ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -11
ಶ್ಲೋಕ :
ಶ್ರೀಭಗವಾನುವಾಚ ।
ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ |
ಗತಾಸೂನಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ ॥೧೧॥
ಅರ್ಥ :
ಶ್ರೀ ಭಗವಾನ್ ಉವಾಚ-ಭಗವಂತ ಹೇಳಿದನು:ಅಳಬಾರದವರಿಗಾಗಿ ನೀನು ಅಳುತ್ತಿರುವೆ. ತಿಳಿದವರು ಆಡದಂಥ ಮಾತುಗಳನ್ನು ತೋಚಿದಂತೆ ಆಡುತ್ತಿರುವೆ. ಅಳಿದವರ ಬಗೆಗಾಗಲಿ, ಅಳಿಯದವರ ಬಗೆಗಾಗಲಿ, ತಿಳಿದವರು ಅಳುವುದಿಲ್ಲ.
ವಿವರ ವಿವರಣೆಗಳು :
ಇದು ಭಗವಂತನ ಉಪದೇಶದ ಮೊದಲ ನುಡಿ. ಇದು ಇಡೀ ಗೀತೆಗೆ ಪಂಚಾಂಗ ರೂಪದಲ್ಲಿದೆ. ಇಲ್ಲಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ “ಯಾರಿಗೋಸ್ಕರ ಅಳಬಾರದೋ ಅಂತವರಿಗೋಸ್ಕರ ಅಳುತ್ತಿರುವೆ. ತುಂಬಾ ತಿಳಿದ ಮಹಾ ಜ್ಞಾನಿಯಂತೆ ಮಾತನಾಡುತ್ತಿರುವೆ” ಎಂದು. ಇದು ಅರ್ಜುನನ ದೌರ್ಬಲ್ಯಕ್ಕೆ ಕೃಷ್ಣ ಹಿಡಿದ ಕನ್ನಡಿ. ಇಲ್ಲಿ ‘ನಿನಗೇನೂ ತಿಳಿದಿಲ್ಲ’ ಎನ್ನುವ ಭಾವ ಕೂಡ ಸ್ಪಷ್ಟವಾಗಿದೆ. ಅರ್ಜುನನಿಗೆ ಕಾಡಿರುವುದು ಕೆಲವರು(ಗುರು-ಹಿರಿಯರು) ಸಾಯುತ್ತಾರೆ ಇನ್ನು ಕೆಲವರು(ದುಷ್ಟರು) ಬದುಕುತ್ತಾರಲ್ಲಾ ಎನ್ನುವ ಭಯ-ಅದರಿಂದಾಗಿ ದುಃಖ. ದುಃಖಕ್ಕೆ ಮೂಲ ಭಯ-ಭಯಕ್ಕೆ ಮೂಲ ಅಜ್ಞಾನ.
ಇಲ್ಲಿ ನಿಮಗೊಂದು ಪ್ರಶ್ನೆ ಬರಬಹುದು. ಭೀಷ್ಮ ದ್ರೋಣರಂತಹ ಮಹಾತ್ಮರು ಸತ್ತರೆ ಅಳುವುದು ತಪ್ಪೇ? ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ನಾವು ಹುಟ್ಟು ಸಾವಿನ ಗುಟ್ಟನ್ನು ಅರಿತಿರಬೇಕು. ಹುಟ್ಟು ಸಾವಿನ ಇನ್ನೊಂದು ಆಯಾಮ ತಿಳಿದಾಗ ನಮಗೆ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ. ಜೀವ ಅನಾದಿನಿತ್ಯ; ಅದಕ್ಕೆಂದೂ ಸಾವಿಲ್ಲ. ಈ ಭೌತಿಕ ಶರೀರ ಜೀವಕ್ಕೆ ಒಂದು ಪಂಜರದಂತೆ. ಈ ಪಂಜರದಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಹುಟ್ಟು. ಪಂಜರದಿಂದ ಹೊರ ಹೋಗುವುದು ಸಾವು. ಈ ಆಯಾಮದಲ್ಲಿ ನೋಡಿದರೆ ಹೊಸ ಅಂಗಿ ತೊಡುವುದು ಹುಟ್ಟು-ಹಳೆ ಅಂಗಿ ತೊರೆಯುವುದು ಸಾವು. ಈ ಜ್ಞಾನ ನಮಗಿದ್ದರೆ ನಮಗೆ ಸಾವಿನ ಭಯವಿರುವುದಿಲ್ಲ.
