ಕೃಷ್ಣ...🚩
ಸನಾತನ ಧರ್ಮ ಕರ್ಮ ಸಿದ್ಧಾಂತದ ಮೇಲೆ ರೂಪುಗೊಂಡದ್ದು. ಬ್ರಹ್ಮಾಂಡದ ಆಗು ಹೋಗುಗಳನ್ನು ಗಮನಿಸುವ, ದಾಖಲಿಸುವ ಸನಾತನ ಧರ್ಮ ಜಗನ್ನಿಯಾಮಕ ಶಕ್ತಿಯೊಂದನ್ನು ಗುರುತಿಸುತ್ತದೆ. ಆ ಶಕ್ತಿಯನ್ನು ದೇವರು ಎಂದು ಕರೆಯುತ್ತದೆ. ಆತ್ಮ, ಪರ-ಆತ್ಮ, ಪರಮಾತ್ಮಗಳ ವಿವೇಕ ವಿಚಾರ ವಿನಿಮಯ ಈ ಧರ್ಮದಲ್ಲಾದಷ್ಟು ಬಹುಶಃ ಯಾವ ಧರ್ಮದಲ್ಲಿಯೂ ಆಗಿಲ್ಲವೆನ್ನುವುದು ಸತ್ಯ ಸಂಗತಿ. ಜಗನ್ನಿಯಾಮಕ ಶಕ್ತಿಯನ್ನು ಸಾಂಧ್ರಪಡಿಸುವಲ್ಲಿ ವೇದಗಳು ಪುರಾಣಗಳು ಈ ಧರ್ಮದಲ್ಲಿ ಮುಖ್ಯವಾಹಿನಿಗಳಾಗಿವೆ. 'ಪುನರಪಿ ಜನನಂ, ಪುನರಪಿ ಮರಣಂ' ಎನ್ನುವುದು ಮರ್ತ್ಯರಿಗೆ ಸರ್ವೇಸಾಮಾನ್ಯ. ಬ್ರಹ್ಮಾಂಡದಲ್ಲಿ ಕೋಟಿ ಜೀವ ರಾಶಿಗಳಿರುವ ಭೂಮಿಯಲ್ಲಿ ಅಧರ್ಮ ಹೆಚ್ಚಾದಲ್ಲಿ ಈ ಶಕ್ತಿಯು ಅವತಾರ ರೂಪೇಣ ಭೂಮಿಯಲ್ಲಿ ಕಾಣಿಸಿಕೊಳ್ಳುತ್ತದೆ. ಭಗವಂತನ ಶ್ರೀ ಕೃಷ್ಣ ಅವತಾರವೂ ಹೀಗೆಯೆ. ಶ್ರೀ ಕೃಷ್ಣಾವತಾರವು ಮಹಾವಿಷ್ಣುವಿನ ಪೂರ್ಣಾವತಾರ. ಭಗವಂತ ಈ ಅವತಾರದಲ್ಲಿ ಧರ್ಮಸಂಸ್ಥಾಪನೆಯನ್ನಷ್ಟೇ ಅಲ್ಲ ಭಗವದ್ಗೀತೆ, ಉದ್ಧವ ಗೀತೋಪಾಸನೆಗಳ ಮೂಲಕ ತತ್ವವನ್ನು ಸಾರಿದ್ದು ವಿಶೇಷ. ಹಾಗದರೆ, ಶ್ರೀ ವಿಷ್ಣು ಕೃಷ್ಣನಾಗಿ ಜನಿಸಿದ್ದಾದರೂ ಏತಕ್ಕೆ??
