ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗಶ್ಲೋಕ - 17

ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 17
 
ಶ್ಲೋಕ :
ಕಾಶ್ಯಶ್ಚ ಪರಮೇಷ್ವಾಸಃ ಶಿಖಂಡೀ ಚ ಮಹಾರಥಃ ।
ಧೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚಾಪರಾಜಿತಃ ॥೧೭॥
 
ಅರ್ಥ :
ಹಿರಿಯ ಬಿಲ್ಲೋಜ ಕಾಶಿರಾಜ, ಹಿರಿಯ ತೇರಾಳು ಶಿಖಂಡಿ ಸೇರಿದಂತೆ, ಧೃಷ್ಟದ್ಯುಮ್ನ ಮತ್ತು ವಿರಾಟ, ಸೋಲರಿಯದ ಸಾತ್ಯಕಿಯೊಂದಿಗೆ ಶಂಖನಾದ ಮಾಡಿದರು.
 
ವಿವರ ವಿವರಣೆಗಳು
ತದನಂತರ ಹಿರಿಯ ಬಿಲ್ಲೋಜ ಕಾಶಿರಾಜ, ಹಿರಿಯ ತೇರಾಳು ಶಿಖಂಡಿ, ಧೃಷ್ಟದ್ಯುಮ್ನ ಮತ್ತು ವಿರಾಟ, ಸೋಲರಿಯದ ಸಾತ್ಯಕಿ, ಹೀಗೆ ಒಬ್ಬೊಬ್ಬರಾಗಿ ಶಂಖ ನಾದವನ್ನು ಮಾಡಿದರು.

ಇಲ್ಲಿ ಶಿಖಂಡಿಯನ್ನು ಮಹಾರಥ ಎಂದು ಸಂಬೋಧಿಸಿರುವುದನ್ನು ನಾವು ಗಮನಿಸಬೇಕು. ಬಹಳಷ್ಟು ಜನ ಶಿಖಂಡಿ ಎಂದರೆ ನಪುಂಸಕ ಎಂದು ತಿಳಿದಿರುತ್ತಾರೆ. ಆದರೆ ಶಿಖಂಡಿ ಎಂದರೆ ನಪುಂಸಕ ಅಲ್ಲ. ಶಿಖಂಡಿ ಎಂದರೆ ಮೂಲಭೂತವಾಗಿ ಶಿಖಂಡ(ಶಿಖ+ಅಂಡ )ಉಳ್ಳವನು. ಇಲ್ಲಿ ಶಿಖ ಎಂದರೆ ತಲೆಗೂದಲು. ತಲೆ ಕೂದಲನ್ನು ಚನ್ನಾಗಿ ಬಾಚಿ ಹಿಂದೆ ಮೊಟ್ಟೆಯಂತೆ ಕಟ್ಟುವವರು ಶಿಖಂಡಿಗಳು. ಮಹಾಭಾರತದ ಈ ಶಿಖಂಡಿ ಹುಟ್ಟಿದಾಗ ಹೆಣ್ಣಾಗಿದ್ದು , ಆ ಬಳಿಕ ಗಂಡಾದ ಮಹಾರಥ. ಈತ ‘ಸ್ತ್ರೀಪೂರ್ವವಾದ್ದರಿಂದ’ ಭೀಷ್ಮಾಚಾರ್ಯರು ಆತನ ವಿರುದ್ಧ ಬಾಣ ಪ್ರಯೋಗ ಮಾಡಿರಲಿಲ್ಲ.


Comments