ಲಲಿತ ಸಹಸ್ರ ನಾಮ ಮಹತ್ವ ಮತ್ತು ಲಲಿತ ದೇವಿಯ ಕಥೆ

ಲಲಿತ ಸಹಸ್ರ ನಾಮ ಪಠಿಸುವ ಉದ್ದೇಶ ಮತ್ತು ಲಲಿತ ದೇವಿಯ ಕಥೆ..!!

ಶ್ರೀ ಲಲಿತಾ ಸಹಸ್ರನಾಮ ಸೂತ್ರ ಲಲಿತಾ ದೇವಿಗೆ ಸಮರ್ಪಿತವಾದ ಪವಿತ್ರ ಮತ್ತು ಶಕ್ತಿಯುತ ಸ್ತೋತ್ರವಾಗಿದೆ. ಲಲಿತಾ ದೇವಿಯನ್ನು ತ್ರಿಪುರ ಸುಂದರಿ ಅಥವಾ ಷೋಡಶಿ ಎಂದೂ ಕರೆಯುತ್ತಾರೆ. ‘ಸಹಸ್ರ’ ಎಂದರೆ ಸಾವಿರ ಮತ್ತು ‘ನಾಮ’ ಎಂದರೆ ಹೆಸರು. ಇದು ಲಲಿತಾ ದೇವಿಯ 1000 ಹೆಸರುಗಳನ್ನು ಒಳಗೊಂಡಿದೆ, ಪ್ರತಿಯೊಂದೂ ಹೆಸರು ತಾಯಿ ಲಲಿತಾದೇವಿಯ  ದೈವಿಕ ಗುಣಗಳು ಮತ್ತು ಗುಣಲಕ್ಷಣಗಳನ್ನು ವ್ಯಾಖ್ಯಾನಿಸುತ್ತದೆ.
ಬ್ರಹ್ಮಾಂಡಪುರಾಣದಲ್ಲಿ ಹಯಗ್ರೀವ ಮುನಿಯು ಅಗಸ್ತ್ಯರಿಗೆ ಶ್ರೀಲಲಿತೋಪಾಖ್ಯಾನವನ್ನು ಹೇಳಿ ಲಲಿತಾ ಸಹಸ್ರ ನಾಮದಿಂದ ಜಗನ್ಮಾತೆಯನ್ನು ಪ್ರಾರ್ಥಿಸುತ್ತಾರೆ.
ಲಲಿತಾಸಹಸ್ರನಾಮಕ್ಕೂ ಮುನ್ನ ಬರುವ ಲಲಿತಾಂಬೆಯ ಕಥೆ ಈ ರೀತಿ ಇದೆ : ಶಿವನು ಮನ್ಮಥನನ್ನು ತನ್ನ ಮೂರನೆಯ ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದನು, ಚಿತ್ರಕರ್ಮನು ಮನ್ಮಥನ ಬೂದಿಯನ್ನ ಒಟ್ಟುಗೂಡಿಸಿ ಪುರುಷಾಕೃತಿಯನ್ನ ನಿರ್ಮಾಣ ಮಾಡಿದನು, ಶಿವನ ದೃಷ್ಟಿ ಬಿದ್ದಕೂಡಲೆ ಆಕೃತಿಗೆ ಜೀವ ಪ್ರವೇಶ ವಾಯಿತು, ಚಿತ್ರಕರ್ಮನಿಂದ ಶತರುದ್ರ ಮಂತ್ರಾನುಷ್ಠಾನದ ಉಪದೇಶಪಡೆದು ರುದ್ರನನ್ನು ಪೂಜಿಸಿ ಅರವತ್ತು ಸಾವಿರ ವರ್ಷಗಳವರೆಗೆ ಚಕ್ರವರ್ತಿಯಾಗುವಂತೆ ವರಪಡೆದು ಭಂಡ ಎಂದು ಪ್ರಸಿದ್ದನಾದನು.
ರುದ್ರನ ಕೆಂಗಣ್ಣಿನಿಂದ ಸುಡಲ್ಪಟ್ಟ ಬೂದಿಯಿಂದ ಹುಟ್ಟಿದ ಭಂಡನು ರೌದ್ರ ಸ್ವಭಾವವನ್ನ ಹೊಂದಿದ್ದನು, ಶೋಣಿತಪುರದಲ್ಲಿ ರಾಜ್ಯವಾಳುತ್ತ ದೇವತೆಗಳಿಗೆ ನಾನಾವಿಧವಾದ ತೊಂದರೆಗಳನ್ನು ನೀಡುತ್ತಿದ್ದನು, ನಾರದರ ಉಪದೇಶದಂತೆ ಇಂದ್ರನು ಸಮಸ್ತ ದೇವತೆಗಳೊಂದಿಗೆ ಹಿಮಗಿರಿಯ ತಪ್ಪಲಿಗೆ ಬಂದು ಭಾಗೀರಥೀ ತೀರದಲ್ಲಿ ಪರಾಶಕ್ತಿಯ ಪೂಜೆಯನ್ನು ಯಾಗ ವಿಧಾನದಿಂದ ಮಾಡಿದನು.

