ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗಶ್ಲೋಕ - 12

ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 12
ಶ್ಲೋಕ :
ತಸ್ಯ ಸಂಜನಯನ್ ಹರ್ಷಂ ಕುರುವೃದ್ಧಃ ಪಿತಾಮಹಃ ।
ಸಿಂಹನಾದಂ ವಿನದ್ಯೋಚ್ಚೈಃ ಶಂಖಂ ದಧ್ಮೌ ಪ್ರತಾಪವಾನ್ ॥೧೨॥
 
ಅರ್ಥ :
ಅವನಿಗೆ ಸಂತಸಬರಿಸಲೆಂದು ಕುರುಗಳ ಹಿರಿಯಜ್ಜನಾದ ಆ ಎದೆಗಾರ ಭೀಷ್ಮ, ಗಟ್ಟಿಯಾದ ಸಿಂಹನಾದ ಗೈದು ಶಂಖವನ್ನು ಊದಿದರು.
 
ವಿವರ ವಿವರಣೆಗಳು : 
ಯುದ್ಧ ಪೂರ್ವದಲ್ಲಿ ಭರವಸೆಯನ್ನು ಕಳೆದುಕೊಂಡು ವಿಷಾದದಿಂದ ಮಾತನಾಡುತ್ತಿರುವ ದುರ್ಯೋಧನನ ಭರವಸೆ ಹೆಚ್ಚಿಸಲು, ಆತನಿಗೆ ಆತ್ಮ ವಿಶ್ವಾಸವನ್ನು ತುಂಬಲು, ಕುರು ವಂಶದ ಅತ್ಯಂತ ಹಿರಿಯ ಪ್ರತಾಪಶಾಲಿ ವಯೋವೃದ್ಧ ಭೀಷ್ಮಾಚಾರ್ಯರು ಸಿಂಹನಾದಗೈದು, ತನ್ನ ಕರ್ತವ್ಯಕ್ಕೆ ತಕ್ಕಂತೆ ಶಂಖವನ್ನೂದಿದರು.

ಶಂಖ ಬಹಳ ದೊಡ್ಡ ದುಷ್ಟ ಸಂಹಾರಕ ಶಕ್ತಿ. ಹಿಂದಿನ ಕಾಲದಲ್ಲಿ ಬೆಳಿಗ್ಗೆ ಮತ್ತು ಸಂಜೆ ತಪ್ಪದೆ ಮನೆಯ ಮೂಲೆ-ಮೂಲೆಯಿಂದ ಅಷ್ಟ ದಿಕ್ಕುಗಳಿಗೂ ಕೇಳುವಂತೆ ಶಂಖನಾದ ಮಾಡುತ್ತಿದ್ದರು. ಇದಕ್ಕೆ ಕಾರಣ ಶಂಖ ನಾದದಲ್ಲಿರುವ ದುಷ್ಟ ಶಕ್ತಿಯ ಎದೆಯೊಡೆಯುವ ಶಕ್ತಿ. ಶಂಖದ ನಾದ ಎಲ್ಲಿಯವರೆಗೆ ಕೇಳಿಸುತ್ತದೋ, ಅಲ್ಲಿಯ ತನಕ ಯಾವ ದುಷ್ಟ ಶಕ್ತಿಗಳೂ ಸುಳಿಯಲಾರವು. ಮೃತ್ಯುವಿನ ತಾಂಡವವಾದ ರಣರಂಗದಲ್ಲಿ ಆಸುರೀ ಶಕ್ತಿಯ ಪ್ರಭಾವ ಇರಬಾರದು ಎನ್ನುವುದಕ್ಕಾಗಿ, ಯುದ್ದಕ್ಕೆ ತಮ್ಮವರನ್ನು ಸಿದ್ಧಗೊಳಿಸುವುದಕ್ಕಾಗಿ ಮತ್ತು ಶತ್ರುಗಳಿಗೆ ತಾವು ಸಿದ್ಧ ಎನ್ನುವ ಸಂಕೇತ ಕೊಡಲು ಹಿಂದೆ ಶಂಖವನ್ನು ಬಳಸುತ್ತಿದ್ದರು. ಇಲ್ಲಿ ಭೀಷ್ಮಾಚಾರ್ಯರು ಶಂಖನಾದದಿಂದ ತಮ್ಮ ಸಿದ್ದತೆಯ ಸಂಕೇತವನ್ನು ಕೌರವ ಸೈನ್ಯಕ್ಕೂ ಹಾಗು ಪಾಂಡವ ಸೈನ್ಯಕ್ಕೂ ರವಾನಿಸುತ್ತಾರೆ.


Comments