ಭಗವದ್ಗೀತೆ ಅಧ್ಯಾಯ-1 ಶ್ಲೋಕ - 39-40

ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 39
 
ಶ್ಲೋಕ:
ಕಥಂ ನ ಜ್ಞೇಯಮಸ್ಮಾಭಿಃ ಪಾಪಾದಸ್ಮಾನ್ನಿವರ್ತಿತುಮ್ ।
ಕುಲಕ್ಷಯಕೃತಂ ದೋಷಂ ಪ್ರಪಶ್ಯದ್ಭಿರ್ಜನಾರ್ದನ ॥೩೯॥
 
ಅರ್ಥ:
ಓ ಜನಾರ್ದನ, ಕುಲದ ಅಳಿವಿನಿಂದಾಗುವ ಕೇಡನ್ನು ಮುಂಗಾಣಬಲ್ಲ ನಾವು ಇಂಥ ತಪ್ಪಿನಿಂದ ದೂರವಿರಬೇಕು ಎಂದರಿಯದಿದ್ದರೆ ಹೇಗೆ?
 
ವಿವರ ವಿವರಣೆಗಳು : 
ಇಂಥಹ ಮಹಾಪಾಪವನ್ನು ಮಾಡಬಾರದು ಎಂದು ನಾವು ತಿಳಿದುಕೊಳ್ಳದಿದ್ದರೆ, ದುರ್ಯೋಧನನಿಗೂ ನಮಗೂ ಇರುವ ವೆತ್ಯಾಸವಾದರೂ ಏನು? ಹುಟ್ಟು ಸಾವುಗಳ ಬಂಧದಿಂದ ಪಾರುಮಾಡುವ ಓ ಜನಾರ್ದನನೇ, ಒಂದು ಕುಲವನ್ನು ನಾಶ ಮಾಡುವಂತಹ ದೋಷ ಸ್ಪಷ್ಟವಾಗಿ ನನ್ನ ಕಣ್ಣಿಗೆ ಕಾಣುತ್ತಿದೆ. ಯುದ್ಧೋತ್ತರ ಭಾರತದ ಚಿತ್ರ ನನ್ನ ಕಣ್ಣಿಗೆ ಕಟ್ಟುತ್ತಿದೆ. ಯುದ್ಧದಿಂದಾಗುವ ಅನಿಷ್ಟ ಗೊತ್ತಿದ್ದೂ ಕೂಡಾ, ಯುದ್ಧಕ್ಕೆ ಕಾಲು ಕೆದಕುವ ಬುದ್ಧಿಯನ್ನು ನಾವು ತೋರಿಸಿದರೆ ದುರ್ಯೋಧನನಂತೆ ನಾವು ಕೀಳು ಮಟ್ಟಕ್ಕಿಳಿದಂತಾಗುವುದಿಲ್ಲವೇ? ಇದು ಅರ್ಜುನನ ಪ್ರಶ್ನೆ.

______________________________________


ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 40
 
ಶ್ಲೋಕ :
ಕುಲಕ್ಷಯೇ ಪ್ರಣಶ್ಯಂತಿ ಕುಲಧರ್ಮಾಃ ಸನಾತನಾಃ ।
ಧರ್ಮೇ ನಷ್ಟೇ ಕುಲಂ ಕೃತ್ಸ್ನಮಧರ್ಮೋsಭಿಭವತ್ಯುತ ॥೪೦॥
 
ಅರ್ಥ:
ಕುಲ ಕುಸಿದಾಗ ಅಳಿವಿರದ ಕುಲ ಧರ್ಮಗಳು ಕಣ್ಮರೆಯಾಗುತ್ತವೆ. ಧರ್ಮ ಮರೆಯಾದರೆ ಇಡಿಯ ಕುಲವನ್ನು ಅಧರ್ಮ ಆಕ್ರಮಿಸಿಬಿಡುತ್ತದೆ.
 
