ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 41
ಶ್ಲೋಕ :
ಅಧರ್ಮಾಭಿಭವಾತ್ ಕೃಷ್ಣ ಪ್ರದುಷ್ಯಂತಿ ಕುಲಸ್ತ್ರಿಯಃ ।
ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸಂಕರಃ ॥೪೧॥
ಅರ್ಥ :
ಓ ವಾರ್ಷ್ಣೇಯ, ಅಧರ್ಮದ ಆಕ್ರಮಣದಿಂದ ಸಮಾಜದಲ್ಲಿ ಹೆಣ್ಣು ಮಕ್ಕಳು ದಾರಿಗೆಡುತ್ತಾರೆ. ಅದರಿಂದ ಸಮಾಜ ವರ್ಣಸಂಕರಕ್ಕೀಡಾಗುತ್ತದೆ.
ವಿವರ ವಿವರಣೆಗಳು :
ಯುದ್ಧವಾದರೆ ಅದರಿಂದ ಯುವಕರೆಲ್ಲರೂ ಸಾಯುತ್ತಾರೆ. ಅಧರ್ಮ ಸಮಾಜವನ್ನು ಆಕ್ರಮಿಸುತ್ತದೆ. ಯುವಕರಿಲ್ಲದ ಸಮಾಜ ಸೃಷ್ಟಿಯಾಗುತ್ತದೆ. ಸಾಮಾಜಿಕವಾಗಿ ಸ್ತ್ರೀಗೆ ಭಧ್ರತೆ ಇಲ್ಲದಂತಾಗುತ್ತದೆ. ಅದರ ಪರಿಣಾಮ ಆಕೆಯ ಮುಗ್ಧತೆಯ ದುರುಪಯೋಗ. ಅದರಿಂದ ಸಮಾಜದಲ್ಲಿ ವರ್ಣಸಂಕರ ಉಂಟಾಗುತ್ತದೆ ಎನ್ನುತ್ತಾನೆ ಅರ್ಜುನ.
ಇಲ್ಲಿ ವರ್ಣಸಂಕರ ಎಂದರೆ ಜೀವದ ಬಣ್ಣ ಅಥವಾ ಸ್ವಭಾವ ಹಾಳಾಗುವುದು. ಹೆಣ್ಣಿಗೆ ಬಲವಂತವಾಗಿ ಆಕೆಯ ಮನಸ್ಸಿಗೆ ವಿರುದ್ಧವಾಗಿ ಉಚ್ಚ ಶಿಕ್ಷಣ ಕೊಡಬಾರದು ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಕಾರಣ ಅದರಿಂದ ಆಕೆಯ ಗರ್ಭಕೋಶದ ಮೇಲೆ ಪರಿಣಾಮವಾಗುತ್ತದೆ. ಅದರ ಪರಿಣಾಮ ಹುಟ್ಟುವ ಮಗುವಿನ ಮೇಲೆ ಆಗುತ್ತದೆ. ಹೆಣ್ಣು ತನಗಿಷ್ಟವಿಲ್ಲದೆ ತನ್ನನ್ನು ತೊಡಗಿಸಿಕೊಂಡಾಗ; ಅನೇಕ ಪುರುಷರ ಸಂಗ ಮಾಡುವುದರಿಂದ; ಮುಂದಿನ ಸಂತಾನದ ಮೇಲೆ ಘೋರ ಪರಿಣಾಮವುಂಟಾಗುತ್ತದೆ. ಯಾರ ಮಾತನ್ನೂ ಕೇಳದ, ಯಾರ ನಿಯಮಕ್ಕೂ ಬಗ್ಗದ ವಿಕ್ಷಿಪ್ತ ಸಂತತಿ ಹುಟ್ಟುವ ಸಾಧ್ಯತೆ ಇದೆ. ಇದು ಇಲ್ಲಿ ಅರ್ಜುನ ಹೇಳುತ್ತಿರುವ ವರ್ಣಸಂಕರ.
ಇಲ್ಲಿ ಅರ್ಜುನ ಕೃಷ್ಣನನ್ನು ‘ವಾರ್ಷ್ಣೇಯ’ ಎಂದು ಸಂಬೋಧಿಸಿದ್ದಾನೆ. ಯಾದವ ಮನೆತನದ ಹಿರಿಯ ರಾಜ ವೃಷ್ಣಿ. ಆ ವಂಶದಲ್ಲಿ ಅವತರಿಸಿದ ಕೃಷ್ಣ ವಾರ್ಷ್ಣೇಯ. ಈ ಹೆಸರಿನ ಬಗ್ಗೆ ವೇದದಲ್ಲಿ ಉಲ್ಲೇಖವಿದೆ. ಬಯಸಿದ ಅಭೀಷ್ಟವನ್ನು ಕೊಡುವ ಹಿರಿಯ ಶಕ್ತಿಗಳಾದ ದೇವತೆಗಳ ಒಡೆಯ ಭಗವಂತ ವಾರ್ಷ್ಣೇಯ. “ಎಲ್ಲರ ಅಭೀಷ್ಟವನ್ನು ಈಡೇರಿಸುವ, ಧರ್ಮ ಸಂಸ್ಥಾಪನೆಗಾಗಿ ಇಳಿದುಬಂದ ನೀನು, ಏಕೆ ಈ ಯುದ್ಧವನ್ನು ತಡೆಯುತ್ತಿಲ್ಲ” ಎನ್ನುವ ಧ್ವನಿ ಅರ್ಜುನನ ಈ ಸಂಬೋಧನೆಯಲ್ಲಿದೆ.
_____________________________________________
ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 42
ಶ್ಲೋಕ:
ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ ।
ಪತಂತಿ ಪಿತರೋ ಹ್ಯೇಷಾಂ ಲುಪ್ತಪಿಂಡೋದಕಕ್ರಿಯಾಃ ॥೪೨॥
ಅರ್ಥ :
ಬಣ್ಣಗೇಡು ಕುಲಗೇಡಿಗಳನ್ನೂ, ಕುಲವನ್ನೂ ನರಕಕ್ಕೆ ತಳ್ಳುತ್ತದೆ. ಇಂಥವರ ಪೂರ್ವಜರು ಪಿಂಡ-ತರ್ಪಣಗಳಿಲ್ಲದೆ ನರಳುತ್ತಾರೆ.
ವಿವರ ವಿವರಣೆಗಳು :
ವಿಕ್ಷಿಪ್ತ ಮನಸ್ಸಿನ ಮಕ್ಕಳು ಹುಟ್ಟುವುದರಿಂದ, ಇಡೀ ಸಮಾಜ ನರಕಕ್ಕೆ ಹೋಗಬೇಕಾಗುತ್ತದೆ. ಹಾಗು ಅದಕ್ಕೆ ಕಾರಣರಾದ ನಾವೂ ಕೂಡಾ ನರಕಕ್ಕೆ ಹೋಗಬೇಕಾಗುತ್ತದೆ. ಸಮಾಜ ಈ ರೀತಿ ಸಂಕೀರ್ಣವಾದಾಗ, ಎಲ್ಲಾ ನಂಬಿಕಯನ್ನು ಕಳೆದುಕೊಂಡಾಗ, ಪಿತೃಗಳು ಪಿಂಡ ಇಲ್ಲದೆ ನರಕದಲ್ಲಿ ಬೀಳುತ್ತಾರೆ ಎನ್ನುವುದು ಅರ್ಜುನನ ಯುದ್ಧೋತ್ತರ ಪರಿಣಾಮದ ಭೀಕರತೆಯ ಪರಿಕಲ್ಪನೆ.
ಇಲ್ಲಿ ಪಿಂಡ ಅಂದರೆ ಏನು? ಅದರ ಮಹತ್ವ ಏನು? ಅದು ಯಾರಿಗೆ ಹೋಗಿ ಹೇಗೆ ಸೇರುತ್ತದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳೋಣ. ನಾವು ಹಾಕುವ ಸ್ಥೂಲವಾದ ಪಿಂಡ ಸತ್ತ ಜೀವಕ್ಕೆ ನೇರವಾಗಿ ಹೋಗಿ ಸೇರುವುದಿಲ್ಲ. ಸತ್ತ ನಂತರ ಸ್ಥೂಲ ಜೀವದಲ್ಲಿ ಇರುವ ಜೀವಕ್ಕೆ ಸ್ಥೂಲವಾದ ಪಿಂಡ ಬೇಕಿಲ್ಲ. ಜೀವ ತನ್ನ ಕರ್ಮಾನುಸಾರ ತಾನು ಹೋಗಬೇಕಾದಲ್ಲಿಗೆ ಹೋಗುತ್ತದೆ. ನಾವು ಪಿಂಡ ಹಾಕುವುದು ಪಿತೃದೇವತೆಗಳಿಗೆ. ಇದೊಂದು ದೇವತಾಗಣ. ಅದರಲ್ಲಿ ಒಟ್ಟು ನೂರು ದೇವತೆಗಳು. ಅವರಲ್ಲಿ ಮೂರು ಪ್ರಧಾನ`ಪಿತೃಗಳು.
ಜೀವಿತ ಕಾಲದಲ್ಲಿ ತತ್ವಾಭಿಮಾನಿ ದೇವತೆಗಳನ್ನು ಹೇಗೆ ಪೂಜಿಸುತ್ತೆವೋ ಹಾಗೆ ಸತ್ತ ನಂತರ, ಈ ಸ್ಥೂಲಶರೀರದಿಂದ ಈಚೆ ಬಂದ ಮೇಲೆ, ಜೀವವನ್ನು ರಕ್ಷಿಸುವ ದೇವತಾಗಣ-ಪಿತೃಗಣ. ಈ ಪಿತೃಗಳನ್ನು ನಿಯಂತ್ರಿಸುವವರು ವಸು-ರುದ್ರ-ಆದಿತ್ಯರು. ಈ ಪಿತೃ ದೇವತೆಗಳನ್ನು ನಮ್ಮ ಪೂರ್ವಜರು ತೀರಿಕೊಂಡ ದಿನದಂದು ಆರಾಧಿಸುವುದು ಸಂಪ್ರದಾಯ. ಇಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ ಮಾಡುವ ಕಾರಣ ಏನೆಂದರೆ, ಒಂದು ವೇಳೆ ಕಾರಣ ವಿಶೇಷದಿಂದ ನಮ್ಮ ಹಿರಿಯರಿಗೆ ಅವರ ದಾರಿಯಲ್ಲಿ ಬಾಧಕವಾಗಿದ್ದರೆ, ಅದನ್ನು ಪರಿಹರಿಸಿ ಎನ್ನುವ ಪ್ರಾರ್ಥನೆಯೇ ಪಿಂಡ ಪ್ರಧಾನ. “ಪ್ರಾರಾಬ್ದ ಕರ್ಮದಿಂದ ಅವರನ್ನು ಕಾಪಾಡಿ” ಎನ್ನುವ ಪಿತೃ-ದೇವತೆಗಳ ಪೂಜೆ. ಇನ್ನು ಕಾಗೆ ಮುಟ್ಟುವುದು ಎಂದರೆ ಪಿತೃ ದೇವತೆಗಳು ನಮ್ಮ ಪೂಜೆಯನ್ನು ಸ್ವೀಕರಿಸಿದ ಶಕುನ ಸಂಕೇತ.
Comments