ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 43
ಶ್ಲೋಕ :
ದೋಷೈರೇತೈಃ ಕುಲಘ್ನಾನಾಂ ವರ್ಣಸಂಕರಕಾರಕೈಃ ।
ಉತ್ಸಾದ್ಯನ್ತೇ ಜಾತಿಧರ್ಮಾಃ ಕುಲಧರ್ಮಾಶ್ಚ ಶಾಶ್ವತಾಃ ॥೪೩॥
ಅರ್ಥ :
ಸಮಾಜದ ಬಣ್ಣಗೇಡಿಗೆ ಕಾರಣರಾದ ಕುಲಗೇಡಿಗಳ ಇಂಥ ತಪ್ಪುಗಳಿಂದ ಸಹಜ ಧರ್ಮಗಳು ಮತ್ತು ಅಳಿವಿರದ ಕುಲಧರ್ಮಗಳು ನೆಲೆಗೆಡುತ್ತವೆ.
ವಿವರ ವಿವರಣೆಗಳು :
ಯುದ್ಧದಿಂದ ಸಮಾಜದ ಮೇಲೆ ಆಗುವ ನೇರ ಪರಿಣಾಮ ಎಂದರೆ, ನಾಯಕರಿಲ್ಲದ, ಯುವಕರಿಲ್ಲದ ಸಮಾಜ. ಗಂಡು-ಹೆಣ್ಣಿನ ಅನುಪಾತ ವೆತ್ಯಾಸ.
ಇದು ಸರಿ ಹೊಂದಬೇಕಾದರೆ ಅದೆಷ್ಟು ವರ್ಷಗಳು ಬೇಕು? ನಾವು ಮಹಾಭಾರತ ಯುದ್ಧವನ್ನು ನೋಡಿದರೆ ಅಲ್ಲಿ ಕನಿಷ್ಠ ಐವತ್ತು ಲಕ್ಷ ಮಂದಿ ಜನ ಸತ್ತಿದ್ದಾರೆ. ಇಂತಹ ಮಹಾಯುದ್ಧದಿಂದ ಇಡೀ ಸಮಾಜ ನಾಶಮಾಡಿದ ಕುಲಕಂಟಕರು ನಾವಾಗುತ್ತೇವೆ ಎನ್ನುವುದು ಅರ್ಜುನನ ಕಳಕಳಿ. “ಸಮಾಜದ ವ್ಯವಸ್ಥೆ ನಾಶವಾಗುವುದರಿಂದ ಸ್ವಭಾವ ನಾಶವಾಗುತ್ತದೆ. ಇದರಿಂದ ಆಯಾ ಜೀವದ ಸ್ವಭಾವದ ಅಭಿವೃದ್ಧಿ ಆಗದೆ, ವ್ಯಕ್ತಿತ್ವ ವಿಕಸನ ನಾಶವಾಗುತ್ತದೆ. ಶಾಶ್ವತ ಮೌಲ್ಯದ ಸಮಾಜಧರ್ಮ ನಾಶವಾಗುತ್ತದೆ. ಅನಾದಿ ಕಾಲದಿಂದ ಸಮಾಜ ಒಪ್ಪಿಕೊಂಡು ಬಂದ ಸ್ಥಿರಧರ್ಮ ಕೊಚ್ಚಿಕೊಂಡು ಹೋಗುತ್ತದೆ” ಎಂದು ಅರ್ಜುನ ಕೃಷ್ಣನ ಮುಂದೆ ತನ್ನ ವಾದವನ್ನು ಮಂಡಿಸುತ್ತಾನೆ.
______________________________________
ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 44
ಶ್ಲೋಕ :
ಉತ್ಸನ್ನಕುಲಧರ್ಮಾಣಾಂ ಮನುಷ್ಯಾಣಾಂ ಜನಾರ್ದನ ।
ನರಕೇ ನಿಯತಂ ವಾಸೋ ಭವತೀತ್ಯನುಶುಶ್ರುಮ ॥೪೪॥
ಅರ್ಥ :
ಓ ಜನಾರ್ಧನ, ಕುಲ ಧರ್ಮದ ನೆಲೆದಪ್ಪಿದವರಿಗೆ ನರಕವೇ ಮುಗಿಯದ ನೆಲೆ ಎಂದು ಕೇಳಿ ಬಲ್ಲೆವು.
ವಿವರ ವಿವರಣೆಗಳು :
ಇಹದಲ್ಲೂ ನರಕ, ಪರದಲ್ಲೂ ನರಕ, ಹೀಗೆ ಜನ್ಮವೆಲ್ಲಾ ನರಕದಲ್ಲಿ. ಎಂದೆಂದೂ ನರಕದಲ್ಲೇ ಕೊಳೆಯುವ ಪರಿಸ್ಥಿತಿ ಬರುತ್ತದೆ ಎಂದು ತಿಳಿದವರು ಹೇಳುವುದನ್ನು ಕೇಳಿ ತಿಳಿದಿದ್ದೇನೆ. ಹೀಗೆ ಇಹವೂ ನರಕ, ಪರವೂ ನರಕವಾಗಲು ನಾವೇ ಕಾರಣವಾಗುತ್ತೇವೆ.
Comments