ದೇವ - ದಾನವರ ಕಾಳಗದಲ್ಲಿ ಸಂಬರಾಸುರನು ಇಂದ್ರನಿಂದ ಹತನಾದನು. ಇದರಿಂದ ಉನ್ಮತ್ತನಾದ ಕಾಲನೇಮಿ ಎನ್ನುವ ಮಹಾದೈತ್ಯ ದೇವತೆಗಳ ಮೇಲೆ ಆಕ್ರಮಣ ಮಾಡಿದನು. ಇವನಿಗೆ ಸಾವಿರ ತಲೆಗಳು, ಎರಡು ಸಾವಿರ ಕೈಗಳು. ಈತನನ್ನು ಎದುರಿಸಲಾಗದೆ ದೇವತೆಗಳು ಮಹಾವಿಷ್ಣುವಿನ ಮೊರೆಹೋಗಲು. ಮಹಾವಿಷ್ಣು ಕಾಲನೇಮಿಯನ್ನು ಸಂಹರಿಸಿದನು. ಶ್ರೀ ಹರಿಯ ವೈರತ್ವದ ವಾಸನೆಯನ್ನು ಹೊತ್ತ ಕಾಲನೇಮಿಯ ಆತ್ಮ ಕಾಲಾನಂತರ ಉಗ್ರಸೇನನ ಮಗ ಕಂಸನಾಗಿ ಹುಟ್ಟಿತು. ಕಂಸನ ಮಾವ ಜರಾಸಂಧ. ಹಿಂದೊಮ್ಮೆ ಮಧುಕೈಟಬರು ವೇದಗಳನ್ನು ಕದ್ದೊಯ್ಯಲು ಶ್ರೀ ಹರಿ ಅವರನ್ನು ಸಂಹರಿಸಿ ಮಧುಸೂದನ, ಮಧುಕೈಟಭಾರಿ ಎನಿಸಿಕೊಂಡಿದ್ದನು. ಕಾಲಾನಂತರ ಮಧು-ಕೈಟಬರು ಹಂಸ - ಡಿಬೀಕ ಎನ್ನುವ ದೈತ್ಯರಾಗಿ ಹುಟ್ಟಿ ಜರಾಸಂಧನ ಸ್ನೇಹವನ್ನು ಬೆಳೆಸಿದರು. ಸನಕಾದಿ ಮುನಿಗಳ ಶಾಪಕ್ಕೆ ತುತ್ತಾದ ವೈಕುಂಠ ಪಾಲಕರು ಜಯ-ವಿಜಯರು ತಮ್ಮ ಮೂರನೇ ಜನ್ಮದಲ್ಲಿ ಶಿಶುಪಾಲ - ದಂತವಕ್ರರಾಗಿ ಹುಟ್ಟಿದರು. ಶ್ರೀ ಹರಿಯ ವೈರಿಯಲ್ಲೊಬ್ಬ ಮೂಲಕಲಿ ಅಗ್ರೇಸರ ಕಾಲಾನಂತರ ದುರ್ಯೋಧನನಾಗಿ ಹುಟ್ಟಿದನು. ಬಲಿ ಚಕ್ರವರ್ತಿಯ ದೈತ್ಯಾವೇಶವು ಬೃಹದತ್ತನ ಮಗನಾದ ಸಾಲ್ವನಾಗಿ ಮರುಹುಟ್ಟನ್ನು ಪಡೆಯಿತು. ಬಾಣಾಸುರನೆಂಬ ದೈತ್ಯ ಕಾಲಾನಂತರ ಕೀಚಕನಾಗಿ ಜನ್ಮ ತಾಳಿದನು.
ದೈತ್ಯರ ಮರುಹುಟ್ಟು :
ಕಾಲನೇಮಿ = ಕಂಸ
ಮಧು-ಕೈಟಬ = ಹಂಸ - ಡಿಬೀಕ
ಅಗ್ರೇಸರ = ದುರ್ಯೋಧನ
ಜಯ-ವಿಜಯ = ಶಿಶುಪಾಲ - ದಂತವಕ್ರ
ಬಲಿ = ಸಾಲ್ವ
ಬಾಣಾಸುರ = ಕೀಚಕ.
