ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -47
ಶ್ಲೋಕ :
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ।
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋSಸ್ತ್ವಕರ್ಮಣಿ ॥೪೭॥
ಅರ್ಥ :
ಕರ್ಮದಲ್ಲಿ ಮಾತ್ರ ನಿನಗೆ ಹಕ್ಕು, ಫಲಗಳಲ್ಲಿ ಎಂದೂ ಇಲ್ಲ. ಫಲವನ್ನೇ ನಂಬಿ ಕರ್ಮ ಮಾಡಬೇಡ (ಕರ್ಮಕ್ಕೆ ಫಲ ನೀಡುವ ಶಕ್ತಿ ತಾನೆಂದು ಭ್ರಮಿಸಬೇಡ). ಅಂತೆಯೇ ನಿಷ್ಕ್ರಿಯತೆ ನಿನಗಂಟದಿರಲಿ.
ವಿವರ ವಿವರಣೆಗಳು :
ಈ ಶ್ಲೋಕವನ್ನು ಅಪಾರ್ಥ ಮಾಡಿಕೊಳ್ಳುವವರೆ ಹೆಚ್ಚು. ಕರ್ಮ ಮಾಡಬೇಕು ಆದರೆ ಫಲವನ್ನು ಬಯಸಬಾರದು ಅಂದರೆ ಏನು? ಇದು ಮನುಷ್ಯನನ್ನು ನಿಷ್ಕ್ರಿಯಗೊಳಿಸುತ್ತದೆ, ಎಂಬಿತ್ಯಾದಿ ವಾದಗಳನ್ನು ಈ ಶ್ಲೋಕದ ಮೇಲೆ ಅನೇಕ ಮಂದಿ ಮಂಡಿಸಿದ್ದಾರೆ. ಆದರೆ ಅವರ್ಯಾರೂ ಶ್ಲೋಕದ ನಿಜವಾದ ಅರ್ಥವನ್ನು ತಿಳಿಯಲು ಪ್ರಯತ್ನಿಸಿಲ್ಲ. ಇಲ್ಲಿ ಫಲವನ್ನು ಬಯಸಬೇಡ ಎಂದು ಎಲ್ಲಿಯೂ ಹೇಳಿಲ್ಲ. ಅದಕ್ಕೆ ಬದಲಾಗಿ ಫಲದಲ್ಲಿ ಅಧಿಕಾರ ಸಾಧಿಸಬೇಡ ಎಂದಿದ್ದಾನೆ ಕೃಷ್ಣ. ಕರ್ಮ ನಿನ್ನ ಕೈಯಲ್ಲಿದೆ- ಆದರೆ ಕರ್ಮ ಫಲ ಭಗವಂತನ ಕೈಯಲ್ಲಿದೆ. ನೀನು ನಾನೇ ಕರ್ಮ ಫಲದ ಹೇತು ಎಂದು ತಿಳಿಯಬೇಡ. ಕರ್ಮಫಲದ ಹೇತು ಭಗವಂತ ಎನ್ನುವ ಎಚ್ಚರ ನಿನಗಿರಲಿ ಎನ್ನುತ್ತಾನೆ ಕೃಷ್ಣ. ಇಲ್ಲಿ ಕೃಷ್ಣ ಬಯಕೆಯನ್ನು ನಿರಾಕರಣೆ ಮಾಡಿಲ್ಲ, ಆದರೆ ‘ಹೀಗೇ ಆಗಬೇಕು’ ಇಲ್ಲದಿದ್ದರೆ ನಾನು ಈ ಕರ್ಮವನ್ನು ಮಾಡಲಾರೆ ಎನ್ನುವ ಅಭಿಪ್ರಾಯ ಸರಿಯಲ್ಲ ಎಂದಿದ್ದಾನೆ. ಬಯಸುವ ಅಧಿಕಾರ ನಮಗಿದೆ ಆದರೆ ಫಲವನ್ನು ಕೊಡುವವ ಭಗವಂತ ಎನ್ನುವ ಪರಿಜ್ಞಾನ ಬೇಕು. ಎಷ್ಟೋ ಸಲ ನಾವು ಅರಿವಿಲ್ಲದೆ ತಪ್ಪನ್ನು ಬಯಸುತ್ತೇವೆ. ಆಗ ಭಗವಂತ ಅದನ್ನು ಕೊಡಲಾರ. ಏಕೆಂದರೆ ಯಾವುದು ಸರಿ, ಯಾವುದು ತಪ್ಪು ಎನ್ನುವ ಪರಿಜ್ಞಾನ ನಮಗಿಲ್ಲ. ಈ ಎಚ್ಚರ ಇದ್ದರೆ ನಮಗೆ ಫಲ ಸಿಗದಿದ್ದಾಗ ದುಃಖವಾಗುವುದಿಲ್ಲ. ನಾವು ಮಾಡುವ ಕರ್ಮವನ್ನು ನಿಷ್ಠೆಯಿಂದ ಭಗವದರ್ಪಣೆಯಾಗಿ ಮಾಡಿ, ಅದರಿಂದ ಏನು ಫಲ ಬಂತೋ ಅದನ್ನು ಹಾಗೇ ಸ್ವೀಕರಿಸುವ ಮನೋವೃತ್ತಿಯನ್ನು ಬೆಳೆಸಿಕೊಂಡರೆ ದುಃಖವಿರುವುದಿಲ್ಲ.
