ಭಗವದ್ಗೀತೆ ಅಧ್ಯಾಯ-2 ಶ್ಲೋಕ -37-38

ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -37
 
ಶ್ಲೋಕ :
ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಮ್ ।
ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ ॥೩೭॥
 
ಅರ್ಥ :
ಸತ್ತರೆ ಸ್ವರ್ಗ ಸೇರುವೆ. ಗೆದ್ದರೆ ನೆಲವನ್ನಾಳುವೆ. ಆದ್ದರಿಂದ, ಕೌಂತೇಯ, ಹೋರಾಡುವ ತೀರ್ಮಾನ ತಳೆದು ಎದ್ದು ನಿಲ್ಲು.
 
ವಿವರ ವಿವರಣೆಗಳು : 
“ಯುದ್ಧ ಮಾಡುವುದರಿಂದ ನಾವು ಗೆಲ್ಲುತ್ತೇವೆ ಎನ್ನುವುದು ತಿಳಿಯದು. ಧರ್ಮ ಯುದ್ಧದಲ್ಲಿ ಸತ್ತರೂ ಮೋಕ್ಷ, ಗೆದ್ದರೂ ಮೋಕ್ಷ. ಯಾವುದೋ ಸ್ವಾರ್ಥಕ್ಕಾಗಿ ಮಾಡುತ್ತಿರುವ ಯುದ್ಧವಿದಲ್ಲ. ಅನ್ಯಾಯದ ವಿರುದ್ಧ ಹೋರಾಡುವೆ ಎನ್ನುವ ಸಂಕಲ್ಪದಿಂದ ಎದ್ದು ನಿಂತು ಹೋರಾಡು” ಎನ್ನುತ್ತಾನೆ ಕೃಷ್ಣ.
ನಾವು ಮಾಡುವ ಕಾರ್ಯದಲ್ಲಿ ಧರ್ಮದ ಪರಿಜ್ಞಾನ ಮುಖ್ಯ. ಯಾವುದೇ ಸ್ವಾರ್ಥವಿಲ್ಲದೆ, ಧರ್ಮದ ಮಾರ್ಗವನ್ನು ಅನುಸರಿಸುವವನು ಎಂದೂ ಯಾವುದಕ್ಕೂ ಅಂಜುವ ಅಗತ್ಯವಿಲ್ಲ. ಧರ್ಮ ಮಾರ್ಗದಲ್ಲಿ ನಡೆದರೆ ನನಗೇನಾಗುತ್ತದೋ ಎನ್ನುವ ಭಯ ಬೇಡ. ಏಕೆಂದರೆ ಧರ್ಮದ ನಡೆಯಲ್ಲಿ ಪಲಿತಾಂಶ ಯಾವುದೇ ಇರಲಿ, ಅದು ನಮ್ಮನ್ನು ಮೋಕ್ಷಕ್ಕೆ ಕೊಂಡೊಯ್ಯುವ ಸಾಧನವಾಗಿರುತ್ತದೆ.


_________________________________________

ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -38
 
ಶ್ಲೋಕ :
ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ ।
ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ ॥೩೮॥
 
ಅರ್ಥ :
ಸುಖ-ದುಃಖಗಳನ್ನು, ಗಳಿಕೆ-ಇಳಿಕೆಗಳನ್ನು, ಸೋಲು-ಗೆಲುವನ್ನು ಒಂದೇ ನಿಟ್ಟಿನಿಂದ ಕಂಡು ಮತ್ತೆ ಹೋರಾಡತೊಡಗು. ಆಗ ನಿನಗೆ ಯಾವ ಪಾಪವೂ ತಟ್ಟದು.
 
