ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -5
ಶ್ಲೋಕ :
ಗುರೂನಹತ್ವಾ ಹಿ ಮಹಾನುಭಾವಾನ್ ಶ್ರೇಯೋ ಭೋಕ್ತುಂ ಭೈಕ್ಷ್ಯಮಪೀಹ ಲೋಕೇ|
ಹತ್ವಾSರ್ಥಕಾಮಾಂಸ್ತು ಗುರೂನಿಹೈವ ಭುಂಜೀಯ ಭೋಗಾನ್ ರುಧಿರಪ್ರದಿಗ್ಧಾನ್ ॥೫॥
ಅರ್ಥ :
ಈ ಮಹಾನುಭಾವಿಗಳನ್ನು ಕೊಲ್ಲುವ ಬದಲು ಇಲ್ಲೆ, ಈ ನೆಲದಲ್ಲಿ ಭಿಕ್ಷೆ ಬೇಡುವುದು ಮೇಲು. ಸಿರಿಯ ಬೆನ್ನು ಹತ್ತಿದ ಇವರನ್ನು ಕೊಂದು ಇಲ್ಲೆ ಅವರ ನೆತ್ತರಿನಿಂದ ನೆನೆದ ಐಸಿರಿಯನುಣ್ಣಬೇಕು!
ವಿವರ ವಿವರಣೆಗಳು :
ಗುರು ಹಿರಿಯರನ್ನು ಕೊಂದು, ಸಿರಿವಂತಿಕೆಯ ಭೋಗವನ್ನು ಅನುಭವಿಸುವುದಕ್ಕಿಂತ, ಭಿಕ್ಷೆ ಬೇಡಿ ಬದುಕುವುದು ಹಿರಿತನವಲ್ಲವೇ? ಯಾವ ಸಿಂಹಾಸನ ಅಂತರಂಗದ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡ ಭೀಷ್ಮ-ದ್ರೋಣರಂತಹ ಮಹಾನುಭಾವರನ್ನು ಕೊಡಲಾರದೋ, ಅಂತಹ ಸಿಂಹಾಸನ ನಮಗೇಕೆ ಬೇಕು? ದುರ್ಯೋಧನನ ಸಂಬಳದ ದಾಸರಾಗಿ, ಅರಮನೆಯ ಋಣಕ್ಕಾಗಿ ಹೋರಾಟಕ್ಕೆ ನಿಂತ ಇವರನ್ನು ಕೊಂದು ಸಿಂಹಾಸನವೇರಿದರೆ, ಗುರುಗಳ ನೆತ್ತರಿನಿಂದ ತೊಯ್ದ ಭೋಗವನ್ನು ಅನುಭವಿಸಿದಂತೆ.
______________________________________________
ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -6
ಶ್ಲೋಕ :
ನ ಚೈತದ್ ವಿದ್ಮಃ ಕತರನ್ನೋ ಗರೀಯೋ ಯದ್ ವಾ ಜಯೇಮ ಯದಿ ವಾ ನೋ ಜಯೇಯುಃ ।
ಯಾನೇವ ಹತ್ವಾ ನ ಜಿಜೀವಿಷಾಮಸ್ತೇSವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ ॥೬॥
ಅರ್ಥ :
ಇದೇ ತಿಳಿಯುತ್ತಿಲ್ಲ. ಯಾವುದು ನಮಗೆ ಹೆಚ್ಚು ಒಳಿತು-ನಾವು ಗೆಲ್ಲುವುದೇ? ಅಥವ ನಮ್ಮನ್ನು ಅವರು ಗೆಲ್ಲುವುದೇ? ಯಾರನ್ನು ಕೊಂದು ನಾವು ಬದುಕ ಬಯಸುವುದಿಲ್ಲವೋ, ಅವರು(ಕೌರವರು) ನಮ್ಮೆದುರು ನಿಂತಿದ್ದಾರೆ.
ವಿವರ ವಿವರಣೆಗಳು :
ಇಲ್ಲಿಯ ತನಕ ತನ್ನ ವಾದವನ್ನೇ ಮಂಡಿಸಿದ ಅರ್ಜುನ ಈಗ ಕೃಷ್ಣನಿಗೆ ಶರಣಾಗಿ ತನಗ್ಯಾವುದು ಒಳಿತು ಎಂದು ಪ್ರಶ್ನೆ ಮಾಡುತ್ತಾನೆ. “ನಾವು ಯುದ್ಧ ಮಾಡಿ ಗೆಲ್ಲುವುದರಲ್ಲಿ ನಮಗೆ ಶ್ರೆಯಸ್ಸೋ ಅಥವಾ ಗುರುಹಿರಿಯರು ಗೆಲ್ಲುವುದರಲ್ಲಿ ನಮಗೆ ಶ್ರೆಯಸ್ಸೋ ತಿಳಿಯುತ್ತಿಲ್ಲ. ಯುದ್ಧದಲ್ಲಿ ಗೆಲ್ಲಬೇಕು ಎನ್ನುವ ಆಸೆಯೂ ಹೊರಟುಹೋಗಿದೆ” ಎಂದು ತನ್ನ ಮನಸ್ಸಿನ ಸಂಧಿಗ್ಧತೆಯನ್ನು ಅರ್ಜುನ ಕೃಷ್ಣನ ಮುಂದೆ ಬಿಚ್ಚಿಡುತ್ತಾನೆ. ತಂದೆ ಸಮಾನಾದ ಧೃತರಾಷ್ಟ್ರನ ಮಕ್ಕಳು ನಮ್ಮ ಮುಂದೆ ಯುದ್ಧಕ್ಕೆ ನಿಂತಿದ್ದಾರೆ. ಮಕ್ಕಳೆಂದರೆ ಪ್ರಾಣ ಬಿಡುವ ನಮ್ಮ ದೊಡ್ಡಪ್ಪನ ವಿರುದ್ಧ ಹೋರಾಡಲು ಇಷ್ಟವಿಲ್ಲ ಎನ್ನುತ್ತಾನೆ ಅರ್ಜುನ.
Comments