅಗಾಧವಾದ ಎತ್ತರದಲ್ಲಿ ನೆಲೆಸಿದ್ದು ಇಲ್ಲಿಗೆ ಸಾಗುವಾಗ ಹಿಮಾಲಯದ ಅತಿ ರೋಮಾಂಚನಕಾರಿ ಶಿಖರಗಳ ಸುಂದರ ದರುಶನ ಪಡೆಯುತ್ತ ಸಾಗಬಹುದು.

ಶಿವಲಿಂಗ, ಥಲಯಸಾಗರ, ಮೇರು ಪರ್ವತ, ಭಾಗೀರಥಿ 3 ಮೂಮ್ತಾದ ಹಿಮಾಲಯ ಪರ್ವತ ಶ್ರೇಣಿಯ ಅದ್ಭುತ ಶೃಂಗಗಳನ್ನು ಗೌಮುಖಕ್ಕೆ ಯಾತ್ರೆ ಮೂಲಕ ಸಾಗುವಾಗ ಕಾಣಬಹುದಾಗಿದೆ. ಪ್ರಸ್ತುತ ಗೌಮುಖ ಹಿಮನದಿಯ ಕರಗುವಿಕೆ ಶೀಘ್ರಗೊಳ್ಳುತ್ತಿದ್ದು ಉತ್ತರಾಖಂಡ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರತಿ ದಿನ ಕೇವಲ 100 ಜನರು ಮಾತ್ರ ಯಾತ್ರೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಇನ್ನು ಗೌಮುಖದ ಕುರಿತು ಹೇಳಬೇಕೆಂದರೆ ಇದರ ಹೆಸರನ್ನು ಪುರಾಣಗಳಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲದೆ ಹಿಂದೂಗಳ ಪಾಲಿಗೆ ಪವಿತ್ರವಾಗಿರುವ, ಕಾಮಧೇನು ಎಂದು ಕರೆಯಲಾಗುವ ಗೋವಿನ ಮುಖದ ಆಕಾರದಲ್ಲಿ ಈ ಹಿಮನದಿಯಿರುವುದರಿಂದ ವಿಶೇಷವಾದ ಮಹತ್ವವನ್ನು ಈ ಸ್ಥಳ ಪಡೆದಿದೆ.


ಕೇದರನಾಥ್
ಕೇದಾರನಾಥ ಉತ್ತರಾಖಂಡ ರಾಜ್ಯದ ಅತ್ಯಂತ ಪವಿತ್ರವಾದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಹಿಂದೂಗಳ ತೀರ್ಥಯಾತ್ರಾ ಸ್ಥಳವಾಗಿರುವ ಕೇದಾರನಾಥ ಚೋಟಾ ಚಾರ್‌ ಧಾಮ್‌ ಯಾತ್ರೆಯ ಒಂದು ಭಾಗವಾಗಿದೆ. ಮಹಾಶಿವನನ್ನು ಇಲ್ಲಿ ಕೇದರನಾಥ ಎಂದು ಕರೆಯುತ್ತಾರೆ.

ನಮ್ಮ ಭಾರತದಲ್ಲಿರುವ 12 ಶಿವನ ಜ್ಯೋತಿರ್ಲಿಂಗಗಳಲ್ಲಿ ಕೇದಾರನಾಥ ಪ್ರಮುಖವಾದುದು. ಈ ಕಾರಣದಿಂದಲೇ ಹಿಂದೂಗಳು ಜೀವನದಲ್ಲಿ ಒಮ್ಮೆಯಾದರೂ ಸಂದರ್ಶಿಸಬೇಕು ಎಂದು ಬಯಸುತ್ತಾರೆ. ಪುರಾಣಗಳ ಪ್ರಕಾರ, ಕೇದಾರನಾಥ ದೇವಾಲಯವನ್ನು 8 ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಕೇದಾರನಾಥ ದೇವಾಲಯ, ಸೋನಪ್ರಯಾಗ, ವಾಸುಕಿ ತಾಲ್, ಶ್ರೀ ಶಂಕರಾಚಾರ್ಯ ಸಮಾಧಿ, ಭೈರವನಾಥ ದೇವಾಲಯ, ಚಂದ್ರಶಿಲಾ ಸೇರಿದಂತೆ ಇನ್ನು ಸಾಕಷ್ಟು ಪವಿತ್ರವಾದ ಸ್ಥಳಗಳು ಇಲ್ಲಿವೆ.

