ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 35
ಶ್ಲೋಕ :
ಏತಾನ್ ಹಂತುಮಿಚ್ಛಾಮಿ ಘ್ನತೋsಪಿ ಮಧುಸೂದನ ।
ಅಪಿ ತ್ರೈಲೋಕ್ಯರಾಜ್ಯಸ್ಯ ಹೇತೋಃ ಕಿಂ ನು ಮಹೀಕೃತೇ ॥೩೫॥
ಅರ್ಥ :
ಓ ಮಧುಸೂದನ, ನನ್ನನ್ನು ಕೊಲ್ಲಬಂದರೂ ನಾನಿವರನ್ನು ಕೊಲ್ಲಬಯಸೆ. ಮೂರು ಲೋಕದ ದೊರೆತನಕ್ಕಾಗಿ ಕೂಡಾ. ಇನ್ನು ಭೂಮಿಯ ಮಾತೇನು?
ವಿವರ ವಿವರಣೆಗಳು :
ನನಗೆ ಇವರನ್ನು ಕೊಲ್ಲುವ ಬಯಕೆ ಇಲ್ಲ. ಒಂದು ವೇಳೆ ಅವರು ನನ್ನನ್ನು ಕೊಲ್ಲ ಬಂದರೂ ಕೂಡಾ ನಾನವರನ್ನು ಕೊಲ್ಲಲಾರೆ. ಇಡೀ ಬ್ರಹ್ಮಾಂಡದ ಒಡೆತನ ಸಿಗುತ್ತದೆ ಎಂದರೂ ಕೂಡಾ ನಾನು ಯುದ್ಧ ಮಾಡಲಾರೆ. ಅಂಥದ್ದರಲ್ಲಿ ಈ ತುಂಡು ಭೂಮಿಗಾಗಿ ಏಕೆ ಯುದ್ಧ?
ಇಲ್ಲಿ ಅರ್ಜುನ ಶ್ರೀಕೃಷ್ಣನನ್ನು ‘ಮಧುಸೂದನ’ ಎಂದು ಸಂಬೋಧಿಸಿದ್ದಾನೆ. ಮಧು ಎಂದರೆ ಆನಂದ. ಮಧುಸೂದನ ಎಂದರೆ ಆನಂದ ನಾಶಕ. ಧರ್ಮ ಮಾರ್ಗವನ್ನು ಬಿಟ್ಟು, ಅಧರ್ಮಿಯಾಗಿ, ಮದ(ಆಹಂಕಾರ)ದಿಂದ ಸಾಗುವವರ ಆನಂದವನ್ನು ನಾಶ ಮಾಡಿ, ಸಜ್ಜನರ ಉದ್ಧಾರ ಮಾಡುವ ಆನಂದರೂಪಿ ಭಗವಂತ ಮಧುಸೂದನ. “ಸಾತ್ವಿಕರಿಗೆ ಆನಂದವನ್ನು ಕೊಟ್ಟು ತಾಮಸಿಗಳ ಆನಂದ ಹರಣ ಮಾಡುವ ನೀನು ಏನು ಮಾಡಲು ಬಂದವ?” ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. “ಯುದ್ಧ ಮಾಡಬೇಕೋ ಬೇಡವೋ ಎನ್ನುವ ಗೊಂದಲ ನನ್ನನ್ನು ಕಾಡುತ್ತಿದೆ” ಎಂದು ಅರ್ಜುನ ತನ್ನ ತುಮುಲವನ್ನು ಕೃಷ್ಣನಲ್ಲಿ ವ್ಯಕ್ತಪಡಿಸುತ್ತಾನೆ.
________________________________________________
ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 36
ಶ್ಲೋಕ :
ನಿಹತ್ಯ ಧಾರ್ತರಾಷ್ಟ್ರಾನ್ ನಃ ಕಾ ಪ್ರೀತಿಃ ಸ್ಯಾಜ್ಜನಾರ್ದನ ।
ಪಾಪಮೇವಾsಶ್ರಯೇದಸ್ಮಾನ್ ಹತ್ವೈತಾನಾತತಾಯಿನಃ ॥೩೬॥
ಅರ್ಥ:
ಧಾರ್ತರಾಷ್ಟ್ರರನ್ನು ಕೊಂದು ನಮಗಾದರೂ ಏನು ಸುಖವುಂಟು ಜನಾರ್ದನ? ಈ ಕುಲಗೇಡಿಗಳನ್ನು ಕೊಂದರೆ ನಮಗೆ ಪಾಪವೇ ತಟ್ಟೀತು.
