ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 33
ಶ್ಲೋಕ :
ಯೇಷಾಮರ್ಥೇ ಕಾಂಕ್ಷಿತಂ ನೋ ರಾಜ್ಯಂ ಭೋಗಾಃ ಸುಖಾನಿ ಚ ।
ತ ಇಮೇವಸ್ಥಿತಾ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾ ಧನಾನಿ ಚ ॥೩೩॥
ಅರ್ಥ:
ಯಾರಿಗಾಗಿ ಅರೆಸೋತ್ತಿಗೆ? ಸುಖ-ಭೋಗಕ್ಕಾಗಿ ಇವರು ಹರಣದ ಮತ್ತು ಹಣದ ಹಂಗು ತೊರೆದು ಕಾಳಗದ ಕಣದಲ್ಲಿ ನಿಂತಿದ್ದಾರೆ.
ವಿವರ ವಿವರಣೆಗಳು :
ಒಂದು ವೇಳೆ ಈ ರಾಜಭೋಗ ಬೇಕಿದ್ದರೆ ಅದು ಯಾರಿಗೋಸ್ಕರ? ನಮ್ಮೆಲ್ಲ ಗುರು ಹಿರಿಯರ ಮಧ್ಯ, ಸಂತೋಷದಿಂದ ನಾವಿರಬೇಕು. ಅವರನ್ನೆಲ್ಲಾ ಕೊಂದು ನಾವೇನು ಸಂತೋಷಪಡುವುದು? ಯಾರಿಗೋಸ್ಕರ ಈ ಜೀವನದ ಸುಖವನ್ನು ಸಾಮ್ರಾಜ್ಯವನ್ನು ಬಯಸುತ್ತಿದ್ದೆವೋ, ಅವರೆಲ್ಲರೂ ಪ್ರಾಣದ ಹಂಗನ್ನು ತೊರೆದು, ಸರ್ವಸ್ವವನ್ನೂ ಕಳೆದುಕೊಳ್ಳಲು ಸಿದ್ಧರಾಗಿ ನಮ್ಮೆದುರು ಯುದ್ಧಕ್ಕೆ ನಿಂತಿದ್ದಾರೆ.
_____________________________________________
ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 34
ಶ್ಲೋಕ :
ಆಚಾರ್ಯಾಃ ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ ।
ಮಾತುಲಾಃ ಶ್ವಶುರಾಃ ಪೌತ್ರಾಃ ಸ್ಯಾಲಾಃ ಸಂಬಂಧಿನಸ್ತಥಾ ॥೩೪॥
ಅರ್ಥ :
ಗುರುಗಳು, ತಂದೆ ತಾಯಿಯಂತಿರುವವರು, ಮಕ್ಕಳು. ಅಂತೆಯೇ ಅಜ್ಜಂದಿರು, ಮಾವಂದಿರು, ಸೋದರ ಮಾವಂದಿರು, ಮೊಮ್ಮಕ್ಕಳು, ಮೈದುನಂದಿರು ಮತ್ತು ನೆಂಟರಿಷ್ಟರು.
ವಿವರ ವಿವರಣೆಗಳು :
ಅರ್ಜುನ ತನ್ನ ಬಂಧುಗಳನ್ನು, ಕುಟುಂಬದ ಸದಸ್ಯರ ಪಟ್ಟಿಯನ್ನು ಕೃಷ್ಣನ ಮುಂದೆ ಹೇಳಿಕೊಳ್ಳುತ್ತಾನೆ. ಗುರುಗಳು, ಪಿತೃಸಮಾನರು, ಮಕ್ಕಳು, ಅಜ್ಜಂದಿರು, ಮಾವಂದಿರು, ಹೆಣ್ಣು ಕೊಟ್ಟ ಮಾವಂದಿರು, ಮೊಮ್ಮಕ್ಕಳು, ಹೆಂಡತಿಯ ಅಣ್ಣ-ತಮ್ಮಂದಿರು ಮತ್ತು ನೆಂಟರಿಷ್ಟರು. ಹೀಗೆ ಕೇವಲ ತನ್ನ ಸಂಬಂಧಿಗಳ ಪಟ್ಟಿ ಕೊಡುತ್ತಿರುವ ಅರ್ಜುನ ತನ್ನ ಸಾಮಾಜಿಕ ಕರ್ತವ್ಯ ಮರೆತು ವೈಯಕ್ತಿಕವಾಗಿ ಮಾತನಾಡುತ್ತಿರುವುದು ಇಲ್ಲಿ ಸ್ಪಷ್ಟವಾಗುತ್ತದೆ.
Comments