ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -9 -10

ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -9
 
ಶ್ಲೋಕ :
ಸಂಜಯ ಉವಾಚ ।
ಏವಮುಕ್ತ್ವಾ ಹೃಷೀಕೇಶಂ ಗುಡಾಕೇಶಃ ಪರಂತಪಃ ।
ನ ಯೋತ್ಸ್ಯ ಇತಿ ಗೋವಿಂದಮುಕ್ತ್ವಾ ತೂಷ್ಣೀಂ ಬಭೂವ ಹ॥೯॥
 
ಅರ್ಥ:
ಸಂಜಯ ಉವಾಚ -ಸಂಜಯ ಹೇಳಿದನು:ಅರಿಗಳನ್ನು ತರಿದ, ನಿದ್ದೆಯನ್ನು ಗೆದ್ದ ಅರ್ಜುನ-ಇಂದ್ರಿಯಗಳ ಒಡೆಯನಾದ ಗೋವಿಂದನ ಬಳಿ ಹೀಗೆಂದು- ಮತ್ತೆ ‘ನಾನು ಕಾದಲಾರೆ’ ಎಂದು ಸುಮ್ಮನಾದನು!
 
ವಿವರ ವಿವರಣೆಗಳು : 
ಸಂಜಯ ಯುದ್ಧಭೂಮಿಯಲ್ಲಿ ಅರ್ಜುನನನ ಸ್ಥಿತಿಯನ್ನು ಧೃತರಾಷ್ಟ್ರನಿಗೆ ವರ್ಣಿಸುತ್ತಾ, ಈ ರೀತಿ ಹೇಳುತ್ತಾನೆ: “ಇಡೀ ಬ್ರಹ್ಮಾಂಡದಲ್ಲಿ ತುಂಬಿರುವ ನಮ್ಮ ಇಂದ್ರಿಯಗಳ ಸ್ವಾಮಿ ಗೋವಿಂದನಲ್ಲಿ ನಿದ್ದೆಯನ್ನು ಗೆದ್ದ ಅರ್ಜುನ ‘ನಾನು ಯುದ್ಧ ಮಾಡಲಾರೆ’ ಎಂದು ಹೇಳಿ ಮೌನಿಯಾದ” ಎಂದು.

______________________________________

ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -10

 
ಶ್ಲೋಕ :
ತಮುವಾಚ ಹೃಷೀಕೇಶಃ ಪ್ರಹಸನ್ನಿವ ಭಾರತ ।
ಸೇನಯೋರುಭಯೋರ್ಮಧ್ಯೇ ವಿಷೀದಂತಮಿದಂ ವಚಃ ॥೧೦॥
 
ಅರ್ಥ :
ಓ ಭರತ ವಂಶದ ದೊರೆಯೆ, ಎರಡು ಪಡೆಗಳ ನಡುವೆ ತಳಮಳಗೊಂಡಿರುವ ಅವನನ್ನು ಕುರಿತು ಕೃಷ್ಣ ಮೆಲುನಗುತ್ತ ಈ ಮಾತು ನುಡಿದ.
 
ವಿವರ ವಿವರಣೆಗಳು : 
ಅರ್ಜುನ ಸಂಪೂರ್ಣ ಶರಣಾಗಿ ತನ್ನಮುಂದೆ ಅಂಗಲಾಚಿ ನಿಂತಾಗ, ಶ್ರೀಕೃಷ್ಣ ನಸುನಗುತ್ತ ತನ್ನ ಮಾತನ್ನು ಆರಂಭಿಸುತ್ತಾನೆ.
ಇಲ್ಲಿ ಅರ್ಜುನ ಕೃಷ್ಣ ಹೇಳುವುದನ್ನು ಸ್ವೀಕರಿಸುವ ಹಂತವನ್ನು ತಲುಪಿದ್ದಾನೆ. ಆತನಲ್ಲಿ ಭಾವಾವೇಶ ಹೊರಟುಹೋಗಿ ಶರಾಣಗತಿ ಬಂದಿದೆ. ಭಗವಂತ ನಮಗೆ ಮಾರ್ಗದರ್ಶನ ಮಾಡಬೇಕಾದರೆ ನಾವು ನಮ್ಮ ಅಹಂಕಾರವನ್ನು ತೊರೆದು, ಆತನಲ್ಲಿ ಸಂಪೂರ್ಣ ಶರಣಾಗಬೇಕು. ಆಗ ಖಂಡಿತ ನಮಗೆ ಮಾರ್ಗದರ್ಶನ ಸಿಗುತ್ತದೆ. ಇಲ್ಲಿ ಕೃಷ್ಣ ಅರ್ಜುನನಿಗೆ ಮಾಡುವ ಉಪದೇಶ ನಮ್ಮೆಲ್ಲರಿಗೆ ಆತ ಮಾಡಿದ ಉಪದೇಶ. ಈ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ಕೃಷ್ಣನ ಉಪದೇಶವನ್ನು ಆಲಿಸೋಣ ಬನ್ನಿ.

Comments