ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 26
ಶ್ಲೋಕ :
ತತ್ರಾಪಶ್ಯತ್ ಸ್ಥಿತಾನ್ ಪಾರ್ಥಃ ಪಿತ ನಥ ಪಿತಾಮಹಾನ್ ।
ಆಚಾರ್ಯಾನ್ಮಾತುಲಾನ್ ಭ್ರಾತ ನ್ ಪುತ್ರಾನ್ ಪೌತ್ರಾನ್ ಸಖೀಂಸ್ತಥಾ ॥೨೬॥
ಶ್ವಶುರಾನ್ ಸುಹೃದಶ್ಚೈವ ಸೇನಯೋರುಭಯೋರಪಿ ।
ತತ್ರ ಅಪಶ್ಯತ್ ಸ್ಥಿತಾನ್ ಪಾರ್ಥಃ ಪಿತ ನಥ ಪಿತಾಮಹಾನ್ |
ಆಚಾರ್ಯಾನ್ ಮಾತುಲಾನ್ ಭ್ರಾತ ನ್ ಪುತ್ರಾನ್ ಪೌತ್ರಾನ್ ಸಖೀನ್ ತಥಾ ||
ಅರ್ಥ
ಅಲ್ಲಿ ಎರಡೂ ಕಡೆಯ ಪಡೆಗಳಲ್ಲಿ ನೆರೆದವರನ್ನು ಅರ್ಜುನನು ಕಂಡನು. ತಂದೆಯಂತಿರುವವರನ್ನು, ಅಜ್ಜಂದಿರನ್ನು, ಗುರುಗಳನ್ನು, ಸೋದರಮಾವಂದಿರನ್ನು, ಅಣ್ಣ-ತಮ್ಮಂದಿರನ್ನು, ಮಕ್ಕಳನ್ನು, ಮೊಮ್ಮೊಕ್ಕಳನ್ನು, ಸಂಗಾತಿಗಳನ್ನು ಮಾವಂದಿರನ್ನು ಮತ್ತು ಗೆಳೆಯರನ್ನು.
ವಿವರಣೆಗಳು
ಕೃಷ್ಣನು ರಥವನ್ನು ಅರ್ಜುನನ ಆತ್ಮೀಯ ಬಂಧುಗಳ ಎದುರು ನಿಲ್ಲಿಸಿದ್ದರಿಂದ, ಅಲ್ಲಿ ನೆರೆದ ಎಲ್ಲರನ್ನೂ ಅರ್ಜುನ ನೋಡುತ್ತಾನೆ. ಇಷ್ಟು ಹೊತ್ತು ಜಂಭದ ಮಾತನಾಡಿದ ಆತನಿಗೆ ಈಗ ತನ್ನೆದುರಿಗೆ ನಿಂತ ತಂದೆ ಸಮಾನರು, ಅಜ್ಜಂದಿರು, ವಿದ್ಯೆ ಕೊಟ್ಟ ಆಚಾರ್ಯರು, ಸೋದರಮಾವಂದಿರು, ಅಣ್ಣತಮ್ಮಂದಿರು, ಮಕ್ಕಳು, ಮೊಮ್ಮೊಕ್ಕಳು, ಸ್ನೇಹ ಸಂಗಾತಿಗಳು, ಮಾವಂದಿರು, ಹಿತೈಷಿಗಳು, ಎಲ್ಲರು ಎರಡೂ ಕಡೆಗಳಲ್ಲಿ ಕಾಣಿಸುತ್ತಾರೆ.
