ಭಗವದ್ಗೀತೆ ಅಧ್ಯಾಯ-2 ಶ್ಲೋಕ -53-54

ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -53

 
ಶ್ಲೋಕ :
ಶ್ರುತಿವಿಪ್ರತಿಪನ್ನಾ ತೇ ಯದಾ ಸ್ಥಾಸ್ಯತಿ ನಿಶ್ಚಲಾ।
ಸಮಾಧಾವಚಲಾ ಬುದ್ಧಿಸ್ತದಾ ಯೋಗಮವಾಪ್ಸ್ಯಸಿ ॥೫೩॥
 
ಅರ್ಥ :
ಮೊದಲು ಶ್ರುತಿಗಳಿಗೆ ಹೊಂದಿಕೊಳ್ಳದಿದ್ದ,[ಮತ್ತೆ ಶ್ರುತಿಗಳಿಂದ ಶ್ರುತಿಗೂಡಿದ,] ನಿನ್ನ ಬುದ್ಧಿ ಎಂದು ನಿಜದ ಅರಿವಿನಿಂದ ಗಟ್ಟಿಗೊಂಡು, ಸಮಾಧಿಯಲ್ಲಿ ನಲುಗದೆ ನಿಲ್ಲುವುದೋ, ಅಂದು ಗುರಿ ತಲುಪುವೆ.
 
ವಿವರ ವಿವರಣೆಗಳು
ಇಲ್ಲಿ ‘ವಿಪ್ರತಿಪನ್ನಾ’ ಅಂದರೆ ‘ಅಭಿಪ್ರಾಯಭೇದ’. ಮೊದಲು ಶ್ರುತಿಗಳಿಂದ (ಶ್ರವಣದಿಂದ) ಗೊಂದಲವೆನಿಸುತ್ತದೆ. ನಂತರ ಅಲ್ಲಿಂದ ವೇದಕ್ಕೆ ಹೋದಾಗ-ವೇದದಲ್ಲಿ ಹೇಳಿದ ಸಂಗತಿಗೆ ಮನಸ್ಸು ವಿರುದ್ಧವಾಗಿ ಯೋಚಿಸುತ್ತದೆ. ಆದರೆ ಒಮ್ಮೆ ಮನಸ್ಸು ತಿಳಿಯಾದಾಗ, ಶ್ರುತಿಯಲ್ಲಿ ಹೇಳಿದ ತ್ರಿಗುಣಾತೀತ ತತ್ವದಲ್ಲಿ ಮನಸ್ಸು ಗಟ್ಟಿಯಾಗಿ ಕುಳಿತುಕೊಳ್ಳುತ್ತದೆ. ಮೊದಲು ತ್ರೈಗುಣ್ಯ ವಿಷಯವಾಗಿದ್ದು ನಂತರ ತ್ರೈಗುಣ್ಯದ ವಿಷವನ್ನು ಪರಿಹರಿಸುವಂತಾಗುತ್ತದೆ (ಯಾಪಯತಿ). ಒಮ್ಮೆ ಮನಸ್ಸು ನಿರ್ಮಲವಾದಾಗ ಅದು ವೇದಕ್ಕೆ ಶ್ರುತಿಗೂಡು(Tune)ತ್ತದೆ. ಅದರಿಂದಾಗಿ ವೇದದಲ್ಲಿ ಹೇಳಿರುವ ವಿಚಾರ ಮತ್ತು ನಮ್ಮ ಯೋಚನೆಗಳಲ್ಲಿ ಯಾವುದೇ ವೆತ್ಯಾಸ ಕಾಣುವುದಿಲ್ಲ. ಮನಸ್ಸು ವೈದಿಕ ವಾಙ್ಮಯದಲ್ಲಿ ನೆಲೆ ನಿಲ್ಲುತ್ತದೆ. ಈ ಸ್ಥಿತಿಯಲ್ಲಿ ಧ್ಯಾನ(Meditation) ಮಾಡಿದರೆ ಮನಸ್ಸು ಸದಾ ಭಗವಂತನಲ್ಲಿ ನೆಲೆಗೊಳ್ಳುತ್ತದೆ. ಇದಕ್ಕೂ ಮುಂದೆ ಹೋಗಿ ನಿಶ್ಚಲವಾದ ಸಮಾಧಿ ಸ್ಥಿತಿಯಲ್ಲಿ, ಸ್ವರೂಪ ಚಿಂತನದಲ್ಲಿ ನೋಡಿದಾಗ- ಭಗವಂತನ ನಿಜವಾದ ರೂಪ ಸಾಕ್ಷಾತ್ಕಾರವಾಗುತ್ತದೆ. ಈ ಸ್ಥಿತಿಯಲ್ಲಿ ಮನಸ್ಸು ಕೆಲಸ ಮಾಡುವುದಿಲ್ಲ-ಆತ್ಮ ಕೆಲಸ ಮಾಡುತ್ತಿರುತ್ತದೆ. ಆತ್ಮದ ಕಣ್ಣಿನಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ-ಇದು ಸಾಧನೆಯ ಪೂರ್ಣ ಫಲ.

