ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -15
ಶ್ಲೋಕ :
ಯಂ ಹಿ ನ ವ್ಯಥಯನ್ತ್ಯೇತೇ ಪುರುಷಂ ಪುರುಷರ್ಷಭ ।
ಸಮದುಃಖಸುಖಂ ಧೀರಂ ಸೋಮೃತತ್ವಾಯ ಕಲ್ಪತೇ ॥೧೫॥
ಅರ್ಥ :
ಓ ಗಂಡುಗಲಿಯೇ, ಯಾವ ಶರೀರವನ್ನು[ಜ್ಞಾನಿಯನ್ನು] ಇವು ಕಾಡಲಾರವೋ, ಅವನು ಸುಖ-ದುಃಖವನ್ನು ಸಮನಾಗಿ ಕಾಣಬಲ್ಲ ಧೀರ. ಅಂತವನು ಸಾವಿಲ್ಲದ ತಾಣವನ್ನು ಸೇರಲು ತಕ್ಕವನಾಗುತ್ತಾನೆ.
ವಿವರ ವಿವರಣೆಗಳು :
ಕೃಷ್ಣ ಮುಂದುವರಿದು ಹೇಳುತ್ತಾನೆ, “ಯಾವ ಪುರುಷನಿಗೆ ‘ಮಾತ್ರಾ ಸ್ಪರ್ಶ’ ಕಾಡುವುದಿಲ್ಲವೋ ಅವನು ಸುಖ-ದುಃಖವನ್ನು ಸಮನಾಗಿ ಕಾಣಬಲ್ಲ ಧೀರ” ಎಂದು. ಇಲ್ಲಿ “ಪುರುಷ” ಎನ್ನುವ ಪದ ಬಂದಿದೆ. ‘ಪುರುಷ ಎಂದರೆ ಗಂಡಸು, ಗಂಡಸರಿಗೆ ಮಾತ್ರ ಸಾಧನೆ-ಮೋಕ್ಷ’-ಎನ್ನುವ ಮೂಢನಂಬಿಕೆ ನಮ್ಮಲ್ಲಿದೆ. ಆದರೆ ಪುರುಷ ಎಂದರೆ “ಪುರದಲ್ಲಿ ಇರುವ ಜೀವ”. ಪುರ ಎಂದರೆ ಪೂರ್ಣವಾದ ದೇಹ. ಅಂದರೆ ಮಾನವ ದೇಹ. ಆದ್ದರಿಂದ ಪುರುಷ ಎಂದರೆ ಮಾನವರು(Human being) ಅಥವಾ ಸಾಧಕ ಜೀವ. ಸ್ಥೂಲ ಶರೀರದಲ್ಲಿದ್ದೂ ಕೂಡಾ ಯಾರಿಗೆ ಮಾತ್ರಾಸ್ಪರ್ಶದಿಂದ ಬರುವ ಸುಖ-ದುಃಖ ಬೇರೆ-ಬೇರೆಯಾಗಿ ಕಾಣುವುದಿಲ್ಲವೋ, ಆತ ಸುಖ ದುಃಖವನ್ನು ಸಮನಾಗಿ ಕಾಣಬಲ್ಲ ಧೀರನೆನಿಸುತ್ತಾನೆ.
ಪುರುಷಃ ಎಂದರೆ ಎಲ್ಲಕ್ಕಿಂತ ದೊಡ್ಡವನಾದ ದೇವರನ್ನು ತಿಳಿದವ. ನಮಗೆ ಸುಖ-ದುಃಖ ಏಕೆ ಬರುತ್ತದೆ ಎನ್ನುವ ಜ್ಞಾನವಿದ್ದಾಗ, ನಾವು ಸುಖ ಬಂದಾಗ ಹಿಗ್ಗುವುದಿಲ್ಲ, ದುಃಖ ಬಂದಾಗ ಕುಗ್ಗುವುದಿಲ್ಲ. ನಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಸುಖ-ದುಃಖಕ್ಕೂ ಒಂದು ಕಾರಣವಿದೆ. ಸುಖ-ದುಃಖ ಜೀವನದಲ್ಲಿ ಬರುವ ಅಲೆಗಳು. ಇದರಲ್ಲಿ ಒಂದು ಬೇಕು, ಇನ್ನೊಂದು