ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ದಕ್ಷಿಣ ಭಾರತದ ಪ್ರಾಚೀನ ದೇವಾಲಯಗಳಲ್ಲಿ ಕದ್ರಿ ಮಂಜುನಾಥ ಸ್ವಾಮಿ ದೇವಾಲಯ ಕೂಡ ಒಂದು
ಕದ್ರಿ ಬೆಟ್ಟದ ಮೇಲಿರುವ ಶ್ರೀ ಮಂಜುನಾಥೇಶ್ವರ ದೇವಾಲಯವನ್ನು 10-11ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂಬ ಪ್ರತೀತಿಯಿದೆ. ಇದನ್ನು 14ನೇ ಶತಮಾನದಲ್ಲಿ ಸಂಪೂರ್ಣ ಶಿಲಾಮಯ್ಯ ದೇವಸ್ಥಾನವನ್ನು ನಿರ್ಮಾಣ ಮಾಡಲಾಯಿತು
ದೇವಾಲಯದ ಸ್ಥಳ ಪುರಾಣ
ಮಹಾ ವಿಷ್ಣುವಿನ ದಶಾವತಾರದಲ್ಲಿ 6ನೇ ಅವತಾರ ಪರಶುರಾಮನು ಜಮದಗ್ನಿ ಮಹರ್ಷಿ ಹಾಗು ರೇಣುಕಾದೇವಿಯ ಪುತ್ರನಾಗಿ ಜನಿಸುತ್ತಾನೆ. ಪರಶುರಾಮನು ಜಗತ್ತಿನ ಮೊದಲ ಬ್ರಾಹ್ಮಣ ಯೋಧ. ಅವನು ಶಿವನನ್ನು ಕುರಿತು ತಪಸ್ಸನ್ನು ಆಚರಿಸಿ ಪರಶುವನ್ನು ಪಡೆಯುತ್ತಾನೆ. ಕಾರ್ತ್ಯವೀರ್ಯಾರ್ಜುನ ಎಂಬ ರಾಜನು ತನ್ನ ಸೈನ್ಯದೊಡನೆ ಜಮದಗ್ನಿಯ ಆಶ್ರಮಕ್ಕೆ ಬರುತ್ತಾನೆ. ಜಮದಗ್ನಿ ಮಹರ್ಷಿಯು ರಾಜನ ಇಡೀ ಪರಿವಾರಕ್ಕೆ ಉಪಚಾರವನ್ನು ಮಾಡುತ್ತಾನೆ. ಕಾರ್ತ್ಯವೀರ್ಯಾರ್ಜುನನಿಗೆ ಆಶ್ಚರ್ಯವಾಗುತ್ತದೆ. ಇದರ ರಹಸ್ಯವೇನೆಂದು ಜಮದಗ್ನಿಯನ್ನು ಕೇಳಿದಾಗ, ಜಮದಗ್ನಿಯು ತನ್ನ ಆಶ್ರಮದಲ್ಲಿದ್ದ ಕಾಮಧೇನುವನ್ನು ತೋರಿಸುತ್ತಾನೆ. ಆಗ ಕಾರ್ತ್ಯವೀರ್ಯಾರ್ಜುನನು ಕಾಮಧೇನುವನ್ನು ಅರಮನೆಯ ವಶಕ್ಕೆ ಕೇಳುತ್ತಾನೆ. ಜಮದಗ್ನಿಯು ಒಪ್ಪದಿದ್ದಾಗ, ರಾಜನು ಜಮದಗ್ನಿಯನ್ನು ಇಪ್ಪತ್ತೊಂದು ಬಾರಿ ಬಾಣಗಳಿಂದ ಘಾಸಿಗೊಳಿಸಿ, ಕೊಂದು, ಆಶ್ರಮವನ್ನು ಧ್ವಂಸಗೊಳಿಸಿ ಕಾಮಧೇನುವನ್ನು ಕೊಂಡೊಯ್ಯಲು ಮುಂದಾಗುತ್ತಾನೆ. ಆದರೆ ಕಾಮಧೇನುವು ಕಾರ್ತ್ಯವೀರ್ಯಾರ್ಜುನನಿಗೆ ಸಿಗದೇ ಮಾಯವಾಗುತ್ತದೆ. ಇದರಿಂದ ಕೋಪಗೊಂಡ ಪರಶುರಾಮನು, ಕಾರ್ತ್ಯವೀರ್ಯಾರ್ಜುನನ್ನು ಹಾಗು ಅವನ ಸೈನ್ಯವನ್ನು ಸೋಲಿಸಿ, ಸಂಹರಿಸಿದನು. ಅನಂತರ ಪರಶುರಾಮನು ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯರನೆಲ್ಲಾ ಸಂಹಾರ ಮಾಡುತ್ತೇನೆಂದು ಶಪಥ ಮಾಡುತ್ತಾನೆ.