ವಿವರ ವಿವರಣೆಗಳು :
ಒಂದು ವೇಳೆ ಧಾರ್ತರಾಷ್ಟ್ರರನ್ನು ಕೊಂದರೆ ನಮಗೆ ಆನಂದವೇನು ? ಅದರಿಂದ ಸಾಯುವ ತನಕ ನಿರಂತರ ಪಾಪಪ್ರಜ್ಞೆ ನಮ್ಮನ್ನು ಕಾಡಬಹುದು. ಇವರನ್ನು ಕೊಂದು ಪಾಪಪ್ರಜ್ಞೆಯಿಂದ ಬದುಕಬೇಕೇ ಹೊರತು ಇನ್ನೇನೂ ಲಾಭವಿಲ್ಲ.
ಈ ಶ್ಲೋಕದಲ್ಲಿ ಅರ್ಜುನ “ಆತತಾಯಿ” ಎನ್ನುವ ಪದವನ್ನು ಬಳಸಿದ್ದಾನೆ. ಆತತಾಯಿ ಎಂದರೆ ಇನ್ನೊಬ್ಬರ ಮನೆಗೆ ಬೆಂಕಿ ಹಾಕುವವ, ಇನ್ನೊಬ್ಬರ ಆಹಾರಕ್ಕೆ ವಿಷ ಬೆರೆಸಿ ಕೊಡುವವ, ಇನ್ನೊಬ್ಬರ ಆಸ್ತಿಯನ್ನು ಲಪಟಾಯಿಸುವವ, ಪರ ಸ್ತ್ರೀಯರ ಮೇಲೆ ಕೈ ಹಾಕುವವ ಇತ್ಯಾದಿ. ಶಾಸ್ತ್ರ ‘ಆತತಾಯಿನರನ್ನು’ ಕಂಡಲ್ಲಿ ಹೊಡೆದು ಸಾಯಿಸು ಎನ್ನುತ್ತದೆ. ಇಲ್ಲಿ ದುರ್ಯೋಧನ ಮೇಲಿನ ಎಲ್ಲಾ ಕೆಟ್ಟ ಕೆಲಸವನ್ನೂ ಮಾಡಿದ್ದ. ಭೀಮನಿಗೆ ವಿಷ ಸೇರಿಸಿ ಕೊಟ್ಟಿದ್ದ, ದ್ರೌಪದಿ ವಸ್ತ್ರಾಪಹರಣ ಮಾಡಿದ್ದ, ಪಾಂಡವರಿದ್ದ ಅರಗಿನ ಮನೆಗೆ ಬೆಂಕಿ ಇಟ್ಟಿದ್ದ. ಆದರೆ ಇಲ್ಲಿ ಅರ್ಜುನನಿಗೆ ಬಂಧು ಪ್ರೇಮ ಎಲ್ಲಿಯವರೆಗೆ ಕಾಡುತ್ತಿದೆ ಎಂದರೆ: “ಇವರೆಲ್ಲರೂ ಆತತಾಯಿನರಾದರೂ ಕೂಡಾ, ನನ್ನ ದೊಡ್ಡಪ್ಪನ ಮಕ್ಕಳಲ್ಲವೇ?” ಎಂದು ಕೃಷ್ಣನಲ್ಲಿ ಪರಿತಪಿಸುತ್ತಾನೆ.
ಈ ಶ್ಲೋಕದಲ್ಲಿ ಅರ್ಜುನ ಶ್ರೀಕೃಷ್ಣನನ್ನು ‘ಜನಾರ್ದನ’ ಎಂದು ಸಂಬೋಧಿಸಿದ್ದಾನೆ. ಜನಾರ್ದನ ಎಂದರೆ ದುರ್ಜನ ಸಂಹಾರಕ ಹಾಗು ಸಜ್ಜನರಿಗೆ ಮುಂದೆ ಹುಟ್ಟಿಲ್ಲದ ಮೊಕ್ಷಪ್ರದವಾದ ಸಾವನ್ನು ಕೊಡುವವ. “ಮೋಕ್ಷಪ್ರದನಾದ ನೀನು ಮತ್ತೆ ಪುನಃ ಈ ಹುಟ್ಟು-ಸಾವಿನ ಚಕ್ರದಲ್ಲಿ ಬರುವ ಈ ಯುದ್ಧದಲ್ಲಿ ನಮ್ಮನ್ನು ಏಕೆ ತೊಡಗಿಸುತ್ತಿರುವೆ? ಯುದ್ಧ ಎಂದೂ ಮೊಕ್ಷಪ್ರದವಲ್ಲ, ಅದು ಸೇಡು-ದ್ವೇಷದಿಂದ ಕೂಡಿರುತ್ತದೆ. ಹಾಗಿರುವಾಗ ಈ ಯುದ್ಧ ಏಕೆ?” ಎನ್ನುವುದು ಈ ಸಂಬೋಧನೆಯ ಹಿಂದಿರುವ ಧ್ವನಿ.
Comments