ಭಗವದ್ಗೀತೆ ಅಧ್ಯಾಯ-2 ಶ್ಲೋಕ --19-20

ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ - 19
 
ಶ್ಲೋಕ :
ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಮ್ ।
ಉಭೌ ತೌ ನ ವಿಜಾನೀತೋ ನಾಯಂ ಹಂತಿ ನ ಹನ್ಯತೇ ॥೧೯॥
 
ಅರ್ಥ :
ಯಾರು ಇವನನ್ನು ‘ಕೊಲ್ಲುವವನು’ ಎಂದು ತಿಳಿದಿದ್ದಾನೆ ಮತ್ತು ಯಾರು ಇವನನ್ನು ‘ಸತ್ತವನು’ ಎಂದು ತಿಳಿದಿದ್ದಾನೆ-ಆ ಇಬ್ಬರೂ ತಿಳಿದವರಲ್ಲ. ಇವನು ಕೊಲ್ಲುವುದಿಲ್ಲ ಮತ್ತು ಸಾಯುವುದಿಲ್ಲ.
 
ವಿವರ ವಿವರಣೆಗಳು : 
ಜೀವವನ್ನು ಕೊಲ್ಲಬಹುದು(ಕೊಲ್ಲುತ್ತೇನೆ) ಎಂದು ಭಾವಿಸುವವರಿಗೆ ಹಾಗು ಅದು ನಾಶವಾಯಿತು (ಕೊಲ್ಲಲ್ಪಟ್ಟಿತು) ಎನ್ನುವವರಿಗೆ ತಿಳುವಳಿಕೆ ಇಲ್ಲ. ಏಕೆಂದರೆ ಜೀವ ಕೊಲ್ಲುವುದೂ ಇಲ್ಲ, ಕೊಲ್ಲಲ್ಪಡುವುದೂ ಇಲ್ಲ. ಆತ್ಮವನ್ನು ಕೊಲ್ಲುವುದು ಸಾಧ್ಯವೇ ಇಲ್ಲ. ನಮಗೆ ಸಾಯುವುದು ಅಥವಾ ಸತ್ತಿತು ಎಂದು ಕಾಣುವುದು ಭೌತಿಕ ಶರೀರ ಮಾತ್ರ. ಜೀವನಿಗೆ ದೇಹದ ಮೂಲಕ ಕೂಡಾ ಕೊಲ್ಲುವ ಅಥವಾ ಸಾಯುವ ಸ್ವಾತಂತ್ರ್ಯ ಇಲ್ಲ. ಇಲ್ಲಿ ಅರ್ಜುನನಿಗೆ ‘ಕೌರವರು ನನ್ನ ಕೈಯಿಂದ ಸಾಯುತ್ತಾರೆ’ ಎನ್ನುವುದು ಕೇವಲ ಭ್ರಮೆ. ಸೃಷ್ಟಿ-ಸಂಹಾರ ಕರ್ತನಾದ ಭಗವಂತನ ಇಚ್ಚೆ ಇಲ್ಲದೆ ಯಾವುದೂ ನಡೆಯುವುದಿಲ್ಲ. ಆತನ ಇಚ್ಛೆಗೆ ವಿರುದ್ಧವಾಗಿ ನಾವು ಏನೂ ಮಾಡಲು ಸಾಧ್ಯವಿಲ್ಲ.


___________________________________________


ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ - 20
 
ಶ್ಲೋಕ :
ನ ಜಾಯತೇ ಮ್ರಿಯತೇ ವಾ ಕದಾಚಿತ್ ನಾ[S]ಯಂ ಭೂತ್ವಾ ಭವಿತಾ ವಾ ನ ಭೂಯಃ ।
ಅಜೋ ನಿತ್ಯಃ ಶಾಶ್ವತೋSಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ ॥೨೦॥
 
