ಭಗವದ್ಗೀತೆ ಅಧ್ಯಾಯ-2 ಶ್ಲೋಕ -65-66

ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -65
ಶ್ಲೋಕ :
ಪ್ರಸಾದೇ ಸರ್ವದುಃಖಾನಾಂ ಹಾನಿರಸ್ಯೋಪಜಾಯತೇ ।
ಪ್ರಸನ್ನಚೇತಸೋ ಹ್ಯಾಶು ಬುದ್ಧಿಃ ಪರ್ಯವತಿಷ್ಠತಿ ॥೬೫॥
 
ಅರ್ಥ :
ಮನಸ್ಸು ತಿಳಿಗೊಂಡಾಗ ಸಾಧಕನ ಎಲ್ಲಾ ದುಗುಡಗಳು ಇಲ್ಲವಾಗುತ್ತವೆ. ಏಕೆಂದರೆ ಬಗೆ ತಿಳಿಗೊಂಡವನ ಬುದ್ಧಿ ಬೇಗನೆ ಭಗವಂತನಲ್ಲಿ ನೆಲೆಗೊಳ್ಳುತ್ತದೆ.
 
ವಿವರ ವಿವರಣೆಗಳು : 
ಮನಸ್ಸು ಕೊಳೆಯಾದರೆ ಎಲ್ಲವೂ ಕೊಳೆ. ಮನಸ್ಸು ತಿಳಿಯಾದರೆ ಎಲ್ಲವೂ ತಿಳಿ. ಎಲ್ಲಾ ಸಮಸ್ಯೆ ಇರುವುದು ಮನಸ್ಸು ಕೊಳೆಯಾಗುವುದರಿಂದ. ನಮಗೆ ನಮ್ಮ ಮನಸ್ಸಿನ ಸ್ವಚ್ಛತೆ ಬಗ್ಗೆ ಗಮನ ಇಲ್ಲದಿದ್ದರೆ ಇತರ ಎಲ್ಲಾ ಕಾರ್ಯವೂ ವ್ಯರ್ಥ. ಮನಸ್ಸು ಸ್ವಚ್ಚವಾದರೆ ಮಡಿ. ಅದೇ ಪ್ರಸನ್ನವಾದ ಸ್ಥಿತಿ. ಮನಸ್ಸು ತಿಳಿಯಾದಾಗ ಸರ್ವ ದುಃಖವೂ ತನ್ನಷ್ಟಕ್ಕೆ ತಾನು ಕಣ್ಮರೆಯಾಗುತ್ತದೆ. ಇದು ದುಃಖಾತೀತ ಆನಂದ ಸ್ಥಿತಿ.

ಮನಸ್ಸು ತಿಳಿಯಾಯಿತು ಎಂದರೆ ಅದು ಭಗವಂತನನ್ನು ತಿಳಿಯಲು ಸಹಾಯ ಮಾಡುತ್ತದೆ. ಕೊಳೆಯಾದ ಮನಸ್ಸಿನಿಂದ ಭಗವಂತನ ಚಿಂತನೆ ಸಾಧ್ಯವಿಲ್ಲ. ಭಗವಂತನನ್ನು ತಿಳಿದ ಮೇಲೆ ದುಃಖವಿಲ್ಲ. ಬುದ್ಧಿ-ಗಟ್ಟಿಗೊಂಡು ಭಗವಂತನ ಅಪರೋಕ್ಷ ಜ್ಞಾನದಲ್ಲಿ ನಿಂತುಬಿಡುತ್ತದೆ. ಈ ಸ್ಥಿತಿಯಲ್ಲಿ ಯಾವ ದೆಸೆಯಲ್ಲಿ ಯೋಚನೆ ಹೋದರೂ ಕೂಡಾ ಅದು ಭಗವಂತನಲ್ಲಿ ಹೋಗಿ ನಿಲ್ಲುತ್ತದೆ. ಯಾವುದನ್ನು ಕೇಳಿದರು, ಯಾವುದನ್ನು ನೋಡಿದರು, ಅದರ ಹಿಂದೆ ಇರುವ ಜಗತ್ತಿನ ಮೂಲ ಶಕ್ತಿಯ ಚಿಂತನೆ ಮನಸ್ಸಿಗೆ ಬಂದುಬಿಡುತ್ತದೆ. ಆಗ ಯಾವುದೋ ಸಣ್ಣ ಸಂಗತಿಗಾಗಿ ಕೊರಗುವ ಪ್ರಶ್ನೆಯೇ ಉಳಿಯುವುದಿಲ್ಲ. ತಿಳಿಯಾದ ಮನಸ್ಸು ಭಗವನ್ಮಯವಾಗುತ್ತದೆ. ಒಮ್ಮೆ ಭಗವಂತ ಮನಸ್ಸಿನಲ್ಲಿ ತುಂಬಿದ ಅಂದರೆ ಸರ್ವವೂ ಆನಂದಮಯ. ಆ ನಂತರ ದುಃಖವೆಂಬುವುದಿಲ್ಲ; ಈ ಆನಂದ ಅಪರಿಮಿತ. 


