ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -33
ಶ್ಲೋಕ :
ಅಥ ಚೇತ್ ತ್ವಂ ಧರ್ಮ್ಯಮಿಮಂ ಸಂಗ್ರಾಮಂ ನ ಕರಿಷ್ಯಸಿ ।
ತತಃ ಸ್ವಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ ॥೩೩॥
ಅರ್ಥ :
ಒಂದೊಮ್ಮೆ, ನ್ಯಾಯದಿಂದ ಒದಗಿ ಬಂದ ಈ ಕಾಳಗವನ್ನು ನೀನು ಕೈಗೊಳ್ಳದಿದ್ದರೆ, ಆಗ , ನಿನ್ನ ಧರ್ಮವನ್ನೂ ಹೆಸರನ್ನೂ ಕಳೆದುಕೊಂಡು ಪಾಪವನ್ನು ಗಳಿಸುವೆ.
ವಿವರ ವಿವರಣೆಗಳು :
ಮುಂದುವರಿದು ಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ: “ನೀನು ಪಾಪದ ಭಯದಿಂದ ಯುದ್ಧ ಬೇಡ ಎಂದು ಹೇಳುತ್ತಿರುವೆ. ಆದರೆ ಯುದ್ಧ ಮಾಡಿದರೆ ಮಾತ್ರ ಧರ್ಮ ಉಳಿಯುತ್ತದೆ, ಹಾಗು ನಿನಗೆ ಸ್ವರ್ಗದ ಬಾಗಿಲು ತೆರೆಯುತ್ತದೆ. ಇಲ್ಲದೆ ಇದ್ದಲ್ಲಿ ನರಕದ ಬಾಗಿಲು ನಿನ್ನನ್ನು ಸ್ವಾಗತಿಸಲಿದೆ” ಎಂದು.
ಇಲ್ಲಿ ನೆಡೆಯುತ್ತಿರುವುದು ಒಂದು ಧರ್ಮ ಸಂಗ್ರಾಮ. ಅರ್ಜುನ ಧರ್ಮದ ಪರ ನಿಂತ ಮಹಾರಥಿ. ಆತ ಇಂತಹ ಧರ್ಮ ಸಂಗ್ರಾಮದಲ್ಲಿ ಧರ್ಮದ ಪರ ಹೋರಾಡದಿದ್ದರೆ ಸಹಜ ಧರ್ಮಕ್ಕೆ ವಿರುದ್ಧವಾಗಿ ಹಾಗು ಸಾಮಾಜಿಕ ಧರ್ಮವನ್ನು ಬಿಟ್ಟು ನೆಡೆದುಕೊಂಡಂತೆ. ಇದೊಂದು ಕಳಂಕ ಮತ್ತು ಮಹಾ ಪಾಪವಾಗುತ್ತದೆ. ಈ ರೀತಿ ಪಾಪದ ಭಯದಿಂದ ಬಳಲುತ್ತಿರುವ ಅರ್ಜುನನಿಗೆ ಕೃಷ್ಣ ಯಾವುದು ನಿಜವಾದ ಪಾಪ ಎನ್ನುವುದನ್ನು ಮನವರಿಕೆ ಮಾಡಿಸುತ್ತಿದ್ದಾನೆ.
ಪಾಪ ಕೃತ್ಯ ಯಾವುದು ಎನ್ನುವುದನ್ನು ಸಂದರ್ಭ ನಿರ್ಧರಿಸುತ್ತದೆ. ಉದಾಹರಣೆಗೆ ‘ಸತ್ಯ ನುಡಿಯುವುದು ಪುಣ್ಯದ ಕೆಲಸ’ ಎಂದು ಹೇಳಲಾಗದು. ಅದು ಪಾಪವೋ ಪುಣ್ಯವೋ ಎನ್ನುವುದನ್ನು ಸಂದರ್ಭ ನಿರ್ಣಯಿಸುತ್ತದೆ. ದರೋಡೆಕೋರರಿಂದ ತಪ್ಪಿಸಿಕೊಳ್ಳಲು ಆಶ್ರಯ ಕೇಳಿ ಬಂದ ವ್ಯಕ್ತಿಯನ್ನು ಅಡಗಿಸಿಟ್ಟು, ದರೋಡೆಕೋರರು ಬಂದು ಪ್ರಶ್ನಿಸಿದಾಗ ಸತ್ಯ ನುಡಿಯುವುದು ಪಾಪದ ಕೆಲಸ. ಅಡಗಿಸಿಟ್ಟ ವ್ಯಕ್ತಿಯ ರಕ್ಷಣೆಗೋಸ್ಕರ ಸುಳ್ಳನ್ನು ಹೇಳುವುದು ಪುಣ್ಯದ ಕೆಲಸ. ಇದೇ ರೀತಿ ಇಲ್ಲಿ ಅರ್ಜುನನಿಗೆ ಧರ್ಮದ ರಕ್ಷಣೆಗೋಸ್ಕರ ಗುರು-ಪಿತಾಮಹರನ್ನು ಎದುರಿಸಿ ಹೋರಾಡುವುದೊಂದೇ ಮಹಾ ಪುಣ್ಯದ ಕೆಲಸ ಎನ್ನುವುದನ್ನು ಕೃಷ್ಣ ಮನವರಿಕೆ ಮಾಡಿಸುತ್ತಿದ್ದಾನೆ.