ಪರಶುರಾಮನು 21 ಸಾರಿ ಭೂಪ್ರದಕ್ಷಿಣೆ ಮಾಡಿ,
ದುಷ್ಟ ಕ್ಷತ್ರಿಯರನ್ನೆಲ್ಲ ಸಂಹರಿಸಿ,
ಜಯಿಸಿದ ಭೂಮಿಯನ್ನು ಕಶ್ಯಪ ಮಹರ್ಷಿಗೆ ದಾನ ಮಾಡಿ,
ಭೂಮಿಯನ್ನು ಕಶ್ಯಪನಿಗೆ ದಾನ ಮಾಡಿದ ಪರಶುರಾಮರು ತನಗೆ ವಾಸಿಸಲು ಸ್ಥಳಕ್ಕಾಗಿ ಶಿವನನ್ನು ಪ್ರಾರ್ಥಿಸಿದರು. ಈ ವೇಳೆ ಶಿವನು ಪರಶುರಾಮನ ಎದುರು ಪ್ರತ್ಯಕ್ಷರಾಗಿ, ಕದಳಿ ಕ್ಷೇತ್ರದಲ್ಲಿ ತಪಸ್ಸು ಮಾಡಿದರೆ, ಲೋಕ ಕಲ್ಯಾಣಕ್ಕಾಗಿ ಮಂಜುನಾಥನಾಗಿ ಬರುತ್ತೇನೆ ಎಂದು ಭರವಸೆ ನೀಡಿದರು. ಶಿವನ ಆಜ್ಞೆಯಂತೆ ಪರಶುರಾಮನು ತನ್ನ ಕೊಡಲಿಯನ್ನು ಸಮುದ್ರಕ್ಕೆ ಎಸೆದು ತನ್ನ ತಪಸ್ಸಿಗೆ ಸ್ಥಳವನ್ನು ಸೃಷ್ಟಿಸಿದನು. ಪರಶುರಾಮನ ಪ್ರಾರ್ಥನೆಗೆ ಮಣಿದ ಶಿವನು, ಪಾರ್ವತಿ ದೇವಿಯೊಡನೆ ಮಂಜುನಾಥ ಲಿಂಗ ರೂಪಿಯಾಗಿ ಕದ್ರಿಯಲ್ಲಿ ನೆಲೆಸಿದನು ಮಂಜುನಾಥನ ಆಜ್ಞೆಯಂತೆ ಸಪ್ತಕೋಟಿ ಮಂತ್ರಗಳು (7 ಕೋಟಿ ಮಂತ್ರಗಳು) ಏಳು ತೀರ್ಥಗಳಾಗಿ ಬದಲಾಗಿವೆ ಎಂಬ ಐತಿಹ್ಯ ಶ್ರೀ ಕ್ಷೇತ್ರ ಕದ್ರಿಗಿದೆ.
ಹಾಗೂ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಮೂಲ ಕೂಡ ಕದ್ರಿ ಶಿವನ ಆಜ್ಞೆಯಂತೆ ಅಣ್ಣಪ್ಪ ಸ್ವಾಮಿ ಕದ್ರಿಯಾ ಕೆರೆಯಲ್ಲಿ ಇರುವ ಲಿಂಗವನ್ನು ತೆಗೆದುಕೊಂಡು ಹೋಗಿ ಕುಡುಮ ಪುರದಲ್ಲಿ ಸ್ಥಾಪಿಸಿದರು ಎಂದು ಹೇಳುತ್ತಾರೆ.
ಅದೇ ಕುಡುಮಾಪುರ ಇಂದಿನ ಧರ್ಮಸ್ಥಳ.
ಧರ್ಮಸ್ಥಳ ಮಂಜುನಾಥನಿಗೆ ಹರಕೆ ಹೊತ್ತವರು ಕದ್ರಿ ಶ್ರೀ ಮಂಜುನಾಥನ ದೇವಾಲಯಕ್ಕೆ ಬಂದು ಹರಕೆ ತೀರಿಸಬಹುದಂತೆ. ಆದರೆ ಕದ್ರಿಯಲ್ಲಿ ಹರಕೆ ಹೊತ್ತವರು ಇಲ್ಲಿಗೇ ಬಂದು ತೀರಿಸಬೇಕು ಎಂದು ಹೇಳಲಾಗುತ್ತದೆ.
