ಭಗವದ್ಗೀತೆ ಅಧ್ಯಾಯ-1 ಶ್ಲೋಕ : 18

ಭಗವದ್ಗೀತೆ ಅಧ್ಯಾಯ-1  ಅರ್ಜುನ ವಿಷಾದ ಯೋಗ 
ಶ್ಲೋಕ  : 18

ಶ್ಲೋಕ

ದ್ರುಪದೋ ದ್ರೌಪದೇಯಾಶ್ಚ ಸರ್ವಶಃ ಪೃಥಿವೀಪತೇ ।
ಸೌಭದ್ರಶ್ಚ ಮಹಾಬಾಹುಃ ಶಂಖಾನ್ ದುಧ್ಮುಃ ಪೃಥಕ್ ಪೃಥಕ್ ॥೧೮॥
 

ಅರ್ಥ :

ಓ ನೆಲದೊಡೆಯನೆ; ದ್ರುಪದ, ದ್ರೌಪದಿಯ ಮಕ್ಕಳು ಸೇರಿದಂತೆ, ತುಂಬುತೋಳಿನ ಮಹಾ ಪರಾಕ್ರಮಿ ಅಭಿಮನ್ಯು. ಹೀಗೆ ಎಲ್ಲರೂ, ಒಬ್ಬೊಬ್ಬರಾಗಿ ಶಂಖವನ್ನೂದಿದರು.
 

ವಿವರ ವಿವರಣೆಗಳು : 

ಇಲ್ಲಿ ಸೂಕ್ಷ್ಮವಾಗಿ ನೋಡಿದಾಗ ಪಾಂಡವರ ಕಡೆ ಇದ್ದ ಶಿಸ್ತು(Discipline) ಎದ್ದು ಕಾಣುತ್ತದೆ. ಕೌರವರ ಪಾಳಯದಿಂದ ಗದ್ದಲರೂಪದ ಶಂಖ ನಗಾರಿಗಳ ಸದ್ದಿಗೆ ಉತ್ತರವಾಗಿ ಪಾಂಡವರು ಶಿಸ್ತುಬದ್ದವಾಗಿ, ಕ್ರಮಬದ್ಧವಾಗಿ ಶಂಖನಾದ ಮಾಡುತ್ತಾರೆ. ಮನಃಶಾಸ್ತ್ರೀಯವಾಗಿ ನೋಡಿದಾಗ, ಶಿಸ್ತುಬದ್ಧವಾದ ಚಿಕ್ಕ ಸೇನೆ ಅಶಿಸ್ತಿನಿಂದ ಕೂಡಿದ ಬಹುದೊಡ್ಡ ಸೇನೆಯ ಎದೆಯನ್ನು ಹೇಗೆ ನಡುಗಿಸಬಲ್ಲದು ಎನ್ನುವುದನ್ನು ಇಲ್ಲಿ ನಾವು ಕಂಡುಕೊಳ್ಳಬಹುದು. ಭಗವಂತನಿಗೆ ಸರ್ವಸಮರ್ಪಣೆ ಭಾವದಲ್ಲಿ, ಯಾವುದೇ ಅಹಂಕಾರವಿಲ್ಲದೆ, ಭಗವಂತನ ಸಾರಥ್ಯದಲ್ಲಿ, ಧರ್ಮಯುದ್ಧಕ್ಕೆ ಸಿದ್ಧವಾದ ಪಾಂಡವ ಸೇನೆ-ಮಾನಸಿಕವಾಗಿ ಸಂಪೂರ್ಣ ಸಿದ್ಧವಾಗಿತ್ತು. ಅಹಂಕಾರದ ಅಮಲಿನಲ್ಲಿ, ಅಧಿಕಾರದ ಆಸೆಯಿಂದ, ಮಾನಸಿಕ ಸ್ಥಿಮಿತ ಕಳೆದುಕೊಂಡು, ಭಗವಂತನ ವಿರುದ್ಧ ನಿಂತ ದುರ್ಯೋಧನನ ಮುಂದಾಳತ್ವದಲ್ಲಿನ ಕೌರವಸೇನೆ- ಈಗಾಗಲೇ ಆತ್ಮವಿಶ್ವಾಸವನ್ನು ಕಳೆದುಕೊಂಡಿತ್ತು.

ಇಲ್ಲಿ ಕಾಣುವ ಇನ್ನೊಂದು ವಿಶೇಷತೆ ಎಂದರೆ- ಪಾಂಡವರ ಕಡೆಯಿಂದ ಕ್ರಮಬದ್ಧವಾಗಿ ಹದಿನೆಂಟು ಮಂದಿ ಶಂಖನಾದ ಮಾಡಿದ್ದಾರೆ. ಸಂಖ್ಯಾಶಾಸ್ತ್ರವನ್ನು ನೋಡಿದಾಗ, ಅಕ್ಷರಾಂಕದ ಪದ್ಧತಿಯಲ್ಲಿ ಹದಿನೆಂಟು ಎಂದರೆ ಜಯ. ಜ=8 ಯ=1. ಅಕ್ಷರಾಂಕದಲ್ಲಿ ಮೊದಲನೆಯದು ಏಕ ಸ್ಥಾನ, ಎರಡನೆಯದು ದಶಕ ಸ್ಥಾನ.ಆದ್ದರಿಂದ ಜ-ಯ ಎಂದರೆ 81 ಅಲ್ಲ-18. ಜಯದ ಸಂಕೇತವಾದ ‘ಹದಿನೆಂಟು ಶಂಖನಾದ’ ಪಾಂಡವರ ಪಾಳಯದಲ್ಲಿ ಮೊಳಗಿತು ಎನ್ನುವಲ್ಲಿಗೆ ಭಗವದ್ಗೀತೆಯ ಹದಿನೆಂಟನೇ ಶ್ಲೋಕ ಮುಗಿಯಿತು!


Comments