ವಿವರ ವಿವರಣೆಗಳು
ಜೀವನದಲ್ಲಿ ಸುಖ-ದುಃಖ ಎನ್ನುವುದು ಅನಿವಾರ್ಯ. ಸುಖ-ದುಃಖ, ಗಳಿಕೆ-ಇಳಿಕೆ, ಸೋಲು-ಗೆಲುವು ಎಲ್ಲವನ್ನು ಸಮನಾಗಿ ಕಾಣುವವನಿಗೆ ಯಾವ ಪಾಪವೂ ಅಂಟದು. ಎಲ್ಲವನ್ನು ಸಮದೃಷ್ಟಿಯಿಂದ ಕಾಣುತ್ತ, ಕೇವಲ ಕರ್ತವ್ಯ ಪ್ರಜ್ಞೆಯಿಂದ ಹೋರಾಟ ಮಾಡುವುದು ಬದುಕಿನ ಯಶಸ್ವಿನ ಸೂತ್ರ. ಜಯಿಸಬೇಕು ಎನ್ನುವ ಸ್ವಾರ್ಥವಿಲ್ಲದೆ; ನಾವೇ ಲಾಭ ಗಳಿಸಬೇಕು-ಅವರು ಮಣ್ಣು ಮುಕ್ಕಲಿ ಎನ್ನುವ ದ್ವೇಷವಿಲ್ಲದೆ, ಎಲ್ಲವೂ ಭಗವಂತನ ಪ್ರಸಾದ ಎನ್ನುವ ಮನೋಭಾವನೆಯಿಂದ ಹೋರಾಡು ಎನ್ನುತ್ತಾನೆ ಕೃಷ್ಣ. ಭಗವಂತನ ಈ ನುಡಿಯನ್ನು ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಆತ ಎಂದೂ ದುಃಖಿ ಆಗಲಾರ. “ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ” ಎಂದು ಧರ್ಮ ಮಾರ್ಗದಲ್ಲಿ ಮುನ್ನುಗ್ಗುವವನಿಗೆ ಸದಾ ಸ್ವರ್ಗದ ಬಾಗಿಲು ತೆರೆದಿರುತ್ತದೆ. ಆತನಿಗೆ ದುಃಖ-ದುಃಖವಾಗಿ ಕಾಣಲಾರದು, ಸೋಲು-ಸೋಲಾಗಿ ಕಾಣಲಾರದು. ಆತನಿಗೆ ಇಹವೂ-ಸ್ವರ್ಗ ಪರವೂ-ಸ್ವರ್ಗ.ಇಲ್ಲಿಯವರೆಗೆ ಕೃಷ್ಣ ಆತ್ಮ ತತ್ವದ ಬಗೆಗೆ ಸಾಕಷ್ಟು ವಿವರಣೆಯನ್ನು ಅರ್ಜುನನಿಗೆ ಹೇಳಿದ. ಬದುಕು ಅಂದರೇನು? ಸಾವು ಅಂದರೇನು? ಆತ್ಮ-ಪರಮಾತ್ಮ, ಆ ತತ್ವಗಳ ಅಂತರಂಗದ ರಹಸ್ಯವೇನು? ಇವು ಹೇಗೆ ಯಾವ ಬದಲಾವಣೆ ಇಲ್ಲದೆ ಅನಾದಿನಿತ್ಯ ಎನ್ನುವುದನ್ನು ವಿವರಿಸಿ, ಯುದ್ಧದ ಅವಶ್ಯಕತೆಯನ್ನು ಹೇಳಿದ. ಇಲ್ಲಿಂದ ಮುಂದೆ ಕೃಷ್ಣ ಸಾಂಖ್ಯದಿಂದ ಕರ್ಮದ ಕಡೆ ತಿರುಗುತ್ತಾನೆ.

ನಾವು ಮನಸ್ಸಿನಲ್ಲಿ ವೇದಾಂತವನ್ನು ಎಷ್ಟು ರೂಢಿಸಿಕೊಂಡರೂ, ತತ್ಕಾಲದ ಮನುಷ್ಯನ ದುಃಖ ಅದಮ್ಯವಾಗಿರುತ್ತದೆ-ಎನ್ನುವುದನ್ನು ಗೀತೆ ಸ್ಪಷ್ಟವಾಗಿ ತಿಳಿಸುತ್ತದೆ. ಭಗವಂತನಿಂದ ಗೀತೆಯ ಉಪದೇಶವನ್ನು ಪಡೆದ ಅರ್ಜುನ, ತನ್ನ ಮಗ ಅಭಿಮನ್ಯು ಯುದ್ಧದಲ್ಲಿ ಸತ್ತಾಗ ಪುನಃ ವಿಚಲಿತನಾಗುವುದನ್ನು ನಾವು ಮಹಾಭಾರತದಲ್ಲಿ ಕಾಣುತ್ತೇವೆ. ಪೂರ್ಣವಾದ ಆತ್ಮಸಾಕ್ಷಾತ್ಕಾರ ಪಡೆಯುವುದು ಅಷ್ಟು ಸುಲಭದ ವಿಷಯವಲ್ಲ. ಆತ್ಮ ಅಜರ-ಅಮರ ಎಂದು ತಿಳಿದರಷ್ಟೇ ಸಾಲದು, ಪೂರ್ಣವಾಗಿ ತಿಳಿಯಬೇಕು. ಅಂತಹ ಸ್ಥಿತಿಯಲ್ಲಿ ಎಲ್ಲಾ ದುಃಖವನ್ನು ಮರೆತು ಇರಬಹುದು. ಆದರೆ ಈ ಆತ್ಮ ತತ್ವವನ್ನು ತಿಳಿಯುವ ಬಗೆ ಹೇಗೆ? ಆತ್ಮದ ಜ್ಞಾನವನ್ನು ಪಡೆಯುವ ಸಾಧನವೇನು? ಕೇಳಿದ ತಕ್ಷಣ ಸಾಕ್ಷಾತ್ಕಾರವಾಗಿ ಮನಸ್ಸಿನಲ್ಲಿ ಗಟ್ಟಿಯಾಗಿ ನಿಲ್ಲುವ ವಿಷಯ ಇದಲ್ಲ. ಅಂದಮೇಲೆ ಮಾನಸಿಕವಾಗಿ ಈ ಉತ್ತುಂಗದ ಸ್ಥಿತಿಯನ್ನು ತಲುಪುವುದು ಹೇಗೆ ಎಂದು ಕೃಷ್ಣ ಮುಂದೆ ವಿವರಿಸುತ್ತಾನೆ.

Comments