ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -59
ಶ್ಲೋಕ :
ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ ।
ರಸವರ್ಜಂ ರಸೋSಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ ॥೫೯॥
ಅರ್ಥ :
ಆಹಾರ ತೊರೆದ ಜೀವಿಗೆ ವಿಷಯ ಭೋಗದ ಕಸುವಷ್ಟೇ ಕುಂದುತ್ತದೆ-ನಾಲಗೆಯ ಕಸು ಮತ್ತು ಭೋಗದ ಬಯಕೆಯನ್ನು ಬಿಟ್ಟು. ಅಂಥ ಕಸುವು-ಬಯಕೆ ಕೂಡಾ ಭಗವಂತನನ್ನು ಕಂಡಾಗ ಇಲ್ಲವಾಗುತ್ತದೆ.
ವಿವರ ವಿವರಣೆಗಳು :
ನಾವು ಸ್ಥಿತಪ್ರಜ್ಞರಾಗಬೇಕೆಂದರೆ ಇಂದ್ರಿಯಗಳನ್ನು ಅಂತರ್ಮುಖಗೊಳಿಸಬೇಕು ಎನ್ನುವ ವಿಷಯವನ್ನು ನೋಡಿದೆವು. ಆದರೆ ಅದು ಅಷ್ಟು ಸುಲಭದ ವಿಷಯವಲ್ಲ. ಸಾಧನಾ ಶರೀರದಲ್ಲಿರುವ ಸಾಧಕ, ಇಂದ್ರಿಯಗಳನ್ನು ಹೊರಗಿನ ವಿಷಯಗಳ ಜೊತೆಗೆ ಸಂಪರ್ಕ ಆಗದಂತೆ ತಡೆದರೆ(ಏಕಾಂತದ ಅಭ್ಯಾಸ), ನೋಡುವ, ಕೇಳುವ ಎಲ್ಲಾ ಆಸೆಗಳು ಹೊರಟು ಹೋಗಬಹುದು. ಆದರೆ ರುಚಿ(ನಾಲಿಗೆಯ ಚಪಲ) ಮತ್ತು ಶೃಂಗಾರ(ಲೈಂಗಿಕ ಬಯಕೆ)ವನ್ನು ನಿವಾರಿಸುವುದು ಬಹಳ ಕಷ್ಟ. ಈ ಕಾರಣಕ್ಕಾಗಿ ನಾವು ಬ್ರಹ್ಮಚರ್ಯ ಪಾಲನೆ ಮಾಡಬೇಕೆಂದಿದ್ದರೆ ಒಮ್ಮೆ ಶೃಂಗಾರ ಭೋಗವನ್ನು ಅನುಭವಿಸಿ, ದಾಂಪತ್ಯವೆಂದರೆ ಏನು ಎಂದು ಅರಿತು, ಆನಂತರ ಬ್ರಹ್ಮಚರ್ಯಕ್ಕೆ ಕಾಲಿಟ್ಟರೆ ಸಾಧನೆ ಸುಲಭ. ನಿಯಮಿತ ಆಹಾರ, ಉಪವಾಸ- ಅಧ್ಯಾತ್ಮಕ್ಕೆ ಪೂರಕ. ಅತಿ ಆಹಾರ, ತಾಮಸ ಹಾಗು ರಾಜಸ ಆಹಾರ (ಉದಾ: ತೊಗರಿ ಬೇಳೆ, ಈರುಳ್ಳಿ, ಬೆಳ್ಳುಳ್ಳಿ, ಮಾಂಸಾಹಾರ ಇತ್ಯಾದಿ) ಅಧ್ಯಾತ್ಮ ಸಾಧನೆಗೆ ತೀರಾ ವಿರುದ್ಧ (ಈ ಕಾರಣಕ್ಕಾಗಿ ಯಾರೇ ಅತಿಥಿ ಬಂದಾಗ ಅವರಿಗೆ ಒತ್ತಾಯ ಪೂರ್ವಕವಾಗಿ ಆಹಾರ ನೀಡಬಾರದು; ಮಾಡಿದ ಅಡಿಗೆ ಮಿಕ್ಕಿದಾಗ ಹಾಳಾಗುತ್ತಲ್ಲಾ ಅಂತ ತಿನ್ನುವುದರಿಂದ ಆಹಾರವೂ ಹಾಳು ದೇಹವೂ ಹಾಳು! ). ಒಟ್ಟಿನಲ್ಲಿ ಅಧ್ಯಾತ್ಮ ಸಾಧನೆಯಲ್ಲಿ ಏಕಾಂತ ಹಾಗು ಆಹಾರ ನಿಯಂತ್ರಣ ಸಾಧನೆಗೆ ಪೂರಕ . ಇದರಿಂದ ನಮ್ಮ ನಾಲಿಗೆಯ ಮತ್ತು ಭೋಗದ ಚಪಲ ಸಂಪೂರ್ಣ ನಿಗ್ರಹ ಆಗದಿದ್ದರೂ ಕೂಡಾ ಅವು ಭಗವಂತನಲ್ಲಿ ಸಂಪೂರ್ಣ ಶರಣಾದಾಗ ಇಲ್ಲವಾಗುತ್ತವೆ.