ಅಷ್ಟಕ್ಕೂ ಈ ಕೇದಾರನಾಥ ಯಾತ್ರೆ ಕೈಗೊಳ್ಳುವ ಮೂಲಕ ಏನನ್ನು ಪಡೆಯಬಹುದು? ಯಾಕೆ ಮಾಡಬೇಕು ಎಂಬುದಕ್ಕೆ ಇಲ್ಲಿದೆ ಉತ್ತರ. ಹೌದು, ಈ ಪವಿತ್ರವಾದ ಜ್ಯೋತಿರ್ಲಿಂಗವನ್ನು ದರ್ಶಿಸಿದರೆ ಮೋಕ್ಷವನ್ನು ಪಡೆಯಲು ಸಹಾಯವಾಗುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಪಾಪಗಳು ತೊಲಗುತ್ತವೆಯಂತೆ. ದಂತಕಥೆಗಳ ಪ್ರಕಾರ, ಪಾಂಡವರು ಐದು ಸ್ಥಳಗಳಲ್ಲಿ ದೇವಾಲಯಗಳನ್ನು ನಿರ್ಮಿಸಿದರು. ಅವುಗಳನ್ನು ಪಂಚ ಕೇದಾರಗಳು ಎಂದೇ ಕರೆಯುತ್ತಾರೆ. ಅವುಗಳಲ್ಲಿ ಈ ಕೇದಾರನಾಥವು ಒಂದು.

ಕೇದಾರನಾಥವು ತನ್ನ ರಮಣೀಯವಾದ ವಾತಾವರಣದಿಂದ ಹೆಸರುವಾಸಿಯಾಗಿದೆ. ಹೇಳಿ-ಕೇಳಿ ಉತ್ತರಾಖಂಡ, ಮಂಜಿನ ಹೊದಿಕೆಯುಳ್ಳ ಬೆಟ್ಟಗಳು, ಚುಮು ಚುಮು ಚಳಿ, ಉಸಿರುಕಟ್ಟುವ ಆಳವಾದ ಕಣಿವೆಗಳಿಂದ ಕೂಡಿದೆ.

ಹಿಮಾಲಯ ಪರ್ವತ ಶ್ರೇಣಿಯ ಅಪೂರ್ವವಾದ ಸೊಬಗು ಹಾಗು ನದಿಗಳು ಕೇದಾರನಾಥದ ಪ್ರಕೃತಿಯ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತವೆ. ಉತ್ಸಾಹಿ ಸಾಹಸಿಗಳನ್ನು ಕೈಬೀಸಿ ಕರೆಯುವ ಈ ಸ್ಥಳವು ನೆಮ್ಮದಿಯನ್ನು ಉಂಟು ಮಾಡುವ ವಾತಾವರಣವನ್ನು ಹೊಂದಿದೆ.
ಉತ್ತರಾಖಂಡ ಸರ್ಕಾರವು ವರ್ಷದ 12 ತಿಂಗಳಲ್ಲಿ ಕೇವಲ 6 ತಿಂಗಳು ಮಾತ್ರ 4 ಧಾಮಗಳನ್ನು ತೆರೆಯುತ್ತದೆ. ಈ ಸಮಯದಲ್ಲಿ ಲಕ್ಷಾಂತರ ಯಾತ್ರಿಕರು ಪುಣ್ಯಕ್ಷೇತ್ರವನ್ನು ಸಂದರ್ಶಿಸುತ್ತಾರೆ. ಮುಖ್ಯವಾಗಿ ಚಳಿಗಾಲದ ತಿಂಗಳುಗಳಲ್ಲಿ ಭಾರೀ ಹಿಮಪಾತದಿಂದಾಗಿ ಕೇದಾರನಾಥ ದೇವಾಲಯವು ಮುಚ್ಚಿರುತ್ತದೆ. ಏಪ್ರಿಲ್ ಅಂತ್ಯದಿಂದ ನವೆಂಬರ್ ಆರಂಭದವರೆಗೆ ಮಾತ್ರ ಭಕ್ತರಿಗೆ ತೆರೆದಿರುತ್ತದೆ. ಇನ್ನು, ಮಾನ್ಸುನ್‌ ಕೇದಾರನಾಥಕ್ಕೆ ಹೋಗುವುದು ಉತ್ತಮವಲ್ಲ ಎಂದು ಶಿಫಾರಸ್ಸು ಮಾಡಲಾಗುತ್ತದೆ.


ಬದರಿನಾಥ್
ಸನಾತನ ಹಿಂದು ಧರ್ಮದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಒಮ್ಮೆಯಾದರೂ ತಮ್ಮ ಜೀವನದಲ್ಲಿ ಬದರಿನಾಥ ಧಾಮಕ್ಕೆ ಭೇಟಿ ನೀಡಬೇಕೆಂಬ ಆಸೆ ಇದ್ದೇ ಇರುತ್ತದೆ. ಬದರಿನಾಥವು ನಾಲ್ಕು ಪವಿತ್ರ ಯಾತ್ರಾಧಾಮಗಳಲ್ಲಿ ಒಂದಾಗಿದೆ. ಮತ್ತು ಇದನ್ನು ಶ್ರೀ ಮಹಾ ವಿಷ್ಣುವಿಗೆ ಪ್ರಮುಖ ದೇಗುಲ . ಬದರಿನಾಥ ಧಾಮವನ್ನು ಭಗವಾನ್ ವಿಷ್ಣುವಿನ 24 ಅವತಾರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇದು ನರ ಮತ್ತು ನಾರಾಯಣ ಋಷಿಗಳ ತಪೋಭೂಮಿ ಆಗಿದೆ. ಪುರಾಣಗಳ ನಂಬಿಕೆಗಳ ಪ್ರಕಾರ, ನಾರಾಯಣನು ಈ ಸ್ಥಳದಲ್ಲಿ ನರನ ಜೊತೆ ತಪಸ್ಸು ಮಾಡಿದನು. ಎಂದು ಹೇಳುತ್ತಾರೆ ಹಾಗೆ ಈ ನರ ನಾರಾಯಣರೇ ಕೃಷ್ಣ ಅರ್ಜುನರು ಎಂದು ಹೇಳುತ್ತಾರೆ. 