ಯಾವ ಕಾಲಕ್ಕೂ ನಿಷ್ಕ್ರೀಯನಾಗಿ ಕುಳಿತುಕೊಳ್ಳದೆ ಸದಾ ಕರ್ತವ್ಯ ಶೀಲನಾಗು ಎನ್ನುತ್ತಾನೆ ಕೃಷ್ಣ. ‘ಹೀಗೇ ಆಗಬೇಕು’, ‘ಇಂಥಹ ಫಲವೇ ಬರಬೇಕು’ ಎನ್ನುವ ವಿಚಾರವನ್ನು ಬಿಟ್ಟು, ಕರ್ತವ್ಯ ನಿರ್ವಹಿಸಿದಾಗ ಯಾವ ದುಃಖವೂ ಇಲ್ಲ. ಅದನ್ನು ಬಿಟ್ಟು ಫಲದಲ್ಲಿ ಅಧಿಕಾರ ಸಾಧಿಸಿದರೆ ಆ ಫಲ ದಕ್ಕದೇ ಇದ್ದಾಗ ಆಗುವ ಆಘಾತ, ವ್ಯಾಕುಲತೆ(Mental depression) ಭಯಾನಕ. ಸೋಲನ್ನಾಗಲಿ ಗೆಲುವನ್ನಾಗಲಿ ಸಮನಾಗಿ ಕಾಣುವ ಮನಃಸ್ಥಿತಿ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಈ ಹಿಂದೆ ಹೇಳಿದಂತೆ ನಾವು ಸೋಲಿನಲ್ಲಿ ಕಲಿತಷ್ಟು ಗೆಲುವಿನಲ್ಲಿ ಕಲಿಯಲಾಗದು. ಭಗವಂತ ನಮಗೆ ಫಲವನ್ನು ಕೊಡುವಾಗ ನಮ್ಮ ಒಳಿತನ್ನು ಗಮನದಲ್ಲಿಟ್ಟುಕೊಂಡು ಕೊಡುತ್ತಾನೆಯೇ ಹೊರತು , ನಾವು ಅಂದುಕೊಂಡಂತೆ ಅಲ್ಲ. ಬಂದದ್ದನ್ನು ಬಂದಂತೆ ಸ್ವೀಕರಿಸಿ, ಎಂದೂ ನಿಷ್ಕ್ರೀಯನಾಗದೆ, ಫಲದಲ್ಲಿ ಅಧಿಕಾರವನ್ನು ಸಾಧಿಸದೆ ಮುನ್ನೆಡೆಯಬೇಕು ಎನ್ನುವುದು ಕೃಷ್ಣನ ಕರ್ಮ ಸಿದ್ಧಾಂತ. ಇಲ್ಲಿ ಅರ್ಜುನ ತಾನು ಧರ್ಮ ರಕ್ಷಣೆ ಮಾಡಲು, ಧರ್ಮದ ವಿಜಯಕ್ಕಾಗಿ ಯುದ್ಧ ಮಾಡುತ್ತೇನೆ ಅಂದುಕೊಳ್ಳುವುದು ತಪ್ಪಲ್ಲ. ಈ ಹಂತದಲ್ಲಿ ಸೋಲು-ಗೆಲುವಿನ ಬಗ್ಗೆ ಯೋಚಿಸದೆ, ಅದನ್ನು ಪೂರ್ಣ ಭಗವಂತನಲ್ಲಿ ಅರ್ಪಿಸಿ, ತನ್ನ ಪಾಲಿಗೆ ಬಂದ ಕರ್ತವ್ಯವನ್ನು ನಿಷ್ಟೆಯಿಂದ ತನ್ನ ಶಕ್ತಿ ಮೀರಿ ನಿಭಾಯಿಸುವುದು ಆತನ ಧರ್ಮ. ಹೀಗೆ ಮಾಡಿದಾಗ ಯುದ್ಧದ ಪ್ರತಿಯೊಂದು ಹಂತದಲ್ಲಿ ಬರುವ ಫಲಿತಾಂಶ ಆತನನ್ನು ಕಂಗೆಡಿಸಲಾರವು. ಏನೇ ಫಲಿತಾಂಶ ಬಂದರೂ ಅದು ಭಗವಂತನ ಪ್ರಸಾದ ಎಂದು ಸ್ವೀಕರಿಸುತ್ತಾ ಮುಂದೆ ಸಾಗಬೇಕು ಅಷ್ಟೆ.
