ಸನಾತನ ಹಿಂದೂ ಧರ್ಮದ 4 ವೇದಗಳು

                            ವೇದಗಳು
ನಮ್ಮ 4 ವೇದಗಳು ಋಗ್ವೇದ,
ಯಜುರ್ವೇದ,
ಸಾಮವೇದ
ಅಥರ್ವವೇದ. 20,379ಮಂತ್ರಗಳು ಮತ್ತು 18 ಪುರಾಣಗಳು ಪ್ರತಿಯೊಬ್ಬ ವ್ಯಕ್ತಿಗೂ ಆಧ್ಯಾತ್ಮಿಕ ಜೀವನವನ್ನು ನಡೆಸಲು ಸ್ಪೂರ್ತಿಯನ್ನು ನೀಡುತ್ತದೆ. ಸ್ಮೃತಿಗಳು, ಉಪನಿಷತ್ತುಗಳು ಮತ್ತು ಪುರಾಣಗಳಿಂದಲೂ ವೈದಿಕ ಜ್ಞಾನವನ್ನು ನಾವು ಪಡೆಯಲಾಗುತ್ತದೆ. ಆದರೆ ವೇದಗಳ ಕರ್ತೃ ಯಾರು ಮತ್ತು ಹಿಂದೂ ಧರ್ಮದ ಅತ್ಯಂತ ಹಳೆಯ ಗ್ರಂಥ 'ವೇದ' ಯಾರಿಂದ ಬರೆಯಲ್ಪಟ್ಟಿದೆ ಎಂಬುದು ನಿಮಗೆ ತಿಳಿದಿದೆಯೇ.
ವೇದವು ಅಪೌರುಷೇಯ
ವೇದವು ಮಾನವ ರಚಿತವಲ್ಲ
ಲೋಕಕಲ್ಯಾಣಕ್ಕಾಗಿ ಸನಾತನ ವಿಶ್ವ ಸೃಷ್ಟಿ ಸ್ವರೂಪಿಯಾದ ಭಗವಂತನ ಇಚ್ಚೆಯಿಂದ ಋಷಿ ಮುನಿಗಳ ಸ್ಮೃತಿ ಪಟಲದಲ್ಲಿ ಪ್ರೇರಣೆಯಾದ ಅಪೌರುಷೇಯ ವಾಣಿಯಿದು - "ಶೃತ" "ಶೃತಿ"
ವೇದಗಳು ಭಗವಂತನನಂತೆ ಸರ್ವವ್ಯಾಪಿ.
"ವೇದ"-ಎಂಬುದೊಂದು ಸಾಹಿತ್ಯರಾಶಿ. ವಾಙ್ಮಯ ಎಂಬ ಅರ್ಥವನ್ನು ಹೇಳುತ್ತವೆ.
ಋಷಿ ಮುನಿಗಳು ಮಂತ್ರ ದೃಷ್ಟಾರರೆ ಹೊರತು ಕರ್ತಾರರಲ್ಲ..
ಇದಕ್ಕೆ "ಶ್ರುತಿ"ಎಂದೂ ಹೆಸರುಂಟು. "ಬ್ರಹ್ಮ"-ಎಂಬುದಾಗಿಯೂ ಕರೆಯುತ್ತಾರೆ. ನಿತ್ಯ ಹಾಗೂ ಪರಮ ಪ್ರಮಾಣ. ಪ್ರಭು ಸಂಹಿತೆ. ಇಂದಿಗೂ "ವೇದವಾಕ್ಯ" ಎಂಬ ಮಾತೇ ರೂಢಿಯಲ್ಲಿಲ್ಲವೇ?
ವೇದವೆಂದರೆ ಜ್ಞಾನ.
"ವೇದ" ಎಂಬ ಪದವು ವಿದ್-ಜ್ಞಾನೇ ಎಂಬ ಧಾತುವಿನಿಂದ ಬಂದಿದೆ. ಆದ್ದರಿಂದ "ವೇದ" –ಪದವು ಜ್ಞಾನ ಎಂಬ ಅರ್ಥವನ್ನೂ ಕೊಡುತ್ತದೆ. ಈ ಜ್ಞಾನ ಎಂಬ ಪದವು ತಿಳಿವಳಿಕೆ ಅಥವಾ ಅಷ್ಟೇ ಅರ್ಥವುಳ್ಳದ್ದಲ್ಲ. ಜೀವಿಗಳ ಹೃದಯಾಂಗಣದಲ್ಲಿ ಬೆಳೆಗುವ ಜ್ಯೋತೀರೂಪವಾದ ವಿಶ್ವವಿಕಾಸ ಮೂಲವಾದ ಬದುಕು. ಜೀವನದ ಮೂಲದಲ್ಲಿ ಜ್ಞಾನ ತಪಸ್ಸಿನಿಂದ ಸಾಕ್ಷಾತ್ಕರಿಸಿಕೊಂಡ "ಜ್ಯೋತಿ" ಎಂಬುದೇ ಮಹರ್ಷಿಗಳು "ಜ್ಞಾನ" ಎಂದು ಕರೆದ ಬದುಕು. ಮೂಲತಃ ಆ ಜ್ಯೋತಿಯೇ "ವೇದ" ಎಂಬ ಪದದ ಅರ್ಥ.
