ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -63
ಶ್ಲೋಕ :
ಕ್ರೋಧಾದ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ ।
ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾದ್ ವಿನಶ್ಯತಿ ॥೬೩॥
ಅರ್ಥ :
ರೊಚ್ಚಿನಿಂದ ಮಾಡಬಾರದ್ದನ್ನು ಮಾಡುವ ಬಯಕೆ (ತಪ್ಪು ಗ್ರಹಿಕೆ). ಅಂಥ ಬಯಕೆಗಳಿಂದ ವಿಧಿ-ನಿಷೇಧಗಳ ಮರೆವು. ಮರೆವಿನಿಂದ ತಿಳಿಗೇಡಿತನ, ತಿಳಿಗೇಡಿತನದಿಂದ ಸರ್ವನಾಶ!
ವಿವರ ವಿವರಣೆಗಳು :
ಒಂದು ವಸ್ತುವಿನ ನಿರಂತರ ಸಂಪರ್ಕದಿಂದ ನಮಗೆ ಅದರ ಮೇಲೆ ಮೋಹ ಬೆಳೆಯುತ್ತದೆ. ಮೊದಲು ಪರಿಚಯ, ಪರಿಚಯದಿಂದ ಸ್ನೇಹ, ನಂತರ ಆ ಸ್ನೇಹವನ್ನು ಹಚ್ಚಿಕೊಳ್ಳುವುದು(Attachment).ನಂತರ ಅವರು ನನ್ನವರಾಗಬೇಕು ಎನ್ನುವ ಆಸೆ. ನಾವು ಆಸೆ ಪಟ್ಟಂತೆ ನೆರವೇರದಾಗ ಕ್ರೋಧ. ಈ ಕ್ರೋಧದ ಮೂಲ ಪ್ರೀತಿ! ಕೋಪಕ್ಕೆ ಮೂಲ ಕಾರಣ ಕಾಮನೆ. ನಮಗೆ ಕೋಪ ಬಾರದಂತೆ ತಡೆಯಬೇಕಾದರೆ ಮೊದಲು ಕಾಮನೆಯನ್ನು ತೊರೆಯಬೇಕು. ಆಸೆ ಕಡಿಮೆಯಾದಂತೆ ಸಿಟ್ಟು ಕಡಿಮೆಯಾಗುತ್ತದೆ. ಅಂಟಿಸಿಕೊಳ್ಳುವುದು ಅಥವಾ ಹಚ್ಚಿಕೊಳ್ಳುವುದರಿಂದ ಆಸೆ ಆಕಾಂಕ್ಷೆಗಳು ಬೆಳೆಯುತ್ತವೆ. ಅದು ಈಡೇರದಿದ್ದಾಗ ಕೋಪ. ಕೋಪದಿಂದ ಸಮ್ಮೋಹ. ಅಂದರೆ ಅಸಂಗತವಾದ ವಿಚಾರಗಳು ತಲೆಯಲ್ಲಿ ಬಂದು ಮಾಡಬಾರದ್ದನ್ನು ಮಾಡುವ ಬಯಕೆ. ಇದರಿಂದ ಯುಕ್ತಾಯುಕ್ತಗಳನ್ನು ವಿಶ್ಲೇಷಣೆ ಮಾಡುವ ಶಕ್ತಿ ಹೊರಟು ಹೋಗಿ, ತಪ್ಪನ್ನೇ ಸರಿ ಎಂದು ಸಮರ್ಥನೆ ಮಾಡುವ ಮಟ್ಟಕ್ಕೆ ನಾವು ಇಳಿಯುತ್ತೇವೆ. ಪಲಿತಾಂಶ: ಪ್ರತಿಕಾರ ಮಾಡಬೇಕು ಎನ್ನುವ ಹಠ. ಅದರಿಂದ ಪೂರ್ತಿ ತಿಳಿಗೇಡಿತನ ಮತ್ತು ಕೊನೆಗೆ ಆತ್ಮದ ಅಧಃಪತನ- ವಿನಾಶ-ಸರ್ವನಾಶ!
