ಭಗವದ್ಗೀತೆ ಅಧ್ಯಾಯ-2 ಶ್ಲೋಕ -49

ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -49
 
ಶ್ಲೋಕ :
ದೂರೇಣ ಹ್ಯವರಂ ಕರ್ಮ ಬುದ್ಧಿಯೋಗಾದ್ ಧನಂಜಯ ।
ಬುದ್ಧೌ ಶರಣಮನ್ವಿಚ್ಛ ಕೃಪಣಾಃ ಫಲಹೇತವಃ ॥೪೯॥
 
ಅರ್ಥ :
ಧನಂಜಯ, ಅರಿವಿನ ದಾರಿಗಿಂತ ಕರ್ಮದ ದಾರಿ ತುಂಬಾ ಕೀಳು. ಅದರಿಂದ ಅರಿವಿನಲ್ಲಿ ನೆಲೆನಿಲ್ಲು.[ಅರಿವು ಬಂದ ಮೇಲೂ ಹರಿಗೆ ಶರಣಾಗು]. ಫಲವನ್ನೆ ನಂಬಿ ನಿಂತವರು ಮರುಕಪಡಬೇಕಾದವರು.
 
ವಿವರ ವಿವರಣೆಗಳು : 
ಪ್ರಪಂಚದಲ್ಲಿ ಕೆಲವರು ಕರ್ಮಯೋಗಿಗಳು, ಇನ್ನು ಕೆಲವರು ಜ್ಞಾನಯೋಗಿಗಳು. ಕರ್ಮಯೋಗಿಗಳಿಗೆ ಜ್ಞಾನವಿಲ್ಲ, ಹಾಗು ಜ್ಞಾನ ಬಂದ ಮೇಲೆ ಕರ್ಮ ಬೇಕಿಲ್ಲ ಎನ್ನುವ ಚಿಂತನೆ ಕೆಲವರದು. ಕೆಲವರು ಕರ್ಮ ಮೇಲೆನ್ನುತ್ತಾರೆ ಮತ್ತೆ ಕೆಲವರು ಜ್ಞಾನ ಮೇಲು ಎನ್ನುತ್ತಾರೆ. ಇನ್ನು ಕೆಲವರು ಕರ್ಮ ಮತ್ತು ಜ್ಞಾನ- ‘ಎರಡು ಚಕ್ರಗಳಂತೆ’ ಸಮಾನ ಎಂದು ವಾದ ಮಾಡುತ್ತಾರೆ. ಇದರಿಂದ ಅನೇಕ ದ್ವಂದ್ವಗಳು ಹುಟ್ಟಿಕೊಳ್ಳುತ್ತವೆ. ಆದರೆ ಕೃಷ್ಣ ಇಲ್ಲಿ ಸ್ಪಷ್ಟವಾಗಿ ಹೇಳುತ್ತಾನೆ: ಜ್ಞಾನದ ಮುಂದೆ ಕರ್ಮ ಬಹಳ ದೂರ ಎಂದು. ಕರ್ಮ ಮಾಡುವಾಗ ಜ್ಞಾನ ಅತಿಮುಖ್ಯ. ಜ್ಞಾನಕ್ಕೋಸ್ಕರ ಕರ್ಮವಿರುವುದೇ ಹೊರತು ಅದು ಜ್ಞಾನಕ್ಕೆ ಸಮಾನ ಅಲ್ಲ. ಅದಕ್ಕಾಗಿ ಜ್ಞಾನಕ್ಕೆ ಶರಣಾಗಿ ಜ್ಞಾನಕ್ಕೆ ಪೂರಕವಾದ ಕರ್ಮ ಮಾಡಬೇಕು. ಜ್ಞಾನವಿಲ್ಲದೆ, ಫಲಾಪೇಕ್ಷೆಯಿಂದ ಕರ್ಮ ಮಾಡುವರ ಸ್ಥಿತಿ ಶೋಚನೀಯ. ಇವರು ಕರ್ಮದ ಮರ್ಮವನ್ನು ತಿಳಿಯದೆ ಕರ್ಮ ಮಾಡಿ ಒದ್ದಾಡುತ್ತಿರುತ್ತಾರೆ.