ಯಾವ ತಿಳಿವಳಿಕೆಯು ನಮ್ಮ ಜೀವನವನ್ನು ಲೌಕಿಕದಲ್ಲಿ ಸಂಪನ್ನವಾಗಿರಿಸಿ, ಆಧ್ಯಾತ್ಮಿಕ ಪಥದಲ್ಲಿ ಕೈಹಿಡಿದು ನಡೆಸುತ್ತದೆಯೋ ಅದು ವೇದ. ವೇದವು ಮೂಲತಃ ಅಲೌಕಿಕ ಜ್ಞಾನವನ್ನು ನೀಡುವ ಜ್ಞಾನಪರಂಪರೆಯಾಗಿದ್ದರೂ ಅದರಲ್ಲಿ ಹೇಳಲಾಗಿರುವ ಬಹಳಷ್ಟು ಸಂಗತಿಗಳು ನಮ್ಮ ದೈನಂದಿನ ಬದುಕಿಗೂ ಅನ್ವಯವಾಗುವಂತೆ ಇವೆ. ಆದ್ದರಿಂದ ವೇದಗಳ ಉದಾತ್ತ ಬೋಧನೆಯನ್ನು ಯತಾರ್ಥವಾಗಿ ಅರಿತು ಅನುಷ್ಠಾನ ಮಾಡಿದರೆ ಜೀವನ ತುಂಬಾ ಸುಂದರವಾಗಿ ಆನಂದವಾಗಿ ಇರುತ್ತದೆ.
 ವೇದಗಳನ್ನು ಋಷಿಗಳು ಕೇಳಿದರು ಮತ್ತು ಅವುಗಳನ್ನು 'ಶ್ರುತಿ' ಎಂದು ಕರೆಯಲಾಯಿತು. ಋಷಿಗಳು ಮನುಕುಲದ ಉದ್ಧಾರಕ್ಕಾಗಿ ಮತ್ತು ಲೋಕ ಕಲ್ಯಾಣಕ್ಕಾಗಿ ಈ ಜ್ಞಾನವನ್ನು ಹಂಚಿಕೊಂಡರು ಮತ್ತು ತಮ್ಮ ಶಿಷ್ಯರಿಗೆ ವೇದಗಳ ಜ್ಞಾನವನ್ನು ಪಠಿಸಲು ಪ್ರಾರಂಭಿಸಿದರು. ಇದರ ನಂತರ ಅವರು ತಮ್ಮ ಶಿಷ್ಯರಿಗೆ ವೇದಗಳ ಜ್ಞಾನವನ್ನು ಕಲಿಸಿದರು.
ನಮ್ಮ ಸಂಸ್ಕೃತಿ ವೇದ ಸಂಸ್ಕೃತಿಯ ಪ್ರತಿಬಿಂಬ. 
ನಮ್ಮ ನಿತ್ಯ ಜೀವನದ ವ್ಯವಹಾರದಿಂದ ಹಿಡಿದು ನಮ್ಮ ತತ್ವ ಜಿಜ್ಞಾಸೆಯವರೆಗೂ ವೇದವೇ ಆಧಾರ. ನಾವು ನಿತ್ಯ ಹಾಡುವ ಭಕ್ತಿಗೀತೆಗಳ ಭಾವ, ಪೂಜಾ ವಿಧಾನಗಳು, ವೇದಾಂತ ಜಿಜ್ಞಾಸೆ, ನಮ್ಮ ಪೂರ್ವಿಜರ ದೇವರ ಶ್ಲೋಕಗಳು, ಸೂಕ್ತಿ-ಸುಭಾಷಿತಗಳು, ಮದುವೆ, ಉಪನಯನ, ತಂದೆ - ತಾಯಿ - ಮಕ್ಕಳು - ಸಹೋದರ - ಸಹೋದರಿಯರು -ಪತಿಪತ್ನಿಯರ ಸಂಬಂಧಗಳು, ಒಂದು ಮಟ್ಟಕ್ಕೆ ನಮ್ಮ ಶಿಲ್ಪಿಕಲೆ, ಸಂಪೂರ್ಣವಾಗಿ ನಮ್ಮ ಜೀವನದ ಪ್ರತಿಯೊಂದು ಇವೆಲ್ಲವುಗಳಿಗೂ ವೇದವೇ ಸ್ಫೂರ್ತಿ.
ಯುಗಗಳಲ್ಲಿ ಮೊದಲನೆಯ ಯುಗ ಕೃತಯುಗದಲ್ಲಿ ವೇದವಾಙ್ಮಯವು ವಿಂಗಡನೆಗೊಂಡಿರಲಿಲ್ಲ. ವೇದಗಳ ಈ ಅವಿಭಜಿತ ರೂಪವನ್ನು “ಮೂಲವೇದ” ಎಂದು ಕರೆಯಲಾಗುತ್ತದೆ.