ಇಲ್ಲಿ ಕೃಷ್ಣ ಹೇಳುತ್ತಾನೆ: “ಜ್ಞಾನಿಗಳು ಆಡುವ ಮಾತನ್ನು ನೀನು ಆಡುತ್ತಿಲ್ಲ” ಎಂದು. ಏಕೆಂದರೆ ಜ್ಞಾನಿಗಳು ಹುಟ್ಟು-ಸಾವಿನ ಮರ್ಮವನ್ನು ಚನ್ನಾಗಿ ಅರಿತಿರುತ್ತಾರೆ. ನೀನು ಆಡುತ್ತಿರುವುದು ತಿಳುವಳಿಕೆಯ ಮಾತಲ್ಲ. ನಿನ್ನ ತಿಳುವಳಿಕೆಯೇ ವಿಶ್ವದ ಸತ್ಯ ಎನ್ನುವ ಭ್ರಮೆಯಿಂದ ನೀನು ಮಾತನಾಡುತ್ತಿದ್ದೀಯ ಎನ್ನುತ್ತಾನೆ ಕೃಷ್ಣ.
ಇಲ್ಲಿ ಕೃಷ್ಣ ಅರ್ಜುನ ಹಾಕಿದ ಎಲ್ಲಾ ಲೌಕಿಕ ಪ್ರಶ್ನೆಗಳನ್ನು ಬಿಟ್ಟು ಅವನಿಗೆ ಸತ್ಯದ ಸಾಕ್ಷಾತ್ಕಾರ ಮಾಡಿಸುತ್ತಿದ್ದಾನೆ. ಅರ್ಜುನ ಕಂಡಿದ್ದು ಕೇವಲ ಐಹಿಕ ಪ್ರಪಂಚವಾದರೆ, ಕೃಷ್ಣ ಆತನಿಗೆ ಅದರಾಚೆಗಿನ ಸತ್ಯದ ಇನ್ನೊಂದು ಮುಖದ ಪರಿಚಯ ಮಾಡಿಸುತ್ತಿದ್ದಾನೆ.
ಸಾವು ಭಯಾನಕವಲ್ಲ, ಹುಟ್ಟಿ ಬಂದವನಿಗೆ ಸಾವು ಅನಿವಾರ್ಯ. ಆತ್ಮಕ್ಕೆ ಎಂದೂ ಸಾವಿಲ್ಲ. ಆತ್ಮ ಅನಾದಿನಿತ್ಯ. ಆದರೆ ದೇಹ ನಾಶ ಅನಿವಾರ್ಯ. ಮನುಷ್ಯ ತನ್ನ ವಿಕೃತಿಯಿಂದ ಪ್ರಕೃತಿಯೆಡೆಗೆ ಪಯಣಿಸುವ ಕ್ರಿಯೆ ಸಾವು. ಆದ್ದರಿಂದ ಅಳಿದವರ ಬಗೆಗಾಗಲಿ, ಅಳಿಯದವರ ಬಗೆಗಾಗಲಿ, ತಿಳಿದವರು ಅಳುವುದಿಲ್ಲ ಎನ್ನುವುದನ್ನು ಇಲ್ಲಿ ಕೃಷ್ಣ ಅರ್ಜುನನಿಗೆ ಮನವರಿಕೆ ಮಾಡಿಸುತ್ತಿದ್ದಾನೆ.