______________________________________________
ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -54
 
ಶ್ಲೋಕ :
ಅರ್ಜುನ ಉವಾಚ
ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ ।
ಸ್ಥಿತಧೀಃ ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಮ್ ॥೫೪॥
 
ಅರ್ಥ:
ಅರ್ಜುನ ಉವಾಚ -ಅರ್ಜುನ ಕೇಳಿದನು :ಓ ಬ್ರಹ್ಮರುದ್ರರ ನಿಯಾಮಕನೆ, ಸಮಾಧಿಯನ್ನೇರಬಲ್ಲ [ತಿಳಿವಿನ ತಪ್ಪುಗಳನ್ನು ತಿದ್ದಿಕೊಂಡ] ಅರಿವು ಗಟ್ಟಿಗೊಡವರನ್ನು ಹೇಗೆ ಗುರುತಿಸುವುದು? ಅಂಥಹ ಸ್ಥಿತಪ್ರಜ್ಞ ಏನೆಂದು ನುಡಿಯುತ್ತಾನೆ? ಏನೆಂದು ಕೂಡುತ್ತಾನೆ? ಏನೆಂದು ನಡೆಯುತ್ತಾನೆ?
 
ವಿವರ ವಿವರಣೆಗಳು : 
ಈ ಹಂತದಲ್ಲಿ ಕೃಷ್ಣ ತನ್ನ ಉಪದೇಶವನ್ನು ನಿಲ್ಲಿಸಿ ಅರ್ಜುನನ ಪ್ರಶ್ನೆಯನ್ನು ಆಲಿಸುತ್ತಾನೆ. ಮನುಷ್ಯನ ಅರಿವು ಗಟ್ಟಿಗೊಳ್ಳಬೇಕು; ಸತ್ಯದ ಸಾಕ್ಷಾತ್ಕಾರದಿಂದ ಮನುಷ್ಯ ಸ್ಥಿತಪ್ರಜ್ಞನಾಗಬಲ್ಲ. ಇಂತಹ ಸ್ಥಿತಪ್ರಜ್ಞರನ್ನು ಗುರುತಿಸುವುದು ಹೇಗೆ ಎನ್ನುವುದು ಅರ್ಜುನನ ಪ್ರಶ್ನೆ. ಒಬ್ಬ ಸ್ಥಿತಪ್ರಜ್ಞನನ್ನು ಆತನ ವೇಷ ಭೂಷಣದಿಂದ ಗುರುತಿಸುವುದು ಅಸಾಧ್ಯ. ಬಾಹ್ಯ ಪ್ರಪಂಚಕ್ಕೆ ಅಂಟಿಕೊಳ್ಳದೆ ಅಂತರಂಗ ಪ್ರಪಂಚದಲ್ಲಿ ಸಮಾಧಿಸ್ಥಿತಿಯನ್ನು ತಲುಪಿದ ಅವರನ್ನು ಹೇಗೆ ಗುರುತಿಸಬಹುದು? ಅವರು ಬಾಹ್ಯ ಪ್ರಪಂಚದೊಂದಿಗೆ ಹೇಗೆ ವ್ಯವಹರಿಸುತ್ತಾರೆ? ಅವರ ನಡೆ-ನುಡಿ ಹೇಗಿರುತ್ತದೆ? ಎನ್ನುವುದು ಅರ್ಜುನನ ಪ್ರಶ್ನೆ.

ಇಲ್ಲಿ ಅರ್ಜುನ ಕೃಷ್ಣನನ್ನು ‘ಕೇಶವ’ ಎಂದು ಸಂಬೋಧಿಸಿದ್ದಾನೆ. ಈ ಸಂಬೋಧನೆಯಿಂದಲೇ ಅರ್ಥವಾಗುತ್ತದೆ, ಅರ್ಜುನ ಸ್ವಯಂ ಒಬ್ಬ ಮಹಾಜ್ಞಾನಿ ಎಂದು. ಕೇಶವ ಎಂದರೆ ಕಹ+ಈಶ, ಕಹ ಅಂದರೆ ಬ್ರಹ್ಮಶಕ್ತಿ, ಈಶ ಎಂದರೆ ಶಿವಶಕ್ತಿ. ಬ್ರಹ್ಮಶಕ್ತಿ ಮತ್ತು ಶಿವಶಕ್ತಿಯೊಳಗಿನ ಪರಶಕ್ತಿ- ಕೇಶವ . ಸೂರ್ಯನ ಕಿರಣಗಳಲ್ಲಿ ನಿಂತು ಇಡೀ ಜಗತ್ತಿಗೆ ಶಕ್ತಿ ಪ್ರಧಾನ ಮಾಡುವ ಭಗವಂತ ಕೇಶವಃ. “ಜಗತ್ತಿಗೆ ಬೆಳಕು ಕೊಡುವ ನಿನ್ನಿಂದ ನಾನು ಈ ವಿಷಯವನ್ನು ಕೇಳಿ ತಿಳಿದುಕೊಳ್ಳಲು ಉತ್ಸುಕನಾಗಿದ್ದೇನೆ” ಎನ್ನುವ ಅರ್ಥದಲ್ಲಿ ಈ ಸಂಬೋಧನೆಯಿದೆ.

Comments