ವಿವರ ವಿವರಣೆಗಳು : 
ಯುದ್ಧದಿಂದಾಗುವ ದೊಡ್ಡ ಸಮಸ್ಯೆ ಎಂದರೆ “ಕುಲಧರ್ಮ” ನಾಶ. ಈ ಶ್ಲೋಕದಲ್ಲಿ ಅರ್ಜುನ ಧರ್ಮದ ಕುರಿತಾದ ಕೆಲವು ಪದಗಳನ್ನು ಬಳಸುತ್ತಾನೆ. ಜಾತಿಧರ್ಮ, ಕುಲಧರ್ಮ, ಸನಾತನಧರ್ಮ ಇತ್ಯಾದಿ ಶಬ್ದಗಳು ಅರ್ಥವಾಗಬೇಕಾದರೆ ಮೊದಲು ನಾವು ಧರ್ಮ ಅಂದರೆ ಏನು? ಅದರಲ್ಲಿ ಎಷ್ಟು ವಿಧ? ಎನ್ನುವುದನ್ನು ತಿಳಿದುಕೊಳ್ಳಬೇಕು.

ಸಾಮಾನ್ಯವಾಗಿ ಜಾತಿಧರ್ಮ ಎಂದಾಗ ನಮಗೆ ಕಾಣುವುದು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ಎನ್ನುವ ಜಾತಿ. ಇನ್ನು ಕುಲಧರ್ಮ ಎಂದಾಗ ಒಂದು ಮನೆತನದ ಮೂಲ ಕೆಲಸ-ಬಡಗಿ, ಕಮ್ಮಾರ ಚಮ್ಮಾರ ಇತ್ಯಾದಿ. ಆದರೆ ಇಲ್ಲಿ ಹೇಳುವುದು ಇದನ್ನಲ್ಲ. ಕುಲಧರ್ಮ ಎಂದರೆ ಸಮಾಜಧರ್ಮ(Religion of Society); ಜಾತಿಧರ್ಮ ಎಂದರೆ ಹುಟ್ಟುಗುಣದಿಂದ ಬಂದ ಮನುಷ್ಯನ ಸಹಜ ವೈಯಕ್ತಿಕ ಧರ್ಮ. ಈ ಎರಡು ಧರ್ಮದ ಆಚೆಗೆ ಸನಾತನಧರ್ಮ. ಅದು ಶಾಶ್ವತಧರ್ಮ. ಎಲ್ಲಾ ಕಾಲದಲ್ಲೂ, ಎಲ್ಲಾ ದೇಶದಲ್ಲೂ ಸನಾತನಧರ್ಮ ಬದಲಾಗದು. ವ್ಯಕ್ತಿಧರ್ಮ ವ್ಯಕ್ತಿಗಳ ನಡುವೆ ಬದಲಾಗುತ್ತದೆ. ಸಮಾಜಧರ್ಮ ಕಾಲಕ್ಕನುಗುಣವಾಗಿ, ದೇಶಕ್ಕನುಗುಣವಾಗಿ ಬದಲಾಗುತ್ತದೆ.