ಎಚ್ಚರದಿಂದ ಈ ಶ್ಲೋಕವನ್ನು ಗಮನಿಸಿದರೆ, ಅರ್ಜುನನಿಗೆ ಅಲ್ಲಿ ಕಾಣಿಸಿದ್ದು ಕೇವಲ ಗುರು ಹಿರಿಯರು, ಬಂಧುಗಳು ಮತ್ತು ಆತ್ಮೀಯರು. ಇಲ್ಲಿ ಆತನಿಗೆ ಬಂಧು ಪ್ರೇಮ ಎಚ್ಚರ ಆಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಕರ್ತವ್ಯ ನಿರತ ಜನಪಾಲಕ ರಾಜನಿಗೆ ಬಂಧು ಪ್ರೇಮ ತರವಲ್ಲ. ಪ್ರಜಾಪಾಲಕನಾದವನಿಗೆ ಪ್ರಜಾಪಾಲನೆ ಮೂಲಧರ್ಮ. ಅದನ್ನು ಆತ ಎಂದೂ ಚ್ಯುತಿ ಬರದಂತೆ ನಿರ್ವಹಿಸಬೇಕು. ಈ ರೀತಿ ಕಾರ್ಯ ನಿರ್ವಹಿಸುತ್ತಿರುವಾಗ ‘ನನ್ನ ಬಂಧುಗಳು, ನನ್ನ ಪರಿವಾರ’ ಎಂದು ಯಾವ ತಾರತಮ್ಯ ಮಾಡುವಂತಿಲ್ಲ.
_____________________________________________
ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 27
ಶ್ಲೋಕ
ತಾನ್ಸಮೀಕ್ಷ್ಯ ಸ ಕೌಂತೇಯಃ ಸರ್ವಾನ್ಬನ್ಧೂನವಸ್ಥಿತಾನ್ ॥೨೭॥
ಕೃಪಯಾ ಪರಯಾssವಿಷ್ಟೋ ವಿಷೀದನ್ನಿದಮಬ್ರವೀತ್ ।
ಅರ್ಥ
ಆ ಎಲ್ಲಾ ಬಂಧುಗಳು ಒಂದೆಡೆ ಸೇರಿರುವುದನ್ನು ಕಂಡ ಅರ್ಜುನ ಕಡು ಕರುಣೆಗೊಳಗಾಗಿ, ಭಾವಪರವಶನಾಗಿ -ಹೀಗೆ ಹೇಳಿದನು
ವಿವರಣೆಗಳು :
ಆ ಎಲ್ಲಾ ಬಂಧುಗಳು ಒಂದುಗೂಡಿರುವುದನ್ನು ಕಂಡ ಅರ್ಜುನ, ಕರುಣೆಗೊಳಗಾಗಿ, ಕಾರುಣ್ಯದಿಂದ, ದುಖಃದಿಂದ, ತನ್ನ ತುಮುಲವನ್ನು ಕೃಷ್ಣನಲ್ಲಿ ತೋಡಿಕೊಳ್ಳುತ್ತಾನೆ.
ಇಲ್ಲಿಂದ ಮುಂದೆ ಅರ್ಜುನ ಅನೇಕ ರೀತಿಯಲ್ಲಿ ತನ್ನ ಅಳಲನ್ನು ಶ್ರೀಕೃಷ್ಣನ ಮುಂದೆ ತೊಡಿಕೊಳ್ಳುವುದನ್ನು ಕಾಣುತ್ತೇವೆ. ಮುಂದಿನ ಶ್ಲೋಕಗಳನ್ನು ನೋಡುವ ಮೊದಲು ಇಲ್ಲಿ ಒಂದು ಪುಟ್ಟ ವಿಶ್ಲೇಷಣೆ ಮಾಡೋಣ. ಗೀತೆಯನ್ನು ಓದುವಾಗ ಕೆಲವರಿಗೆ ಶ್ರೀಕೃಷ್ಣನ ನಡೆ ಅರ್ಥವಾಗುವುದಿಲ್ಲ. “ಅಯ್ಯೋ- ಹೇಗೆ ನನ್ನ ಬಂಧುಗಳ ವಿರುದ್ಧ ಹೋರಾಡಲಿ” ಎಂದು ಅರ್ಜುನ ಕೇಳಿದರೆ, ಕೃಷ್ಣ “ಯುದ್ಧ ಮಾಡು” ಎಂದು ಹೇಳುತ್ತಾನೆ. ಇದು ನ್ಯಾಯವೇ ಎನ್ನುವ ಪ್ರಶ್ನೆ ಹೆಚ್ಚಿನವರನ್ನು ಕಾಡುತ್ತದೆ. ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, ಅರ್ಜುನ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಈ ಮಾತನ್ನು ಹೇಳಿದ್ದರೆ ಖಂಡಿತವಾಗಿ ನಾವು ಒಪ್ಪಬೇಕಾದ ವಿಷಯವಿದು. ಆದರೆ ಇಲ್ಲಿ ಆತ ಭರತಖಂಡದ ರಕ್ಷಕನಾಗಿ ಧರ್ಮದ ಪರ ಹೋರಾಟಮಾಡಲು ಧರ್ಮರಾಯನ ಪರ ನಿಂತ ಅರಸ. ಆತ ಒಂದು ವೇಳೆ “ನಮಗೋಸ್ಕರ ಭರತ ಖಂಡದ ಜನರು ಸಾಯುವುದು ಬೇಡ” ಎಂದಿದ್ದರೆ ಒಪ್ಪಬಹುದಿತ್ತು. ಆದರೆ ಆತ ಹಾಗೆ ಹೇಳಲಿಲ್ಲ. ಆತನಿಗೆ ಅಲ್ಲಿ ಕಾಣಿಸಿದ್ದು ಕೇವಲ ಬಂಧುಗಳು. ರಾಜನಾದವನಿಗೆ ಧರ್ಮದ ಕಡೆ ನಿಂತವನು ಮಾತ್ರ ಬಂಧು. ಧರ್ಮದ ವಿರುದ್ಧ ಯಾರೇ ನಿಂತಿರಲಿ ಆತ ಕೇವಲ ಅಪರಾಧಿ. ಅವರನ್ನು ಶಿಕ್ಷಿಸುವುದು ರಾಜನ ಪರಮ ಧರ್ಮ. ನ್ಯಾಯ ಸ್ಥಾನದಲ್ಲಿ ನಿಂತ ನ್ಯಾಯಾಧೀಶ, ಅನ್ಯಾಯ ಮಾಡಿ ಬಂದ ತನ್ನ ಬಂಧುವನ್ನು ‘ನನ್ನ ಕಡೆಯವನು’ ಎಂದು ಹೇಗೆ ಕ್ಷಮಿಸುವಂತಿಲ್ಲವೋ, ಹಾಗೆ ರಾಜನಾದವನೂ ಕೂಡಾ.
ಮುಂದೆ ಅರ್ಜುನ ಅನೇಕ ರೀತಿಯಲ್ಲಿ ತನ್ನ ವಿತಂಡವಾದದಿಂದ(Arguments) ಶ್ರೀಕೃಷ್ಣನನ್ನು ಸಮಜಾಯಿಸಲು (Convince) ನೋಡುತ್ತಾನೆ. ಆದರೆ ಶ್ರೀಕೃಷ್ಣ ಎಲ್ಲೂ ಈ ವಿತಂಡವಾದಕ್ಕೆ ನೇರ ಉತ್ತರ ಕೊಡುವುದಿಲ್ಲ. ಏಕೆಂದರೆ ಒಂದು ವೇಳೆ ಹಾಗೆ ಮಾಡಿದ್ದರೆ ಆತ ಬೇಡವಾದ ವಾದಕ್ಕೆ ಮಣೆ ಹಾಕಿದಂತಾಗುತ್ತಿತ್ತು. ಒಬ್ಬ ಉತ್ತಮ ಕೇಳುಗನಂತೆ ಎಲ್ಲವನ್ನೂ ಕೇಳಿ, ಆ ನಂತರ ಒಬ್ಬ ಮಾನಸಿಕ ರೋಗಿಗೆ ಚಿಕಿತ್ಸೆ ಕೊಡುವ ರೀತಿಯಲ್ಲಿ ಕೃಷ್ಣ ನಡೆದಿರುವುದನ್ನು ಇಲ್ಲಿ ನಾವು ಕಾಣುತ್ತೇವೆ. ಬನ್ನಿ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಶ್ಲೋಕವನ್ನು ನೋಡೋಣ.
Comments