ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 14
ಶ್ಲೋಕ :
ತತಃ ಶಂಖಾಶ್ಚ ಭೇರ್ಯಶ್ಚ ಪಣವಾನಕಗೋಮುಖಾಃ ।
ಸಹಸೈವಾಭ್ಯಹನ್ಯಂತ ಸ ಶಬ್ದಸ್ತುಮುಲೋsಭವತ್ ॥೧೩॥
ಅರ್ಥ :
ಆ ಬಳಿಕ ಶಂಖಗಳು, ನಗಾರಿಗಳು, ತಮಟೆ -ಡೋಲು- ಗೊಮುಖಗಳು (ಕಹಳೆ)- ಒಮ್ಮೆಲೆ ಬಾರಿಸಲ್ಪಟ್ಟವು. ಆ ಸದ್ದು ಕಿವಿಗಡಚಿಕ್ಕುವ ಗದ್ದಲವಾಯಿತು.
ವಿವರ ವಿವರಣೆಗಳು :
ಪ್ರಧಾನ ಸೇನಾಧಿಪತಿಯಾದ ಭೀಷ್ಮಾಚಾರ್ಯರು ಶಂಖನಾದ ಮಾಡಿದ ಬಳಿಕ, ಕೌರವ ಸೈನ್ಯದಿಂದ ಶಂಖಗಳು, ನಗಾರಿ-ಡೋಲು-ಗೊಮುಖಗಳು-ಒಮ್ಮೆಲೆ ಬಾರಿಸಲ್ಪಟ್ಟವು. ಆ ಸದ್ದು ಕಿವಿಗಡಚಿಕ್ಕುವ ಗದ್ದಲವಾಯಿತು. ಇಲ್ಲಿ ದುರ್ಯೋಧನಾಗಲಿ ಆತನ ತಮ್ಮಂದಿರರಾಗಲಿ ಶಂಖ ನಾದ ಮಾಡಲಿಲ್ಲ. ಬದಲಾಗಿ ಸೇನಾಧಿಪತಿಯಿಂದ ಶಂಖ ನಾದವಾಯಿತು. ಅದರ ಹಿಂದೆ ಸೈನ್ಯದ ಮುಖಂಡರಿಂದ, ಸೈನಿಕರಿಂದ. ಈ ರೀತಿ ವ್ಯವಸ್ಥಿತ ರೀತಿಯಲ್ಲಿಲ್ಲದ ನಾದ ಗದ್ದಲದಂತೆ ಬಾಸವಾಗುತ್ತಿತ್ತು. ಇಲ್ಲಿ ದುರ್ಯೋಧನ ತನ್ನಲ್ಲಿರುವ ಶಕ್ತಿಯನ್ನು ವ್ಯವಸ್ಥಿತವಾಗಿ ರೂಪಿಸಿರಲಿಲ್ಲ ಎನ್ನುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ನಮ್ಮಲ್ಲಿ ಎಷ್ಟೇ ಯುಕ್ತಿ ಸಾಧನವಿರಲಿ(Resource), ಎಲ್ಲಿಯ ತನಕ ನಮಗೆ ಆ ಸಾಧನವನ್ನು ನಿಯಮಬದ್ಧವಾಗಿ ಉಪಯೋಗಿಸಿಕೊಳ್ಳಲು ಬರುವುದಿಲ್ಲವೋ ಅಲ್ಲಿಯ ತನಕ ಆ ಸಾಧನ ಇದ್ದೂ ವ್ಯರ್ಥ. ಸಾಧನವನ್ನು ಕೈಯಲ್ಲಿಟ್ಟುಕೊಂಡು ಅಧಿಕಾರದ ಆಸೆಯಿಂದ ಮನಃಸ್ಥಿತಿ ಕಳೆದುಕೊಳ್ಳುವ ಮುಂದಾಳು(Leader) ಎಂದೂ ಯಶವನ್ನು ಕಾಣಲಾರ.
Comments