ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -29
ಶ್ಲೋಕ :
ಆಶ್ಚರ್ಯವತ್ ಪಶ್ಯತಿ ಕಶ್ಚಿದೇನಂ ಆಶ್ಚರ್ಯವದ್ ವದತಿ ತಥೈವ ಚಾನ್ಯಃ ।
ಆಶ್ಚರ್ಯವಚ್ಚೈನಮನ್ಯಃ ಶೃಣೋತಿ ಶ್ರುತ್ವಾSಪ್ಯೇನಂ ವೇದ ನಚೈವ ಕಶ್ಚಿತ್ ॥೨೯॥
ಅರ್ಥ :
ಯಾರಾದರೂ ಈ ಜೀವತತ್ವವನ್ನು ಅಥವಾ ಭಗವಂತನನ್ನು ಕಂಡುಕೊಂಡರೆ ಅದೊಂದು ಅಚ್ಚರಿಯಂತೆ. ಇನ್ನೊಬ್ಬ ಅಂದು ತೋರಿಸಿದರೆ ಅದೊಂದು ಅಚ್ಚರಿಯಂತೆ. ಮಗದೊಬ್ಬ ಅದನ್ನು ಕೇಳಿ ತಿಳಿದರೆ ಅದೂ ಒಂದಚ್ಚರಿಯಂತೆ.[ಯಾರೋ ಒಬ್ಬ ಭಗವಂತನನ್ನು ಅಚ್ಚರಿಗೊಂಡು ನೋಡುತ್ತಾನೆ. ಯಾರೋ ಒಬ್ಬ ಅಚ್ಚರಿಗೊಂಡು ಆಡುತ್ತಾನೆ. ಯಾರೋ ಒಬ್ಬ ಅವನನ್ನು ಅಚ್ಚರಿಗೊಂಡು ಕೇಳುತ್ತಾನೆ] ಎಷ್ಟು ಕೇಳಿದರೂ ಜೀವವನ್ನಾಗಲಿ, ಭಗವಂತನನ್ನಾಗಲಿ ಸರಿಯಾಗಿ ಅರಿತವನು ಯಾರೂ ಇಲ್ಲ.
ವಿವರ ವಿವರಣೆಗಳು :
ಇದು ಜೀವ ಹಾಗು ಭಗವಂತನ ಬಗ್ಗೆ ಇರುವ ಶ್ಲೋಕ. ಭಗವಂತನನ್ನು ಕಂಡವರು ವಿರಳ. ಒಂದು ವೇಳೆ ಬಹಳ ಸಾಧನೆಯಿಂದ ಆತನನ್ನು ಕಂಡುಕೊಂಡರೆ, ಕಂಡವರ ಉದ್ಗಾರ ಕೇವಲ ಅಚ್ಚರಿ. ಅದೊಂದು ವಿಸ್ಮಯ. ಈ ವಿಶ್ವವೇ ಒಂದು ಅದ್ಬುತ, ಹಾಗಿರುವಾಗ ವಿಶ್ವವನ್ನು ನಿರ್ಮಿಸಿದ ಆ ಭಗವಂತ ಅದೆಷ್ಟು ಅದ್ಬುತವಿರಬಹುದು? ಆದ್ದರಿಂದ ಆತನನ್ನು ಕಂಡವರು ಆತನ ಬಗ್ಗೆ ವರ್ಣಿಸಲಾರರು. ಒಂದು ವೇಳೆ ವರ್ಣಿಸಿದರೆ ಕೇಳುವವನಿಗೆ ಅದೊಂದು ಅಚ್ಚರಿ. ಯಾರು ಎಷ್ಟೇ ಕೇಳಲಿ ಕೊನೆಗೆ ಭಗವಂತ ಕೇವಲ ಅಚ್ಚರಿಯಾಗೇ ಉಳಿಯುತ್ತಾನೆ. ಏಕೆಂದರೆ ಭಗವಂತನನ್ನು ತಿಳಿಯುವುದು ಅಸಾಧ್ಯ.
ಇದೇ ರೀತಿ ಜೀವ. ಆತ್ಮ ಸಾಕ್ಷಾತ್ಕಾರ ಆದಾಗ ನಮಗಾಗುವುದು ಕೇವಲ ವಿಸ್ಮಯ. ಅದನ್ನು ವರ್ಣಿಸುವುದು ಅಸಾಧ್ಯ. ಜೀವ ಒಂದು ಬೆಳಕಿನ ಪುಂಜ. ಅದೊಂದು ಮಹಾನ್ ಅಚ್ಚರಿ. ಅದು ಸೂರ್ಯನಿಗಿಂತ ಪ್ರಖರ, ಚಂದ್ರನಿಗಿಂತ ತಂಪಾದ ಬೆಳಕು. ಜೀವ ತತ್ವದ ಬಗ್ಗೆ ಕೇಳಿ ಅದರ ಬಗ್ಗೆ ಖಚಿತವಾದ ತೀರ್ಮಾನಕ್ಕೆ ಬರುವುದು ಅಸಾಧ್ಯ.