ಆ ಯಜ್ಞ ಕುಂಡದಿಂದ ಅನುಪಮ ತೇಜದಿಂದ ಕೂಡಿದ ಒಂದು ಚಕ್ರಾಕಾರವು ಉದ್ಭವಿಸಿತು, ಆ ಚಕ್ರದ ಮಧ್ಯದಲ್ಲಿ ಸೂರ್ಯ ಪ್ರಭೆಯುಳ್ಳವಳು, ಬ್ರಹ್ಮ ವಿಷ್ಣು ಶಿವ ಸ್ವರೂಪಳೂ, ಸೌಂದರ್ಯಸಾರ ಸೀಮಾಂತಳೂ, ಆನಂದ ರಸ ಸಾಗರಳೂ, ಜಪಾ ಕುಸುಮದ ಕಾಂತಿಯುಳ್ಳವಳೂ, ದಾಳಿಂಬೆ ಹೂ ಬಣ್ಣದ ಸೀರೆಯನ್ನು ಉಟ್ಟಿರುವವಳೂ, ಸರ್ವಾಭರಣ ಭೂಷಿತಳೂ, ಶೃಂಗಾರರಸಕ್ಕೆ ಆಲಯದಂತಿರು ವವಳೂ, ಪಾಶ-ಕುಶ-ಇಕ್ಷು-ಕೋದಂಡ-ಪಂಚ ಬಾಣಗಳಿಂದ ಶೋಭಿಸುತ್ತಿರುವ ಕರಗಳುಳ್ಳವಳೂ ಆದ ಶ್ರೀ ಲಲಿತಾಂಬೆಯು ಅವತರಿಸಿದಳು.


ಉಪಾಸನೆಯಲ್ಲಿ 1.ದ್ವಾದಶ, 2.ಅಷ್ಟೋತ್ತರ, 3.ತ್ರಿಶತಿ ಹಾಗೂ 4. ಸಹಸ್ರನಾಮ ಪೂಜೆಗಳು ಮಹತ್ವವನ್ನು ಪಡೆದಿವೆ.


ಲಲಿತಾ ಸಹಸ್ರನಾಮದ ಹಿನ್ನೆಲೆ 

 ಯಜ್ಞಕುಂಡ ದಲ್ಲಿ ಉತ್ಪನ್ನವಾದ ಚಕ್ರಾಕಾರದ ಮಧ್ಯೆ ಅವತರಿಸಿದ ದೇವಿಯು ದೇವತೆಗಳ ಪ್ರಾರ್ಥನೆಯಂತೆ ಭಂಡಾಸುರನ ನಾಶಕ್ಕೆ ಸಮ್ಮತಿಸಿದಳು, ಶಿವನನ್ನು ವರಿಸಿ ಮಹಾರಾಜ್ಞಿಯಾದಳು. ಅನಂತರ ಪರಬ್ರಹ್ಮ ಸ್ವರೂಪಿಣಿಯು ಭಂಡಾಸುರನನ್ನು ಇತರ ದೈತ್ಯರನ್ನು ಕೊಂದು ಶೋಣಿತಪುರವನ್ನು ನಾಶ ಮಾಡಿದಳು.