ಈ ದೇವಾಲಯಕ್ಕೆ ಭವ್ಯವಾದ ಗೋಪುರ, ವಿಶಾಲವಾದ ಆವರಣ, ಸುಂದರ ದೇವಾಲಯ ನಿರ್ಮಿಸಲಾಗಿದೆ. ದೇಗುಲ ಪ್ರವೇಶಿಸುತ್ತಿದ್ದಂತೆ ಮಹಾಗಣಪತಿಯ ದರ್ಶನವೂ ಆಗುತ್ತದೆ. ಮೆಟ್ಟಿಲುಗಳನ್ನು ಏರಿದರೆ ಪ್ರಕೃತಿ ರಮಣೀಯವಾದ ಪ್ರದೇಶದಲ್ಲಿನ ಕುಂಡಗಳನ್ನು ನೋಡಬಹುದು.
ಪುರಾಣ:
ಕದ್ರಿಯು ತನ್ನ ಪಾವಿತ್ರ್ಯತೆ ಮತ್ತು ಮಂಜುನಾಥನ ನಿವಾಸದ ಬಗ್ಗೆ ಪುರಾಣಗಳಿಂದ ತನ್ನದೇ ಆದ ಕಥೆಯನ್ನು ಹೊಂದಿದೆ. ಈ ಕಥೆಯು ಸಂಸ್ಕೃತದಲ್ಲಿದೆ ಮತ್ತು "ಭಾರದ್ವಾಜ ಸಂಹಿತೆ"ಯಲ್ಲಿ ಲಭ್ಯವಿದೆ. ಪ್ರಾಚೀನ ಕಾಲದಲ್ಲಿ ಕದರೀಕನು ಸಿದ್ಧಾಶ್ರಮದ ಭಾಗವಾಗಿದ್ದನು, ಅನೇಕ ಋಷಿಗಳು, ಸಂತರು ಹೆಚ್ಚಾಗಿ ಧ್ಯಾನ ಮತ್ತು ತಪಸ್ಸುಗಳನ್ನು ಅಭ್ಯಾಸ ಮಾಡುತ್ತಿದ್ದರು. ಪಾಪ ಅಥವಾ ತಪ್ಪು ಕಾರ್ಯದ ಭಯವಿರಲಿಲ್ಲ. ಒಮ್ಮೆ ಇಬ್ಬರು ಮಹಾನ್ ಋಷಿಗಳ ನಡುವೆ ಮಂಜುನಾಥನ ಪವಿತ್ರತೆ ಮತ್ತು ಶ್ರೇಷ್ಠತೆಯ ಬಗ್ಗೆ ಚರ್ಚೆ ನಡೆಯಿತು. ಋಷಿ ಬೃಗು ಮತ್ತು ಋಷಿ ಕಪಿಲ. ಋಷಿ ಭಾರದ್ವಾಜರು ಈ ಚರ್ಚೆಯನ್ನು ಕೇಳಿದರು ಮತ್ತು ಅವರ ಅನುಯಾಯಿಗಳಲ್ಲಿ ಒಬ್ಬರಿಗೆ ಹೇಳಿದರು. ಸುಮಂತು. ಆದ್ದರಿಂದ ಇದನ್ನು ಭಾರದ್ವಾಜ ಸಂಹಿತೆ ಎಂದು ಕರೆಯುತ್ತಾರೆ.
ದೇವಸ್ಥಾನದ ಹಿಂಭಾಗದಲ್ಲಿರುವ ಒಂದು ಗೋಮುಖದಿಂದ ನಿರಂತರವಾಗಿ ತೀರ್ಥ ಉದ್ಭವವಾಗಿ ಹರಿದು ಬರುತ್ತದೆ. ಅದು ಕಾಶಿ ಕ್ಷೇತ್ರದ ಭಗೀರಥಿ ನದಿಯ ತೀರ್ಥವೆಂದು ಹೇಳಲಾಗುತ್ತಿದೆ. ಈ ನೀರು ಹರಿದು ಬಂದು 7 ಕೊಳಗಳಾಗಿ ಶೇಖರಣೆಯಾಗುತ್ತದೆ. ಈ ಕೊಳಗಳಲ್ಲಿ ಮಿಂದರೆ ಮೋಕ್ಷ ಪ್ರಾಪ್ತಿ ಆಗೋದು ಎಂದು ನಂಬುತ್ತಾರೆ ಹಾಗೂ ಎಲ್ಲಾ ರೋಗಗಳು ಚರ್ಮರೋಗ ನಾಶವಾಗುವುದು ಎಂದು ಹೇಳುತ್ತಾರೆ.
