ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -1 -2

ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -1

ಯುದ್ಧ ಮಾಡುವುದಿಲ್ಲ ಎಂದು ಕೈಚಲ್ಲಿ ರಥದಲ್ಲಿ ಕುಸಿದು ಕುಳಿತ ಅರ್ಜುನನಿಗೆ ಶ್ರೀಕೃಷ್ಣನ ಉಪದೇಶ ಎರಡನೇ ಅಧ್ಯಾಯದಿಂದ ಆರಂಭವಾಗುತ್ತದೆ. ಈ ಅಧ್ಯಾಯ ಇಡೀ ಭಗವದ್ಗೀತೆಗೆ ಪಂಚಾಂಗ ರೂಪದಲ್ಲಿದ್ದು, ಸಮಗ್ರ ಸಂದೇಶದ ಸಾರವನ್ನು ವ್ಯಾಸರು ಇಲ್ಲಿ ಸೆರೆ ಹಿಡಿದಿದ್ದಾರೆ.ಇಲ್ಲಿ ಬರುವ ಉಪದೇಶದ ವಿಸ್ತಾರ ರೂಪವೇ ಇತರ ಹದಿನಾರು ಅಧ್ಯಾಯಗಳು.
ಶ್ಲೋಕ :
ಸಂಜಯ ಉವಾಚ ।
ತಂ ತಥಾ ಕೃಪಯಾSSವಿಷ್ಟಮಶ್ರುಪೂರ್ಣಾಕುಲೇಕ್ಷಣಮ್ ।
ವಿಷೀದಂತಮಿದಂ ವಾಕ್ಯಮುವಾಚ ಮಧುಸೂದನಃ ॥೧॥
 
ಅರ್ಥ :
ಸಂಜಯ ಹೇಳಿದನು:ಹಾಗೆ ಕಾರುಣ್ಯಕ್ಕೊಳಗಾಗಿ ಕಂಬನಿ ತುಂಬಿ ಕಣ್ಣು ಮಸುಕಾಗಿ ಉಮ್ಮಳಿಸುತ್ತಿರುವ ಅವನನ್ನು ಕಂಡು ಕೃಷ್ಣ ಈ ಮಾತು ನುಡಿದ.
 
ವಿವರ ವಿವರಣೆಗಳು : 
ಅರ್ಜುನನಿಗೆ ಇಡೀ ಸಮಾಜದ, ಜನಾಂಗದ ಮೇಲೆ ಅನುಕಂಪ. ಯುದ್ಧ ಮಾಡುವುದರಿಂದ ಜನಾಂಗ ಹತ್ಯೆಗೆ ಕಾರಣವಾಗುತ್ತೇವೆ ಎನ್ನುವುದು ಆತನ ತಲೆಯಲ್ಲಿ ತುಂಬಿ ಹೋಗಿದೆ. ಕೃಪೆಯ ಆವೇಶದಿಂದ ಕಣ್ಣಲ್ಲಿ ನೀರಿಳಿಯುತ್ತಿದೆ. ಅಜ್ಞಾನದ ಮಂಜು ಮನಸ್ಸನ್ನು ವಿಕ್ಷಿಪ್ತಗೊಳಿಸಿದೆ. ತರ್ಕದ ಮೂಲಕ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ನೋಡುತ್ತಿದ್ದಾನೆ. ಇದು ಸಹಜ ಪ್ರವೃತ್ತಿ ಅಲ್ಲ, ಇದೊಂದು ಆವೇಶ. ಇದಕ್ಕೆ ಕೃಷ್ಣ ನಿಷ್ಠುರವಾಗಿ ಉತ್ತರಿಸುತ್ತಾನೆ.


_____________________________________________


ಭಗವದ್ಗೀತೆ ಅಧ್ಯಾಯ-2 ಸಾಂಖ್ಯ ಯೋಗ ಶ್ಲೋಕ -2
ಶ್ಲೋಕ :
ಶ್ರೀಭಗವಾನುವಾಚ ।
ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್ ।
ಅನಾರ್ಯಜುಷ್ಟಮಸ್ವರ್ಗ್ಯಮಕೀರ್ತಿಕರಮರ್ಜುನ ॥೨॥
 
ಅರ್ಥ :
ಶ್ರೀ ಭಗವಾನ್ ಉವಾಚ-ಭಗವಂತ ಹೇಳಿದನು:ಅರ್ಜುನ, ಇಂಥ ಸಂಕಟದಲ್ಲಿ ಬಲ್ಲವರು ಮೆಚ್ಚದ, ಅಲ್ಲಿ ಸ್ವರ್ಗಕ್ಕೆ ಸಲ್ಲದ, ಇಲ್ಲಿ ಹೆಸರುಗೆಡಿಸುವ ಈ ಕೊಳೆ ನಿನ್ನನ್ನೇಕೆ ಕವಿಯಿತು?
 
ವಿವರ ವಿವರಣೆಗಳು : 
“ಎಲ್ಲಿಂದ ಬಂತು ನಿನಗೆ ಈ ಬುದ್ಧಿ? ಈ ಭೌತಿಕ ಕೊಳೆ ನಿನಗೆ ಹೇಗೆ ಅಂಟಿತು? ಇಂತಹ ತುರ್ತುಪರಿಸ್ಥಿತಿಯಲ್ಲಿ, ತಕ್ಷಣ ಕಾರ್ಯಪ್ರವೃತ್ತರಾಗಬೇಕಾದ ಈ ಕ್ಷಣದಲ್ಲಿ ಇದೇನು ಹೊಲಸು ಯೋಚನೆ? ಆರ್ಯರಾದವರು ಯಾರೂ ಈ ರೀತಿ ಎಂದೂ ಯೋಚಿಸುವುದಿಲ್ಲ. ಇಂಥಹ ವಿಚಾರದಾರೆಯಿಂದ- ಪರದಲ್ಲಿ ಸ್ವರ್ಗವಿಲ್ಲ ಹಾಗು ಇಹದಲ್ಲಿ ಕೀರ್ತಿ ಇಲ್ಲ. ತಿಳಿದವರು, ಜ್ಞಾನಿಗಳು, ಹಿರಿಯರು ಎಂದೂ ಈ ರೀತಿ ಯೋಚನೆ ಮಾಡುವುದಿಲ್ಲ”-ಎಂದು ನಿಷ್ಠುರವಾಗಿ ಅರ್ಜುನನ ಸಂಪೂರ್ಣ ವಾದವನ್ನು ಒಂದೇ ಮಾತಿನಲ್ಲಿ ಹೊಡೆದು ಹಾಕಿದ ಕೃಷ್ಣ. ಇಲ್ಲಿ ಬಳಕೆಯಾದ “ಆರ್ಯ” ಎನ್ನುವ ಪದ ಜನಾಂಗ ವಾಚಕ ಪದ ಅಲ್ಲ. ಆರ್ಯ ಎಂದರೆ ತಿಳುವಳಿಕೆ ಇರುವವರು, ವಯೋವೃದ್ಧ ಜ್ಞಾನಿಗಳು, ಗೌರವಾನ್ವಿತರು ಎಂದರ್ಥ. ಕನ್ನಡದಲ್ಲಿ ‘ಅಯ್ಯಾ’ ಎನ್ನುವ ಪದಕ್ಕೆ ಇದೇ ಅರ್ಥವಿದೆ.

Comments