ಜ್ಞಾನದ ಮಾರ್ಗದಲ್ಲಿ ಎತ್ತರಕ್ಕೇರಲು ನಾವು ಕರ್ಮವನ್ನು ಮಾಡಬೇಕು. ಇದರಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಈ ಸ್ಥಿತಿಯಲ್ಲಿ ಅಹಂಕಾರ ಪಡದೆ, ಭಗವಂತನಲ್ಲಿ ಶರಣಾಗಬೇಕು. ಭಗವಂತನೇ ನನ್ನ ರಕ್ಷಕ ಹಾಗು ಆತನೇ ನನ್ನ ನೆಲೆ ಎಂದು ತಿಳಿದು ಆತನಲ್ಲಿ ಶರಣಾಗಬೇಕು. ದೇವರಿಗೆ ನಾನು ನನ್ನನ್ನು ಅರ್ಪಿಸಿಕೊಂಡಿದ್ದೇನೆ, ಆತ ನನ್ನನ್ನು ರಕ್ಷಿಸಿಯೇ ರಕ್ಷಿಸುತ್ತಾನೆ ಎನ್ನುವ ಮನವರಿಕೆ (conviction) ಶರಣಾಗತಿ.

ನಮಗೆ ಏನಾದರೂ ಸಮಸ್ಯೆ ಬಂದಾಗ ಭಗವಂತನ ಹತ್ತಿರ ಪ್ರಾರ್ಥಿಸಿಕೊಳ್ಳಬೇಕೇ ಹೊರತು ಅನ್ಯರನ್ನಲ್ಲ. “ಓ ಭಗವಂತ ನನ್ನನ್ನು ಏಕೆ ಈ ಸಮಸ್ಯೆಯಲ್ಲಿ ಸಿಲುಕಿಸಿದಿ? ಇದಕ್ಕೆ ಪರಿಹಾರವನ್ನು ತೋರಿಸು ತಂದೆ” ಎಂದು ಮನಃಪೂರ್ವಕವಾಗಿ ಕೇಳಿಕೊಂಡರೆ ಖಂಡಿತ ಆತ ನಮ್ಮನ್ನು ಸಂಕಟದಿಂದ ಪಾರು ಮಾಡುತ್ತಾನೆ. ಆದರೆ ಇಲ್ಲಿ ಕೂಡಾ ಫಲದ ಅಧಿಕಾರ ಸಾಧಿಸದೆ, ಕೇವಲ ಭಗವಂತನನ್ನು ನಂಬಿ, ನಮ್ಮ ಎಲ್ಲಾ ಸಮಸ್ಯಗಳ ನಡುವೆಯೂ ನಿಶ್ಚಿಂತೆಯಿಂದ ಬದುಕಲು ಕಲಿಯಬೇಕು. ಮುಂದಿನ ಶ್ಲೋಕವನ್ನು ನೋಡುವ ಮೊದಲು ಇಲ್ಲಿ ಬಂದಿರುವ ಧನಂಜಯ ಎನ್ನುವ ನಾಮವಿಶೇಷಣದ ಅರ್ಥವನ್ನು ತಿಳಿಯೋಣ. ಈ ಸಂಬೋಧನೆಗೆ ಎರಡು ಅರ್ಥವಿದೆ. ಒಂದು ಲೌಕಿಕ ಹಾಗು ಇನ್ನೊಂದು ಅಧ್ಯಾತ್ಮಿಕ ಅರ್ಥ. ಲೌಕಿಕವಾಗಿ ನೋಡಿದರೆ ಅರ್ಜುನ ಅನೇಕ ಕಡೆ ಯುದ್ಧ ಮಾಡಿ, ದೇಶದ ಸೀಮೆಯನ್ನು ವಿಸ್ತರಿಸಿ, ರಾಜಕೋಶದ ಸಂಪತ್ತನ್ನು ವೃದ್ಧಿ ಮಾಡಿದವ-ಆದ್ದರಿಂದ ಆತ ಧನಂಜಯ. ಆಧ್ಯಾತ್ಮಿಕವಾಗಿ ನೋಡಿದರೆ ಈ ನಾಮಕ್ಕೆ ವಿಶೇಷ ಅರ್ಥವಿದೆ. ಭಗವಂತನ ಆರಾಧನೆ, ಅಧ್ಯಾತ್ಮದ ಅರಿವು-ನಿಜವಾದ ಧನ. ಭಗವಂತನ ಅರಿವು, ಜ್ಞಾನ ಎಲ್ಲಕ್ಕಿಂತ ದೊಡ್ಡ ಸಂಪತ್ತು. ಅರ್ಜುನ ಆ ಕಾಲದ ಅಪರೋಕ್ಷ ಜ್ಞಾನಿ. ಆತ ಸ್ವಯಂ ಇಂದ್ರ. ಆತ ಜ್ಞಾನದ ಸಂಪತ್ತಿನ ಪರಾಕಾಷ್ಠೆ. ‘ಇಂತಹ ಜ್ಞಾನಿಯಾದ ನೀನು ಭಗವಂತನಿಗೆ ಶರಣಾಗಿ, ಬುದ್ಧಿಪೂರ್ವಕವಾಗಿ ಕರ್ಮಮಾಡು’ ಎನ್ನುವ ಅರ್ಥದಲ್ಲಿ ಕೃಷ್ಣ ಈ ಸಂಬೋಧನೆ ಮಾಡಿದ್ದಾನೆ.