ಜಾತಿಧರ್ಮ ಎಂದರೆ ನಮ್ಮ ಸಹಜವಾದ ಹುಟ್ಟುಗುಣ (ಸ್ವಭಾವ). ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಸ್ವಭಾವವಿದೆ, ಆದರೆ ಪತ್ತೆ ಹಚ್ಚುವುದು ಕಷ್ಟ. ಏಕೆಂದರೆ ಅದರ ಮೇಲಿರುವ ಎರಡು ಆವರಣ. ಒಂದು ಅನುವಂಶೀಯ ಹಾಗು ಇನ್ನೊಂದು ಬೆಳೆದ ವಾತಾವರಣದ ಪ್ರಭಾವ. ಪರಿಸರದ ಶಿಶುವಾದ ಮಾನವ ಅನುವಂಶೀಯವಾಗಿ ಹರಿದುಬರುವ ಗುಣಗಳು ಹಾಗು ಪರಿಸರದ ಪ್ರಭಾವದಲ್ಲಿ ಬದುಕುತ್ತಾನೆ. ಇವು ನೈಜ ಸ್ವಭಾವವನ್ನು ಮುಚ್ಚಿಬಿಡುತ್ತವೆ. ಸಮಾಜಧರ್ಮ : ನಾವು ಇನ್ನೊಬ್ಬರ ನೆರವಿಲ್ಲದೆ ಏಕಾಂಗಿಯಾಗಿ ಬದುಕುವವರಲ್ಲ. ಆದ್ದರಿಂದ ಸಂಘಟನೆಗೆ ಒಂದು ಪ್ರತ್ಯೇಕಧರ್ಮ. ವ್ಯಕ್ತಿ ಧರ್ಮವನ್ನು(ವೈಯಕ್ತಿಕ ಅಭಿರುಚಿಯನ್ನು) ಸಮಾಜಧರ್ಮಕ್ಕೊಸ್ಕರ ಬದಲಿಸಿಕೊಳ್ಳಬೇಕಾಗುತ್ತದೆ (ಉದಾಹರಣೆಗೆ: ಜೋರಾಗಿ ಮಾತನಾಡುವುದು ನನ್ನ ವೈಯಕ್ತಿಕಧರ್ಮ. ಆದರೆ ಆಸ್ಪತ್ರೆಯಲ್ಲಿ ನಿಶ್ಯಬ್ಧ ಕಾಪಾಡುವುದು ಸಮಾಜಧರ್ಮ). ಸಮಾಜಧರ್ಮ ಸಮಾಜ ಬದಲಾದಂತೆ, ಸಮಾಜಕ್ಕನುಗುಣವಾಗಿ ಬದಲಾಗುತ್ತದೆ. ಉದಾಹರಣೆಗೆ ವಿವಾಹಧರ್ಮ. ಇಂತಹ ವಯಸ್ಸಿಗೆ ಮದುವೆಯಾಗಬೇಕು ಎನ್ನುವುದು ಕಾಲಕ್ಕನುಗುಣವಾಗಿ ಬದಲಾಗುತ್ತದೆ. ವೇದಕಾಲದಲ್ಲಿ ಹೆಣ್ಣು ಮಕ್ಕಳ ಬಾಲ್ಯವಿವಾಹ ಪದ್ಧತಿ ಜಾರಿಯಲ್ಲಿತ್ತು. ಕಾರಣವೇನೆಂದರೆ ಆಗ ಗುರುಕುಲ ಪದ್ಧತಿ ಇದ್ದು ಗಂಡುಮಕ್ಕಳು ತಮ್ಮ ಎಂಟನೆ ವಯಸ್ಸಿನಿಂದ ಇಪ್ಪತ್ತನೆ ವಯಸ್ಸಿನ ತನಕ ಗುರುಕುಲದಲ್ಲಿ ವಿಧ್ಯಾಭ್ಯಾಸ ಮಾಡಿ ನಂತರ ಮನೆಗೆ ಹಿಂತಿರುಗುತ್ತಿದ್ದರು(ಇದನ್ನು ಸಮಾವರ್ತನ ಎನ್ನುತ್ತಾರೆ). ಹಾಗೆ ಕಲಿತು ಬಂದ ಹುಡುಗನಿಗೆ ಎಂಟು ವರ್ಷದ ಹೆಣ್ಣನ್ನು ಮದುವೆ ಮಾಡಿಸುತ್ತಿದ್ದರು. ಆಕೆ ಆತನ ಶಿಷ್ಯೆಯಾಗಿ ವಿಧ್ಯಾಭಾಸ ಕಲಿತು ವಯಸ್ಸಿಗೆ ಬಂದನಂತರ ಸಂಸಾರ ಮಾಡುತ್ತಿದ್ದಳು. ಇದರಿಂದ ಆಕೆಗೆ ಗಂಡನನ್ನು ಅರಿಯುವ, ಗಂಡನ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುವ ಗುಣ ಬರುತ್ತಿತ್ತು. ಕ್ರಮೇಣ ಗುರುಕುಲ ಪದ್ಧತಿ ಕೊನೆಗೊಂಡಾಗ, ಈ ಬಾಲ್ಯ ವಿವಾಹ ಕೂಡಾ ಕೊನೆಗೊಂಡಿತು. ರಾಮಾಯಣ ಮಹಾಭಾರತ ಕಾಲದಲ್ಲಿ ಬಾಲ್ಯವಿವಾಹ ಇರಲಿಲ್ಲ. ನಂತರ ಇತ್ತೀಚೆಗೆ ಸುಮಾರು ಒಂದು ಸಾವಿರ ವರ್ಷದ ಹಿಂದೆ ವಿದೇಶಿ ಆಕ್ರಮಣವಾದಾಗ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸದೇ ಬೇಗ ಮದುವೆ ಮಾಡಿಸಲಾರಂಭಿಸಿದರು. ಇದು ಸಾಮಾಜಿಕ ಒತ್ತಡದಿಂದ ಆದ ಬದಲಾವಣೆ. ಹೀಗೆ ಸಮಾಜಧರ್ಮ ಸಮಯಕ್ಕನುಗುಣವಾಗಿ, ಸಮಾಜಕ್ಕನುಗುಣವಾಗಿ ಬದಲಾಗುತ್ತದೆ. ಸನಾತನಧರ್ಮ : ಇದು ಎಲ್ಲಾ ಕಾಲದಲ್ಲೂ, ಎಲ್ಲಾ ಸ್ಥಿತಿಯಲ್ಲೂ ಎಂದೂ ಬದಲಾಗದ ಧರ್ಮ. ವೇದ ಹೇಳುವುದು ಸನಾತನ ಧರ್ಮವನ್ನು. ಉದಾಹರಣೆಗೆ: ಪ್ರಾಮಾಣಿಕವಾಗಿ ಬದುಕಬೇಕು, ಇನ್ನೊಬ್ಬರ ಸೊತ್ತನ್ನು ಕದಿಯಬಾರದು, ಸತ್ಯವನ್ನು ಹೇಳಬೇಕು, ದೇವರನ್ನು ನಂಬಿ ನಡೆಯಬೇಕು, ಇತ್ಯಾದಿ. ಇದು ಶಾಶ್ವತ ಧರ್ಮ. ಎಲ್ಲ ದೇಶ-ಕಾಲದಲ್ಲೂ ಬದಲಾಗದ ಧರ್ಮ.

