ಭಗವದ್ಗೀತೆ ಅಧ್ಯಾಯ-2 ಶ್ಲೋಕ - 21

ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ - 21

 
ಶ್ಲೋಕ :
ವೇದಾವಿನಾಶಿನಂ ನಿತ್ಯಂ ಯ ಏನಮಜಮವ್ಯಯಮ್ ।
ಕಥಂ ಸ ಪುರುಷಃ ಪಾರ್ಥ ಕಂ ಘಾತಯತಿ ಹಂತಿ ಕಮ್ ॥೨೧॥
 
ಅರ್ಥ :
ಓ ಪಾರ್ಥ, ಹುಟ್ಟು-ಸಾವುಗಳಿರದ, ಮಾರ್ಪಡದ, ಏತರಿಂದಲೂ ಅಳಿಯದ ಈ ಜೀವನನ್ನು[ಶರೀರದಿಂದಲೂ ಅಳಿವಿರದ ಭಗವಂತನನ್ನು] ಬಲ್ಲ ಜೀವಿ, ಯಾರನ್ನು ಹೇಗೆ ಕೊಲ್ಲಿಸುವುದು ? ಯಾರನ್ನು ಹೇಗೆ ಕೊಲ್ಲುವುದು?
 
ವಿವರ ವಿವರಣೆಗಳು
ದೋಷ ಸಂಬಂಧವಿಲ್ಲದ, ನಿತ್ಯವಾದ, ಎಂದೂ ಬದಲಾಗದ ಜೀವ ಸ್ವರೂಪವನ್ನು ಯಾರು ತಿಳಿಯುತ್ತಾರೋ ಅಂತಹ ಮಾನವನು ಯಾರನ್ನು ಕೊಲ್ಲುವುದು ಅಥವಾ ಕೊಲ್ಲಿಸುವುದು ಹೇಗೆ ಸಾಧ್ಯ? ಸ್ವರೂಪತಃ ಜೀವನಿಗೆ ನಾಶವಿಲ್ಲ ಎಂದು ತಿಳಿದಾಗ, ಸ್ಥೂಲ ಪ್ರಪಂಚದಲ್ಲಿ ಹುಟ್ಟು-ಸಾವು ಭಗವಂತನ ಇಚ್ಚೆಯಂತೆ ನಡೆಯುತ್ತಿದೆ ಎಂದು ತಿಳಿದ ಮೇಲೆ, ಯಾರು ಯಾರನ್ನು ಕೊಲ್ಲುವುದು ಅಥವಾ ಕೊಲ್ಲಿಸುವುದು? ಹುಟ್ಟು-ಸಾವಿನ ಹಿಂದಿರುವ ಭಗವತ್ ಶಕ್ತಿಯನ್ನು ನಾವು ಅರಿತುಕೊಳ್ಳಬೇಕು ಅಷ್ಟೆ.

ಜೀವಕ್ಕೆ ಅಳಿವಿಲ್ಲ, ಅದಕ್ಕೆ ಹುಟ್ಟು-ಸಾವು ಎನ್ನುವುದಿಲ್ಲ. ಹಾಗಿದ್ದರೆ ನಾವು ಪ್ರಾಪಂಚಿಕವಾಗಿ ಕಾಣುವ ಹುಟ್ಟು-ಸಾವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸಿದ್ದಾನೆ.

__________________________________________

ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ - 22
 
ಶ್ಲೋಕ :
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋSಪರಾಣಿ ।
ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ ॥೨೨॥
 
ಅರ್ಥ :
ಮನುಷ್ಯ ಹಳೆಯ ಬಟ್ಟೆಬರೆಗಳನ್ನು ಬಿಸುಟು ಬೇರೆ ಹೊಸತಾದುದ್ದನ್ನು ಉಡುತ್ತಾನೆ ಹೇಗೆಯೋ ಹಾಗೇ-ಜೀವ ಒಂದು ದೇಹವನ್ನು ಬಿಟ್ಟು ಬೇರೆ ಹೊಸ ದೇಹವನ್ನು ಪಡೆಯುತ್ತಾನೆ.
 