____________________________________________

ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -50

 
ಶ್ಲೋಕ :
ಬುದ್ಧಿಯುಕ್ತೋ ಜಹಾತೀಹ ಉಭೇ ಸುಕೃತದುಷ್ಕೃತೇ ।
ತಸ್ಮಾದ್ ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಮ್ ॥೫೦॥
 
ಅರ್ಥ :
ಭಗವಂತನನ್ನರಿತವನು ಬೇಡವಾದ ಪುಣ್ಯಪಾಪಗಳೆರಡನ್ನು ಇಲ್ಲೆ ತೊರೆಯುತ್ತಾನೆ. ಆದ್ದರಿಂದ ಅರಿವಿನ ‘ಯೋಗ’ಕ್ಕೆ ತೊಡಗು. ‘ಯೋಗ’ವೆಂದರೆ ಇದೆ: ತಿಳಿದು ಮಾಡುವ ಜಾಣತನ.
 
ವಿವರ ವಿವರಣೆಗಳು : 
ತಿಳುವಳಿಕೆಯಿಂದ ಕರ್ಮ ಮಾಡಿದರೆ ತನ್ನ ಎಲ್ಲಾ ಪಾಪಗಳನ್ನು ಹಾಗು ಬೇಡವಾದ ಪುಣ್ಯವನ್ನು ತೊರೆದು ಭಗವಂತನನ್ನು ಸೇರುತ್ತಾನೆ. ಇಲ್ಲಿ ಬೇಡವಾದ ಪುಣ್ಯ ಅಂದರೆ: ಉದಾಹರಣೆಗೆ ಒಬ್ಬ ಮಹಾತ್ಮ ತನ್ನ ಜ್ಞಾನ ಕರ್ಮಗಳಿಂದ ಮೋಕ್ಷವನ್ನು ಪಡೆಯುತ್ತಾನೆ. ಹೀಗೆ ಈ ಮಾರ್ಗದಲ್ಲಿರುವಾಗ ಆತ ಇತರ ಪುಣ್ಯವನ್ನೂ ಗಳಿಸುತ್ತಾನೆ. ಒಂದು ವೇಳೆ ಆತ ಚಕ್ರವರ್ತಿಯಾಗಿ ಮೆರೆಯುವ ಪುಣ್ಯವನ್ನು ಪಡೆದಿದ್ದರೆ ಅದು ಆತನಿಗೆ ಬೇಡವಾದ ಪುಣ್ಯ. ಏಕೆಂದರೆ ಮೋಕ್ಷದ ಮುಂದೆ ಈ ಪುಣ್ಯದ ಅವಶ್ಯಕತೆ ಆತನಿಗಿಲ್ಲ. ಆತ ಈ ಪುಣ್ಯವನ್ನು ಇಲ್ಲೇ ತೊರೆಯುತ್ತಾನೆ. ಇದನ್ನು ಇಲ್ಲಿ ಬೇಡವಾದ ಪುಣ್ಯ ಎಂದಿರುವುದು. ಯಾರು ಹೀಗೆ ಭಗವತ್ಪ್ರಜ್ಞೆಯಲ್ಲಿ ಬದುಕುತ್ತಾರೋ ಅವರು ಮಾಡಿದ ಕರ್ಮ ಅವರ ಪಾಪ ಪುಣ್ಯದ ಬಂಧನಕ್ಕೆ ಕಾರಣವಾಗುವುದಿಲ್ಲ. ಆದ್ದರಿಂದ ಜ್ಞಾನಯೋಗದಲ್ಲಿ ನಿಂತು ಆ ಅರಿವಿನಿಂದ ಕರ್ಮವನ್ನು ಮಾಡುವುದು ಜಾಣತನ.

Comments