ಕಲ್ಪವೃಕ್ಷ ಎಂದು ಕರೆದಿರುವುದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ತೆಂಗಿನ ಪ್ರತಿ ಭಾಗವೂ ಉಪಯುಕ್ತವೇ ಹೌದು. ಆರೋಗ್ಯದ ವಿಷಯಕ್ಕೆ ಬಂದಾಗ ತೆಂಗಿನ ತಿರುಳು, ನೀರು ಮತ್ತು ಎಣ್ಣೆ, ಇವೆಲ್ಲವೂ ಹಲವು ರೀತಿಯಲ್ಲಿ ಪ್ರಯೋಜನ ನೀಡುತ್ತವೆ. ಕೊಬ್ಬರಿ ಎಣ್ಣೆಯಂತೂ ತ್ವಚೆ, ಕೇಶ ಹಾಗೂ ಜೀರ್ಣಾಂಗಗಳಿಗೆ ನೀಡುವ ಪ್ರಯೋಜನಗಳ ಭಂಡಾರವನ್ನೇ ಒದಗಿಸುತ್ತದೆ. ಎಳನೀರು ಈ ಜಗತ್ತಿನಲ್ಲಿ ದೊರಕುವ ಅತ್ಯುತ್ತಮ ಜೀವಜಲವಾಗಿದ್ದು ಅತ್ಯುತ್ತಮ ಮೂತ್ರವರ್ಧಕವೂ ಆಗಿದೆ.
ಎಳನೀರಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ವಿವಿಧ ಬಗೆಯ ವಿಟಮಿನ್ ಮತ್ತು ಖನಿಜಾಂಶಗಳಿವೆ. ಆಂಟಿಆಕ್ಸಿಡೆಂಟ್ ಗುಣವಿರುವ ಎಳನೀರು ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆ, ದಣಿವಾರಿಸಲು ಮಾತ್ರ ಎಳನೀರು ಬೆಸ್ಟ್ ಅಲ್ಲ. ಎಲ್ಲ ಕಾಲದಲ್ಲಿಯೂ ಎಳನೀರು ಸೇವನೆ ಮಾಡಬೇಕು. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕುಡಿಯುವುದು ಎಳ್ನೀರು.
ಸಕ್ಕರೆ ಕಾಯಿಲೆಗೂ ಮದ್ದು
ಸಾಮಾನ್ಯವಾಗಿ ಸಿಹಿಯಾಗಿರುವ ಪದಾರ್ಥ ಹಾಗೂ ನೀರೆಂದರೆ ಮದುಮೇಹಿಗಳು ದೂರ ಉಳಿಯುವುದುಂಟು. ಆದರೆ, ಎಳನೀರು ಬ್ಲಡ್ ಶುಗರ'ನ್ನು ನಿಯಂತ್ರಿಸುತ್ತದೆ. ಎಳನೀರಿನಲ್ಲಿ ಮೆಗ್ನೀಸಿಯಮ್ ಹೇರಳವಾಗಿದ್ದು, ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ ಸಾಮಾನ್ಯವಾಗಿ ಹೋಗಿದೆ. ಎಳನೀರು ಮನುಷ್ಯನ ದೇಹದಲ್ಲಿರುವ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಎಳನೀರಿನಲ್ಲಿ ಪೊಟ್ಯಾಸಿಯಮ್ ಹೆಚ್ಚಾಗಿರುವುದರಿಂದ ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಹಾಗೂ ರಕ್ತ ಹೆಪ್ಪುಗಟ್ಟುವಿಕೆಯಂತಹ ಅಪಾಯವನ್ನು ಕಡಿಮೆ ಮಾಡುತ್ತದೆ.
ಕಿಡ್ನಿಸ್ಟೋನ್ಸ್ ನಿಯಂತ್ರಿಸುತ್ತದೆ
ಹೆಚ್ಚೆಚ್ಚು ನೀರು ಕುಡಿಯುವುದರಿಂದ ಕಿಡ್ನಿಯಲ್ಲಿರುವ ಕಲ್ಲು ಹೊರ ಬರುತ್ತದೆ ಎಂದು ಹೇಳಲಾಗುತ್ತಿದೆ. ಕಿಡ್ನಿಯಲ್ಲಿ ಕಲ್ಲು ಇರುವವರು ಹೆಚ್ಚಾಗಿ ಎಳನೀರು ಕುಡಿಯುವುದರಿಂದ ಕಿಡ್ನಿಯಲ್ಲಿರುವ ಕಲ್ಲುಗಳು ನಿಯಂತ್ರಣಗೊಳ್ಳುತ್ತವೆ. ಮೂತ್ರಪಿಂಡಗಳಲ್ಲಿ ಸಂಗ್ರಹಗೊಳ್ಳುವ ಲವಣಾಂಶಗಳನ್ನು ಮೂತ್ರದ ಮೂಲಕ ಹೊರ ಹಾಕಲು ಎಳನೀರು ಸಹಾಯ ಮಾಡುತ್ತದೆ.