ಕಶ್ಯಪ ಮಹರ್ಷಿಗಳ ಪತ್ನಿಯರಲ್ಲಿ ಅದಿತಿ ಮತ್ತು ಸುರಭಿ ಇಬ್ಬರು. ಕಶ್ಯಪರಿಗೆ ವರುಣನೆನ್ನುವ ಮಗನಿದ್ದ. ಇವನು ಬ್ರಹ್ಮನ ಭಕ್ತ. ಬ್ರಹ್ಮದೇವರು ಇವನ ಭಕ್ತಿಗೆ ಮೆಚ್ಚಿ ಕಾಮಧೇನುವನ್ನು ನೀಡಿದ್ದರು. ಅದಿತಿ-ಸುರಭಿಯರು ಈ ಕಾಮಧೇನುವನ್ನು ಬಯಸಲು ಕಶ್ಯಪರು ವಿಧಿಯಿಲ್ಲದೆ ಅದನ್ನು ಕದ್ದು ತಂದು ಪತ್ನಿಯರಿಗೆ ಕೊಟ್ಟುಬಿಟ್ಟರು. ಇದರಿಂದ ಕೋಪಗೊಂಡ ಬ್ರಹ್ಮದೇವರು ಕಶ್ಯಪರಿಗೆ ಕ್ಷತ್ರಿಯರಾಗಿ ಜನಿಸುವಂತೆ ಶಾಪವಿತ್ತರು. ಅದರಂತೆ ಕಶ್ಯಪರು ಯದುವಂಶದ ಶೂರ ಮಹಾರಾಜನ ಮಗನಾಗಿ ವಸುದೇವನಾಗಿ ಜನಿಸಿದರು. ಅದಿತಿ - ಸುರಭಿಯರು ದೇವಕಿ - ರೋಹಿಣಿಯರಾಗಿ ಜನಿಸಿದರು. ವಸುದೇವ ದೇವಕಿಯರು ನಾರಾಯಣನನ್ನು ಕುರಿತು ತಪಸ್ಸು ಮಾಡಿ ವಿಷ್ಣುವೇ ತಮ್ಮ ಮಗನಾಗಿ ಬರುವಂತೆ ವರ ಪಡೆದರು. ಇತ್ತ ದ್ರೋಣ - ಧರಾದೇವಿ ಎನ್ನುವ ದಂಪತಿಗಳು ಬ್ರಹ್ಮದೇವನನ್ನು ಕುರಿತು ತಪಸ್ಸು ಮಾಡಿ ವಿಷ್ಣುವೇ ತಮ್ಮ ಮಗನಾಗಿ ಜನಿಸುವಂತೆ ವರ ಪಡೆದಿದ್ದರು. ಅದರಂತೆ ಮುಂದೆ ದ್ರೋಣ ಶೂರಸೇನನ ಮಗ ನಂದನಾಗಿ ಜನಿಸಿದನು. ಧರಾದೇವಿ ಯಶೋದೆಯಾಗಿ ನಂದನ ಕೈಹಿಡಿದಳು.
ಮರೀಚಿ ಮಹರ್ಷಿಗೆ ಊರ್ಣಾ ಎನ್ನುವ ಪತ್ನಿಯಲ್ಲಿ ಸ್ಮರ, ಉದ್ಗೀತ, ಪರಿಷ್ಟಂಗ, ಪತಂಗ, ಕ್ಷುದ್ರುಭುಟ್, ಘೃಣಿ ಎನ್ನುವ ಆರು ಪುತ್ರರಿದ್ದರು. ಇವರು ಒಮ್ಮೆ ದೇವಲ ಮಹರ್ಷಿಯ ಶಾಪಕ್ಕೆ ತುತ್ತಾಗಿ ದೈತ್ಯರಾಗಿ ಹಿರಣ್ಯಾಕ್ಷನ ಮಕ್ಕಳಾಗಿ ಜನಿಸಿದರು. ಹಿರಣ್ಯಾಕ್ಷನ ಆರು ಮಕ್ಕಳು ಕಾಡಿಗೆ ಬ್ರಹ್ಮದೇವನನ್ನು ಕುರಿತು ತಪಸ್ಸು ಮಾಡಲು ತೆರಳಿದರು. ಇದನ್ನು ಕೇಳಿ ಕುಪಿತನಾದ ದೊಡ್ಡಪ್ಪ ಹಿರಣ್ಯಕಶಿಪು ಇವರಿಗೆ ಮರುಜನ್ಮದಲ್ಲಿ ತಂದೆಯೇ ಮರಣದವಡೆಗೆ ನೂಕುವಂತಾಗಲಿ ಎಂದು ಶಾಪವನ್ನಿತ್ತನು. ಆ ಪ್ರಕಾರ ಈ ಆರು ಜನ ವಸುದೇವನ ಮಕ್ಕಳಾಗಿ ಜನಿಸಿದರು.