______________________________________________
ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -60
ಶ್ಲೋಕ :
ಯತತೋ ಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ ।
ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ ॥೬೦॥
ಅರ್ಥ :
ಸಾಧಕ ಸಾಕಷ್ಟು ತಿಳಿದುಕೊಂಡರೂ, ಸಾಕಷ್ಟು ಪ್ರಯತ್ನಿಸಿದರೂ ಕೂಡಾ, ಇಂದ್ರಿಯಗಳು ಬಲವಂತವಾಗಿ ಮನಸ್ಸನ್ನು ಕಲಕಿ ಸೆಳೆದುಬಿಡುತ್ತವೆ.
ವಿವರ ವಿವರಣೆಗಳು :
ನಾವು ಎಷ್ಟು ಓದಿ , ಕೇಳಿ ತಿಳಿದುಕೊಂಡರೂ ಕೂಡಾ, ಸಾಧನೆಯ ಈ ದಾರಿ ಅಷ್ಟು ಸುಲಭದ್ದಲ್ಲ. ಪ್ರಯತ್ನದ ಛಲವಿಲ್ಲದೆ ಇದು ಅಸಾಧ್ಯ. ಅಧ್ಯಾತ್ಮದ ದಾರಿಯಲ್ಲಿ ಸಾಗಲು ಮನಸ್ಸು ಗಟ್ಟಿಯಾಗಿರಬೇಕು. ಆದರೆ ಇಲ್ಲಿ ಒಂದು ಸಮಸ್ಯೆ ಇದೆ. ಅದೇನೆಂದರೆ ಮನಸ್ಸು ಗಟ್ಟಿಯಾದಾಗ ಇಂದ್ರಿಯಗಳು ಸಡಿಲವಾಗುತ್ತವೆ. ರಾಗ ದ್ವೇಷ ಮಾಡಬಾರದು, ಕಾಮ ಕ್ರೋಧಗಳಿಗೆ ಒಳಗಾಗಬಾರದು, ಬಯಕೆಯ ಮೇಲೆ ಕಡಿವಾಣವಿರಬೇಕು ಎಂದು ಗಟ್ಟಿ ಮನಸ್ಸಿನಲ್ಲಿ ತೀರ್ಮಾನ ಮಾಡಿ ಕುಳಿತಾಗ, ಇಂದ್ರಿಯಗಳು ಮನಸ್ಸನ್ನು ಗೊಂದಲಗೊಳಿಸುತ್ತವೆ. ಶಾಸ್ತ್ರವನ್ನು ಓದಿ ಪರೋಕ್ಷವಾಗಿ ಸತ್ಯವನ್ನು ಕಂಡವನನ್ನೂ ಸಹ ಈ ಸಮಸ್ಯೆ ಕಾಡದೆ ಬಿಡದು. ಬಲಾತ್ಕಾರವಾಗಿ ಇಂದ್ರಿಯಗಳು ಮನಸ್ಸನ್ನು ದಾರಿ ತಪ್ಪಿಸುತ್ತವೆ. ಇದರಿಂದಾಗಿ ಮೊದಲು ನಂಬಿದ್ದನ್ನು ನಂಬಬೇಕೋ ಬಿಡಬೇಕೋ ಅನ್ನುವ ಸಂಶಯ ಹುಟ್ಟಿಕೊಳ್ಳುತ್ತದೆ. ಇದು ಪ್ರತಿಯೊಬ್ಬ ಸಾಧಕ ಜೀವನಿಗೆ ಅನುಭವಕ್ಕೆ ಬರುವ ಸಂಗತಿ. ಈ ಸಮಸ್ಯೆ ಗಂಭೀರವಾಗಿ ಕಂಡರೂ ಕೂಡಾ ಕೃಷ್ಣ ಮುಂದಿನ ಶ್ಲೋಕದಲ್ಲಿ ಇದಕ್ಕೆಸರಳ ಪರಿಹಾರ ಸೂಚಿಸುತ್ತಾನೆ.
Comments