ದೇವತೆಗಳು ದೇವಿಯನ್ನು ಸ್ತುತಿಸಿ ಪತಿ ಮೃತ್ಯುವಿನಿಂದ ನೊಂದಿರುವ ರತಿಯನ್ನು ಅನುಗ್ರಹಿಸ ಬೇಕೆಂದು ಬೇಡಿಕೊಂಡರು, ಕರುಣಾಮಯಿಯಾದ ದೇವಿಯು ರತಿಯ ದುಃಖವನ್ನ ಸಹಿಸಲಾರದೆ ತನ್ನ ಕೃಪಾಕಟಾಕ್ಷದಿಂದ ಮನ್ಮಥನನ್ನು ಪುನಃ ಬದುಕಿಸಿದಳು, ಅನಂತರ ವಿಶ್ವಕರ್ಮನು ಮತ್ತು ಮಯನು ಮೇರುಪರ್ವತದ ಮಧ್ಯಶಿಖರದಲ್ಲಿ ದೇವಿಗಾಗಿ ಶ್ರೀಪುರವೆಂಬ ಪಟ್ಟಣವನ್ನು ನಿರ್ಮಿಸಿದರು, ಶ್ರೀಪುರದಲ್ಲಿ ಚಿಂತಾಮಣಿಗೃಹ ವೆಂಬ ಅರಮನೆಯಿರುವುದು, ಇದರ ಮಧ್ಯದಲ್ಲಿ ಬಿಂದು ಪೀಠವೆಂದು ಪ್ರಸಿದ್ಧವಾದ ದೇವಿಯ ಪೀಠವಿದೆ.
ಆ ಮಹಾಪೀಠದಲ್ಲಿ ಶ್ರೀದೇವಿಯ ಮಂಚರತ್ನವು ವಿರಾಜಿಸುತ್ತಿರುವುದು, ಬ್ರಹ್ಮ-ವಿಷ್ಣು-ಈಶ್ವರ-ಮಹೇಶ್ವರರೇ ಇದರ ನಾಲ್ಕು ಕಾಲುಗಳು, ಸದಾಶಿವನೇ ಈ ಮಂಚದ ಹಲಗೆ, ಇದರ ಮೇಲೆ ಪೂರ್ವ ದಿಙ್ಮುಖನಾಗಿ ಭಗವಂತನಾದ ಕಾಮೇಶ್ವರ ನು ಕುಳಿತಿರುವನು, ಆ ಕಾಮೇಶ್ವರನ ಅಂಕದ ಮೇಲೆ ಸದಾ ಷೋಡಶ ವರ್ಷದವಳಾದ ಶ್ರೀಲಲಿತಾಂಬಿಕೆಯು ಕುಳಿತಿರುವಳು.
ಶ್ರೀಚಕ್ರವು ರೇಖಾಕೃತಿಯಿಂದ ಶ್ರೀಪುರವನ್ನು ರೂಪಿಸಿದೆ, (ಸೌಂದರ್ಯಲಹರಿಯಲ್ಲಿ ಇದೆ ರೀತಿ ಶಂಕರಾಚಾರ್ಯರು ವರ್ಣಿಸಿದ್ದಾರೆ), ಶ್ರೀ ಶಂಕರಾಚಾರ್ಯರು, ಭಗವತಿಯ ಕರುಣಾ ಮೃತವನ್ನು ವರ್ಣಿಸುತ್ತಾ, ಭಕ್ತಿಯಿಂದ ಅಮ್ಮಾ ಎಂದರೆ ಸಾಕು, ಕರುಣೆಯ ವರ್ಷಧಾರೆಯನ್ನು ಸುರಿಸಲು ಭಗವತಿ ಲಲಿತಾ ಮಹಾತ್ರಿಪುರ ಸಂದರಿ ಕಾಯುತ್ತಾ ಇರುತ್ತಾಳಂತೆ, ಶ್ರೀದೇವಿಯ ಅನುಗ್ರಹ ಎಂತಹದ್ದೆಂದರೇ, ಏಕ ಕಾಲದಲ್ಲಿಯೇ ಭೋಗವನ್ನೂ – ಮೋಕ್ಷವನ್ನೂ ಎರಡನ್ನೂ ಕರುಣಿಸುವವಳು.
ಇಂತಹ ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾಗಲು ಇರುವ ಮಾರ್ಗಗಳಲ್ಲಿ, ಶ್ರೀವಿದ್ಯಾ ಉಪದೇಶದ ಮೂಲಕ, ಶ್ರೀಚಕ್ರ ವನ್ನು ಅರ್ಚಿಸುವುದು ಒಂದಾದರೆ, ಸೌಂದರ್ಯ ಲಹರೀ ಮತ್ತು ಲಲಿತಾ ಸಹಸ್ರ ನಾಮ ಪಠಿಸುವುದು ಅತ್ಯಂತ ಸುಲಭವೂ ಉತ್ಕೃಷ್ಟವೂ ಆದದ್ದು, ಇಂತಹ ಘನವಾದ ಲಲಿತಾ ಸಹಸ್ರ ನಾಮವನ್ನು ಅರ್ಥಸಹಿತ ತಿಳಿದು ಭಗವತಿಯ ಅನುಗ್ರಹಕ್ಕೆ ಪಾತ್ರರಾಗೋಣ.