________________________________________
ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -30
ಶ್ಲೋಕ :
ದೇಹೀ ನಿತ್ಯಮವಧ್ಯೋSಯಂ ದೇಹೇ ಸರ್ವಸ್ಯ ಭಾರತ ।
ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹಸಿ ॥೩೦॥
ಅರ್ಥ:
ಓ ಭಾರತ, ಎಲ್ಲರ ದೇಹದಲ್ಲೂ ಇರುವ ಈ ಜೀವ ಎಂದೂ ಕೊಲ್ಲಲಾಗದ್ದು.[ಈ ಜೀವವನ್ನು ಕೊಲ್ಲುವುದು ಎಂದೂ ಸಾಧ್ಯವಿಲ್ಲ. ಏಕೆಂದರೆ ಎಲ್ಲರ ದೇಹದಲ್ಲೂ ಭಗವಂತ ಜೀವಕ್ಕೆ ಕಾವಲಿದ್ದಾನೆ] ಆದ್ದರಿಂದ ಎಲ್ಲ ಜೀವಿಗಳಿಗಾಗಿ ನೀನು ಅಳುವುದು ತರವಲ್ಲ.
ವಿವರ ವಿವರಣೆಗಳು :
ಮೂಲಭೂತವಾಗಿ ಯಾರ ದೇಹದಲ್ಲಿರುವ ಜೀವವನ್ನೂ ಸಾಯಿಸುವುದು ಸಾಧ್ಯವಿಲ್ಲ. ದೇಹ ಸಾಯಬೇಕು ಎನ್ನುವುದು ವಿಧಿ ನಿಯಮ, ಹಾಗು ಅದಕ್ಕಾಗಿ ದುಃಖಪಡಬೇಕಾಗಿಲ್ಲ. ತನ್ನ ಸ್ವಂತ ಇಚ್ಛೆಯಿಂದ ದೇಹ ತ್ಯಜಿಸಲು ಸಾಧ್ಯವಿಲ್ಲ, ಹಾಗು ತ್ಯಜಿಸದೆ ಇರಲೂ ಸಾಧ್ಯವಿಲ್ಲ. “ಅಯಮ್ ದೇಹೇ ಸರ್ವಸ್ಯ ಭಾರತ” – “ರಕ್ಷಣೆ ಮಾಡುವ ಭಗವಂತ ಒಳಗೆ ಕುಳಿತಿರುವಾಗ ಹುಟ್ಟು ಸಾವಿಗೆ ನೀನು ಹೊಣೆಗಾರನಾಗಲಾರೆ. ಭರತ ವಂಶದಲ್ಲಿ ಹುಟ್ಟಿ ಬಂದ ನೀನು ಈ ಸತ್ಯವನ್ನು ಅರಿತುಕೊ” ಎನ್ನುತ್ತಾನೆ ಕೃಷ್ಣ. ಜೀವವೆಂಬ ಬೆಳಕಿನ ಕಿಡಿಯನ್ನು ತಿಳಿದಾಗ, ಅದರ ಅರಿವು ಬಂದಾಗ ಹುಟ್ಟು ಸಾವಿನ ಮರ್ಮ ತಿಳಿಯುತ್ತದೆ. ಆಗ ಸಾವು ಒಂದು ಆನಂದದ ಅನುಭವವಾಗುತ್ತದೆ.
ಕೃಷ್ಣನ ಈ ಎಲ್ಲಾ ವಿಶ್ಲೇಷಣೆಯನ್ನು ಕೇಳಿದಾಗ ನಮ್ಮಲ್ಲಿ ಒಂದು ಅಭಿಪ್ರಾಯ ಮೂಡಬಹುದು . “ಕೊಲ್ಲುವುದು ತಪ್ಪಲ್ಲ, ಏಕೆಂದರೆ ಜೀವಕ್ಕೆ ಸಾವಿಲ್ಲ. ಎಲ್ಲವೂ ದೈವೇಚ್ಛೆ. ಯಾರು ಯಾರನ್ನು ಬೇಕಾದರೂ ಕೊಲ್ಲಬಹುದು” ಎಂದು. ಆದರೆ ಅದು ಸರಿಯಲ್ಲ. ಏಕೆಂದರೆ ಈವರೆಗೆ ನಾವು ನೋಡಿದ ವಿಷಯ ಕೇವಲ ಬದುಕಿನ ಒಳನೋಟ. ಸಮಾಜ ಜೀವಿಗಳಾದ ನಾವು ಒಳಗಿನ ಅರಿವನ್ನು ಸಮಾಜದ ವಿರುದ್ಧ ಬಳಸುವುದು ಅಧರ್ಮ. ಶಾಸ್ತ್ರಕ್ಕೆ ಅನುಗುಣವಾಗಿರುವ ಸಮಾಜ ಧರ್ಮವನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. ಮುಂದಿನ ಶ್ಲೋಕದಲ್ಲಿ ಕೃಷ್ಣ ಈ ವಿಚಾರವನ್ನು ಅರ್ಜುನನ ಮುಖೇನ ನಮಗೆ ಸ್ಪಷ್ಟಪಡಿಸುತ್ತಾನೆ.
Comments