ವಿವರ ವಿವರಣೆಗಳು : 
ನಾವು ಉಟ್ಟ ಬಟ್ಟೆ ಹಳೆಯದಾದಾಗ ಹೇಗೆ ಅದನ್ನು ಬದಲಿಸುತ್ತೆವೋ-ಹಾಗೇ, ಜೀವ ಒಂದು ದೇಹವನ್ನು ಬಿಟ್ಟು ಇನ್ನೊಂದು ದೇಹವನ್ನು ಪಡೆಯುತ್ತದೆ. ಇಲ್ಲಿ ಒಂದು ವಿಶೇಷವೆಂದರೆ ಹೇಗೆ ತಾಯಿ ತನ್ನ ಮಗುವಿಗೆ ತನ್ನಿಚ್ಚೆಯಂತೆ ಬಟ್ಟೆ ಬದಲಿಸುತ್ತಾಳೊ ಹಾಗೆ ಭಗವಂತ ಜೀವದ ದೇಹ ಬದಲಿಸುತ್ತಾನೆ. ಜೀವನಿಗೆ ಸ್ವತಃ ದೇಹ ಬದಲಿಸುವ ಸ್ವಾತಂತ್ರ್ಯ ಇರುವುದಿಲ್ಲ. ಇದಕ್ಕೆ ಒಂದು ಅಪವಾದ ಎಂದರೆ ಆತ್ಮ ಸಾಕ್ಷಾತ್ಕಾರವಾದ ಯೋಗಿಗಳು. ಅವರು ಭಗವಂತನ ಅನುಗ್ರಹದಿಂದ ಸ್ವ-ಇಚ್ಚೆಯಂತೆ ದೇಹ ಬದಲಿಸುವ ಶಕ್ತಿಯನ್ನು ಪಡೆದಿರುತ್ತಾರೆ. [ಈ ಬಗ್ಗೆ ಸ್ವಾಮಿರಾಮ್ ಅವರು ಬರೆದಿರುವ “Living with Himalayan Masters” ಎನ್ನುವ ಪುಸ್ತಕದಲ್ಲಿ ಅನೇಕ ನೈಜ ದೃಷ್ಟಾಂತಗಳನ್ನು ಕಾಣಬಹುದು.] ಇಂತಹ ಮಹಾನ್ ಯೋಗಿಗಳನ್ನು ಬಿಟ್ಟರೆ ಇತರರಿಗೆ ಸ್ವಇಚ್ಛೆಯಂತೆ ದೇಹ ಬದಲಿಸುವ ಸ್ವಾತಂತ್ರ್ಯ ಇಲ್ಲ. ಆದ್ದರಿಂದ ಭೌತಿಕವಾಗಿ ಹುಟ್ಟು-ಸಾವು ಎಂದರೆ ಉಟ್ಟ ಬಟ್ಟೆಯನ್ನು ಕಳಚಿ ಹೊಸ ಬಟ್ಟೆಯನ್ನು ತೊಡಿಸಿದಂತೆ. ಸ್ವರೂಪತಃ ಜೀವಕ್ಕೆ ಎಂದೂ ಹುಟ್ಟು-ಸಾವು ಅನ್ನುವುದಿಲ್ಲ ಹಾಗು ಹೊಸ ಶರೀರದಿಂದ ಅದರ ಮೂಲಸ್ವಭಾವ ಬದಲಾಗುವುದಿಲ್ಲ.

ಹಾಗಾದರೆ ಆತ್ಮವನ್ನು ನಾಶ ಮಾಡಲು ಸಾದ್ಯವೇ ಇಲ್ಲವೋ? ಎಂದೆಂದಿಗೂ ಇಲ್ಲ ಎನ್ನುತ್ತಾನೆ ಕೃಷ್ಣ ಮುಂದಿನ ಶ್ಲೋಕದಲ್ಲಿ.

Comments