_____________________________________________
ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -12
ಶ್ಲೋಕ :
ನತ್ವೇವಾಹಂ ಜಾತು ನಾSಸಂ ನ ತ್ವಂ ನೇಮೇ ಜನಾಧಿಪಾಃ ।
ನಚೈವ ನ ಭವಿಷ್ಯಾಮಃ ಸರ್ವೇ ವಯಮತಃ ಪರಮ್ ॥೧೨॥
ಅರ್ಥ :
ನಾನು ಹಿಂದೆ ಎಂದೂ ಇರದಿದ್ದವನಲ್ಲ. ಅಲ್ಲ ನೀನೂ. ಅಲ್ಲ ಈ ಅರಸರೂ. ಇನ್ನು ಮುಂದೂ ನಾವೆಂದೂ ಇಲ್ಲವಾಗುವವರಲ್ಲ.
ವಿವರ ವಿವರಣೆಗಳು :
ಕೃಷ್ಣ ಇಲ್ಲಿ ಸಾವಿನ ಬಗ್ಗೆ ನಾವು ಏಕೆ ಚಿಂತಿಸಬೇಕಿಲ್ಲ ಎನ್ನುವ ಮಾತಿಗೆ ಪೂರಕವಾಗಿ, ಅದನ್ನು ಸಮರ್ಥಿಸುವ ಮಾತನ್ನು ಹೇಳುತ್ತಾನೆ. ಆತ ಹೇಳುತ್ತಾನೆ: “ನಾನು-ನೀನು ಈ ಎಲ್ಲಾ ರಾಜರು, ಹಿಂದೆ ಇದ್ದೆವು, ಇಂದು ಇದ್ದೇವೆ ಹಾಗು ಮುಂದೆ ಕೂಡಾ ಇರುತ್ತೇವೆ. ದೇಹ ನಾಶವಾದಾಗ ಜೀವ ನಾಶವಾಗುವುದಿಲ್ಲ. ನಾನು ಹೇಗೆ ಅನಾದಿನಿತ್ಯವೋ ಹಾಗೇ ಪ್ರತಿಯೊಂದು ಜೀವರು ಕೂಡಾ ಅನಾದಿನಿತ್ಯ. ಆತ್ಮವನ್ನು ಕೊಲ್ಲುವುದು ಅಸಾಧ್ಯ” ಎಂದು. ಅನಂತ ಜೀವದ ಹರವು ಅನಂತ ಕಾಲದ ತನಕ ನಿರಂತರವಾಗಿರುತ್ತದೆ. ಆತ್ಮ ಎಂದೆಂದಿಗೂ ಅಜರಾಮರ. ಪ್ರತಿಯೊಂದು ಜೀವಕ್ಕೆ ಅದರದ್ದೇ ಆದ ಸ್ವಭಾವವಿದೆ. ಜೀವ ಒಂದು ಬೀಜದಂತೆ. ಭಗವಂತ ಒಬ್ಬ ತೋಟಗಾರನಂತೆ. ಆತ ಈ ಪ್ರಪಂಚವೆಂಬ ತೋಟದ ಸೃಷ್ಟಿ ಮಾಡಿ, ಈ ಜೀವವನ್ನು ಆ ತೋಟದಲ್ಲಿ ಬಿತ್ತಿ ಅದಕ್ಕೊಂದು ಅಸ್ತಿತ್ವವನ್ನು ಕೊಟ್ಟ. ಪ್ರತಿಯೊಂದು ಜೀವ ಅದರ ಸ್ವಭಾವಕ್ಕನುಗುಣವಾಗಿ ಈ ಪ್ರಪಂಚದಲ್ಲಿ ಬೆಳೆಯುತ್ತವೆ. ಒಂದು ಜೀವದ ಸ್ವಭಾವ ಇನ್ನೊಂದು ಜೀವದ ಸ್ವಭಾವಕ್ಕಿಂತ ಭಿನ್ನ. ಈ ಕಾರಣದಿಂದಾಗಿ ಈ ಪ್ರಪಂಚ ಇಷ್ಟೊಂದು ವೈವಿದ್ಯಪೂರ್ಣ.
Comments