ಬೇಡ ಎನ್ನುವ ಆಯ್ಕೆ ಸರಿಯಲ್ಲ. ಯಾವುದು ಬಂತೋ ಅದಿರಲಿ ಎಂದು ಬದುಕಬೇಕು. ನಮಗೆ ಸುಖ-ದುಃಖವನ್ನು ಇನ್ನೊಬ್ಬರು ದ್ವೇಷದಿಂದ ಕೊಡುವುದಲ್ಲ. ಅದು ನಮ್ಮ ಕರ್ಮ ಫಲ. ಸುಖ-ದುಃಖವನ್ನು ನಮಗೆ ಕೊಡುವವನು ಭಗವಂತ. ತಾಯಿ ತನ್ನ ಮಗುವಿನ ಉದ್ಧಾರಕ್ಕಾಗಿ ಹೇಗೆ ಶಿಕ್ಷೆ ಕೊಡುತ್ತಾಳೋ, ಹಾಗೇ ಭಗವಂತ ನಮ್ಮ ಉದ್ಧಾರಕ್ಕಾಗಿ ನಮಗೆ ದುಃಖವನ್ನು ಕೊಡುತ್ತಾನೆ. ಇದು ಶಿಕ್ಷೆ ಅಲ್ಲ-ಶಿಕ್ಷಣ. ಮನುಷ್ಯ ದುಃಖದಲ್ಲಿ ಬೆಳೆದಾಗ ಗಳಿಸುವ ಅನುಭವ ಎಂದೂ ಸುಖದಲ್ಲಿ ಗಳಿಸಲಾರ. ದುಃಖ ಜೀವನದ ನಿಜವಾದ ಅನುಭವ. ಇದು ನಮಗೆ ಕೊಡುವ ದುಃಖದ ಹಿಂದೆ ಭಗವಂತನಿಟ್ಟ ಮಹಾ ಕಾರುಣ್ಯ. ಈ ಜ್ಞಾನವಿದ್ದಾಗ ಮಾತ್ರ ನಮಗೆ ಸುಖ-ದುಃಖವನ್ನು ಏಕರೂಪದಲ್ಲಿ ಕಾಣುವ ಮನಃಸ್ಥಿತಿ ಬರುತ್ತದೆ. ಇಂತಹ ಜ್ಞಾನವಿರುವವನು ಧೀರನಾಗುತ್ತಾನೆ. ತಿಳುವಳಿಕೆಯಿಂದ ಧೈರ್ಯ ಬರುತ್ತದೆ. ಯಾರು ಒಂದು ಜನ್ಮದಲ್ಲಿ ಸುಖ-ದುಃಖವನ್ನು ಸಮನಾಗಿ ಕಾಣಬಲ್ಲ ತಿಳುವಳಿಕೆ ಹಾಗು ಧೈರ್ಯವನ್ನು ಗಳಿಸುತ್ತಾರೋ, ಅವರು ಮುಂದೆಂದೂ ಈ ಸಂಸಾರ ಬಂಧದಲ್ಲಿ ಮರಳಿ ಹುಟ್ಟುವುದಿಲ್ಲ. ಇಂತಹ ಮಾನಸಿಕ ಸಮತೋಲನದ ಮೂಲಕ ಭಗವಂತನನ್ನು ತಿಳಿದು ಮೋಕ್ಷವನ್ನು ಪಡೆಯತ್ತಾರೆ.
__________________________________________
ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -16
ಶ್ಲೋಕ :
ನಾಸತೋ ವಿದ್ಯತೇ ಭಾವೋ ನಾಭಾವೋ ವಿದ್ಯತೇ ಸತಃ ।
ಉಭಯೋರಪಿ ದೃಷ್ಟೋನ್ತಸ್ತ್ವನಯೋಸ್ತತ್ತ್ವದರ್ಶಿಭಿಃ ॥೧೬॥
ಅರ್ಥ :
ಪ್ರಕೃತಿಗೂ ಅಳಿವಿಲ್ಲ; ಭಗವಂತನಿಗೂ ಅಳಿವಿಲ್ಲ. [ಕೆಡುಕು ಮಾಡಿ ಒಳಿತಾಗದು, ಒಳಿತಿನಿಂದ ಕೆಡುಕಾಗದು]. ನಿಜವ ಕಂಡವರು ಈ ಎರಡರ ತೀರ್ಮಾನವನ್ನು ಬಲ್ಲರು.