ಅರ್ಥ :
ಈ ಜೀವ ಎಂದೂ ಹುಟ್ಟುವುದಿಲ್ಲ; ಸಾಯುವುದೂ ಇಲ್ಲ. ಭಗವಂತನ ಅರಿವಿನಂತೆ ಹುದುಗಿದ್ದು ಮತ್ತಾಗುವವನೂ ಅಲ್ಲ. ಇವನು ಹುಟ್ಟಿರದ, ಸಾವಿರದ, ಮಾರ್ಪಡದ-ಭಗವಂತನ ಪಡಿಯಚ್ಚು.[ಈ ಪರಮ ಪುರುಷ ಎಂದೂ ಹುಟ್ಟುವುದಿಲ್ಲ; ಸಾಯುವುದೂ ಇಲ್ಲ. ಸ್ವರೂಪದಿಂದಿದ್ದು ದೇಹದಿಂದ ಹುಟ್ಟುತ್ತಾನೆ ಎನ್ನುವುದೂ ಸಲ್ಲ. ಈ ಜೀವ ಕೂಡ ಹುಟ್ಟದ, ಸಾಯದ, ಬದಲಾಗದ ತತ್ವ.] ದೇಹದಿಂದ ದೇಹಕ್ಕೆ ಅಲೆವ ಈ ಜೀವ ದೇಹ ಅಳಿದರೂ ತಾನಳಿಯುವುದಿಲ್ಲ.
 
ವಿವರ ವಿವರಣೆಗಳು : 
ಇಲ್ಲಿ ಕೃಷ್ಣ ‘ಜೀವ ಸ್ವರೂಪ’ ಅಂದರೆ ಏನೆಂದು ವಿವರಿಸಿದ್ದಾನೆ. ಈ ಜೀವ ಸ್ವರೂಪತಃ ಎಂದೂ ಹುಟ್ಟುವುದಿಲ್ಲ ಮತ್ತು ಎಂದೂ ನಾಶವಾಗುವುದಿಲ್ಲ. ಅದು ಸದಾ ಏಕರೂಪದಲ್ಲಿರುತ್ತದೆ. ಏಕೆಂದರೆ ಜೀವಸ್ವರೂಪ ಭಗವಂತನ ಪ್ರತಿಬಿಂಬ. ಭಗವಂತನಿಗೆ ಹುಟ್ಟಿಲ್ಲ. ಅವನು ನಿತ್ಯ ಹಾಗು ಶಾಶ್ವತ. ಜೀವ ಸದಾ ಶರೀರದಿಂದ ಶರೀರಕ್ಕೆ ಸಂಚರಿಸುತ್ತಿರುತ್ತದೆ(ಪುರ-ಅಣ). ಆದರೆ ದೇಹ ಬದಲಾದಂತೆ ಜೀವಸ್ವರೂಪ ಬದಲಾಗುವುದಿಲ್ಲ. ಭೌತಿಕ ಶರೀರಕ್ಕೆ ಮುದಿತನವಿದ್ದಂತೆ ಜೀವ ಸ್ವರೂಪಕ್ಕೆ ಮುದಿತನವಿಲ್ಲ. ಅದು ಸದಾ ಏಕರೂಪದಲ್ಲಿರುತ್ತದೆ. ಆದರೆ ಪ್ರಭಾವದಿಂದ ಬಂದ ನಂಬಿಕೆ ಬದಲಾಗಬಹುದು. ಉದಾಹರಣೆಗೆ ಒಂದು ಜನ್ಮದಲ್ಲಿ ನಾಸ್ತಿಕನಾಗಿರುವವ ಇನ್ನೊಂದು ಜನ್ಮದಲ್ಲಿ ಪೂರ್ಣ ಆಸ್ತಿಕನಾಗಬಹುದು. ಸ್ವಭಾವ ವಿಶಿಷ್ಟನಾದ ಜೀವ ಎಂದೂ ಬದಲಾಗದೆ, ನಾಶವಾಗದೆ ಉಳಿಯುತ್ತಾನೆ.

Comments