                                ಋಗ್ವೇದ
ಋಗ್ವೇದ ನಾಲ್ಕು ವೇದಗಳಲ್ಲಿ ಮೊದಲನೆಯದು. ಜಗತ್ತಿನಲ್ಲೇ ಅತಿ ಪ್ರಾಚೀನವಾದ ಗ್ರಂಥ. ಪ್ರಾಚೀನತಮವಾದ ಜ್ಞಾನರಾಶಿ. ಚತುರ್ಮುಖ ಬ್ರಹ್ಮನ ಪೂರ್ವಮುಖದಿಂದ ಹೊರಬಂದಿದೆ. ಈ ವೇದದ ಮಂತ್ರಗಳನ್ನು ಯಜ್ಞ, ಯಾಗಾದಿಗಳನ್ನು ಮಾಡುವಾಗ, ದೇವತೆಗಳನ್ನು ಆಹ್ವಾನಿಸಲು ಉಪಯೋಗಿಸುತ್ತಾರೆ. ದೇವತೆಗಳ ತೃಪ್ತ್ಯರ್ಥವಾಗಿ ಯಜ್ಞಕಾಲದಲ್ಲಿ ಉಚ್ಚರಿಸಲಾಗುತ್ತಿದ್ದ ಪ್ರಾರ್ಥನೆಗಳೇ ಮಂತ್ರಗಳು. ಯಜ್ಞದಲ್ಲಿ ಋಗ್ವೇದ ಮಂತ್ರಗಳನ್ನು ಪಠಿಸುವವರಿಗೆ "ಹೋತೃ"ವೆಂದು ಕರೆಯುತ್ತಾರೆ. ಋಗ್ವೇದದಲ್ಲಿ ಅನೇಕ ಶಾಖೆಗಳಿವೆ.ಆಯುರ್ವೇದ ಇದರ ಉಪವೇದ.

                         ಯಜುರ್ವೇದ
ಯಜುರ್ವೇದ ನಾಲ್ಕು ವೇದಗಳಲ್ಲಿ ಎರಡನೆಯದು.ಯಜ್ಞಯಾಗಾದಿಗಳ ವಿವರವಾದ ಕ್ರಮ ವಿವರಣೆಗಳು ಸೇರಿದೆ.ಇದರಲ್ಲಿ 40 ಅಧ್ಯಾಯಗಳಿವೆ.ಯಜುರ್ವೇದಲ್ಲಿ ಎರಡು ವಿಧಗಳಿದ್ದು ಕೃಷ್ಣ ಯಜುರ್ವೇದ ಹಾಗೂ ಶುಕ್ಲ ಯಜುರ್ವೇದಗಳೆಂದು ಹೆಸರು. ಕೃಷ್ಣಯಜುರ್ವೇದಕ್ಕೆ ತೈತ್ತೀರಿಯ ಸಂಹಿತೆ ಎಂದೂ ಶುಕ್ಲಯಜುರ್ವೇದಕ್ಕೆ ವಾಜಸನೇಯ ಸಂಹಿತೆ ಎಂದೂ ಹೆಸರಿದೆ.ಧನುರ್ವೇದ ಇದರ ಉಪವೇದ.

