ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -7-8

ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -7
ಶ್ಲೋಕ :
ಕಾರ್ಪಣ್ಯದೋಷೋಪಹತಸ್ವಭಾವಃ ಪೃಚ್ಛಾಮಿ ತ್ವಾ ಧರ್ಮಸಂಮೂಢಚೇತಾಃ ।
ಯಚ್ಛ್ರೇಯಃ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ ಶಿಷ್ಯಸ್ತೇSಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್ ॥೭॥
 
ಅರ್ಥ :
ದೌರ್ಬಲ್ಯದ ದೋಷದಿಂದ ನನ್ನ ಸಹಜ ಬೀರಕ್ಕೆ ಮಂಕು ಕವಿದಿದೆ. ಧರ್ಮದ ಬಗೆಗೆ ಬಗೆಗಾಣದವನಾಗಿ ನಿನ್ನನ್ನು ಕೇಳುತ್ತಿದ್ದೇನೆ; ಹೇಳು ನನಗಿದನ್ನು: ಯಾವುದು ನಿಖರವಾದ ಒಳಿತಿನ ದಾರಿ? ನಾನು ನಿನ್ನ ಶಿಷ್ಯ. ನಿನಗೆ ಶರಣು ಬಂದ ನನಗೆ ದಾರಿ ತೋರು.
 
ವಿವರ ವಿವರಣೆಗಳು : 
ನನಗೆ ಕಾರ್ಪಣ್ಯ ದೋಷ ಬಂದಿದೆ. ಯಾವುದು ಸರಿ ಯಾವುದು ತಪ್ಪು ಎಂದು ತೀರ್ಮಾನ ಮಾಡಲಾರದ ದಯನೀಯ ಸ್ಥಿತಿಯಲ್ಲಿದ್ದೇನೆ. ಧರ್ಮದ ಬಗ್ಗೆ ನನ್ನ ಚಿಂತನಶಕ್ತಿ ಗೊಂದಲದ ಗೂಡಾಗಿದೆ. ಯುದ್ಧ ಬೇಕೋ ಬೇಡವೋ ಎನ್ನುವ ಗೊಂದಲ ನನ್ನನ್ನು ಕಾಡುತ್ತಿದೆ. ಯಾವುದು ನನಗೆ ಹಿತ ಎಂದು ತಿಳಿಯದಾಗಿದೆ. ನಾನು ನಿನ್ನ ಶಿಷ್ಯನಾಗಿ ನಿನ್ನಲ್ಲಿ ಶರಣಾಗಿದ್ದೇನೆ. ನನಗೆ ಮಾರ್ಗದರ್ಶನ ಮಾಡು ಎಂದು ಅರ್ಜುನ ಕೃಷ್ಣನಲ್ಲಿ ಕೇಳಿಕೊಳ್ಳುತ್ತಾನೆ. ಇಲ್ಲಿಯ ತನಕ ಭಗವಂತನ ಮುಂದೆ ಪಂಡಿತನಂತೆ ಮಾತನಾಡಿದ ಅರ್ಜುನ, ಈಗ ಭಗವಂತನಲ್ಲಿ ಶರಣಾಗತಿಯನ್ನು ಬೇಡುತ್ತಿರುವುದು ಇಲ್ಲಿ ಸ್ಪಷ್ಟ.

_____________________________________________

ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -8
 
ಶ್ಲೋಕ :
ನಹಿ ಪ್ರಪಶ್ಯಾಮಿ ಮಮಾಪನುದ್ಯಾದ್
ಯಚ್ಛೋಕಮುಚ್ಛೋಷಣಮಿಂದ್ರಿಯಾಣಾಮ್ ।

ಅವಾಪ್ಯ ಭೂಮಾವಸಪತ್ನಮೃದ್ಧಂ ರಾಜ್ಯಂ ಸುರಾಣಾಮಪಿ ಚಾSಧಿಪತ್ಯಮ್ ॥೮॥
 
ಅರ್ಥ :
ಸತ್ಯ ಸಾರವನ್ನೆಲ್ಲ ಹೀರಿ ಬತ್ತಿಸಿಬಿಡಬಲ್ಲ ನನ್ನ ಈ ದುಗುಡವನ್ನು ದೂರೀಕರಿಸಬಲ್ಲ ದಾರಿಯನ್ನೆ ಕಾಣದವನಾಗಿದ್ದೇನೆ-ಹಗೆಗಳೇ ಇಲ್ಲದ, ಹುಲುಸಾದ ಇಡಿಯ ನೆಲದ ಒಡೆತನ ಪಡೆದರೂ, ಸಗ್ಗಿಗರ ಸಾಮ್ರಾಟನಾದರೂ ಕೂಡಾ.
 
ವಿವರ ವಿವರಣೆಗಳು : 
“ನನ್ನ ಇಂದ್ರಿಯಗಳು ಸೊರಗಿ ಹೋಗುತ್ತಿವೆ. ನನ್ನ ದುಃಖವನ್ನು ಹೊಡೆದೋಡಿಸಲು ನನಗೆ ಮಾರ್ಗವೇ ಕಾಣುತ್ತಿಲ್ಲ. ಭೂಮಿಯಲ್ಲಿ, ಸ್ವರ್ಗದಲ್ಲಿ ಪ್ರಭುತ್ವವನ್ನು ಪಡೆದರೂ ಕೂಡಾ ನಾನು ಈ ದುಃಖವನ್ನು ಹೋಗಲಾಡಿಸಿಕೊಳ್ಳಲಾರೆ” ಎನ್ನುತ್ತಾನೆ ಅರ್ಜುನ.

Comments