ಭಗವದ್ಗೀತೆ ಅಧ್ಯಾಯ-1 ಶ್ಲೋಕ - 20 - 21

ಭಗವದ್ಗೀತೆ ಅಧ್ಯಾಯ-1  ಅರ್ಜುನ ವಿಷಾದ ಯೋಗ
ಶ್ಲೋಕ - 20 
ಶ್ಲೋಕ :
ಅಥ ವ್ಯವಸ್ಥಿತಾನ್ ದೃಷ್ಟ್ವಾ ಧಾರ್ತರಾಷ್ಟ್ರಾನ್ ಕಪಿಧ್ವಜಃ ।
ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ ॥೨೦॥
ಹೃಷೀಕೇಶಂ ತದಾ ವಾಕ್ಯಮಿದಮಾಹ ಮಹೀಪತೇ ।
 
ಅರ್ಥ :
ಓ ದೊರೆಯೇ, ಹನುಮನ ಬಾವುಟದ ಅರ್ಜುನ ಧಾರ್ತರಾಷ್ಟ್ರರು ಸಜ್ಜಾದದ್ದನ್ನು ಕಂಡು, ಹೋರಾಟಕ್ಕೆ ತೊಡಗಲು ತನ್ನ ಬಿಲ್ಲನ್ನು ಅಣಿಗೊಳಿಸಿ, ಕೃಷ್ಣನನ್ನು ಕುರಿತು ಈ ಮಾತನ್ನು ಹೇಳಿದನು.
 
ವಿವರ ವಿವರಣೆಗಳು : 
ಎರಡೂ ಕಡೆ ಶಂಖನಾದವಾದಾಗ ಯುದ್ಧ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ, ತನ್ನ ರಥದಲ್ಲಿ ಆಂಜನೇಯನ ವಿಶೇಷ ಸನ್ನಿಧಾನವುಳ್ಳ ಅರ್ಜುನನು, ಇಂದ್ರಿಯಗಳ ಒಡೆಯನಾದ ಶ್ರೀಕೃಷ್ಣ(ಹೃಷೀಕೇಶ)ನಲ್ಲಿ ಮಾತನ್ನಾಡಿದನು.

ಇಲ್ಲಿ ಅರ್ಜುನನ ರಥದಲ್ಲಿ ಪ್ರಾಣದೇವರ ವಿಶೇಷ ಸನ್ನಿಧಾನವಿತ್ತು. ನಮ್ಮ ದೇಹವೆಂಬ ರಥದಲ್ಲಿ ಕೂಡಾ ಜೀವನನ್ನು ಸದಾ ಪ್ರಾಣ ‘ಭಗವಂತನ ಸನ್ನಿಧಾನದಲ್ಲಿ’ ರಕ್ಷಿಸುತ್ತಿರುತ್ತಾನೆ. ಏಲ್ಲಿ ಪ್ರಾಣನೋ ಅಲ್ಲಿ ಭಗವಂತನ ಸನ್ನಿಧಾನ. ಪೌರಾಣಿಕವಾಗಿ ಅರ್ಜುನನ ರಥದಲ್ಲಿ ಆಂಜನೇಯನ ಸನ್ನಿಧಾನವಿರಲು ಕಾರಣ ವಾಯು ದೇವರ ಇನ್ನೊಂದು ರೂಪವಾದ ಭೀಮಸೇನ. ಸೌಗಂಧಿಕಾ ಪುಷ್ಪ ತರಲು ಹೊರಟ ಭೀಮಸೇನನನ್ನು ಹನುಮಂತ ಬಾಲದಿಂದ ತಡೆದ. ಈ ಸಂದರ್ಭದಲ್ಲಿ ನಡೆದ ಘಟನೆಯಲ್ಲಿ ಆಂಜನೇಯ ತಾನು ವಿಶೇಷವಾಗಿ ಅರ್ಜುನನ ರಥದಲ್ಲಿ ಸನ್ನಿಹಿತನಾಗಿರುತ್ತೇನೆ ಎಂದು ಭೀಮಸೇನನಿಗೆ ಮಾತು ಕೊಟ್ಟಿರುತ್ತಾನೆ. ಇಲ್ಲಿ ಭೀಮಸೇನ ಹಾಗು ಆಂಜನೇಯ ಎನ್ನುವುದು ಪ್ರಾಣದೇವರ ಎರಡು ರೂಪ (ರಾಮ ಮತ್ತು ಪರಶುರಾಮ ಇದ್ದಂತೆ).

