ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -31
ಶ್ಲೋಕ :
ಸ್ವಧರ್ಮಮಪಿ ಚಾವೇಕ್ಷ್ಯ ನ ವಿಕಂಪಿತುಮರ್ಹಸಿ ।
ಧರ್ಮ್ಯಾದ್ಧಿ ಯುದ್ಧಾಚ್ಛ್ರೇಯೋSನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ ॥೩೧॥
ಅರ್ಥ :
ನಿನ್ನ ಧರ್ಮವನ್ನು ಕಂಡಾದರೂ ನೀನು ಎದೆಗೆಡಬಾರದು ಕ್ಷತ್ರಿಯನಾದವನಿಗೆ ನ್ಯಾಯದಿಂದ ಒದಗಿ ಬಂದ ಕಾಳಗಕ್ಕಿಂತ ಮಿಗಿಲಾದ ಏಳಿಗೆಯಿಲ್ಲ.
ವಿವರ ವಿವರಣೆಗಳು :
ಇಲ್ಲಿ ಅರ್ಜುನನ ಸನಾತನ ಧರ್ಮ ಯಾವುದು? ಸಮಾಜ ಧರ್ಮ ಯಾವುದು? ಹಾಗು ಸ್ವಧರ್ಮ ಯಾವುದು? ಸನಾತನ ಧರ್ಮ ಹೇಳುತ್ತದೆ: ‘ಅನ್ಯಾಯದ ವಿರುದ್ಧ ಹೋರಡಲೇ ಬೇಕು’ ಎಂದು; ಸಮಾಜ ಧರ್ಮ ಹೇಳುತ್ತದೆ: ಕ್ಷತ್ರಿಯನಾದವನು ಅಧರ್ಮದ ವಿರುದ್ಧ ಹೋರಾಡಬೇಕು, ಸಮಾಜದ ರಕ್ಷಣೆ ಮಾಡಬೇಕು ಹಾಗು ಈ ಪುಣ್ಯ ಕಾರ್ಯದಲ್ಲಿ ‘ತನ್ನವರು’ ಎಂದು ನೋಡಬಾರದು ಎಂದು. ಇನ್ನು ಅರ್ಜುನ ಮೂಲತಃ ಕ್ಷತ್ರಿಯನಾದ್ದರಿಂದ ಆತನ ಸ್ವಧರ್ಮ ‘ಅನ್ಯಾಯದ ವಿರುದ್ಧ ಹೋರಾಟ’. ಇಲ್ಲಿ ವ್ಯಕ್ತಿಧರ್ಮ, ಸಮಾಜಧರ್ಮ ಹಾಗು ಸನಾತನಧರ್ಮ ಏಕವಾಗಿದೆ. ಆದ್ದರಿಂದ ಅನ್ಯಾಯದ ವಿರುದ್ಧ ಹೋರಾಡುವುದು ಮಹಾ ಪುಣ್ಯದ ಕೆಲಸ. ಸಮಾಜ ಸುರಕ್ಷತೆಗಾಗಿ ಹೋರಾಡುವುದು ಕ್ಷತ್ರಿಯನ ಮಹಾ ತಪಸ್ಸು. ಇದಕ್ಕಿಂತ ಪುಣ್ಯಕಾರ್ಯ ಇನ್ನೊಂದಿಲ್ಲ.
___________________________________________
ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -32
ಶ್ಲೋಕ :
ಯದೃಚ್ಛಯಾ ಚೋಪಪನ್ನಂ ಸ್ವರ್ಗದ್ವಾರಮಪಾವೃತಮ್ ।
ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮೀದೃಶಮ್ ॥೩೨॥
ಅರ್ಥ :
ಇಂಥ ಕಾಳಗವೆಂದರೆ ದೈವೇಚ್ಛೆಯಿಂದ ಕೂಡಿಬಂದ, ತೆರೆದಿಟ್ಟ ಸ್ವರ್ಗದ ಬಾಗಿಲು. ಪಾರ್ಥ, ಭಾಗ್ಯವಂತರಾದ ಕ್ಷತ್ರಿಯರು ಮಾತ್ರವೇ ಇಂಥ ಅವಕಾಶ ಪಡೆಯುತ್ತಾರೆ.