ಸನಾತನ ಧರ್ಮಕ್ಕನುಗುಣವಾಗಿ ಸಾಮಾಜಿಕ ಧರ್ಮವನ್ನು ಹೊಂದಿಸಿಕೊಳ್ಳಬೇಕು. ಜಾತಿಧರ್ಮವನ್ನು ಸಮಾಜಧರ್ಮಕ್ಕನುಗುಣವಾಗಿ ಹೊಂದಿಸಿಕೊಳ್ಳಬೇಕು. ಒಂದು ವಸ್ತುವಿನ ಅಸಾಧಾರಣ ಗುಣ(Quality) ಅದರ ಧರ್ಮ. ಉದಾಹರಣೆಗೆ: ನೋಡುವುದು ಕಣ್ಣಿನ ಧರ್ಮ, ಕೇಳುವುದು ಕಿವಿಯ ಧರ್ಮ. ಆದರೆ ಯಾವುದು ಧರ್ಮವೋ ಅದೇ ಅಧರ್ಮವಾಗಬಹುದು. ನೋಡಬಾರದ್ದನ್ನು ನೋಡುವುದು ಅಧರ್ಮ! ನೋಡುವುದಕ್ಕೆ ಒಂದು ಸೀಮೆ ಇದೆ. ಅದನ್ನು ದಾಟಿದಾಗ ಧರ್ಮವೇ ಅಧರ್ಮವಾಗುತ್ತದೆ.

ಇಲ್ಲಿ ಅರ್ಜುನ ಹೇಳುತ್ತಾನೆ : “ಕುಲಕ್ಷಯವಾದಾಗ ಸಮಾಜ ಧರ್ಮವನ್ನು ನಡೆಸಬೇಕಾದ ನ್ಯಾಯಾಂಗ ವ್ಯವಸ್ಥೆ ನಾಶವಾಗಿ ಸಮಾಜ ಧರ್ಮ ನಾಶವಾಗುತ್ತದೆ. ಸಾಮಾಜಿಕ ವ್ಯವಸ್ತೆ ಕುಸಿದು ಬೀಳುತ್ತದೆ. ಇಡೀ ಸಮಾಜ ಅಧರ್ಮದಲ್ಲಿ ಮುಳುಗುತ್ತದೆ. ಇದು ಯುದ್ಧ ಮಾಡುವುದರಿಂದ ಸಮಾಜಕ್ಕೆ ನಾವು ಕೊಡುವ ಕಾಣಿಕೆ” ಎಂದು. ಇದು ಅರ್ಜುನನ ವಾದ.

Comments