ಇಲ್ಲಿ ಸುಂದರವಾದ ವಿಘ್ನೇಶ್ವರನ ವಿಗ್ರಹವಿದೆ. ಅದರ ಕೆಳಭಾಗದಲ್ಲಿರುವ ಈ ಹೊಂಡಗಳಲ್ಲಿ ಭಕ್ತಾದಿಗಳು ಮಿಂದು ನಂತರ ಅಲ್ಲಿಯೇ ಮೇಲ್ಭಾಗದಲ್ಲಿರುವ ಚಂದ್ರಮೌಳೀಶ್ವರನ ಲಿಂಗಕ್ಕೆ ಅಭಿಷೇಕ ಮಾಡಿ ನಂತರ ಶ್ರೀಮಂಜುನಾಥನ ದರ್ಶಶನ ಮಾಡುವ ವಾಡಿಕೆ ಇಲ್ಲಿದೆ.
ಪ್ರಮುಖ ಕಾರ್ಯಕ್ರಮಗಳು ವಿಶೇಷ ದಿನಗಳು
ಸೌರಮಾನ ಯುಗಾದಿ,
ಬ್ರಹ್ಮಕಲಸ ದಿನ,
ಪತ್ತ ನಾಜೆ,
ನಾಗರ ಪಂಚಮಿ,
ಕೃಷ್ಣ ಜನ್ಮಾಷ್ಟಮಿ,
ಮೊಸರು ಕುಡಿಕೆ ಉತ್ಸವ,
ಶ್ರೀ ಗಣೇಶ್ ಚತುರ್ಥಿ,
ನವರಾತ್ರಿ,
ನರಕ ಚತುರ್ದಶಿ,
ಪ್ರತಿ ಕಾರ್ತಿಕ ಸೋಮವಾರ,
ಲಕ್ಷ ದೀಪೋತ್ಸವ,
ಧನು ಪೂಜಾ,
ಮಹಾಶಿವರಾತ್ರಿ ಕಂಬಳ,
ವರ್ಷವಧಿ ಪೂಜೆ 9 ದಿನಗಳು.,
ರಥೋತ್ಸವ: ಕದರಿ ಮಂಜುನಾಥ ದೇವಸ್ಥಾನದ ವಾರ್ಷಿಕ ರಥೋತ್ಸವವು ಮಕರ ಸಂಕ್ರಾಂತಿ ಸಮಯದಲ್ಲಿ ನಡೆಯುತ್ತದೆ, ಇದು ಪ್ರತಿವರ್ಷ ಜನವರಿ ಮಧ್ಯದಲ್ಲಿ ಬರುತ್ತದೆ.
ದೀಪೋತ್ಸವ: ಕಾರ್ತಿಕ ಮಾಸ ಸಮಯದಲ್ಲಿ ಬೆಳಕಿನ ಹಬ್ಬವನ್ನು ನಡೆಸಲಾಗುತ್ತದೆ
ಕಂಬಳ: ಕದ್ರಿ ಕಂಬಳ ಒಂದು ಜನಪ್ರಿಯ ಗ್ರಾಮೀಣ ಕ್ರೀಡೆಯಾಗಿದೆ.
ಕದ್ರಿ ಮಂಜುನಾಥ ಕ್ಷೇತ್ರಕ್ಕೆ ತೆರಳುವ ಮಾರ್ಗ
ಕದ್ರಿ ಮಂಜುನಾಥ ಕ್ಷೇತ್ರದ ಸಂಪರ್ಕ ಬಹಳ ಸರಳವಾಗಿದೆ. ನಗರದ ಮಲ್ಲಿಕಟ್ಟೆ ಬಸ್ ನಿಲ್ದಾಣ ದಿಂದ ದೇವಸ್ಥಾನ ಒಂದು ಕಿಲೋ ಮೀಟರ್ ಅಂತರದಲ್ಲಿದೆ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ದೇವಸ್ಥಾನ ಮೂರು ಕಿಲೋಮೀಟರ್ ಅಂತರದಲ್ಲಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಮೂರು ಕಿಲೋಮೀಟರ್, ಕಂಕನಾಡಿ ರೈಲು ನಿಲ್ದಾಣವು ಸುಮಾರು ನಾಲ್ಕು ಕಿಲೋಮೀಟರ್ ಅಂತರದಲ್ಲಿ ಕದ್ರಿ ದೇವಸ್ಥಾನವಿದೆ. ಇನ್ನು ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೂ ದೇವಸ್ಥಾನ ಸುಮಾರು 16 ಕಿ.ಮೀ ದೂರದಲ್ಲಿದೆ.
ದೇವಸ್ಥಾನದ ಸಂಪರ್ಕ:
ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಕದ್ರಿ, ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ - 575002 ದೂರವಾಣಿ ಸಂಖ್ಯೆ : 91-824-2214176 ಫ್ಯಾಕ್ಸ್ ಸಂಖ್ಯೆ : 0824-2225294
ಇ-ಮೇಲ್ ವಿಳಾಸ :shreekadritemple@gmail.com
Comments