ಬುದ್ಧಿ ನಾಶವಾದಾಗ ಮನಸ್ಸು ಸತ್ತಂತೆ. ಅದರಿಂದ ಜೀವ ನರಕದ ದಾರಿಯಲ್ಲಿ ಹೋಗುವಂತಾಗುತ್ತದೆ. ಇದು ಅಧಃಪತನದ ದಾರಿ. ನಾವು ಎತ್ತರಕ್ಕೇರಬೇಕೆಂದರೆ ಪರಮಾತ್ಮನ ಮಹತ್ವವನ್ನು ಅರಿತು ಅವನಿಗೆ ಶರಣಾಗಬೇಕು. ಒಳ್ಳೆಯ ದಾರಿಯಲ್ಲಿ ಮನಸ್ಸು ಚಿಂತನೆ ಮಾಡಿದಾಗ ಆತ್ಮ ಎತ್ತರಕ್ಕೇರಲು ಸಾಧ್ಯ. ಇದಕ್ಕೆ ಮೊದಲು ನಾವು ಹಚ್ಚಿಕೊಳ್ಳುವುದನ್ನು(Over attachment) ಕಡಿಮೆ ಮಾಡಬೇಕು. ಇದರರ್ಥ ಯಾರನ್ನೂ ಪ್ರೀತಿಸಬಾರದು, ಸ್ನೇಹ ಬೆಳೆಸಬಾರದು ಎಂದರ್ಥವಲ್ಲ. ಪ್ರೀತಿ ಇರಲಿ, ಸ್ನೇಹವಿರಲಿ, ಆದರೆ ಮೋಹ ಬೇಡ. ಬಂದಿದ್ದು ಬರಲಿ ಎನ್ನುವ ದೃಢ ನಿರ್ಧಾರವಿರಲಿ. ಹೀಗೇ ಆಗಬೇಕು-ಹಾಗೇ ಆಗಬೇಕು ಎನ್ನುವ ಅತಿಮೋಹ ದುಃಖಕ್ಕೆ ಕಾರಣ. ಎಲ್ಲವುದರ ಜೊತೆಗಿದ್ದು, ಎಲ್ಲರನ್ನೂ ಪ್ರೀತಿಸುವುದು-ಆದರೆ ಹಚ್ಚಿಕೊಳ್ಳದೇ ಇರುವುದು(Detached attachment). ಇದೇ ಸಾಧನೆಯ, ಸಂತೋಷದ ಮೂಲ ಮಂತ್ರ.
ಮನಸ್ಸು ಯಾವಾಗಲೂ ಪ್ರಸನ್ನವಾಗಿರಬೇಕು. ಪ್ರಸನ್ನತೆ ಇಲ್ಲದಿದ್ದಾಗ ಮಾನಸಿಕವಾಗಿ, ದೈಹಿಕವಾಗಿ ನಾವು ಆರೋಗ್ಯವನ್ನು ಕಳೆದುಕೊಳ್ಳುತ್ತೇವೆ. ಎಂಥಹ ಪ್ರಸಂಗದಲ್ಲೂ ತಲೆ ಕೆಡಿಸಿಕೊಳ್ಳದೆ ಹಾಯಾಗಿರುವುದು ಪ್ರಸನ್ನತೆ. ಇದನ್ನು ಗಳಿಸುವುದು ಹೇಗೆ ಎನ್ನುವ ಚಿತ್ರಣ ಮುಂದಿನ ಶ್ಲೋಕ.
_____________________________________________
ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -64
ಶ್ಲೋಕ :
ರಾಗದ್ವೇಷವಿಮುಕ್ತೈಸ್ತು ವಿಷಯಾನಿಂದ್ರಿಯೈಶ್ಚರನ್ ।
ಆತ್ಮವಶ್ಯೈರ್ವಿಧೇಯಾತ್ಮಾ ಪ್ರಸಾದಮಧಿಗಚ್ಛತಿ ॥೬೪॥
ಅರ್ಥ :
ಒಲವು ಹಗೆತನಗಳಿಂದ ಪಾರಾಗಿ ತನ್ನ ಹಿಡಿತದಲ್ಲಿರುವ ಇಂದ್ರಿಯಗಳಿಂದ ವಿಷಯಗಳನ್ನು ಅನುಭವಿಸುವಾಗಲೂ, ಅಂಕೆ ತಪ್ಪದವನ ಮನಸ್ಸು ತಿಳಿಗೊಳ್ಳುತ್ತದೆ.