ಲಲಿತಾ ಸಹಸ್ರನಾಮವನ್ನು ಪಟಿಸುವುದರಿಂದ ಆಗುವ ಲಾಭಗಳು
ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಲು ಸಾಧ್ಯವಾಗದಿದ್ದರೆ, ಪವಿತ್ರ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ,  ದಾನ ಧರ್ಮ ಮಾಡಲು ಆಗದಿದ್ದರೆ ಹಾಗೂ ದೇವತಾ ಕಾರ್ಯಗಳನ್ನ ಮಾಡಲು ಸಾಧ್ಯವಾಗದಿದ್ದರೆ ನೀವು ಲಲಿತಾ ಸಹಸ್ರನಾಮವನ್ನು ಪಠಿಸುವ ಮೂಲಕ ಈ ಎಲ್ಲಾ ಕಾರ್ಯಗಳನ್ನು ಮಾಡಿದ ಶುಭ ಫಲವನ್ನು ಪಡೆದುಕೊಳ್ಳಬಹುದು.

 ಶ್ರೀ ಲಲಿತಾ ಸಹಸ್ರನಾಮವನ್ನು ನಿಯಮಿತವಾಗಿ ಪಠಿಸುವುದರಿಂದ ಅಪೂರ್ಣವಾದ ಪೂಜೆಯಿಂದುಂಟಾಗುವ ಕಷ್ಟವನ್ನು ದೂರಾಗಿಸುತ್ತದೆ.

ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸುವುದರಿಂದ ಅಕಾಲಿಕ ಮರಣದ ಭಯವನ್ನು ದೂರಾಗಿಸುತ್ತದೆ. ದೀರ್ಘ ಮತ್ತು ಉತ್ತಮ ಆರೋಗ್ಯಕರ ಜೀವನವನ್ನು ನೀಡುತ್ತದೆ.

ಯಾರಿಗಾದರೂ ಜ್ವರ ಬಂದಾಗ  ಹಣೆಯನ್ನು ಹಿಡಿದು ಧಾರ್ಮಿಕವಾಗಿ ಲಲಿತಾ ಸಹಸ್ರನಾಮವನ್ನು ಜಪಿಸಿದರೆ ಜ್ವರವು ಕಡಿಮೆಯಾಗುತ್ತದೆ. ನೀವು ಎಷ್ಟು ಬಾರಿ ಲಲಿತಾ ಸಹಸ್ರನಾಮವನ್ನು ಜಪಿಸುತ್ತೀರೋ ಅಷ್ಟು ಬಾರಿ ಶುಭ ಫಲಿತಾಂಶವನ್ನು ಪಡೆಯುವಿರಿ. ಶ್ರೀ ಲಲಿತಾ ಸಹಸ್ರನಾಮ ಅರ್ಚನೆಗೆ ಬಳಸಿದ ವಿಭೂತಿಯನ್ನು ಹಣೆಗೆ ಹಚ್ಚುವುದರಿಂದ ಕೂಡ ಜ್ವರ ಮತ್ತು ತಲೆನೋವು ಕಡಿಮೆಯಾಗುತ್ತದೆ.