___________________________________________
ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -48
ಶ್ಲೋಕ:
ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ ।
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ ॥೪೮॥
ಅರ್ಥ:
ಧನಂಜಯ, ‘ಯೋಗ’ ದಲ್ಲಿ ನೆಲೆಗೊಂಡು ಕರ್ಮಗಳನ್ನು ಮಾಡು-ಫಲದ ನಂಟನ್ನು ತೊರೆದು, ಕೆಲಸ ಕೈಗೂಡಿದರೂ, ಕೆಟ್ಟರೂ-ಸಮಭಾವದಿಂದಿದ್ದು. ಇಂಥ ಸಮಭಾವಕ್ಕೆ ‘ಯೋಗ’ವೆಂದು ಹೆಸರು.
ವಿವರ ವಿವರಣೆಗಳು :
ಎಂತಹ ಕರ್ಮ ಮಾಡುವುದಾದರೂ ಸಹ ಸುಮ್ಮನೆ ಮಾಡುವುದಲ್ಲ. ಅದರ ಹಿಂದೆ ಒಂದು ಯೋಗವಿರಬೇಕು. ಭಗವಂತ ಫಲವನ್ನು ಕೊಡತಕ್ಕಂತವ, ನನ್ನಿಂದ ಕರ್ಮವನ್ನು ಮಾಡಿಸತಕ್ಕಂತವನೂ ಅವನೆ. ಏನು ಫಲ, ಎಷ್ಟು ಫಲ, ಯಾವಾಗ ಫಲ, ಎಲ್ಲವೂ ಅವನಿಗೆ ಸೇರಿದ್ದು. ಸಿಕ್ಕಿದರೂ ಸಂತೋಷ, ಸಿಗದಿದ್ದರೂ ಸಂತೋಷ. ಇದು ಭೌತಿಕ ಸಮತೋಲನ. ಇಂತಹ ಸಮತೋಲನದಲ್ಲಿ ಕರ್ತವ್ಯ ದೃಷ್ಟಿಯಿಂದ ಕರ್ಮವನ್ನು ಮಾಡಬೇಕು. ನಮ್ಮ ಬದುಕಿನ ಸಮಸ್ತ ಕರ್ಮದಲ್ಲಿ ಈ ಅನುಸಂಧಾನವಿದ್ದಾಗ ಅದು ಭಗವಂತನ ಪೂಜೆಯಾಗುತ್ತದೆ. ಇದೇ ಕರ್ಮಯೋಗ.
ಸಿದ್ಧಿ-ಅಸಿದ್ಧಿಯನ್ನು ಸಮಭಾವದಿಂದ ಕಾಣುವುದು ಮನಸ್ಸಿನ ಯೋಗ. ಇದೊಂದು ಮಾನಸಿಕ ಸ್ಥಿತಿ. ಈ ರೀತಿಯ ಯೋಗ ಭಾವನೆಯಿಂದ ಕರ್ಮ ಮಾಡಿದರೆ-ಫಲ ಬಂದಾಗ ಹೆಗ್ಗಳಿಕೆ ಇರುವುದಿಲ್ಲ, ಬಾರದೆ ಇದ್ದಾಗ ದುಃಖವಿರುವುದಿಲ್ಲ. ಹೀಗೆ ಸಿದ್ಧಿ-ಅಸಿದ್ಧಿಗಳ ಸಮತ್ವದಿಂದ ಮಾಡುವ ಪ್ರತಿಯೊಂದು ಕರ್ತವ್ಯವೂ ಕೂಡಾ ಭಗವಂತನ ಪೂಜೆಯಾಗುತ್ತದೆ. ಈ ಅನುಸಂಧಾನವಿಲ್ಲದೆ ಮಾಡುವ ಮಹಾಯಜ್ಞ ಕೂಡಾ ಪೂಜೆ ಆಗಲಾರದು. ಭಗವಂತ ನನ್ನಿಂದ ಈ ಕೆಲಸವನ್ನು ಮಾಡಿಸಿದ. ಇದು ಭಗವಂತನ ಪೂಜಾರೂಪವಾಗಿ ಅರ್ಪಿತವಾಗಲಿ ಎನ್ನುವ ಅನುಸಂಧಾನವಿದ್ದಾಗ ಮಾತ್ರ ಕರ್ಮ-ಯೋಗವಾಗುತ್ತದೆ. ನಮ್ಮ ಮನಸ್ಸು ಭಗವಂತನಲ್ಲಿ ಸಂಯೋಗ ಹೊಂದುವುದೇ ಯೋಗ. ಈ ಅನುಸಂಧಾನಕ್ಕೆ ಪೂರಕವಾದ ಮತ್ತು ಅನುಸಂಧಾನಪೂರ್ವಕವಾದ ಎಲ್ಲಾ ಕರ್ಮವೂ ಕರ್ಮಯೋಗ.
Comments