ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 28-29
ಶ್ಲೋಕ :
ದೃಷ್ಟ್ವೇಮಂ ಸ್ವಜನಂ ಕೃಷ್ಣ ಯುಯುತ್ಸುಂ ಸಮುಪಸ್ಥಿತಮ್ ॥೨೮॥
ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ ।
ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ ॥೨೯॥
ಅರ್ಥ :
ಅರ್ಜುನ ಹೇಳಿದನು: ಕೃಷ್ಣ, ಯುದ್ಧೋತ್ಸಾಹದಿಂದ ಇಲ್ಲಿ ನೆರೆದ ನಮ್ಮ ಮಂದಿಯನ್ನು ನೋಡಿದಾಗ ನನ್ನ ಅಂಗಾಂಗಗಳು ಕಂಗೆಡುತ್ತಿವೆ. ಬಾಯಿಯೂ ಬತ್ತುತ್ತಿದೆ. ನನ್ನ ಮೈಯಲ್ಲವೂ ನವಿರೆದ್ದು ನಡುಗುತ್ತಿದೆ.
ವಿವರ ವಿವರಣೆಗಳು :
“ಇಲ್ಲಿ ನೆರೆದ ನನ್ನ ಹಿರಿಯ ಬಂಧುಗಳನ್ನು ನೋಡಿದಾಗ ನನ್ನ ಅಂಗಾಂಗಗಳು ಮುದುಡುತ್ತಿವೆ. ನಾವು ಪರಸ್ಪರ ಸ್ನೇಹಪೂರ್ವಕವಾಗಿ ಬದುಕಬೇಕಾದವರು ಇಂದು ಈ ರಣರಂಗದಲ್ಲಿ ಎದುರುಬದುರಾಗಿ ಹೊಡೆದಾಡಿಕೊಳ್ಳಲು ನಿಂತಿರುವುದನ್ನು ಕಂಡು ನನ್ನ ಮುಖ ನಾಚಿಕೆಯಿಂದ ಬಾಡುತ್ತಿದೆ. ತಿಳುವಳಿಕೆಯುಳ್ಳ ನಾವೇ ಇಂತಹ ಅಸಹ್ಯ ಕೆಲಸಕ್ಕೆ ಇಳಿದುಬಿಟ್ಟೆವಲ್ಲ. ಈ ತೀರ್ಮಾನವನ್ನು ನಾವೇ ಮಾಡಿ ಅದಕ್ಕೆ ನಾವೇ ಬದ್ಧರಾಗಿ ರಣರಂಗದಲ್ಲಿ ನಿಂತಿದ್ದೇವಲ್ಲ. ಇದನ್ನು ಯೋಚಿಸಿದರೆ ಮೈ ಮುದುಡುತ್ತಿದೆ. ಮುಖ ಒಣಗಿ ಮಾತನಾಡಲು ಆಗುತ್ತಿಲ್ಲ. ಎಷ್ಟು ಕೆಳಮಟ್ಟಕ್ಕಿಳಿದೆವು ನಾವು. ಇದನ್ನು ಯೋಚಿಸಿದರೆ ನಡುಕ ಬರುತ್ತದೆ” ಎನ್ನುತ್ತಾನೆ. ಇಲ್ಲಿ ಅರ್ಜುನನ ಮಾತಿನಲ್ಲಿ ಮೊದಲು ಅನುಕಂಪ, ಅದರಿಂದ ಲಜ್ಜೆ, ಅದರಿಂದ ಭಯ, ಅದರಿಂದ ವಿಸ್ಮಯ ವ್ಯಕ್ತವಾಗಿರುವುದನ್ನು ನಾವು ಕಾಣುತ್ತೇವೆ.
______________________________________
ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 30
ಶ್ಲೋಕ :
ಗಾಂಡೀವಂ ಸ್ರಂಸತೇ ಹಸ್ತಾತ್ ತ್ವಕ್ ಚೈವ ಪರಿದಹ್ಯತೇ ।
ನಚ ಶಕ್ನೋಮ್ಯವಸ್ಥಾತುಂ ಭ್ರಮತೀವ ಚ ಮೇ ಮನಃ ॥೩೦॥
ಅರ್ಥ :
ಗಾಂಡೀವ ಕೈಯಿಂದ ಜಾರುತ್ತಿದೆ, ತೊಗಲು ಉರಿಯೆದ್ದಿದೆ. ನಿಂತಲ್ಲಿ ನಿಲ್ಲಲಾಗುತ್ತಿಲ್ಲ. ನನ್ನ ಮನಸ್ಸು ಗೊಂದಲಮಯವಾಗುತ್ತಿದೆ.
ವಿವರ ವಿವರಣೆಗಳು :
ಒಬ್ಬ ವ್ಯಕ್ತಿ ತನ್ನ ಆತ್ಮ ವಿಶ್ವಾಸವನ್ನು ಕಳೆದುಕೊಂಡಾಗ, ಆತನ ಅಂತರಂಗದ ಅನುಭವ ದೈಹಿಕವಾಗಿ ಹೇಗೆ ಹೊರಹೊಮ್ಮುತ್ತದೆ ಎನ್ನುವುದನ್ನು ಇಲ್ಲಿ ಕಾಣಬಹುದು.ಆತ್ಮವಿಶ್ವಾಸವಿರದ ವ್ಯಕ್ತಿ ತನ್ನ ಮುಷ್ಠಿ ಬಿಗಿ ಹಿಡಿಯಲಾರ. ಇಲ್ಲಿ ಅರ್ಜುನನ ಸ್ಥಿತಿ ಕೂಡಾ ಹಾಗೇ ಆಗಿದೆ. ಆತ ಹೇಳುತ್ತಾನೆ: “ಗಾಂಡೀವ ನನ್ನ ಕೈಯಿಂದ ಜಾರುತ್ತಿದೆ, ಇಡೀ ಮೈ ಉರಿ ಎದ್ದ ಹಾಗೆ ಸಂಕಟವಾಗುತ್ತಿದೆ” ಎಂದು. ಇದು ಒಳಗಿನ ಭಾವದ, ತುಮುಲದ ಅಭಿವ್ಯಕ್ತ. ಒಮ್ಮೆ ಮನಸ್ಸು ಸ್ಥಿರವಿಲ್ಲದಿದ್ದರೆ ದೇಹಕೂಡಾ ಸ್ಥಿರವಿರಲಾರದು. ಅದೇ ರೀತಿ ದೇಹ ಸ್ಥಿರವಿಲ್ಲದಿದ್ದರೆ ಮನಸ್ಸನ್ನು ಸ್ಥಿರಗೊಳಿಸುವುದು ಸಾದ್ಯವಿಲ್ಲ. “ಈ ರಥದಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ. ಮನಸ್ಸು ಗೊಂದಲಮಯವಾಗಿದೆ” ಎಂದು ಕೃಷ್ಣನಲ್ಲಿ ಅರ್ಜುನ ಪರಿತಪಿಸುತ್ತಾನೆ.
Comments