ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -51
ಶ್ಲೋಕ :
ಕರ್ಮಜಂ ಬುದ್ಧಿಯುಕ್ತಾ ಹಿ ಫಲಂ ತ್ಯಕ್ತ್ವಾ ಮನೀಷಿಣಃ ।
ಜನ್ಮಬಂಧವಿನಿರ್ಮುಕ್ತಾಃ ಪದಂ ಗಚ್ಛಂತ್ಯನಾಮಯಮ್ ॥೫೧॥
ಅರ್ಥ :
ಬಲ್ಲವರು ಭಗವಂತನ ಅರಿವು ಪಡೆದು, ಕರ್ಮ ಫಲದ ಹೊಣೆಯನ್ನು ಅವನಿಗೊಪ್ಪಿಸಿ, ಹುಟ್ಟು ಸಾವಿನ ಕಟ್ಟು ಕಳಚಿಕೊಂಡು, ಕ್ಲೇಶರಹಿತವಾದ ಪದವನ್ನು ಪಡೆಯುತ್ತಾರೆ.
ವಿವರ ವಿವರಣೆಗಳು :
ನಿಜವಾದ ಮನಿಷಿಗಳು ತಮ್ಮ ಮನಸ್ಸನ್ನು ತಾವೇ ನಿಯಂತ್ರಿಸಿಕೊಳ್ಳಬಲ್ಲ ಜಿತೇಂದ್ರಿಯರು. ಆತ್ಮಸಂಯಮ ಇರುವ ಜ್ಞಾನದ ಮಾರ್ಗದಲ್ಲಿ ಸಾಗಿ ಆ ಅರಿವನ್ನು ಪಡೆದವರು. ಬುದ್ಧಿವಂತರಾದ ಜ್ಞಾನಿಗಳು ಕರ್ಮದಿಂದ ಬರತಕ್ಕಂತಹ ಫಲದ ಮೋಹವನ್ನು(attachment) ಬಿಟ್ಟು ಅದನ್ನು ಭಗವಂತನಿಗೆ ಅರ್ಪಿಸುತ್ತಾರೆ. ಹೀಗೆ ಯಾರು ಕರ್ಮ ಫಲವನ್ನು ಭಗವಂತನಿಗೆ ಅರ್ಪಣ ಬುದ್ಧಿಯಿಂದ ತ್ಯಾಗ ಮಾಡಿ ನಿರ್ವಂಚನೆಯಿಂದ ಕರ್ಮ ಮಾಡುತ್ತಾರೆ, ಅವರು ಕರ್ಮ ಮಾಡಿದರೂ ಕರ್ಮಬಂಧನಕ್ಕೊಳಪಡದೆ, ಎಲ್ಲಾ ಬಂಧನವನ್ನು ಕಳಚಿಕೊಂಡು, ದೋಷ ರಹಿತವಾದ ಮೋಕ್ಷವನ್ನು ಪಡೆಯುತ್ತಾರೆ. ಆದ್ದರಿಂದ ಕರ್ತವ್ಯ ಕರ್ಮವನ್ನು ಭಗವಂತನ ಆರಾಧನೆ ಎಂದು ಮಾಡಿ ಮೋಕ್ಷ ಪಡೆಯಬೇಕು. ಇದನ್ನು ಹೊರತುಪಡಿಸಿ ‘ನಾನು ಜ್ಞಾನಿ, ನಾನೇನೂ ಮಾಡಲಾರೆ’ ಎನ್ನುವ ಧೋರಣೆ ಸರಿಯಲ್ಲ.
________________________________________________
ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -52
ಶ್ಲೋಕ:
ಯದಾ ತೇ ಮೋಹಕಲಿಲಂ ಬುದ್ಧಿರ್ವ್ಯತಿತರಿಷ್ಯತಿ ।
ತದಾ ಗಂತಾನಿ ನಿರ್ವೇದಂ ಶ್ರೋತವ್ಯಸ್ಯ ಶ್ರುತಸ್ಯ ಚ ॥೫೨॥
ಅರ್ಥ :
ಎಂದು ನಿನ್ನ ಬುದ್ಧಿ ಅಜ್ಞಾನದ ಕೊಳೆಯನ್ನು ಕಳೆದುಕೊಳ್ಳುವುದೋ, ಅಂದು ಮುಂದೆ ಕೇಳುವ, ಹಿಂದೆ ಕೇಳಿದ ಉಪದೇಶದ ಪೂರ್ತಿ ಫಲವನ್ನು ಪಡೆಯುವೆ.
ವಿವರ ವಿವರಣೆಗಳು :
ಯಾವಾಗ ನಾವು ಓದಿದ್ದು ಕೇಳಿದ್ದು ಸಾರ್ಥಕವಾಗುವುದು? ನಮ್ಮ ಬುದ್ಧಿ ಎಷ್ಟು ಕೇಳಿದರೂ ಕೂಡಾ ಪುನಃ ಗೊಂದಲದಲ್ಲೇ ಇದ್ದರೆ, ಎಷ್ಟು ಕೇಳಿಯೂ ಉಪಯೋಗವಿಲ್ಲ. ಓದುವುದರಿಂದ, ಕೇಳುವುದರಿಂದ ನಮ್ಮ ಮನಸ್ಸಿನ ಕೊಳೆ ತೊಳೆದು ಹೋಗಿ ಮನಸ್ಸು ತಿಳಿಯಾಗಬೇಕು. ಇಂತಹ ಮನಸ್ಸಿಗೆ ಎಂದೂ ದುಗುಡ, ಆತಂಕ ಇರುವುದಿಲ್ಲ. ಈ ಸ್ಥಿತಿಯಲ್ಲಿ ಕೋಪ ಬಾರದು. ಇಂತಹ ರಾಗ-ದ್ವೇಷ ರಹಿತವಾದ, ಎಂತಹ ಸಂದರ್ಭದಲ್ಲೂ ಸಮತೋಲನ ಕಳೆದುಕೊಳ್ಳದ ಮನಸ್ಸು ಬಂದಾಗ, ಓದಿದ್ದು, ಕೇಳಿದ್ದು ಸಾರ್ಥಕವಾಗುತ್ತದೆ.ಇಂತಹ ಸ್ಥಿತಿಯಲ್ಲಿ ಹಿಂದೆ ಕೇಳಿದ, ಹಾಗು ಇನ್ನು ಕೇಳುವ ಉಪದೇಶ ಪೂರ್ತಿ ಫಲವನ್ನು ಕೊಡುತ್ತದೆ.
Comments