ವಿವರ ವಿವರಣೆಗಳು :
ಕಾಲು ಕೆದಕಿ ಯುದ್ಧ ಮಾಡುವುದು ತಪ್ಪು. ಆದರೆ ಇಲ್ಲಿ ಸಮಷ್ಟಿಯಾಗಿ ಬಂದ ಯುದ್ಧದ ಹೊಣೆಗಾರಿಕೆ ಪಾಂಡವರದ್ದಲ್ಲ. ತನ್ನಷ್ಟಕ್ಕೆ ಬಂದು ಎರಗಿದ ಈ ಯುದ್ಧ ದೈವೇಚ್ಛೆ. ಈಶ್ವರನ ಇಚ್ಚೆಯಂತೆ ಎಲ್ಲವೂ ಆಗುವಾಗ, ಏನು ಬಂತೋ ಅದನ್ನು ಹಾಗೇ ಸ್ವೀಕರಿಸಬೇಕು. ಅನ್ಯಾಯದ ವಿರುದ್ಧ ಧರ್ಮಯುದ್ಧ ಮಾಡಿದವನಿಗೆ ಸ್ವರ್ಗದ ಬಾಗಿಲು ಸದಾ ತೆರೆದಿರುತ್ತದೆ. ಇಂತಹ ಯುದ್ಧದ ಅವಕಾಶ ಒಬ್ಬ ಕ್ಷತ್ರಿಯನಿಗೆ ಬರಬೇಕಾದರೆ ಆತ ಪುಣ್ಯ ಮಾಡಿರಬೇಕು. ಇಂತಹ ಸಮಯದಲ್ಲಿ ಕ್ಷತ್ರಿಯನಾದವನು ಕಣ್ಮುಚ್ಚಿ ಕುಳಿತುಕೊಳ್ಳುವುದು ಮಹಾಪಾಪ.
ಇಲ್ಲಿ ನಮಗೆ ಕೃಷ್ಣ ಅರ್ಜುನನಲ್ಲಿ ಯುದ್ಧಮಾಡು ಎಂದು ಏಕೆ ಹೇಳುತ್ತಿದ್ದಾನೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಪ್ರತಿಯೊಬ್ಬ ಮಾನವನೂ ಸನಾತನಧರ್ಮ, ಅದಕ್ಕನುಗುಣವಾಗಿ ಸಮಾಜಧರ್ಮ ಹಾಗು ಸಮಾಜ ಮತ್ತು ಸನಾತನ ಧರ್ಮಕ್ಕನುಗುಣವಾಗಿ ಸ್ವಧರ್ಮ-ಈ ನೆಲೆಯಲ್ಲಿ ತನ್ನ ಕರ್ತವ್ಯ ನಿರ್ವಹಿಸಬೇಕು. ಈ ನೆಲೆಯಲ್ಲಿ ಮಾಡಿದ ಯಾವ ಕಾರ್ಯವೂ ಪಾಪ ಕಾರ್ಯವಾಗದು. ಮುಂದಿನ ಶ್ಲೋಕದಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ವಿವರವನ್ನು ಕೃಷ್ಣ ಕೊಡುತ್ತಾನೆ. ಸನಾತನಧರ್ಮ, ಸಮಾಜಧರ್ಮ ಮತ್ತು ಸ್ವಧರ್ಮ ಅಂದರೆ ಏನು ಎನ್ನುವುದನ್ನು ಈಗಾಗಲೇ ಅಧ್ಯಾಯ ಒಂದರಲ್ಲಿ (ಶ್ಲೋಕ-೪೦) ವಿವರವಾಗಿ ವಿಶ್ಲೇಷಿಸಲಾಗಿದೆ.
Comments