ಪ್ರತಿ ವರ್ಷ ಬದರಿನಾಥ ಬಾಗಿಲುಗಳನ್ನು ಆರು ತಿಂಗಳ ಕಾಲ ಭಕ್ತರಿಗೆ ದರ್ಶನಕ್ಕೆ ಮುಚ್ಚಲಾಗುತ್ತದೆ. ನಂಬಿಕೆಗಳ ಪ್ರಕಾರ, ಬದರಿನಾಥವನ್ನು ಬ್ರಹ್ಮಾಂಡದ ಎಂಟನೇ ವೈಕುಂಠ ಎಂದು ಕರೆಯಲಾಗುತ್ತದೆ, ಇಲ್ಲಿ ಭಗವಾನ್‌ ವಿಷ್ಣು 6 ತಿಂಗಳುಗಳ ಕಾಲ ನಿದ್ರಿಸಿದರೆ, ಇನ್ನು 6 ತಿಂಗಳುಗಳ ಕಾಲ ಎಚ್ಚರವಿರುತ್ತಾನೆ. ಅಲ್ಲದೆ, ಈ ಸ್ಥಲದಲ್ಲಿ ಹಿಮಗಳು ಬೀಳುವುದರಿಂದ ಚಳಿಗಾಲದ ಸಮಯದಲ್ಲಿ ಹಿಮಪಾತವಾಗಬಹುದೆನ್ನುವ ಕಾರಣಕ್ಕಾಗಿ ಇಲ್ಲಿನ ಬಾಗಿಲನ್ನು ಮುಚ್ಚಲಾಗುತ್ತದೆ.

ಬದರಿನಾಥ ಧಾಮವು ಉತ್ತರಾಂಚಲದ ಅಲಕಾನಂದ ನದಿಯ ದಡದಲ್ಲಿ ನರ ಮತ್ತು ನಾರಾಯಣ ಎಂಬ ಎರಡು ಪರ್ವತಗಳ ನಡುವೆ ಇದೆ. ಇಲ್ಲಿ ನರ-ನಾರಾಯಣ ವಿಗ್ರಹವನ್ನು ಪೂಜಿಸಲಾಗುತ್ತದೆ. ದೇವಾಲಯದಲ್ಲಿರುವ ಶ್ರೀ ಹರಿ ವಿಷ್ಣುವಿನ ವಿಗ್ರಹವು ಚತುರ್ಭುಜ ಧ್ಯಾನದಲ್ಲಿ ನೆಲೆಸಿರುವ ಶಾಲಿಗ್ರಾಮ ಶಿಲೆಯಿಂದ ಮಾಡಲ್ಪಟ್ಟಿದೆ. ಇಲ್ಲಿಗೆ ಭಕ್ತನು ಮನಸ್ಸಿನಲ್ಲಿ ಯಾವ ಆಸೆಯನ್ನಿಟ್ಟುಕೊಂಡು ಬರುತ್ತಾನೋ ಆ ಆಸೆಗಳೆಲ್ಲವೂ ಈಡೇರುತ್ತದೆ ಎನ್ನುವ ನಂಬಿಕೆಯಿದೆ. ಬದರಿನಾಥ ಧಾಮಕ್ಕೆ ಭೇಟಿ ನೀಡುವ ಭಕ್ತರ ಮೇಲೆ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದ ಯಾವಾಗಲೂ ಇರುತ್ತದೆ.

ಚಾರ್‌ಧಾಮ್ ಯಾತ್ರೆಯಲ್ಲಿ ಬದರಿನಾಥ ಧಾಮದ ಯಾತ್ರೆಯೂ ಪ್ರಮುಖವಾದುದ್ದಾಗಿದೆ. ಇದು ವಿಷ್ಣುವಿನ ವಾಸಸ್ಥಾನವೆನ್ನುವ ಕಾರಣಕ್ಕಾಗಿ ಮಾತ್ರವಲ್ಲ, ಇಲ್ಲಿ ವಿಷ್ಣುವಿನೊಂದಿಗೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನೂ ಪಡೆದುಕೊಳ್ಳಬಹುದೆನ್ನುವ ಕಾರಣಕ್ಕೂ ಭಕ್ತರು ಬದರಿನಾಥಕ್ಕೆ ಭೇಟಿ ನೀಡುತ್ತಾರೆ.

Comments