______________________________________________
ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -34
ಶ್ಲೋಕ :
ಅಕೀರ್ತಿಂ ಚಾಪಿ ಭೂತಾನಿ ಕಥಯಿಷ್ಯಂತಿ ತೇSವ್ಯಯಾಮ್ ।
ಸಂಭಾವಿತಸ್ಯ ಚಾಕೀರ್ತಿರ್ಮರಣಾದತಿರಿಚ್ಯತೇ ॥೩೪॥
ಅರ್ಥ :
ಜನರು ನಿನ್ನ ಕೊನೆಯಿರದ ಕಳಂಕದ ಕಥೆಯನ್ನು ಆಡಿಕೊಳ್ಳುತ್ತಾರೆ. ಮರ್ಯಾದೆಯ ಮನುಷ್ಯನಿಗೆ ಕೆಟ್ಟ ಹೆಸರು ಸಾವಿಗಿಂತ ದಾರುಣ.
ವಿವರ ವಿವರಣೆಗಳು :
ಸಾಮಾಜಿಕ ಪರಿಣಾಮದ ಬಗ್ಗೆ ವಿವರಿಸುತ್ತಾ ಕೃಷ್ಣ ಹೇಳುತ್ತಾನೆ: ಒಬ್ಬ ಮರ್ಯಾದಸ್ತ ಮಾನವನಿಗೆ ಆತನ ಕೀರ್ತಿ ನಾಶವಾದರೆ ಆತ ಅವಮಾನಕ್ಕೊಳಗಾಗುತ್ತಾನೆ. ಅದರಿಂದ ಆತ ತನ್ನ ಅಸ್ಥಿತ್ವವನ್ನೇ ಕಳೆದುಕೊಳ್ಳಬಹುದು. ಜಗತ್ತಿನಲ್ಲಿ ಮಹಾನ್ ಬಿಲ್ಲೋಜ ಎನ್ನುವ ಕೀರ್ತಿ ಪಡೆದ ಅರ್ಜುನ ಈ ಧರ್ಮಯುದ್ಧದಲ್ಲಿ ಪಾಲ್ಗೊಳ್ಳದೇ ಇದ್ದಲ್ಲಿ, ಜನರು ಆತನನ್ನು ಹೇಡಿ ಎಂದು ಆಡಿಕೊಳ್ಳುತ್ತಾರೆ. ಇತಿಹಾಸದ ಪುಟಗಳಲ್ಲಿ ಆತನ ಹೇಡಿತನ ಮುಂದಿನ ಪೀಳಿಗೆಗೆ ಕೆಟ್ಟ ಉದಾಹರಣೆಯಾಗಿ ನಿಲ್ಲುತ್ತದೆ. ‘ಬಂಧು ಸ್ನೇಹಕ್ಕಾಗಿ ಯುದ್ಧದಿಂದ ಹಿಂದೆ ಸರಿದ’ ಎಂದು ಯಾರೂ ಹೇಳಲಾರರು. ಯುದ್ಧಕ್ಕೆ ಹೆದರಿ ಓಡಿಹೋದ ಹೇಡಿ ಎಂದು ನೀಚವಾಗಿ ಬಯ್ಯುತ್ತಾರೆ. ಒಬ್ಬ ಮರ್ಯಾದಸ್ತ ಮನುಷ್ಯನಿಗೆ ಅಕೀರ್ತಿ ಎನ್ನುವುದು ಸಾವಿಗಿಂತ ಕೀಳು. ಒಬ್ಬ ಕ್ಷತ್ರಿಯ ಇದನ್ನು ಸಹಿಸಲಾರ
Comments