_____________________________________________
ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -66

ಶ್ಲೋಕ :
ನಾಸ್ತಿ ಬುದ್ಧಿರಯುಕ್ತಸ್ಯ ನಚಾಯುಕ್ತಸ್ಯ ಭಾವನಾ ।
ನ ಚಾಭಾವಯತಃ ಶಾಂತಿರಶಾಂತಸ್ಯ ಕುತಃ ಸುಖಮ್ ॥೬೬॥
 
ಅರ್ಥ :
ಮನಸ್ಸು ಮಣಿಸದವನಿಗೆ ತಿಳಿಯಾದ ತಿಳಿವಿಲ್ಲ. ಮನಸ್ಸು ಮಣಿಸದವನಿಗೆ ಧ್ಯಾನವೂ ಇಲ್ಲ. ಧ್ಯಾನ ಇರದವನಿಗೆ ಮುಕ್ತಿಯಿಲ್ಲ[ಭಗವಂತನಲ್ಲಿ ಬಗೆ ನೆಲೆಸದು]. ಮುಕ್ತನಾಗದವನಿಗೆ[ಭಗವಂತನಲ್ಲಿ ಬಗೆ ನೆಡದವನಿಗೆ] ಎಲ್ಲಿಯ ಸುಖ ?
 
ವಿವರ ವಿವರಣೆಗಳು : 
ಸುಖ ಬೇಕಿದ್ದರೆ ಶಾಂತಿ ಬೇಕು. ಮನಸ್ಸು ಪ್ರಸನ್ನವಾಗದೆ ವಿಕ್ಷಿಪ್ತವಾಗಿದ್ದರೆ ಅದು ಭಗವಂತನನ್ನು ಹೋಗಿ ಸೇರುವುದಿಲ್ಲ. ಯಾರ ಮನಸ್ಸು ಭಗವಂತನಲ್ಲಿ ಸಂಯೋಗ ಹೊಂದುವುದಿಲ್ಲವೋ ಅವನಿಗೆ ಅಪರೋಕ್ಷವಿಲ್ಲ. ಅಂಥವನ ಮನಸ್ಸು ತಿಳಿಯಾಗದು. ಇಂಥವರು ಏಕಾಗ್ರವಾಗಿ ಚಿಂತಿಸಲು ಸಾಧ್ಯವಿಲ್ಲ. ಏಕಾಗ್ರವಾಗಿ ಚಿಂತಿಸದ ಹೊರತು ಯಥಾರ್ಥ ಜ್ಞಾನವಿಲ್ಲ. ಇಂಥವರಿಗೆ ಧ್ಯಾನ(Meditation) ಅಸಾಧ್ಯ. ಇಲ್ಲಿ ಧ್ಯಾನ ಅಂದರೆ ಏಕಾಗ್ರವಾಗಿ ಒಂದು ವಸ್ತುವಿನ ಬಗ್ಗೆ ಚಿಂತಿಸುವುದು. ಯಾವುದೇ ಒಂದು ವಸ್ತುವಿನ ಬಗ್ಗೆ ನಮಗೆ ಖಚಿತವಾದ ಅರಿವು