ವಿವರ ವಿವರಣೆಗಳು :
ಇಂದ್ರಿಯ ನಿಗ್ರಹ ಅಥವಾ ಹಚ್ಚಿಕೊಳ್ಳದೆ ಇರುವುದು ಅಂದರೆ ಎಲ್ಲಾ ವಿಷಯ ಭೋಗಗಳನ್ನು ತೊರೆದು ಪ್ರಾಪಂಚಿಕ ವ್ಯವಹಾರದಿಂದ ದೂರಸರಿದು ಕಣ್ಮುಚ್ಚಿ ಕುಳಿತುಕೊಳ್ಳುವುದಲ್ಲ. ಇಂದ್ರಿಯದಿಂದ ವಿಷಯ ಗ್ರಹಿಸು, ಅದು ನಿರಂತರ. ಆದರೆ ಅದರಿಂದ ಪ್ರಭಾವಿತನಾಗಿ ಅದರ ದಾಸನಾಗಬೇಡ ಎನ್ನುತ್ತಾನೆ ಕೃಷ್ಣ. ವಿಷಯಗಳನ್ನು ಇಂದ್ರಿಯಗಳಿಂದ ಅನುಭವಿಸು, ಆದರೆ ವಿಷಯಗಳಿಗೆ ರಾಗ-ದ್ವೇಷಗಳ ಹವ್ಯಾಸವನ್ನು ಅಂಟಿಸಬೇಡ. ಏನು ಬಂತೋ ಹಾಗೇ ಅನುಭವಿಸು. ಇಂತಹ ಮನೋವೃತ್ತಿಯನ್ನು ಬೆಳೆಸಿಕೊಂಡಾಗ ಇಂದ್ರಿಯ ಯಾವ ವಿಷಯವನ್ನು ಗ್ರಹಿಸಿದರೂ ಅಪಾಯವಿಲ್ಲ. ತಟಸ್ಥ ಮನಸ್ಸಿನಿಂದ ಯಾವ ವಿಷಯ ಕೇಳುವುದರಿಂದ, ನೋಡುವುದರಿಂದ ಯಾವ ಅಪಾಯವೂ ಇಲ್ಲ. ಇಲ್ಲಿ ತಟಸ್ಥ ಮನಸ್ಸು ಅನ್ನುವುದಕ್ಕೆ ಉದಾಹರಣೆ ಎಂದರೆ, ಕೆಲವೊಮ್ಮೆ, ನಾವು ನಮ್ಮ ಸ್ನೇಹಿತರನ್ನು ದಾರಿ ಮಧ್ಯದಲ್ಲಿ ಭೇಟಿಯಾಗುತ್ತೇವೆ. ನಾವು ಅಲ್ಲಿ ಕುಳಿತು ಸಂಭಾಷಣೆ ಮಾಡುತ್ತೇವೆ. ಆದರೆ ನಂತರ ಯಾರಾದರೂ ಬಂದು ನಿನ್ನ ಸ್ನೇಹಿತ ಯಾವ ಬಣ್ಣದ ಬಟ್ಟೆ ಧರಿಸಿದ್ದ ಎಂದು ಕೇಳಿದರೆ ನಮಗೆ ಗೊತ್ತಿರುವುದಿಲ್ಲ. ನಾವು ನೋಡಿರುತ್ತೇವೆ, ಆದರೆ ಗಮನಿಸಿರುವುದಿಲ್ಲ. ಏಕೆಂದರೆ ಅದರ ಅಗತ್ಯವಿರುವುದಿಲ್ಲ. ಇದೇ ರೀತಿ ಮನಸ್ಸನ್ನು ತಟಸ್ಥವಾಗಿಟ್ಟು ಯಾವ ವಿಷಯ ಗ್ರಹಿಸಿದರೂ ಅಪಾಯವಿಲ್ಲ. ಇದರಿಂದ ಇಂದ್ರಿಯಗಳು ಅಧೀನವಾಗಿರುತ್ತವೆ. ಮನಸ್ಸು ವಿಧೇಯವಾಗಿರುತ್ತದೆ. ಒಳಗಿನಿಂದ ನಿರ್ಲಿಪ್ತತೆಯನ್ನು ಬೆಳೆಸಿಕೊಂಡಾಗ ಎಲ್ಲರ ಜೊತೆಗಿದ್ದು ಏಕಾಂತತೆಯನ್ನು ಗಳಿಸಬಹುದು. ಎಲ್ಲರ ಜೊತೆ ಬೆರೆತು ಬೇರೆಯಾಗಿರಬಹುದು. ಅಂತರಂಗದ ಪ್ರಪಂಚದಲ್ಲಿ ಬೇರೆಯಾಗಿರುವ ಸ್ಥಿತಿ ಇದು. ಈ ರೀತಿ ಬದುಕಲು ಕಲಿತಾಗ ಮನಸ್ಸು ತಿಳಿಗೊಳ್ಳುತ್ತದೆ. ಯಾವಾಗಲೂ ಸಂತೋಷ ಉಕ್ಕಿ ಹೊರಬರುತ್ತಿರುತ್ತದೆ. ಸಾಧನೆ ಸುಗಮವಾಗುತ್ತದೆ.
Comments