ಭಗವದ್ಗೀತೆ ಅಧ್ಯಾಯ-1 ಶ್ಲೋಕ - 22-23

ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 22
ಶ್ಲೋಕ :
ಯಾವದೇತಾನ್ ನಿರೀಕ್ಷೇsಹಂ ಯೋದ್ಧುಕಾಮಾನವಸ್ಥಿತಾನ್ ।
ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ ರಣಸಮುದ್ಯಮೇ ॥೨೨॥
 
ಅರ್ಥ :
ಕಾದ ಬಯಸಿ ನೆರೆದ ಇವರತ್ತ ನಾನೊಮ್ಮೆ ಕಣ್ಣು ಹಾಯಿಸುತ್ತೇನೆ. ಈ ಕದನದ ಕಾಯಕದಲ್ಲಿ ಯಾರು ನನ್ನ ಜೊತೆ ಹಾಗು ಯಾರ ಜೊತೆ ನಾನು ಕಾದಬೇಕು ಎಂದು?
 
ವಿವರ ವಿವರಣೆಗಳು
ಮಹಾಭಾರತ ಯುದ್ಧ ಇತಿಹಾಸದಲ್ಲಿ ದಾಖಲೆಯಾದ ಮೊದಲ ಜಾಗತಿಕ ಯುದ್ಧ. ಇಂತಹ ಯುದ್ಧದ ಮಂಚೂಣಿಯಲ್ಲಿ ನಿಂತ ಅರ್ಜುನ ಅಹಂಕಾರದಿಂದ ಮಾತನಾಡುತ್ತಿದ್ದಾನೆ. ಆತ ಶ್ರೀಕೃಷ್ಣನಲ್ಲಿ “ಇಲ್ಲಿ ನೆರೆದ ಇವರತ್ತ ನಾನೊಮ್ಮೆ ಕಣ್ಣು ಹಾಯಿಸಬೇಕು. ನನ್ನ ವಿರುದ್ಧ ಯುದ್ಧ ಮಾಡಲು ಬಂದವರು ಯಾರು, ಹಾಗು ನನ್ನ ಕಡೆಯಿಂದ ನನ್ನ ಸಹ ಯುದ್ಧ ಮಾಡಲು ಬಂದವರು ಯಾರು ಎಂದು ನಾನೊಮ್ಮೆ ನೋಡಬೇಕು” ಎನ್ನುತ್ತಾನೆ. ಇಲ್ಲಿ “ನನ್ನೊಂದಿಗೆ ಯುದ್ಧ ಮಾಡಲು ಬಂದವರನ್ನೊಮ್ಮೆ ನೋಡಬೇಕು” ಎನ್ನುವಲ್ಲಿ ಅಹಂಕಾರಭರಿತ ವ್ಯಂಗ್ಯವಿದೆ. ತಾನು ಮಹಾವೀರ, ನನ್ನೆದುರು ನೆರೆದ ಈ ಸೇನೆ ನನಗೆ ಏನೂ ಅಲ್ಲ ಎನ್ನುವ ಸೊಕ್ಕಿನ ಮಾತಿದು.


________________________________________________

  ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 23
ಶ್ಲೋಕ :
ಯೋತ್ಸ್ಯಮಾನಾನವೇಕ್ಷೇಹಂ ಯ ಏತೇತ್ರ ಸಮಾಗತಾಃ ।
ಧಾರ್ತರಾಷ್ಟ್ರಸ್ಯ ದುರ್ಬುದ್ಧೇರ್ಯುದ್ಧೇ ಪ್ರಿಯಚಿಕೀರ್ಷವಃ ॥೨೩॥
 
ಅರ್ಥ:
ಇಲ್ಲಿ ನೆರೆದ- ಈ ಕಾದ ಹೊರಟವರನ್ನು, ಬುದ್ಧಿಗೇಡಿಯಾದ ದುರ್ಯೋಧನನ ಹಿತವನ್ನು ಬಯಸಿ ಯುದ್ಧದಲ್ಲಿ ಆತನಿಗೆ ಹೆಗಲು ಕೊಡ ಬಯಸಿದವರನ್ನು, ನಾನೊಮ್ಮೆ ನೋಡುತ್ತೇನೆ ಎನ್ನುತ್ತಾನೆ ಅರ್ಜುನ.
 
ವಿವರ ವಿವರಣೆಗಳು : 
“ಬುದ್ಧಿಗೇಡಿ ದುರ್ಯೋಧನನಿಗೆ ಜಯವಾಗಬೇಕು ಎಂದು ಬಯಸಿ, ನಮಗೆ ತೊಂದರೆ ಕೊಡಲು ನನ್ನ ವಿರುದ್ಧ ನಿಂತವರನೊಮ್ಮೆ ನಾನು ನೋಡಬೇಕು” ಎಂದು ಅರ್ಜುನ ಶ್ರೀಕೃಷ್ಣನಲ್ಲಿ ಆಜ್ಞಾರೂಪಿ ಸ್ವರದಲ್ಲಿ ಹೇಳುತ್ತಾನೆ. ಇಲ್ಲಿ ‘ಅಹಮ್’ ಎಂದು ಸಂಬೋಧಿಸುತ್ತಿರುವ ಅರ್ಜುನ ಅಹಂಕಾರದ ದಾಸನಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ.

Comments