ಬರಬೇಕಾದರೆ ನಮಗೆ ಏಕಾಗ್ರತೆ ಬೇಕು. ಅದನ್ನೇ ಇಲ್ಲಿ ‘ಭಾವನಾ’ ಎಂದಿದ್ದಾರೆ. ಮನಸ್ಸು ಏಕಾಗ್ರವಾದರೆ ಮಾತ್ರ ಆಳವಾದ ಚಿಂತನೆ ಸಾಧ್ಯ. ಯಾವುದನ್ನೂ ಆಳವಾಗಿ ಚಿಂತಿಸದ ಹೊರತು ಅದರ ಬಗ್ಗೆ, ಅದರ ವೈಶಾಲ್ಯತೆ ಬಗ್ಗೆ ಅರಿವು ಮೂಡದು. ಹೀಗೆ ಆಳಕ್ಕಿಳಿದು ಚಿಂತನೆ ಮಾಡದವನಿಗೆ ಶಾಂತಿ ಇಲ್ಲ. ಇಲ್ಲಿ ಶಾಂತಿ ಎನ್ನುವುದಕ್ಕೆ ಎರಡು ಅರ್ಥವಿದೆ. ಮೇಲ್ನೋಟಕ್ಕೆ ಶಾಂತಿ ಅಂದರೆ ಆನಂದಮಯವಾದ ಸ್ಥಿತಿ. ಶಾಸ್ತ್ರಕಾರರ ಪ್ರಕಾರ ಜೀವನಿಗೆ ಪೂರ್ಣ ಆನಂದದ ಸ್ಥಿತಿ ಅಂದರೆ ಮೋಕ್ಷ. ಆದ್ದರಿಂದ ಯಾರು ಧ್ಯಾನದಿಂದ ಭಗವಂತನನ್ನು ಕಂಡುಕೊಳ್ಳುವುದಿಲ್ಲವೋ ಅವನಿಗೆ ಮೋಕ್ಷವಿಲ್ಲ. ಮೋಕ್ಷದ ದಾರಿಯಲ್ಲಿ ಸಾಗದವನಿಗೆ ಸುಖವಿಲ್ಲ. ಇನ್ನು ಶಾಂತಿ ಎಂದರೆ ಆನಂದದ ತುತ್ತತುದಿ ಅಥವಾ ಪರಾಕಾಷ್ಠೆ. ಮನಸ್ಸು ಭಗವಂತನಲ್ಲಿ ನೆಲೆಗೊಂಡಾಗ ನಮಗೆ ಶಾಂತಿ.

ಹೀಗೆ ಇಂದ್ರಿಯಗಳನ್ನು ಸಂಯಮ ಮಾಡಿಕೊಂಡು, ಮನಸ್ಸನ್ನು ಏಕಾಗ್ರಗೊಳಿಸಿ, ಅದರಲ್ಲಿ ಆಳವಾಗಿ ಚಿಂತನೆ ಮಾಡಿ, ಸತ್ಯವನ್ನು ಕಂಡುಕೊಳ್ಳಬೇಕು. ನಾವು ಹೊರ ಪ್ರಪಂಚವನ್ನು ಬಿಟ್ಟು ಒಳ ಪ್ರಪಂಚದಲ್ಲಿ ಆಳವಾಗಿ ಮುಳುಗದ ಹೊರತು ಸತ್ಯದ ಸಾಕ್ಷಾತ್ಕಾರವಾಗದು. ಸತ್ಯದ ಸಾಕ್ಷಾತ್ಕಾರವಾಗದ ಹೊರತು ಸುಖವಿಲ್ಲ.


 

Comments