ತನ್ನ ಧ್ವಜದಲ್ಲಿ ಆಂಜನೇಯನ ಸನ್ನಿಧಾನ, ಕೈಯಲ್ಲಿ ಗಾಂಡೀವ, ರಥದ ಸಾರಥಿ ಕೃಷ್ಣ, ಜೊತೆಯಲ್ಲಿ ಮಹಾ ಪರಾಕ್ರಮಿ ಭೀಮಸೇನ. ಈ ರೀತಿ ಯುದ್ಧಕ್ಕೆ ಸಜ್ಜಾದ ಅರ್ಜುನನನ್ನು ಅಹಂಕಾರ(Ego) ಕಾಡುತ್ತದೆ. ಈ ಅಹಂಕಾರದಿಂದ ಆತ ಕೃಷ್ಣನನ್ನು ಕುರಿತು ಹೀಗೆ ಹೇಳುತ್ತಾನೆ:
_____________________________________________

ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 21
ಶ್ಲೋಕ :
ಅರ್ಜುನ ಉವಾಚ ।
ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇsಚ್ಯುತ ॥೨೧॥
 
ಅರ್ಥ :
ಅರ್ಜುನ ಉವಾಚ- ಅರ್ಜುನನು ನುಡಿದನು ‘ಅಳಿವಿರದ ಕೃಷ್ಣನೇ’ ಎರಡು ಪಡೆಗಳ ನಡುವೆ ನನ್ನ ರಥವನ್ನು ನಿಲ್ಲಿಸು.
 
ವಿವರ ವಿವರಣೆಗಳು : 
ಈ ಶ್ಲೋಕದಲ್ಲಿ ನಾವು ಸೂಕ್ಷ್ಮವಾಗಿ ಅರ್ಜುನನ ಅಹಂಕಾರದ ಧ್ವನಿಯನ್ನು ಗಮನಿಸಬೇಕು. ‘ಮೇ’ ಅಂದರೆ ‘ನನ್ನ’. ಅರ್ಜುನನ ರಥದ ಸಾರಥ್ಯವನ್ನು ಸ್ವಯಂ ಶ್ರೀಕೃಷ್ಣ ವಹಿಸಿದ್ದರೂ ಕೂಡಾ, ಇಲ್ಲಿ ಅಹಂಕಾರದಲ್ಲಿ ಆತ ಕೃಷ್ಣನನ್ನು ಸಾಮಾನ್ಯ ಸಾರಥಿಯಂತೆ ಮಾತನಾಡಿಸಿ, “ನನ್ನ ರಥವನ್ನು ಎರಡೂ ಸೈನ್ಯಗಳ ಮಧ್ಯದಲ್ಲಿ ನಿಲ್ಲಿಸು ಎಂದು ಆಜ್ಞೆ ಮಾಡುವ ಧ್ವನಿಯಲ್ಲಿ ಹೇಳುತ್ತಾನೆ.

ಇಲ್ಲಿ ಅರ್ಜುನ ಶ್ರೀಕೃಷ್ಣನನ್ನು ಅಚ್ಯುತ ಎಂದು ಸಂಬೋಧಿಸುತ್ತಾನೆ. ಅಚ್ಯುತ ಎಂದರೆ ಸ್ವಯಂ ಚ್ಯುತಿ ಇಲ್ಲದ, ಭಕ್ತರ ಚ್ಯುತಿಯನ್ನು ಹರಣ ಮಾಡುವ ಭಗವಂತ. ಬಾಹ್ಯವಾಗಿ ಅಹಂಕಾರ ತೋರಿದರೂ ಕೂಡಾ, ಅರ್ಜುನನ ಅಂತರಾತ್ಮ ಮಾತ್ರ ಎಚ್ಚರದಿಂದಿತ್ತು, ಆ ಅಂತರಾತ್ಮ ಆತನ ಬಾಯಲ್ಲಿ ಈ ನಾಮವನ್ನು ನುಡಿಸಿದೆ. ಅಹಂಕಾರ ಎಂತಹ ಮಹಾತ್ಮರನ್ನೂ ಬಿಟ್ಟಿಲ್ಲ. ಒಮ್ಮೆ ನಮ್ಮ ಕೈಯಲ್ಲಿ ಬಲವಿದೆ ಎಂದು ತಿಳಿದಾಗ ನಾವು ಎಲ್ಲವನ್ನೂ ಮರೆತು ಅಹಂಕಾರದ ದಾಸರಾಗುತ್ತೇವೆ. ಈ ಅಹಂಕಾರ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ. ಅರ್ಜುನ ಮಹಾಜ್ಞಾನಿ ಮತ್ತು ಶ್ರೀಕೃಷ್ಣನ ಭಕ್ತ. ತನ್ನ ಭಕ್ತ ಅಹಂಕಾರಕ್ಕೊಳಪಟ್ಟಾಗ, ಶ್ರೀಕೃಷ್ಣ ಯಾವ ರೀತಿ ಪ್ರತಿಕ್ರಿಯೆ ತೋರುತ್ತಾನೆ ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.


Comments