                             ಸಾಮವೇದ
ಸಾಮವೇದ ಮಂತ್ರಗಳನ್ನು ಸ್ವರ ಸಂಯೋಜನೆ ಮಾಡಿ ಹಾಡುವುದಕ್ಕೆ ಸಾಮ ಎಂದು ಹೇಳುತ್ತಾರೆ. ಸಾಮವೇದವು ಗಾನರೂಪವಾಗಿ ಹಾಡುವ ಮಂತ್ರಗಳಿಂದ ಕೂಡಿದ ವೇದವಾಗಿದೆ.ದೇವತೆಗಳನ್ನು ಸ್ತುತಿಸುವ ಮಂತ್ರಗಳು ಇದರಲ್ಲಿ ಸೇರಿದ್ದು ಎಲ್ಲವನ್ನೂ ಸ್ವರಲಯಸಹಿತ ಛಂದೋಬದ್ದವಾಗಿ ಹೇಳಬೇಕಾಗಿದೆ. ಈ ವೇದದಲ್ಲಿ ಋಗ್ವೇದದ ಮಂತ್ರಗಳೇ ಹೆಚ್ಚು ಇದ್ದು ಹೆಚ್ಚು ಕಡಿಮೆ 78 ಮಂತ್ರಗಳು ಮಾತ್ರ ಭಾಗಗಳಿದ್ದು 32ಅಧ್ಯಾಯಗಳಿವೆ.ಗಾಂಧರ್ವವೇದ ಇದರ ಉಪವೇದ.

                            ಅಥರ್ವವೇದ 
ಅಥರ್ವವೇದ ಹಿಂದೂ ಧರ್ಮದ ನಾಲ್ಕು ವೇದಗಳಲ್ಲಿ ಕೊನೆಯದು. ಅಥರ್ವಣ ಅಂಗೀರಸ ಋಷಿಗಳು ರಚಿಸಿದ ಮಂತ್ರಗಳಿಂದ ಕೂಡಿದ ವೇದವಾದುದರಿಂದ ಈ ಹೆಸರು. ಇದರಲ್ಲಿ 20 ಕಾಂಡಗಳೂ, 760 ಸೂಕ್ತಗಳೂ, 9000 ಮಂತ್ರಗಳೂ ಇವೆ. ಗದ್ಯ ಹಾಗೂ ಪದ್ಯ ಎರಡೂ ಶೈಲಿಯಲ್ಲಿ ರಚಿತವಾಗಿದೆ. ಈ ವೇದದಲ್ಲಿ ವಿವಾಹ ಪದ್ಧತಿ,ಶವಸಂಸ್ಕಾರ, ಗೃಹನಿರ್ಮಾಣ ಮುಂತಾದ ಜನರ ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ ವಿಚಾರಗಳು ಕೂಡಾ ಸೇರಿಕೊಂಡಿದೆ. ಮಾಟ ಮಂತ್ರ, ತಂತ್ರ ವಿದ್ಯೆ, ಯಕ್ಷಿಣಿವಿದ್ಯೆ,ಇಂದ್ರಜಾಲ ಹಾಗೂ ವಾಮಾಚಾರಗಳ ಬಗ್ಗೆ ವಿಸ್ತಾರವಾಗಿ ಇದೆ. ಧನುರ್ವಿದ್ಯೆ, ಔಷಧಿಗಳ ವಿವರ ಇದರಲ್ಲಿದೆ. ಯಜ್ಞಯಾಗಾದಿಗಳನ್ನು ಮಾಡುವ ಕ್ರಮದ ಸಂಪೂರ್ಣ ಮಾಹಿತಿ ಕೂಡ ಇದರಲ್ಲಿ ಇದೆ. ಇದು ನಿತ್ಯ ಜೀವನಕ್ಕೆ ಬೇಕಾದ ಜ್ಞಾನವನ್ನು ಕೊಡುವ ಜ್ಞಾನ ಭಂಡಾರವೇ ಆಗಿದೆ. ಇದು ವೇದಗಳಲ್ಲಿ ಕೊನೆಯ ವೇದ.

ಇದಿಷ್ಟು ವೇದಗಳ ಬಗ್ಗೆ ಮಾಹಿತಿ

Comments