ಕೃಷ್ಣಾವತಾರದ ಪೂರ್ವಸಿದ್ಧತ ಮರುಜನ್ಮಗಳು :
ಕಶ್ಯಪ - ಅದಿತಿ - ಸುರಭಿ = ವಸುದೇವ - ದೇವಕಿ - ರೋಹಿಣಿ
ದ್ರೋಣ - ಧರಾದೇವಿ = ನಂದ - ಯಶೋದ
ಸ್ಮರ, ಉದ್ಗೀಥ, ಪರಿಷ್ಟಂಗ, ಘೃಣಿ, ಪತಂಗ, ಕ್ಷುದ್ರುಭುಟ್ = ವಸುದೇವ - ದೇವಕಿಯರ ಆರು ಮಂದಿ ಪುತ್ರರು (ಕಂಸನಿಂದ ಹತರಾದವರು).
ಮಹಾವಿಷ್ಣುವಿನ ಅವತಾರಗಳು (ಕ್ರಮವಾಗಿ ಜನ್ಮಗಳಲ್ಲಿ) :
1) ಸುತಪಾ - ಪ್ರಶ್ನಿ = ಪ್ರಶ್ನಿಗರ್ಭ
2) ಕಶ್ಯಪ - ಅದಿತಿ = ವಾಮನ
3) ವಸುದೇವ - ದೇವಕಿ = ಕೃಷ್ಣ.
ಭಗವಂತನ ಅವತಾರಗಳಲ್ಲಿ ಶ್ರೀ ಕೃಷ್ಣಾವತಾರ ಸಂಪೂರ್ಣಾವತಾರ. ಶ್ರೀ ಕೃಷ್ಣ ಲೀಲಾಪುರುಶೋತ್ತಮ. ಜೀವ ಕೇಂದ್ರದಿಂದ ಪರಬ್ರಹ್ಮ ತತ್ವಕ್ಕೆ ನಿರೂಪಣೆಯನ್ನು ನೀಡಿದ ಅವತಾರ. ಶ್ರೀ ಕೃಷ್ಣ ಗೋಪಾಲಕ. ಅನಾಥ ರಕ್ಷಕ. ಗೋವರ್ಧನಧಾರಿ. ಭೂಭಾರವನ್ನು ಕಳೆದವ, ಸ್ತ್ರೀಲೋಲ ನಿತ್ಯಬ್ರಹ್ಮಚಾರಿ.
ಶ್ರೀ ಕೃಷ್ಣನನ್ನು ಅಲಂಕರಿಸಿದ ಸಾಧನಗಳು :
ಸುದರ್ಶನ ಚಕ್ರ = ಕಾಲಚಕ್ರದ ಸಂಕೇತ
ಶಂಖ = ಬ್ರಹ್ಮಾಂಡ ನಾದ (ನಾದಬ್ರಹ್ಮ ಶ್ರೀಕೃಷ್ಣ)
ಕೊಳಲು = ಆನಂದ ಸ್ವರವಾದ್ಯ
ಕೌಸ್ತುಭ ಹಾರ = ಮಣಿ (ಬೆಳಕನ್ನು ಪ್ರತಿಫಲಿಸುವ, ಆತ್ಮ ಪರಮಾತ್ಮನ ಪ್ರತಿಫಲನ)
ಕೌಮೋದಕಿ = ಗದೆ
ನಂದಕ = ಖಡ್ಗ
ಸಾರಂಗ = ಬಿಲ್ಲು.
ಸರ್ವಮಂಗಳಕಾರಕ ಶ್ರೀ ಕೃಷ್ಣನು ಸರ್ವರಿಗೂ ಒಳಿತನ್ನುಂಟು ಮಾಡಲಿ.
'ಬ್ರಹ್ಮಣ್ಯೋ ದೇವಕೀ ಪುತ್ರೋ
ಬ್ರಹ್ಮಣ್ಯೋ ಮಧುಸೂದನ
ಬ್ರಹ್ಮಣ್ಯೋ ಪುಂಡರೀಕಾಕ್ಷ
ಬ್ರಹ್ಮಣ್ಯಃ ವಿಷ್ಣುರಚ್ಯುತ".
ವಿಷಯ : ೧) ಶ್ರೀ ಗುರುರಾಘವೇಂದ್ರ ವಿರಚಿತ "ಶ್ರೀ ಕೃಷ್ಣ ಚಾರಿತ್ರ್ಯ ಮಂಜರಿ.
೨) ಶ್ರೀಮದ್ ಭಾಗವತ ಪುರಾಣ.
Comments