ಗ್ರಹಗಳಿಗೆ ಸಂಬಂಧಿಸಿದ ಮತ್ತು ದುಷ್ಟ ಶಕ್ತಿಗಳಿಗೆ ಸಂಬಂಧಿಸಿದ ತೊಂದರೆಗಳಿಂದ ಹೊರಬರಲು ಒಂದು ಪಾತ್ರೆ ನೀರನ್ನು ಅಥವಾ ಒಂದು ಲೋಟ ನೀರನ್ನು ಧಾರ್ಮಿಕವಾಗಿ ತಲೆಯ ಮೇಲೆ ಸುರಿದುಕೊಂಡು ಶ್ರೀ ಲಲಿತಾ ಸಹಸ್ರನಾಮ ಜಪಿಸಬೇಕು.

 ವಿಷಕ್ಕೆ ಸಂಬಂಧಿಸಿದ ಯಾವುದೇ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವವರು ಲಲಿತಾ ದೇವಿಯ ಚಿತ್ರವನ್ನು ಮನಸ್ಸಿಲ್ಲಿಟ್ಟುಕೊಂಡು ಸಹಸ್ರನಾಮ ಜಪಿಸಬೇಕು.

 ದುರ್ಬಲತೆಯನ್ನು ದೂರಾಗಿಸಿಕೊಳ್ಳಲು, ಸಂತಾನ ಭಾಗ್ಯಕ್ಕಾಗಿ ಓರ್ವ ವ್ಯಕ್ತಿಯು ಲಲಿತಾ ಸಹಸ್ರನಾಮ ಜಪಿಸುವಾಗ ಇಟ್ಟುಕೊಂಡ ತುಪ್ಪವನ್ನು ಸೇವಿಸಬೇಕು.

ಶ್ರೀ ಲಲಿತಾ ಸಹಸ್ರನಾಮವನ್ನು ನಿಯಮಿತವಾಗಿ ಪಠಿಸುವುದರಿಂದ ಸುತ್ತಮುತ್ತಲಿನ ವಾತಾವರಣವು ಶುದ್ಧವಾಗುತ್ತದೆ. ನಮ್ಮ ದೇಹದ ಪ್ರತಿಯೊಂದು ನರಗಳು ಉತ್ತೇಜನಗೊಳ್ಳುತ್ತದೆ. ಮತ್ತು ವ್ಯಕ್ತಿಯಲ್ಲಿನ ಸೂಕ್ಷ್ಮ ಶಕ್ತಿಯು ಜಾಗೃತಗೊಳ್ಳುತ್ತದೆ.
ಶ್ರೀ ಲಿಲತಾ ಸಹಸ್ರನಾಮವನ್ನು ನಿಯಮಿತವಾಗಿ ಜಪಿಸುವ ವ್ಯಕ್ತಿಯನ್ನು ಲಲಿತಾ ದೇವಿಯು ಅಪಘಾತಗಳಿಂದ ಮತ್ತು ಶತ್ರುಗಳಿಂದುಂಟಾಗುವ ಸಮಸ್ಯೆಗಳನ್ನು ದೂರಾಗಿಸಿ, ಅವರನ್ನು ವಿಜಯಶಾಲಿಯಾಗುವಂತೆ ಮಾಡುತ್ತಾಳೆ.


 ಶುಕ್ರವಾರದಂದು ವಿಶೇಷವಾಗಿ ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸಬೇಕು. ನಿಯಮಿತವಾಗಿ ಲಲಿತಾ ಸಹಸ್ರನಾಮ ಓದುವುದರಿಂದ ಆ ವ್ಯಕ್ತಿಯಲ್ಲಿ ಶಕ್ತಿ, ಖ್ಯಾತಿ, ಇಚ್ಛಾಶಕ್ತಿ ಹೆಚ್ಚಾಗುತ್ತದೆ.

ಯಾವುದೇ ಸಮಯದಲ್ಲಿ ಮತ್ತು ಪ್ರತೀ ಬಾರಿಯೂ ಜಪಿಸಬಹುದಾದ ಒಂದು ಪ್ರಾರ್ಥನೆಯ ರೂಪವೇ ಶ್ರೀ ಲಲಿತಾ ಸಹಸ್ರನಾಮವಾಗಿದೆ.

ಲಲಿತಾ ಸಹಸ್ರನಾಮವನ್ನು ನಿತ್ಯ ಜಪಿಸುವುದರಿಂದ ಅಜ್ಞಾನದ ಕತ್ತಲು ಸರಿದು ಜ್ಞಾನದ ಬೆಳಕು ಬರುವುದು.

Comments