ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ - 25
ಶ್ಲೋಕ :
ಅವ್ಯಕ್ತೋSಯಮಚಿಂತ್ಯೋSಯಮವಿಕಾರ್ಯೋSಯಮುಚ್ಯತೇ ।
ತಸ್ಮಾದೇವಂ ವಿದಿತ್ವೈನಂ ನಾನುಶೋಚಿತುಮರ್ಹಸಿ ॥೨೫॥
ಅರ್ಥ :
ಭಗವಂತ ಕಣ್ಣಿಗೆ ಕಾಣದವನು; ಇವನು ಚಿಂತನೆಗೆ ನಿಲುಕದವನು; ಇವನು ಬದಲಾಗದವನು-ಎಂದು ವೇದ ಸಾರುತ್ತದೆ. ಅದರಿಂದ ಅವನ[ಮತ್ತು ಜೀವನ] ಪರಿಯನ್ನು ಹೀಗೆ ಅರಿತ ಮೇಲೆ ಕೊರಗುವುದು ತರವಲ್ಲ.
ವಿವರ ವಿವರಣೆಗಳು :
ಭಗವಂತ ಅವ್ಯಕ್ತ. ಆತನ ಪ್ರತಿಬಿಂಬವಾದ ಜೀವ ಭೌತಿಕ ಶರೀರದಲ್ಲಿದ್ದರೂ ಕೂಡಾ ಅವ್ಯಕ್ತ. ಈ ಕಾರಣದಿಂದ ಭಗವಂತ ಹಾಗು ಜೀವ ನಮ್ಮ ಚಿಂತನೆಗೆ ನಿಲುಕದ್ದು. ನಾನು ಯಾರು? ಎಲ್ಲಿಂದ ಬಂದೆ ? ನಾನೇನು? ಎನ್ನುವುದೇ ನಮಗೆ ಗೊತ್ತಿಲ್ಲ. ಭಗವಂತ ಹಾಗು ಜೀವಸ್ವರೂಪ ಎಂದೂ ಬದಲಾಗದಿದ್ದರೂ ಕೂಡಾ, ಅದು ನಮ್ಮ ಚಿಂತನೆಗೆ ಎಟುಕುವುದಿಲ್ಲ. ಈ ಕಟು ಸತ್ಯವನ್ನು ತಿಳಿದ ಮೇಲೆ ಜೀವ ನಾಶವಾಗುತ್ತದೆ ಎಂದು ದುಃಖಿಸುವ ಅಗತ್ಯವಿಲ್ಲ.
________________________________________
ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ - 26
ಶ್ಲೋಕ :
ಅಥ ಚೈ ನಂ ನಿತ್ಯಜಾತಂ ನಿತ್ಯಂ ವಾ ಮನ್ಯಸೇ ಮೃತಮ್ ।
ತಥಾSಪಿ ತ್ವಂ ಮಹಾಬಾಹೋ ನೈನಂ ಶೋಚಿತುಮರ್ಹಸಿ ॥೨೬॥
ಅರ್ಥ :
ಆದರೂ ಈ ಜೀವ ದೇಹದ ಮೂಲಕ ಸದಾ ಹುಟ್ಟುವವನು ಮತ್ತು ಸಾಯುವವನು ಎಂದು ಭಾವಿಸುವೆಯ? ಹಾಗಿದ್ದರೂ, ಓ ಮಹಾವೀರ, ನೀನು ಇವನಿಗಾಗಿ ಕೊರಗುವುದು ತರವಲ್ಲ.
ವಿವರ ವಿವರಣೆಗಳು :
ವೇದಾಂತ ಬಿಟ್ಟು ಲೋಕದ ದೃಷ್ಟಿಯಲ್ಲಿ ವಿಚಾರ ಮಾಡಿದರೆ, ಆತ್ಮ ದೇಹದ ಮೂಲಕ ವ್ಯಕ್ತವಾಗುತ್ತದೆ ಹಾಗು ಸಾವಿನ ಮೂಲಕ ಅವ್ಯಕ್ತವಾಗುತ್ತದೆ. ಹುಟ್ಟು-ಸಾವನ್ನು ಮೀರಿ ನಿಲ್ಲುವುದು ಎಂದೂ ಸಾಧ್ಯವಿಲ್ಲ. ಆದ್ದರಿಂದ ಸಾವಿನ ಬಗ್ಗೆ ದುಃಖ ಪಡುವ ಅಗತ್ಯವಿಲ್ಲ. ಮಹಾ ಬಲಿಷ್ಟನಾದ ನೀನು ಈ ಹಿಂದೆ ಅದೆಷ್ಟು ಯುದ್ಧಗಳನ್ನು ಮಾಡಿದ್ದಿ? ಆಗ ಇರದ ಸಮಸ್ಯೆ ಈಗೇಕೆ? ನೀನು ಮಾಡುತ್ತಿರುವುದು ನಿನ್ನ ಕರ್ತವ್ಯವನ್ನೇ ಹೊರತು ಇನ್ನೇನನ್ನೂ ಅಲ್ಲ-ಎಂದು ಕೃಷ್ಣ ಅರ್ಜುನನಿಗೆ ತಿಳಿಸಿ ಹೇಳುತ್ತಾನೆ.
Comments