ವಿವರ ವಿವರಣೆಗಳು :
ಸುಖ-ದುಃಖವನ್ನು ಮೀರಿ ನಿಲ್ಲಬಹುದು. ಅದೊಂದು ಮಾನಸಿಕ ಸ್ಥಿತಿ. ಆದರೆ ತನ್ನ ಗುರು-ಹಿರಿಯರನ್ನು ಕೊಲ್ಲುವುದು ಪಾಪವಲ್ಲವೇ? ಈ ಪ್ರಶ್ನೆಗೆ ಇಲ್ಲಿ ಉತ್ತರವಿದೆ. “ಸತ್ತಿನಿಂದ ಅಭಾವವಿಲ್ಲ, ಅಸತ್ತಿನಲ್ಲಿ ಭಾವವಿಲ್ಲ” ಅಂದರೆ ಒಳ್ಳೆಯ ಕೆಲಸ ಮಾಡುವುದರಿಂದ ಎಂದೂ ದುಃಖವಿಲ್ಲ, ಕೆಟ್ಟ ಕೆಲಸ ಮಾಡಿದರೆ ಸುಖವಿಲ್ಲ. ಕೆಲವೊಮ್ಮೆ ಕೆಟ್ಟ ಕೆಲಸ ಮಾಡುವವರು ಸುಖಪಡುತ್ತಿರುವಂತೆ ಭಾಸವಾದರೂ ಕೂಡಾ, ಅದು ತಾತ್ಕಾಲಿಕ. ಅಧರ್ಮದ ಹಾದಿಯನ್ನು ತುಳಿದವ ಎಂದೂ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಮಹಾಭಾರತ ಯುದ್ಧವನ್ನು ವಿಶ್ಲೇಷಣೆ ಮಾಡಿದರೆ ಅಲ್ಲಿ ಯುದ್ಧಕ್ಕೆ ಕಾರಣರಾದವರು ಪಾಂಡವರಲ್ಲ. ಪಾಂಡವರು ಧರ್ಮ ರಕ್ಷಣೆಯ ಹೊಣೆಗಾರಿಕೆಯಿಂದ ಯುದ್ಧಕ್ಕೆ ಸಜ್ಜಾಗಿರುವುದು. ಇಲ್ಲಿ ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ: “ಒಳ್ಳೆಯ ಕೆಲಸ ಮಾಡುವಾಗ ಯಾರ ಭಯವೂ ಬೇಡ ಹಾಗು ಅದರಿಂದ ದುಃಖವಿಲ್ಲ” ಎಂದು. ಧರ್ಮ ರಕ್ಷಣೆಯ ಹಾದಿಯಲ್ಲಿ ‘ನನ್ನವರು’ ಎನ್ನುವುದು ಸಲ್ಲದು. ಜಗತ್ತಿನ ತತ್ವವನ್ನು ಸಾಕ್ಷಾತ್ಕಾರ ಮಾಡಿಕೊಂಡ ಜ್ಞಾನಿಗಳು ಕಂಡುಕೊಂಡ ಕೊನೆಯ ಸತ್ಯವಿದು.
ಮಹಾಭಾರತದ ಪ್ರತಿಯೊಂದು ಶ್ಲೋಕಕ್ಕೂ ಹತ್ತು ಅರ್ಥಗಳಿವೆಯಂತೆ. ಇನ್ನೊಂದು ಆಯಾಮದಲ್ಲಿ ಈ ಶ್ಲೋಕವನ್ನು ನೋಡಿದರೆ- “ನ ಅಸತಃ ಅಭಾವಃ ಸತಃ ಅಭಾವಃ ನ ವಿದ್ಯತಿ” ಅಂದರೆ ಸತ್ತಿಗೂ ಅಭಾವವಿಲ್ಲ ಅಸತ್ತಿಗೂ ಅಭಾವವಿಲ್ಲ ಎಂದರ್ಥ. ಅಸತ್ ಎಂದರೆ ಸ್ಥೂಲ ಪ್ರಪಂಚಕ್ಕೆ ಕಾರಣವಾಗಿರುವ, ಸೂಕ್ಷ್ಮವಾಗಿರುವ ಮೂಲಪ್ರಕೃತಿ. ಪ್ರಕೃತಿ ಅನಾದಿನಿತ್ಯ. ಈ ಪ್ರಕೃತಿಯನ್ನು ಸೃಷ್ಟಿಮಾಡಿದ ಭಗವಂತ(ಪುರುಷ) ಅನಾದಿನಿತ್ಯ. ಪ್ರಕೃತಿ ಮತ್ತು ಪುರುಷನಿಗೆ ಅಧೀನವಾಗಿರುವ ಜೀವ ಕೂಡಾ ಅನಾದಿನಿತ್ಯ. ಜೀವಕ್ಕೆಈ ಸ್ಥೂಲ ದೇಹ ಬರುವ ಮೊದಲೂ ಜೀವ ಇತ್ತು. ಹಾಗು ಮುಂದೆ ಕೂಡಾ ಇರುತ್ತದೆ. ಪಾಂಚಭೌತಿಕ ಶರೀರದಲ್ಲಿ ಜೀವ ಕೇವಲ ಅತಿಥಿ. ಹೀಗಿರುವಾಗ ದೇಹಾಭಿಮಾನ ಸಲ್ಲದು.
Comments