ಆಯಾಸ ದೂರಾಗಿಸುತ್ತದೆ
ವ್ಯಾಯಾಮದ ಬಳಿಕ ದೇಹ ಸುಸ್ತಾದಂತೆ ಎನಿಸುತ್ತದೆ. ಈ ವೇಳೆ ಎಳನೀರನ್ನು ಕುಡಿಯುವುದರಿಂದ ದೇಹಕ್ಕೆ ಶಕ್ತಿಯೊದಗುತ್ತದೆ. ನಿರ್ಜಲೀಕರಣದಂತಹ ಸಮಸ್ಯೆಗಳನ್ನೂ ಎಳನೀರು ದೂರಾಗಿಸುತ್ತದೆ.
ತೂಕ ಇಳಿಕೆಗೂ ಸಹಾಯಕ
ಎಳನೀರು ಸೇವನೆಯ ಪ್ರಮುಖ ಉಪಯೋಗಗಳ ಪೈಕಿ ದೇಹದ ತೂಕ ಕಳೆದುಕೊಳ್ಳುವಿಕೆಯೂ ಕೂಡ ಒಂದಾಗಿದೆ. ಎಳನೀರಿನಲ್ಲಿ ಫೈಬರ್ ಅಂಶ ಹೆಚ್ಚಾಗಿದ್ದು, ಕೊಬ್ಬಿನಾಂಶ ಕಡಿಮೆ ಇರುತ್ತದೆ. ಫೈಬರ್ ದೇಹದ ಜೀರ್ಣ ಕ್ರಿಯೆ ನಿಧಾನಗೊಳಿಸಿ, ಹಸಿವನ್ನು ನಿಗ್ರಹಿಸುತ್ತದೆ. ಇದು ನಿಮಗೆ ಹೊಟ್ಟಿ ತುಂಬಿದ ಭಾವವನ್ನು ನೀಡುತ್ತದೆ. ಇದರಂದ ಬಹುಬೇಗ ದೇಹದ ತೂಕವನ್ನು ಇಳಿಕೆ ಮಾಡಬಹುದು.
ಚರ್ಮದ ಆರೈಕೆಗೂ ಸಿದ್ದೌಷಧಿ ಎಳನೀರು
ದೀರ್ಘಕಾಲ ವಯಸ್ಸಾಗದಂತೆ ಉಳಿಯಲು ಎಳನೀರು ಸಹಾಯ ಮಾಡುತ್ತದೆ. ಮುಖದಲ್ಲಿ ಮೊಡವೆಗಳು ಮತ್ತು ರಾಡಿಕಲ್ ಗಳನ್ನು ನಿವಾರಿಸುತ್ತದೆ. ತೆಂಗಿನ ಕಾಯಿ ನೀರನ್ನು ಮೊಡವೆ, ಕಲೆಗಳು, ಸುಕ್ಕುಗಳು, ಸೆಲ್ಯುಲೈಟ್ ಮತ್ತು ಎಸ್ಟಿಮಾ ಜಾಗಗಳಿಗೆ ನಿರಂತರವಾಗಿ ಎರಡರಿಂದ ಮೂರು ವಾರಗಳ ಕಾಲ ರಾತ್ರಿ ಹಚ್ಚಿ ಮಲಗಿದರೆ ತ್ವಚೆ ಸ್ವಚ್ಛವಾಗುತ್ತದೆ ಹಾಗೂ ಕಾಂತಿಯುತವಾಗುತ್ತದೆ. ಹೆಚ್ಚೆಚ್ಚು ಎಳನೀರು ಕುಡಿಯುವುದರಿಂದ ಚರ್ಮದಲ್ಲಿರುವ ಹೆಚ್ಚಿನ ಆಯಿಲ್ ಅಂಶ ಕಡಿಮೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಫೇಷಿಯಲ್ ಕ್ರೀಮ್ ಗಳು, ಶ್ಯಾಂಪುಗಳು, ಕಂಡೀಷನರ್ ಹಾಗೂ ಲೋಷನ್ ಗಳಲ್ಲಿ ಎಳನೀರು ಬಳಕೆ ಮಾಡುತ್ತಿರುವುದೂ ಕೂಡ ಸಾಮಾನ್ಯವಾಗಿ ಹೋಗಿದೆ.
ಹೆಚ್ಚು ಉಷ್ಣಾಂಶ ಇರುವ ಪ್ರದೇಶದಲ್ಲಿರುವ ಜನರು ಎಳನೀರನ್ನು ಹೆಚ್ಚಾಗಿ ಕುಡಿಯಬೇಕು. ಇದು ಚರ್ಮ ನಿರ್ಜಲೀಕರಣಗೊಳ್ಳದಂತೆ ಕಾಯುತ್ತದೆ. ಅಲ್ಲದೆ, ಚರ್ಮಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನೂ ನೀಡುತ್ತದೆ. ಎಷ್ಟೆಲ್ಲಾ ಉಪಯೋಗವಿರುವ ಎಳನೀರನ್ನು ನಮ್ಮ ಪ್ರತೀನಿತ್ಯದ ಆಹಾರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಕೊಳ್ಳುವುದರಿಂದ ಸಾಕಷ್ಟು ಉಪಯೋಗಗಳನ್ನು ಪಡೆಯಬಹುದಾಗಿದೆ.
Comments