ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -3
ಶ್ಲೋಕ :
ಕ್ಲೈಬ್ಯಂ ಮಾಸ್ಮಗಮಃ ಪಾರ್ಥ ನೈತತ್ ತ್ವಯ್ಯುಪಪದ್ಯತೇ ।
ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ ॥೩॥
ಅರ್ಥ:
ಪಾರ್ಥ, ಹೇಡಿಯಾಗಬೇಡ, ನಿನ್ನಲ್ಲಿ ಇದು ತರವಲ್ಲ. ಅರಿಗಳ ಎದೆಗೆಡಿಸುವ ವೀರನೆ, ಕೀಳರಿಮೆಯ ಎದೆಗೇಡಿತನವನ್ನು ತೊರೆದು ಎದ್ದು ನಿಲ್ಲು.
ವಿವರ ವಿವರಣೆಗಳು :
“ನಪುಂಸಕನಂತೆ ಮಾತನಾಡಬೇಡ. ಅರ್ಜುನನಲ್ಲಿ ಇಂತಹ ಹೇಡಿತನವನ್ನು ನಾನು ನಿರೀಕ್ಷಿಸಿರಲಿಲ್ಲ. ಇಂತಹ ಕ್ಷುದ್ರ ಮಾನಸಿಕ ದೌರ್ಬಲ್ಯವನ್ನು ತೊಡೆದುಹಾಕಿ, ವೀರನಾಗಿ ಅನ್ಯಾಯದ ವಿರುದ್ಧ ಹೋರಾಡು” ಎಂದು ಹೇಳಿ ಕೃಷ್ಣ, ಅರ್ಜುನನಿಗೆ ದಿಗ್ಬ್ರಾಂತಿಗೊಳಿಸಿ ಚಿಕೆತ್ಸೆ(Shock Treatment) ನೀಡಿದ್ದಾನೆ.
ಕೃಷ್ಣ ಏಕೆ ಹೀಗೆ ಹೇಳಿದ? ಆತ ಯುದ್ಧ ಹಾಗು ರಕ್ತಪಾತವನ್ನು ಬಯಸಿದ್ದನೇ ? ಇತ್ಯಾದಿ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಾಮಾನ್ಯ. ಇಲ್ಲಿ ಸೂಕ್ಷ್ಮವಾಗಿ ನೋಡಿದರೆ: ಯುದ್ಧವಾದರೆ ಸಾಮಾಜಿಕವಾಗಿ ಏನೇನು ತೊಂದರೆ ಆಗಬಹುದು ಎಂದು ಅರ್ಜುನ ಹೇಳಿದ್ದನೋ, ಅದಕ್ಕಿಂತ ಹತ್ತುಪಟ್ಟು ಅನ್ಯಾಯ ಯುದ್ಧವಾಗದೇ ಇದ್ದಿದ್ದರೆ ಆಗುತ್ತಿತ್ತು. ದುರ್ಯೋಧನ ಆ ಕಾಲದ ಮಹಾ ಲೋಕಕಂಟಕ. ತುಂಬಿದ ಸಭೆಯಲ್ಲಿ ತನ್ನ ಸ್ವಂತ ಅತ್ತಿಗೆಯ ಮಾನಭಂಗಕ್ಕೆ ಕೈ ಹಾಕಿದ ಆತ, ಅಧಿಕಾರದ ಗದ್ದುಗೆ ಏರಿದ್ದರೆ ಸಮಾಜದ ಪರಿಸ್ಥಿತಿ ಏನಾಗುತ್ತಿತ್ತು ಯೋಚಿಸಿ. ಇಲ್ಲಿ ಕೃಷ್ಣನ ಧೋರಣೆ ಈ ದೇಶದ ನಾಯಕತ್ವ ಮುಂದೆ ಯಾರ ಕೈ ಸೇರಬೇಕು ಎನ್ನುವುದೇ ಹೊರತು ಬಂಧು ಪ್ರೇಮವಲ್ಲ. ಗೆಲ್ಲುವುದು ಸೋಲುವುದಕ್ಕಿಂತ, ಅನ್ಯಾಯದ ವಿರುದ್ಧ ದ್ವನಿ ಎತ್ತುವುದು ಮುಖ್ಯ. ಅನ್ಯಾಯದ ವಿರುದ್ಧ ಹೋರಾಡಿ ಸತ್ತರೂ ತೊಂದರೆ ಇಲ್ಲ, ಆದರೆ ಅದರ ವಿರುದ್ಧ ಸೆಟೆದು ನಿಲ್ಲಬೇಕು ಎನ್ನುವುದು ಕೃಷ್ಣನ ಸಂದೇಶ. ಶ್ರೀ ಕೃಷ್ಣ ಮಹಾಭಾರತದ ಮುಖೇನ ನಮಗೆ ಧರ್ಮದ ಒಂದು ಹೊಸ ಸಿದ್ಧಾಂತವನ್ನು ಕೊಟ್ಟ. ಮಹಾಭಾರತಕ್ಕೆ ಮೊದಲು ಇದ್ದ ಧರ್ಮದ ಕಲ್ಪನೆಯೇ ಬೇರೆ. ಉದಾಹರಣೆಗೆ ಸತ್ಯ ಹೇಳುವುದು: ಇದ್ದದ್ದನ್ನು ಇದ್ದಂತೆ ಹೇಳುವುದು ಸತ್ಯ. ಆದರೆ ಕೃಷ್ಣನ ಪ್ರಕಾರ-ಯಾವ ಸುಳ್ಳು ಹೇಳುವುದರಿಂದ ಸಮಾಜಕ್ಕೆ ಹಿತವಾಗುತ್ತದೋ ಅದು ಸತ್ಯ; ಯಾವ ಸತ್ಯ ಹೇಳುವುದರಿಂದ ಸಮಾಜಕ್ಕೆ ಕೆಡುಕಾಗುತ್ತದೋ ಅದು ಸುಳ್ಳು. ಇನ್ನು ಹಿಂಸೆ: ಒಂದು ಹಿಂಸೆಯಿಂದ ಅನೇಕ ಅಹಿಂಸೆ ಸಾಧ್ಯವಾದರೆ ಅದು ಅಹಿಂಸೆ. ಉದಾಹರಣೆಗೆ ನರಭಕ್ಷಕ ಹುಲಿಯೊಂದು ಪ್ರತಿದಿನ ಊರಿಗೆ ದಾಳಿಯಿಟ್ಟು ಒಬ್ಬೊಬ್ಬರನ್ನೇ ತಿನ್ನುತ್ತಿದ್ದರೆ, ಅದನ್ನು ಕೊಲ್ಲುವುದು ಪ್ರಾಣಿ ಹಿಂಸೆ ಅಲ್ಲ. ಒಂದು ಯುದ್ಧದಿಂದ ತಲತಲಾಂತರದವರೆಗೆ ಅಹಿಂಸೆ ಸ್ಥಾಪನೆ ಸಾಧ್ಯವಾದರೆ ಯುದ್ಧಮಾಡುವುದರಲ್ಲಿ ತಪ್ಪಿಲ್ಲ. ಯಾವುದರಿಂದ ಸಜ್ಜನಿಕೆಯ ರಕ್ಷಣೆ ಆಗುತ್ತದೋ ಅದು ಸತ್ಯ. ಧರ್ಮಕ್ಕೆ ಭಾವ ಮುಖ್ಯ. ಯಾವ ಕಾರಣಕ್ಕಾಗಿ ಹೋರಾಡುತ್ತೇವೆ, ಅದರ ಹಿಂದೆ ಇರುವ ಉದ್ದೇಶ ಏನು ಎನ್ನುವುದು ಮುಖ್ಯ.
______________________________________
ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -4
ಶ್ಲೋಕ :
ಅರ್ಜುನ ಉವಾಚ ।
ಕಥಂ ಭೀಷ್ಮಮಹಂ ಸಂಖೇ ದ್ರೋಣಂ ಚ ಮಧುಸೂದನ ।
ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾವರಿಸೂದನ ॥೪॥
ಅರ್ಥ :
ಅರ್ಜುನ ಉವಾಚ-ಅರ್ಜುನ ಹೇಳಿದನು:ಅರಿಗಳನ್ನು ತರಿದ ಓ ಮಧುಸೂದನ, ಭೀಷ್ಮನನ್ನು, ದ್ರೋಣನನ್ನು, ಪೂಜಿಸಬೇಕಾದ ಮಂದಿಯನ್ನು ನಾನೆಂತು ರಣದಲ್ಲಿ ಬಾಣಗಳಿಂದ ಹೊಡೆದು ಹೋರಾಡಲಿ?
ವಿವರ ವಿವರಣೆಗಳು :
ಕೃಷ್ಣನ ತೀಕ್ಷ್ಣ ಉತ್ತರ ಹಾಗು ಆತನ ನಗುಮೊಗವನ್ನು ಗಮನಿಸಿದ ಅರ್ಜುನನ ಮಾತಿನ ದಾಟಿ ಈಗ ಬದಲಾಗುತ್ತದೆ. ಆತ ಭಾವಾವೇಶ ಬಿಟ್ಟು ಈಗ ಭಾವುಕತೆಯಿಂದ ಶರಣಾಗತಿಯತ್ತ ಹೊರಳುತ್ತಿದ್ದಾನೆ. ಅರ್ಜುನ ಹೇಳುತ್ತಾನೆ “ನನ್ನ ಕಣ್ಣಮುಂದೆ ನಿಂತ ಭೀಷ್ಮಾಚಾರ್ಯರು, ದ್ರೋಣಾಚಾರ್ಯರನ್ನು ಹೇಗೆ ಎದುರಿಸಲಿ? ಒಬ್ಬರು ನಮ್ಮ ವಂಶದ ಮೂಲಪುರುಷನಾದ ರಾಜರ್ಷಿ. ಇನ್ನೊಬ್ಬರು ಎಲ್ಲಾ ಕ್ಷತ್ರಿಯರಿಗೂ ವಿದ್ಯೆ ಕೊಟ್ಟ ಮಹರ್ಷಿ. ಇಂತಹ ಪೂಜಾರ್ಹರಾದ ಮಹಾನೀಯರತ್ತ ಹೇಗೆ ಬಾಣ ಹೂಡಲಿ ? ಸೃಷ್ಟಿಯ ಆದಿಯಲ್ಲಿ ಮದು-ಕೈತಪರನ್ನು ಸಂಹಾರ ಮಾಡಿದ ಓ ಮದುಸೂದನನೆ; ದುಷ್ಟ ಸಂಹಾರಕ್ಕೆಂದು ಅವತರಿಸಿದ ಅರಿಸೂದನನೆ, ಜ್ಞಾನಿಗಳ, ಆಚಾರ್ಯರ ಹತ್ಯೆ ನಿನ್ನ ಮೂಲ ಉದ್ದೇಶ ಅಲ್ಲ” ಎಂದು ಭಿನ್ನ ದಾಟಿಯಲ್ಲಿ ಅರ್ಜುನ ತನ್ನ ಮಾತನ್ನು ಮುಂದುವರಿಸುತ್ತಾನೆ.
Comments